ETV Bharat / state

ಹಿಂದೆ ದೇಶಪ್ರೇಮವೇ ಪತ್ರಿಕೋದ್ಯಮದ ಬಂಡವಾಳ, ಇದೀಗ ದೇಶಪ್ರೇಮ ಕಡಿಮೆಯಾಗಿದೆ : ಸಚಿವ ಕಾರಜೋಳ

author img

By

Published : May 29, 2022, 5:39 PM IST

patriotism-is-less-in-todays-journalism-says-minister-govinda-karajola
ಹಿಂದೆ ದೇಶಪ್ರೇಮವೇ ಪತ್ರಿಕೋದ್ಯಮದ ಬಂಡವಾಳ, ಇದೀಗ ದೇಶಪ್ರೇಮ ಕಡಿಮೆಯಾಗಿದೆ:ಸಚಿವ ಗೋವಿಂದ ಕಾರಜೋಳ

12ನೇ ಶತಮಾನದ ಶರಣರು ಕನ್ನಡ ಸಾಹಿತ್ಯಕ್ಕೆ ಶ್ರೇಷ್ಠ ಸ್ಥಾನಮಾನ ತಂದು ಕೊಟ್ಟಿದ್ದಾರೆ. ಪತ್ರಕರ್ತರು ಕೂಡ ಸಾಹಿತಿಗಳೇ.. ಕೆಲವರು ವಸ್ತುನಿಷ್ಠ ವರದಿ ಮಾಡಿದರೆ, ಕೆಲವರು ಸುದ್ದಿಯನ್ನು ಸೃಷ್ಟಿಸುತ್ತಾರೆ. ಆದರೆ, ವಸ್ತುನಿಷ್ಠ ವರದಿಗಾರಿಕೆಯೇ ನಿಜವಾದ ಪತ್ರಿಕಾಧರ್ಮವಾಗಿದೆ. ಪೀತಪತ್ರಿಕೋದ್ಯಮ ಈಗ ಇಲ್ಲವಾಗಿದೆ. ಇಂತಹ ಕಾಲಘಟ್ಟದಲ್ಲಿ ಅನೇಕ ಆಧುನಿಕ ತಂತ್ರಜ್ಞಾನದ ಅನುಕೂಲತೆ ಲಭ್ಯವಿದೆ. ಪತ್ರಿಕಾಧರ್ಮವನ್ನು ಉಳಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕು ಎಂದು ಸಚಿವ ಕಾರಜೋಳ ಅಭಿಪ್ರಾಯಪಟ್ಟರು..

ಬೆಳಗಾವಿ : ಹಿಂದೆ ದೇಶಪ್ರೇಮವೇ ಪತ್ರಿಕೋದ್ಯಮದ ಆದ್ಯತೆ ಆಗಿತ್ತು. ಆದರೀಗ ದೇಶಪ್ರೇಮ ಕಡಿಮೆಯಾಗಿದ್ದಲ್ಲದೇ ಕಾಲಘಟ್ಟದ ಬದಲಾವಣೆಗೆ ತಕ್ಕಂತೆ ಪತ್ರಿಕೋದ್ಯಮದ ಆದ್ಯತೆ ಕೂಡ ಬದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಳವಳ ವ್ಯಕ್ತಪಡಿಸಿದ್ದಾರೆ.

ನಗರದ ಕೆಎಲ್ಇ ಸಂಸ್ಥೆಯ ಜಿರಗಿ ಸಭಾಂಗಣದಲ್ಲಿ ಬೆಳಗಾವಿ ಜಿಲ್ಲಾ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಮಾದ್ಯಮ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿ ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೂಡ ಪತ್ರಕರ್ತರಾಗಿದ್ದವರು. ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ ಗಾಂಧೀಜಿಯವರು ಪತ್ರಿಕೋದ್ಯಮವನ್ನು ಅಸ್ತ್ರವಾಗಿ ಬಳಸಿಕೊಂಡರು. ಇದೇ ರೀತಿ ಸಾಮಾಜಿಕ ಸಮಾನತೆಯನ್ನು ಪತ್ರಿಕೋದ್ಯಮದ ಮೂಲಕವೇ ತಂದರು.

