ETV Bharat / state

ಬೆಳಗಾವಿ ಅಧಿವೇಶನಕ್ಕೆ ಪ್ರತಿಯಾಗಿ 'ಮಹಾಮೇಳಾವ್'​ಗೆ ಎಂಇಎಸ್ ತಯಾರಿ

author img

By ETV Bharat Karnataka Team

Published : Nov 23, 2023, 12:16 PM IST

ಎಂಇಎಸ್
ಎಂಇಎಸ್

MES preparation for Mahamelav: ಪ್ರತಿ ಬಾರಿ ಕರ್ನಾಟಕ ರಾಜ್ಯೋತ್ಸವ, ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಕ್ಯಾತೆ ತೆಗೆಯುವ ಎಂಇಎಸ್​, ಇದೀಗ ಮಹಾಮೇಳಾವ್​ಗೆ ಮಹಾರಾಷ್ಟ್ರದ ಸಚಿವ, ಸಂಸದರನ್ನು ರಾಜ್ಯಕ್ಕೆ ಕರೆತರುವ ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ.

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 4, 2023ರಿಂದ ಡಿಸೆಂಬರ್ 15ರವರೆಗೆ 10 ದಿನಗಳ ಕಾಲ ನಡೆಯುವ ಚಳಿಗಾಲ ಅಧಿವೇಶನಕ್ಕೆ ಪ್ರತಿಯಾಗಿ ಮಹಾಮೇಳಾವ್ ನಡೆಸಲು ಎಂಇಎಸ್ ನಿಂದ ಸಿದ್ಧತೆ ನಡೆಸಿದ್ದು, ಗಡಿ ಜಿಲ್ಲೆಯಲ್ಲಿ ಮತ್ತೆ ಭಾಷಾ ದ್ವೇಷದ ಕಿಡಿ ಹಚ್ಚಲು ಮುಂದಾಗಿದೆ.

ಮರಾಠಾ ಮಂದಿರದಲ್ಲಿ ಸಭೆ ಸೇರಿ ಮಹಾಮೇಳಾವ್ ನಡೆಸಲು ಎಂಇಎಸ್ ತೀರ್ಮಾನ ಕೈಗೊಳ್ಳುವ ಮೂಲಕ ಗಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಮಹಾಮೇಳಾವ್ ಯಶಸ್ಸಿಗಾಗಿ ಬೆಳಗಾವಿ ಮತ್ತು ಖಾನಾಪುರದಲ್ಲಿ ಸಮಿತಿ ರಚನೆಗೆ ತಯಾರಿ ನಡೆಸುತ್ತಿದ್ದು, ಈ ವಿಷಯವನ್ನು ಮಹಾರಾಷ್ಟ್ರ ಸರ್ಕಾರ ಮತ್ತು ಅಲ್ಲಿನ ಸಚಿವರ ಗಮನಕ್ಕೆ ತರಲು ನಿರ್ಧರಿಸಿದ್ದಾರೆ. ಅಲ್ಲದೇ ಮಹಾರಾಷ್ಟ್ರದ ನಾಯಕರನ್ನು ಕರ್ನಾಟಕಕ್ಕೆ ಆಹ್ವಾನಿಸಿ ಮತ್ತೊಮ್ಮೆ ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಮುಂದಾಗಿದೆ.

ಪ್ರತಿ ವರ್ಷ ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನ ಪ್ರತಿಯಾಗಿ ಎಂಇಎಸ್ ಕಾರ್ಯಕರ್ತರು ಮಹಾಮೇಳಾವ್ ನಡೆಸುತ್ತಾ ಬಂದಿದ್ದಾರೆ. ಕಳೆದ ವರ್ಷ ಮಹಾಮೇಳಾವ್​ಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿತ್ತು. ಪದೇ ಪದೇ ಗಡಿ ವಿವಾದ ಕೆದಕುತ್ತಿರುವ ಎಂಇಎಸ್ ಕಾರ್ಯಕರ್ತರು ಕನ್ನಡ ಮತ್ತು ಮರಾಠಿ ಜನರ ನಡುವೆ ಭಾಷಾ ಕಿಡಿ ಹೊತ್ತಿಸಲು ಯತ್ನಿಸುತ್ತಿದ್ದಾರೆ. ಮಹಾಮೇಳಾವ್ ನಡೆಸುವ ಎಂಇಎಸ್ ನಿರ್ಧಾರಕ್ಕೆ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದು, ಅನುಮತಿ ನೀಡದಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಸಿಎಂಗೆ ಸಭಾಪತಿ ಪತ್ರ: ಮತ್ತೊಂದೆಡೆ, ಅಧಿವೇಶನದ ಅತ್ಯಮೂಲ್ಯವಾದ ಸಮಯ ಕೇವಲ ಪ್ರತಿಭಟನೆ, ಸತ್ಯಾಗ್ರಹ, ಧರಣಿಗಳಿಂದ ವ್ಯರ್ಥವಾಗುತ್ತಿದೆ. ಸದನದ ಒಳಗಡೆ ಜನಸಾಮಾನ್ಯರ ಜ್ವಲಂತ ಸಮಸ್ಯೆಗಳ ಕುರಿತು ಅರ್ಥಪೂರ್ಣ ಹಾಗೂ ಗಂಭೀರ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು. ಹೀಗಾಗಿ ಅಧಿವೇಶನ ಆರಂಭಗೊಳ್ಳುವ ಮುಂಚೆಯೇ ಸಂಬಂಧಪಟ್ಟ ಸಂಘಟನೆಗಳ ಪ್ರಮುಖರ ಸಭೆ ಕರೆದು ಅವರ ಬೇಡಿಕೆ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಸಬೇಕು. ಬಳಿಕ ಅವುಗಳ ಪರಿಹಾರಕ್ಕೆ ಪ್ರಯತ್ನಿಸುವ ಮೂಲಕ ಸಂಘಟನೆಗಳು ಅಧಿವೇಶನದ ಸಂದರ್ಭದಲ್ಲಿ ಸುವರ್ಣ ವಿಧಾನಸೌಧದ ಹೊರಗಡೆ ಧರಣಿ ಸತ್ಯಾಗ್ರಹ ನಡೆಸದಂತೆ ಸಂಘಟನೆಗಳ ಮುಖಂಡರಲ್ಲಿ ಮನವಿ ಮಾಡಲು ಮುಖ್ಯಮಂತ್ರಿ ತಮ್ಮ ಸಚಿವ ಸಂಪುಟದ ಸಂಬಂಧಪಟ್ಟ ಸಚಿವರಿಗೆ ಸೂಚಿಸಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸಚಿವರುಗಳಿಗೆ ಇತ್ತೀಚೆಗೆ ಸಲಹಾ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಅಧಿವೇಶನ ಕೇವಲ ಪ್ರತಿಭಟನೆ ಉದ್ದೇಶಕ್ಕೆ ಆಗಬಾರದು: ಗೃಹ ಸಚಿವ ಪರಮೇಶ್ವರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.