ETV Bharat / state

ಪ್ರತಿ ತಿಂಗಳು ಕಂದಾಯ ಪ್ರಗತಿ ಪರಿಶೀಲನೆ, ಜನಪರ ಯೋಜನೆಗಳಿಗೆ ಆದ್ಯತೆ: ಸಚಿವ ಕೃಷ್ಣ ಭೈರೇಗೌಡ

author img

By

Published : Jun 30, 2023, 7:50 PM IST

Minister Krishna Byre Gowda spoke.
ಬೆಳಗಾವಿ ವಿಭಾಗದ ಅಧಿಕಾರಿಗಳ ಸಭೆಯಲ್ಲಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿದರು.

ಸುವರ್ಣ ವಿಧಾನಸೌಧದಲ್ಲಿ ಬೆಳಗಾವಿ ವಿಭಾಗ ವ್ಯಾಪ್ತಿಯ ಜಿಲ್ಲಾಧಿಕಾರಿಗಳು, ಇತರೆ ಇಲಾಖೆಯ ಅಧಿಕಾರಿಗಳ ಸಭೆ ನಡೆಯಿತು.

ಬೆಳಗಾವಿ: ಸರಕಾರದ ಆಡಳಿತ ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆ ತರುವುದರ ಜತೆಗೆ ಉತ್ತಮ ಆಡಳಿತ ನೀಡುವುದಕ್ಕೆ ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ದಕ್ಷತೆ ಹಾಗೂ ಚುರುಕಾಗಿ ಕೆಲಸ ಮಾಡಬೇಕು ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ಸೂಚನೆ ನೀಡಿದರು. ಸುವರ್ಣ ವಿಧಾನಸೌಧದಲ್ಲಿ ಇಂದು ನಡೆದ ಬೆಳಗಾವಿ ವಿಭಾಗದ ವ್ಯಾಪ್ತಿಯ ಜಿಲ್ಲಾಧಿಕಾರಿಗಳು ಹಾಗೂ ಇತರೆ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರಕಾರದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಕಂದಾಯ ಇಲಾಖೆಯ ಮೇಲೆ ಹೆಚ್ಚಿನ ಹೊಣೆಗಾರಿಕೆ ಇರುತ್ತದೆ. ಇವೆಲ್ಲವುಗಳ ಜತೆಗೆ ಕಂದಾಯ ಇಲಾಖೆಯ ಕೆಲಸಗಳು ಕುಂಠಿತಗೊಳ್ಳಬಾರದು ಎಂದು ಸಲಹೆ ನೀಡಿದರು.

ಪ್ರತಿ ತಿಂಗಳು ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ: ಸರಕಾರಕ್ಕೆ ಒಳ್ಳೆಯ ಹೆಸರು ತರುವುದು ಕಂದಾಯ ಇಲಾಖೆಯ ಕಾರ್ಯವೈಖರಿಯನ್ನು ಅವಲಂಬಿಸಿರುತ್ತದೆ. ಆದ್ದರಿಂದ ಎಲ್ಲರೂ ಉತ್ತಮ ಆಡಳಿತ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಜನಪರ ಯೋಜನೆಗಳ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳ ಪಾತ್ರ, ಅದರಲ್ಲೂ ಕಂದಾಯ ಇಲಾಖೆಯ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಜನರಿಗೆ ಅನುಕೂಲವಾಗುವಂತಹ ಕೆಲಸ ಮಾಡಲು ಸರಕಾರಕ್ಕೆ ಸಹಕರಿಸಬೇಕು. ಪ್ರತಿ ತಿಂಗಳು ಕಂದಾಯ ಇಲಾಖೆಯ ಪ್ರಗತಿಯನ್ನು ಪರಿಶೀಲಿಸಲಾಗುವುದು. ಆದ್ದರಿಂದ ಉತ್ತಮ ಆಡಳಿತ ನೀಡುವ ದಿಸೆಯಲ್ಲಿ ಎಲ್ಲರೂ ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಅನುದಾನ ಬಳಕೆಗೆ ಕಾಲಮಿತಿ: ಕಳೆದ ಸಾಲಿನ ಹಾಗೂ ಅದಕ್ಕಿಂತಲೂ ಮುಂಚಿನ ಸಾಲಿಗೆ ಸಂಬಂಧಿಸಿದಂತೆ ಕೋವಿಡ್, ಬರ ಸೇರಿದಂತೆ ‌ವಿವಿಧ ಪ್ರಕೃತಿ ವಿಕೋಪ ಕಾರಣಗಳಿಗಾಗಿ ಬಿಡುಗಡೆ ಮಾಡಲಾಗಿರುವ ಅನುದಾನ ಬಳಕೆಗೆ ಕಾಲಮಿತಿ ನಿಗದಿಪಡಿಸಲಾಗುವುದು. ಅದಾದ ಬಳಿಕ ಹಿಂದಕ್ಕೆ ಪಡೆಯಲಾಗುವುದು.‌ಮ್ಯೂಟೇಶನ್ ನೋಟಿಸ್ ಅವಧಿಯ ಪ್ರಕ್ರಿಯೆ ಸರಳಗೊಳಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡ ಅವರು, ಒಟ್ಟಾರೆ ಪ್ರಕ್ರಿಯೆ ಸರಳಗೊಳಿಸಬೇಕು ಎಂದು ಸಚಿವರು ತಾಕೀತು ಮಾಡಿದರು.

