ETV Bharat / state

ಬಸವರಾಜ ಬೊಮ್ಮಾಯಿಯಂಥ ಭ್ರಷ್ಟ ಸಿಎಂಅನ್ನು ಈ ಹಿಂದೆ ನೋಡಿರಲಿಲ್ಲ: ಸಿದ್ದರಾಮಯ್ಯ

author img

By

Published : Apr 25, 2023, 3:49 PM IST

Updated : Apr 25, 2023, 5:50 PM IST

siddaramaiah-reaction-on-bsavaraj-bommai
ಬಸವರಾಜ ಬೊಮ್ಮಾಯಿ ಅಂತ ಭ್ರಷ್ಟ ಸಿಎಂಅನ್ನು ಈ ಹಿಂದೆ ನೋಡಿರಲಿಲ್ಲ: ಸಿದ್ದರಾಮಯ್ಯ

ಬಿಜೆಪಿ 20 ವರ್ಷಗಳಿಂದ ಪಕ್ಷ ಕಟ್ಟಿದ ಲಕ್ಷ್ಮಣ ಸವದಿಗೆ ವಿನಾಕಾರಣ ಅವಮಾನ ಮಾಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ

ಚಿಕ್ಕೋಡಿ (ಬೆಳಗಾವಿ): ಲಿಂಗಾಯತ ಸಮುದಾಯದಲ್ಲಿ ತುಂಬಾ ಜನ ಮುಖ್ಯಮಂತ್ರಿಗಳಾದರು. ಆದರೆ ಬಸವರಾಜ ಬೊಮ್ಮಾಯಿಯಂಥ ಭ್ರಷ್ಟ ಮುಖ್ಯಮಂತ್ರಿಯನ್ನು ಈ ಹಿಂದೆ ನೋಡಿರಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಉಗಾರ ಖುರ್ದ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಪರವಾಗಿ ಪ್ರಚಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸವದಿಯವರು ಪಕ್ಷಕ್ಕೆ ಬಂದ ಮೇಲೆ ಈ ಭಾಗದ ಜಿ. ಪಂ ಸದಸ್ಯರು, ತಾ.ಪಂ ಸದಸ್ಯರು ಸಂಘ ಸಂಸ್ಥೆಗಳ ಅಧ್ಯಕ್ಷರು ಸದಸ್ಯರು ಬಿಜೆಪಿ ಬಿಟ್ಟು ಕಾಂಗ್ರೆಸ್​ಗೆ ಸೇರಿದ್ದಾರೆ. ನಿಮ್ಮೆಲ್ಲರನ್ನು ನಮ್ಮ ಮನೆಯ ಮಕ್ಕಳಂತೆ ನೋಡಿಕೊಳ್ತಿವಿ ಇಲ್ಲಿ ಮೂಲ, ವಲಸೆ ಎಂಬ ಭೇದ ಇಲ್ಲ. ಮುಂದೆ ನಾವು ಅಧಿಕಾರಕ್ಕೆ ಬಂದೇ ಬರ್ತಿವಿ, ನಿಮಗೆ ಸೂಕ್ತ ಸ್ಥಾನಮಾನ ಕೊಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ರಾಜು ಕಾಗೆಗೆ ಮೇ 10 ರಂದು ನಡೆಯವ ಚುನಾವಣೆಯಲ್ಲಿ ಕಾಗವಾಡದಿಂದ ಆಶೀರ್ವಾದ ಮಾಡಿ. ನಿಮ್ಮ ಉತ್ಸಾಹ ಹುರುಪು ನೋಡಿದ್ರೆ ನೂರಕ್ಕೆ ನೂರು ರಾಜು ಕಾಗೆ ಗೆಲ್ತಾರೆ ಅಂತ ಅನಿಸ್ತಿದೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಗಾಳಿ ಬೀಸೋಕೆ ಶುರುವಾಗಿದೆ. ಈ ಭಾಗದಲ್ಲಿ ಸವದಿ ಬಂದ ಮೇಲೆ ಅದು ಬಿರುಗಾಳಿಯ ರೀತಿಯಲ್ಲಿ ಬೀಸೋಕೆ ಶುರುವಾಗಿದೆ. ಲಕ್ಷ್ಮಣ ಸವದಿಯವರಿಗೆ ಅವರದೆ ಆದ ಫಾಲೋವಿಂಗ್ ಇದೆ. ಬಿಜೆಪಿಯವರಿಗೆ ತಮ್ಮ ತಪ್ಪಿನ ಅರಿವಾಗುತ್ತಿರಬೇಕು ಇಂತಹ ಸೀನಿಯರ್ ಲೀಡರ್ ಜತೆ ಅವರು ನಡ್ಕೊಂಡಿದ್ದು ಅಕ್ಷಮ್ಯ ಅಪರಾಧ. 20 ವರ್ಷ ಬಿಜೆಪಿ ಕಟ್ಟಿದ ನಾಯಕನಿಗೆ ವಿನಾಕಾರಣ ಅವಮಾನ ಮಾಡಿದ್ದಾರೆ. ಇಂಹತ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಬೇಕೋ, ಬೇಡವೋ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಶ್ರೀಮಂತ ಪಾಟೀಲ್ 2018ರಲ್ಲಿ ಜೆಡಿಎಸ್ ನಲ್ಲಿದ್ದರು, ಟಿಕೆಟ್ ಕೊಡಿ ಕಾಂಗ್ರೆಸ್​ಗೆ ಸೇರ್ತಿನಿ ಅಂದ್ರು, ನಾನು ಲಾಯಲ್ ಆಗಿರ್ತಿಯೇನಪ್ಪ ಅಂತ ಕೇಳಿದ್ದೆ, ನನ್ನ ಪ್ರಾಣ ಹೋದ್ರೂ ಸರಿ ನಾನು ಪಕ್ಷಕ್ಕೆ ನಿಯತ್ತಾಗಿ ಇರುತ್ತೀನಿ ಅಂತ ಹೇಳಿದ್ದ. ಹೀಗಾಗಿ ಟಿಕೆಟ್ ಕೊಟ್ಟ ಮೇಲೆ ಆರಿಸಿ ಬಂದ, ಆರಿಸಿ ಬಂದ ಮೇಲೆ ದ್ರೋಹ ಮಾಡೋಕೆ ಶುರು ಮಾಡಿದ. ನಿನ್ನ ಮೇಲೆ ಅನುಮಾನ ಇದೆ ಅಂತ ಕೇಳ್ತಿದ್ದಾರಲ್ಲ ಅಂತ ಕೆಲವರು ಹೇಳ್ತಿದ್ದಾರೆ ಅಂತ ಕರೆದು ಕೇಳಿದ್ದೆ. ಇಲ್ಲ ಸಾರ್ ನಾನು ಪಕ್ಷದಲ್ಲಿಯೇ ಇರ್ತಿನಿ ಅಂತ ಹೇಳಿದ್ದ. ನಾನು ಹೊರಡುತ್ತಿದ್ದಂತೆ ಅಲ್ಲಿಂದ ಓಡಿ ಹೋಗಿದ್ದಾನೆ ಈ ಆಸಾಮಿ, ತನ್ನನ್ನ ತಾನು ಮಾರ್ಕೊಂಡು ಬಿಜೆಪಿ ಜತೆ ಹೋದವನು ಈ ಕ್ಷೇತ್ರದ ಜನರಿಗೂ ಬೆನ್ನಿಗೆ ಚೂರಿ ಹಾಕ್ತಾನೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಒಂದು ಶುಗರ್ ಫ್ಯಾಕ್ಟರಿ ಇತ್ತು ಈಗ ಐದು ಫ್ಯಾಕ್ಟರಿ ಮಾಡಿದ್ದಾನೆ. ರೈತರ ತಲೆ ಬೋಳಿಸಿ ಮಾಡಿದ್ದಾರೆ, ತೂಕದಲ್ಲಿ ಹೊಡೆದು ಈ ರೀತಿ ಮಾಡಿದ್ದಾರೆ. ಭ್ರಷ್ಟ ರಹಿತ ಕ್ಷೇತ್ರ ಮಾಡ್ತಿನಿ ಅಂತಿದ್ದ ಅಲ್ಲಪಾ ನೀನೇ ಭ್ರಷ್ಟ, ನಿಮಗೆ ಮೋಸ ಮಾಡಿದವನಿಗೆ ನೀವು ತಕ್ಕ ಪಾಠ ಕಲಿಸಬೇಕು ಎಂದು ಮತದಾರರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ರು.