ಪತ್ರಿಕೋದ್ಯಮದಲ್ಲೀಗ ದೇಶಪ್ರೇಮ ಕಡಿಮೆ ಎಂದು ಸಚಿವ ಕಾರಜೋಳ ಕಳವಳ ವ್ಯಕ್ತಪಡಿಸಿರುವುದು..

ಕಾಂಗ್ರೆಸ್ ರಾಜಕೀಯ ಪಕ್ಷವಾಗಿರಲಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಆರಂಭಿಸಲಾಗಿದ್ದ ಕಾಂಗ್ರೆಸ್ ಅನ್ನು ಸ್ವಾತಂತ್ರ್ಯದ ಬಳಿಕ ವಿಸರ್ಜಿಸಬೇಕೆಂಬುದು ಮಹಾತ್ಮಾ ಗಾಂಧೀಜಿಯವರ ಆಶಯವಾಗಿತ್ತು. ಅದನ್ನು ತಮ್ಮ ಹರಿಜನ ಪತ್ರಿಕೆಯಲ್ಲಿ ಬರೆದ ಕೊನೆಯ ಸಂಪಾದಕೀಯ ಬರಹದಲ್ಲೂ ವ್ಯಕ್ತಪಡಿಸಿದ್ದರು ಎಂದು ಗೋವಿಂದ ಕಾರಜೋಳ ನೆನಪಿಸಿದರು.

12ನೇ ಶತಮಾನದ ಶರಣರು ಕನ್ನಡ ಸಾಹಿತ್ಯಕ್ಕೆ ಶ್ರೇಷ್ಠ ಸ್ಥಾನಮಾನ ತಂದು ಕೊಟ್ಟಿದ್ದಾರೆ. ಪತ್ರಕರ್ತರು ಕೂಡ ಸಾಹಿತಿಗಳೇ.. ಕೆಲವರು ವಸ್ತುನಿಷ್ಠ ವರದಿ ಮಾಡಿದರೆ, ಕೆಲವರು ಸುದ್ದಿಯನ್ನು ಸೃಷ್ಟಿಸುತ್ತಾರೆ. ಆದರೆ, ವಸ್ತುನಿಷ್ಠ ವರದಿಗಾರಿಕೆಯೇ ನಿಜವಾದ ಪತ್ರಿಕಾಧರ್ಮವಾಗಿದೆ. ಪೀತಪತ್ರಿಕೋದ್ಯಮ ಈಗ ಇಲ್ಲವಾಗಿದೆ. ಇಂತಹ ಕಾಲಘಟ್ಟದಲ್ಲಿ ಅನೇಕ ಆಧುನಿಕ ತಂತ್ರಜ್ಞಾನದ ಅನುಕೂಲತೆ ಲಭ್ಯವಿದೆ. ಪತ್ರಿಕಾಧರ್ಮವನ್ನು ಉಳಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಸಂವಿಧಾನದ ನಾಲ್ಕನೇ ಸ್ತಂಭ : ಸಂವಿಧಾನದ ನಾಲ್ಕನೇ ಸ್ತಂಭ ಎಂದು ಗುರುತಿಸಲಾಗುವ ಪತ್ರಿಕೋದ್ಯಮಕ್ಕೆ ವಿಶಿಷ್ಟ ಸ್ಥಾನವಿದೆ. ಸತ್ಯವನ್ನು ತಿಳಿಸುವ, ಜನರ ಜಾಗೃತಿ ಮಾಡುವ ಕೆಲಸವಾಗಬೇಕು. ಅಭಿವೃದ್ಧಿ, ದೇಶದ ಕಲೆ-ಸಾಹಿತ್ಯ, ಸಂಸ್ಕೃತಿ ಪ್ರೋತ್ಸಾಹಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕು. ಪತ್ರಕರ್ತರ ಯಾಂತ್ರೀಕೃತ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತಿವೆ. ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಸಚಿವ ಕಾರಜೋಳ ಕಿವಿಮಾತು ಹೇಳಿದರು.