ಪ್ರಭಾರ ಪ್ರಾದೇಶಿಕ ಆಯುಕ್ತರು ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಪ್ರವಾಹ ಅಥವಾ ಇತರೆ ವಿಕೋಪ ಸಂದರ್ಭದಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು ಮತ್ತು ಜೀವಹಾನಿಯಾದಾಗ ಸಂಬಂಧಿಸಿದ ಕುಟುಂಬಗಳಿಗೆ ಪರಿಹಾರ ನೀಡಲು ಸಾಕಷ್ಟು ಅನುದಾನ ಲಭ್ಯವಿದೆ ಎಂದು ವಿವರಿಸಿದರು. ಬೆಳಗಾವಿ ವಿಭಾಗದ ಏಳು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಪ್ರಗತಿಯ ಕುರಿತಾಗಿ ಸಭೆಗೆ ಮಾಹಿತಿ ನೀಡಿದರು.

ಬರ ಪ್ರವಾಹ ನೈಸರ್ಗಿಕ ವಿಕೋಪ ನಿರ್ವಹಣೆಗೆ ಉಪಸಮಿತಿ: ರಾಜ್ಯದಲ್ಲಿನ ಬರ, ಪ್ರವಾಹ ಮತ್ತು ಇತರೆ ನೈಸರ್ಗಿಕ ವಿಕೋಪಗಳಿಂದ ಉದ್ಭವಿಸಬಹುದಾದ ಪರಿಸ್ಥಿತಿಯನ್ನು ಪರಾಮರ್ಶಿಸಲು ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ. ರಾಜ್ಯದ ಬರ, ಪ್ರವಾಹ, ನೈಸರ್ಗಿಕ ವಿಕೋಪಗಳಿಂದ ಸಮರ್ಥವಾಗಿ ನಿಭಾಯಿಸಲು ನೀತಿ ನಿರೂಪಣೆ ರೂಪಿಸಲು ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಣಯಿಸಲು, ನಿರ್ದೇಶನಗಳನ್ನು ನೀಡಲು ಸಚಿವ ಸಂಪುಟದ ಉಪಸಮಿತಿ ಕಾರ್ಯ ನಿರ್ವಹಿಸಲಿದೆ.

ಕಂದಾಯ ಸಚಿವ ಕೃಷ್ಣ ಭೈರೇಗೌಡ ಅಧ್ಯಕ್ಷತೆಯಲ್ಲಿ ಐದು ಸದಸ್ಯರ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಸಚಿವ ಸತೀಶ್ ಜಾರಕಿಹೊಳಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್​ ಖರ್ಗೆ, ಕೃಷಿ ಸಚಿವ ಚೆಲುವರಾಯಸ್ವಾಮಿ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಸಹಕಾರ ಸಚಿವ ಕೆ.ಎನ್. ರಾಜಣ್ಣ ಸದಸ್ಯರಾಗಿದ್ದಾರೆ.

ಇದನ್ನೂಓದಿ: ಕರ್ನಾಟಕದ ನೀರಾವರಿ ಯೋಜನೆಗಳಿಗೆ ತ್ವರಿತ ಮಂಜೂರಾತಿ ನೀಡಲು ಕೇಂದ್ರಕ್ಕೆ ಮನವಿ: ಡಿಸಿಎಂ ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.