ಶ್ರೀಮಂತ ಪಾಟೀಲ್ ಬರೀ ಸುಳ್ಳು ಹೇಳ್ತಾನೆ, ಬಸವೇಶ್ವರ ಏತನೀರಾವರಿ ಯೋಜನೆ ನಾವು ಮಾಡಿದ್ದೆವು, ನಾವು ಮಾಡಿದ ಕೆಲಸವನ್ನು ಆತ ತಾನೇ ಮಾಡಿದೆ ಅಂತ ಹೇಳ್ಕೊಂಡು ತಿರುಗುತ್ತಾನೆ. ಈ ರೀತಿ ಸುಳ್ಳು ಹೇಳೋರನ್ನ ಯಾವುದೇ ಕಾರಣಕ್ಕೂ ವಿಧಾನಸೌಧಕ್ಕೆ ಕಳಿಸಬಾರದು. ನಿಮ್ಮಲ್ಲಿ ಕೈ ಮುಗಿದು ಪಾರ್ಥನೆ ಮಾಡ್ತಿನಿ.. ಇಂತವರಿಗೆ ನೀವು ಮಣೆ ಹಾಕಬಾರದು ಎಂದು ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

7 ಕೆಜಿ ಅಕ್ಕಿ ಕೊಡ್ತಿದ್ದೆ, ಬಿಜೆಪಿಯವರು ಅದನ್ನ 5 ಕೆಜಿಗೆ ಇಳಿಸಿದ್ರು, ಯಡಿಯೂರಪ್ಪಗೆ ಯಾಕೆ ಹೀಗೆ ಕಡಿಮೆ ಮಾಡಿದ್ರಿ ಅಂತ ಕೇಳಿದೆ, ಕೊರೊನಾ ಬಂದಿದೆ. ನಮ್ಮ ಹತ್ತಿರ ದುಡ್ಡಿಲ್ಲ ಅಂದರು ಯಡಿಯೂರಪ್ಪ, ಲಂಚ ಹೊಡೆಯೋದು ಕಡಿಮೆ ಮಾಡಿ ಅಂತ ಹೇಳಿದೆ ಕೇಳಲೇ ಇಲ್ಲ ಎಂದ್ರು.

ಎಲೆಕ್ಷನ್ ಬಂದಾಗ ಮೇಲಿಂದ ಮೇಲೆ ಕೇಂದ್ರ ಸಚಿವ ಅಮಿತ್​ ಶಾ,‌ ಪ್ರಧಾನಿ ಮೋದಿ ಎಲ್ಲರೂ ಕರ್ನಾಟಕಕ್ಕೆ ಬರ್ತಿದ್ದಾರೆ. ಅಮಿತ್​ ಶಾ ಪ್ರವಾಹ ಬಂದಾಗ ಎಲ್ಲಿ ಹೋಗಿದ್ದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ನಿಮಗೆಲ್ಲರಿಗೂ ಒಂದು ನೋವಿತ್ತು. 20 ವರ್ಷಗಳ ಕಾಲ ರಾಜು ಕಾಗೆ, ನಾವು ಜೋಡೆತ್ತಿನ ಹಾಗೆ ನಿಂತಿದ್ವಿ. ಅನಿವಾರ್ಯ ಕಾರಣಗಳಿಂದ ಒಂದು ಎತ್ತು ಒಂದು ಕೋಣ ಹೂಡಿದ್ದರು. ಎತ್ತು ಏರಿಗೆ ಎಳಿತು, ಕೋಣ ಕೆರೆಗೆ ಎಳಿತು ಅಂದಹಾಗೆ ಆಗಿತ್ತು. ಸಿದ್ದರಾಮಯ್ಯ ನಮ್ಮನ್ನು ಕರೆದು ಮತ್ತೆ ಜೋಡೆತ್ತು ಹೂಡಿದ್ದಾರೆ. ಇಲ್ಲಿನ‌ ಶಾಸಕರಿಗೆ ಒಂದೆರಡು ಪ್ರಶ್ನೆ ಕೇಳ್ತಿನಿ, ಕಾಗವಾಡವನ್ನು ಕರ್ನಾಟಕದಲ್ಲಿ ಭ್ರಷ್ಟಾಚಾರ ಮುಕ್ತ ಮಾಡ್ತಿನಿ ಅಂತ ಹೇಳಿದ್ರಿ. ಆದರೆ ಈಗ ಪರ್ಸೆಂಟೇಜ್ ಫಿಕ್ಸ್ ಆಗಿ ಬಿಟ್ಟಿದೆಯಲ್ಲಾ ಎಂದು ವ್ಯಂಗ್ಯವಾಡಿದರು.

ಸೂರ್ಯ ಚಂದ್ರ ಹುಟ್ಟೋದು ಎಷ್ಟು ಸತ್ಯವೋ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ, ವಿರೋಧ ಪಕ್ಷದಲ್ಲಿ ಕೂರುವ ಶಾಸಕರನ್ನು ನೀವು ಆಯ್ಕೆ ಮಾಡಬೇಡಿ. ಕಾಗವಾಡದಲ್ಲಿನ ಎಲ್ಲಾ ಮುಖಂಡರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ರಾಜು ಕಾಗೆಯವರನ್ನು 20 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ, ರಾಜು ಕಾಗೆಗೆ ಭರವಸೆ ಕೊಡ್ತಿನಿ ಎರಡು ದಿನ ಮೀಸಲು ಇಡ್ತಿನಿ. ನಿನ್ನ ಗೆಲ್ಲಿಸಿ ನಿನ್ನ ಕೈ ಹಿಡ್ಕೊಂಡು ವಿಧಾನಸೌಧಕ್ಕೆ ಕರ್ಕೊಂಡು ಹೋಗ್ತಿನಿ ಎಂದು ಸವದಿ ಹೇಳಿದ್ರು.

ಇದನ್ನೂ ಓದಿ:ಲಿಂಗಾಯತರ ಮತ ಸೆಳೆಯಲು ಬಿಎಸ್​​ವೈ ಪ್ಲಾನ್​​: ವೀರಶೈವ ಸಮಾಜದ ಸ್ನೇಹಮಿಲನ

Last Updated :Apr 25, 2023, 5:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.