ಮೂರು‌ ವರ್ಷಗಳ ಮುನ್ನೋಟ ಕುರಿತ ಕಿರುಪುಸ್ತಕ ಬಿಡುಗಡೆ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ "ಮೂರು‌ ವರ್ಷಗಳ ಮುನ್ನೋಟ" ಕುರಿತ ಕಿರುಪುಸ್ತಕ ಬಿಡುಗಡೆ ಬಳಿಕ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರ, ಮಹಾತ್ಮಾ ಗಾಂಧೀಜಿಯ ಸತ್ಯಾನ್ವೇಷಣೆಯ ಮಾರ್ಗ ಪತ್ರಿಕೋದ್ಯಮವಾಗಿತ್ತು. ಬಿ ಆರ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಶಸ್ತಿ ಆರಂಭಿಸಬೇಕು ಎಂಬುದು ಸಂಘದ ಕನಸಾಗಿತ್ತು.

ಇದಕ್ಕೆ ಬಾಗಲಕೋಟೆಯ ಸುಭಾಷ್ ಹೊದ್ಲೂರ ಅವರು ಎರಡೂವರೆ ಲಕ್ಷ ನೀಡುವ ಮೂಲಕ ಅಭಿಮಾನವನ್ನು ವ್ಯಕ್ತಪಡಿಸಿದರು. ಅದೇ ರೀತಿ ಮಹಾತ್ಮಾ ಗಾಂಧೀಜಿ‌ಯವರ ಹೆಸರಿನಲ್ಲಿ ಪ್ರಶಸ್ತಿ ಆರಂಭಿಸಲು ಸಚಿವ ಗೋವಿಂದ ಕಾರಜೋಳ ಅವರು ಕೂಡ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ತಗಡೂರ ಹೇಳಿದರು.

"ಮನೆ ಗೆದ್ದು ಮಾರು ಗೆಲ್ಲಬೇಕು" ಎಂಬ ಮಾತನ್ನು ಅರಿತುಕೊಂಡು ಪತ್ರಕರ್ತರು, ತಮ್ಮ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ವೃತ್ತಿಜೀವನವನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು. ಸಾಮಾಜಿಕ ಜಾಲತಾಣ ಸಕ್ರಿಯವಾಗಿರುವ ಈ ಸಂದರ್ಭದಲ್ಲಿ ಸುಳ್ಳು ಸುದ್ದಿ ಭರಾಟೆ ಹೆಚ್ಚಾಗಿದೆ. ಇಂತಹ ಸನ್ನಿವೇಶದಲ್ಲಿ ಪತ್ರಕರ್ತರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ.

ಕಾರ್ಯಮರೆತ ಸಂಘ ಎಂಬ ಟೀಕೆ‌ ಎದುರಿಸಿದ ಸಂಘ ಇದೀಗ ಕಾರ್ಯನಿರತ ಪತ್ರಕರ್ತರ ಸಂಘ ಎಂಬುದನ್ನು ಸಾಬೀತುಪಡಿಸಿದೆ. ಸಂಘಕ್ಕೆ ಹೊಸರೂಪ‌ ನೀಡಿ ಇದಕ್ಕೆ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ರೂಪ ನೀಡಲು ಉದ್ಧೇಶಿಸಲಾಗಿದೆ. ವೃತ್ತಿ ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಮುನ್ನೋಟವನ್ನು ರೂಪಿಸಲಾಗಿದೆ ಎಂದು ತಗಡೂರ ಹೇಳಿದರು.

ವಿಜಯಪುರದಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನ : ಈ ಬಾರಿಯ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ವಿಜಯಪುರ ಜಿಲ್ಲೆಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಶಿವಾನಂದ ತಗಡೂರ ತಿಳಿಸಿದರು. ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ ಹಾಗೂ ಸಂಘದ ರಾಜ್ಯಮಟ್ಟದ ಪದಾಧಿಕಾರಿಗಳು ಮತ್ತು ಬೆಳಗಾವಿ ಜಿಲ್ಲಾ ಪದಾಧಿಕಾರಿಗಳು ಮತ್ತು ನೂರಾರು ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು‌.

ಓದಿ : ಸಿದ್ದರಾಮಯ್ಯನವರ ಮಾನಸಿಕ ಸ್ಥಿತಿಗತಿ ಸರಿ ಇಲ್ಲ: ಸಚಿವ ಕಾರಜೋಳ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.