ETV Bharat / state

ಸ್ಯಾಂಟ್ರೋ ರವಿ, ಸೈಕಲ್ ರವಿ ಬಿಜೆಪಿ ಸರ್ಕಾರದ ಮುತ್ತು ರತ್ನಗಳಿದ್ದಂತೆ: ಡಿಕೆ ಶಿವಕುಮಾರ್

author img

By

Published : Jan 11, 2023, 3:34 PM IST

Green Signal to Prajadhwani Bus Yatra From Congress in Belagavi
Green Signal to Prajadhwani Bus Yatra From Congress in Belagavi

ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಬಸ್‌ ಯಾತ್ರೆ ಚಾಲನೆ - ಸರ್ಕಾರದ ವಿರುದ್ಧ ಕೈ ಮುಖಂಡರ ಗುಡುಗು- ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಎಂದ ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಬೆಳಗಾವಿ: ನಿಮ್ಮೆಲ್ಲರ ಸಹಕಾರದಿಂದ ಕರ್ನಾಟಕ ರಾಜ್ಯದ ಬದಲಾವಣೆಗಾಗಿ ಇಂದು ನಾವು ಹೊಸ ನಾಂದಿ ಹಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ತಿಳಿಸಿದರು. ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಬಸ್‌ ಯಾತ್ರೆ ಚಾಲನೆಗೂ ಮುನ್ನ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಹಾತ್ಮ ಗಾಂಧೀಜಿಯವರು ಆಂಗ್ಲರನ್ನು ಓಡಿಸಲು ಈ ನಾಡಿನಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸ್ವೀಕರಿಸಿ ಹೋರಾಟಕ್ಕೆ ಧುಮುಕಿದ್ದರು. ಅದಾದ ಮೇಲೆ ಪ್ರಜಾಪ್ರಭುತ್ವ ಬಂದು ಅಭಿವೃದ್ಧಿಶೀಲ ರಾಷ್ಟ್ರವಾಗಿದೆ. ಕಳೆದ ಮೂರೂವರೆ ವರ್ಷಗಳಿಂದ ಆಡಳಿತಾರೂಢ ಬಿಜೆಪಿ ಸರ್ಕಾರ ನಮ್ಮ ರಾಜ್ಯಕ್ಕೆ ದೊಡ್ಡ ಕಳಂಕ ತಂದಿಟ್ಟಿದೆ. ಇಡೀ ದೇಶಕ್ಕೆ ಮಾದರಿಯಾಗಿದ್ದಂತಹ ರಾಜ್ಯ ಸರ್ಕಾರ ಇತ್ತು. ಉತ್ತಮ ಆಡಳಿತ ನೀಡುವುದರ ಜೊತೆಗೆ ಎಲ್ಲ ವಲಯಗಳಲ್ಲಿ ಅಭಿವೃದ್ಧಿ ಮಾಡುವುಂತಹ ಅವಕಾಶ ಇತ್ತು. ಅದೆಲ್ಲವೂ ಇಂದು ಮಾಯವಾಗಿದೆ. ಪ್ರತಿದಿನ ಒಂದೊಂದು ಹಗರಣಗಳು ಹೊರಬರುತ್ತಿವೆ. ಹಾಗಾಗಿ ಆ ಕಳಂಕವನ್ನು ನಿರ್ಮೂಲನೆ ಮಾಡಲು ಪ್ರಜೆಗಳ ಧ್ವನಿ ತಿಳಿಸಲು ಹೊರಟಿದ್ದೇವೆ ಎಂದು ಶಿವಕುಮಾರ್​ ತಿಳಿಸಿದರು.

ಐತಿಹಾಸಿಕವಾದ ಈ ಭೂಮಿಯಿಂದ ಯಾತ್ರೆ ಆರಂಭ ಮಾಡುತ್ತಿದ್ದೇವೆ. ಈ ತಿಂಗಳು ಜಿಲ್ಲಾ ಕೇಂದ್ರಗಳನ್ನು ಮುಗಿಸಿ ಆ ಬಳಿಕ ಕ್ಷೇತ್ರವಾರು ಸಂಚಾರ ಮಾಡಲಿದ್ದೇವೆ. ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿಯೂ ಸಂಚಾರ ಮಾಡಲು ತೀರ್ಮಾನಿಸಿದ್ದೇವೆ. ಆಯಾ ಭಾಗಕ್ಕೆ ಹೋದಾಗ ಪಕ್ಷದ ಆಯಾ ನಾಯಕರು ಸೇರಿಕೊಳ್ಳುತ್ತಾರೆ. ನನ್ನನ್ನು ಸೇರಿದಂತೆ 20 ಜಿಲ್ಲೆಗಳಲ್ಲಿ ಮಾಜಿ ಮಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ಹೆಚ್.ಕೆ.ಪಾಟೀಲ್, ಬಸವರಾಜ ರಾಯರೆಡ್ಡಿ ಸೇರಿದಂತೆ ಹಿರಿಯ ನಾಯಕರು ಸಂಚರಿಸಲಿದ್ದೇವೆ ಎಂದು ಯಾತ್ರೆಯ ಬಗ್ಗೆ ಡಿಕೆಶಿ ಮಾಹಿತಿ ನೀಡಿದರು.

ಹೊಸಬರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿ ಕೆ ಶಿವಕುಮಾರ್, ಖಂಡಿತವಾಗಿಯೂ ಹೊಸಬರಿಗೆ ಅವಕಾಶ ಮಾಡಿಕೊಡಲಾಗುವುದು. ನವ ಕರ್ನಾಟಕಕ್ಕೆ ಕಾಂಗ್ರೆಸ್ ಪಕ್ಷ ಸಂಕಲ್ಪ ಮಾಡುತ್ತಿದೆ. ಪಂಚಮಸಾಲಿ ಮೀಸಲಾತಿ ಬಗ್ಗೆ ಕೂಡಲಸಂಗಮ ಸ್ವಾಮೀಜಿ ಚೆನ್ನಾಗಿ ವಿಶ್ಲೇಷಿಸಿದ್ದಾರೆ. ತುಪ್ಪವನ್ನು ನಮ್ಮ ತಲೆಯ ಮೇಲೆ ಇಟ್ಟಿದ್ದಾರೆ ಎಂದು ಚೆನ್ನಾಗಿ ವಿಶ್ಲೇಷಣೆ ಮಾಡಿ ಹೇಳಿದ್ದಾರೆ. ಎಲ್ಲ ವರ್ಗದವರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರದ ಮುತ್ತು ರತ್ನಗಳು.. ಸ್ಯಾಂಟ್ರೋ ರವಿ, ಸೈಕಲ್ ರವಿ ಬಿಜೆಪಿ ಸರ್ಕಾರದ ಮುತ್ತು ರತ್ನಗಳಿದ್ದಂತೆ. ಮಹಿಳೆಯರು ಕುಂಕುಮ ಹಚ್ಚಿದಾಗ ಒಂಥರ, ಮೂಗುತಿ ಹಾಕಿದಾಗ ಹೇಗೆ ಕಾಣ್ತಾರೋ? ಅದೇ ರೀತಿ ಇವರೆಲ್ಲ ಈ ಸರ್ಕಾರದ ಮುತ್ತು ರತ್ನಗಳಿದ್ದಂತೆ ಎನ್ನುವ ಮೂಲಕ ಕ್ರಿಮಿನಲ್ಸ್​ಗಳನ್ನು ಹೆಣ್ಣುಮಕ್ಕಳ ಸೌಂದರ್ಯಕ್ಕೆ ಹೋಲಿಸಿ ಅವರ ಕಾಲೆಳೆದರು.

ನಮ್ಮ ಪ್ರಜಾಧ್ವನಿ ಯಾತ್ರೆ ಮೂಲಕ ಸರ್ಕಾರದ ಕೊಲೆ, ಕಾಯಿಲೆ, ಭ್ರಷ್ಟಾಚಾರಗಳನ್ನು ತೊಳೆಯುತ್ತೇವೆ. ಇದು ಬಿ ರಿಪೋರ್ಟ್ ಸರ್ಕಾರ. 40 ಪರ್ಸೆಂಟ್ ಕಮಿಷನ್ ಸರ್ಕಾರ. ಬಿಜೆಪಿಗೆ ಅಭಿವೃದ್ಧಿ ಮಾಡಲು ಸಾಕಷ್ಟು ಅವಕಾಶಗಳಿದ್ದವು. ಬಂಡವಾಳ ಆಕರ್ಷಿಸುವ, ಉದ್ಯೋಗ ಸೃಷ್ಟಿಸಲು ಸಹ ಅವಕಾಶ ಇತ್ತು. ಆದರೆ, ಮೂರೂವರೆ ವರ್ಷದಿಂದ ಈ ಸರ್ಕಾರ ಜನರ ಶಾಪಕ್ಕೆ ಒಳಗಾಗಿದೆ. ರಾಜ್ಯಕ್ಕೆ ಅಂಟಿರುವ ಶಾಪ ನಿರ್ಮೂಲನೆ ಮಾಡುವ ಸಲುವಾಗಿ ಪವಿತ್ರ ಭೂಮಿಯಿಂದ ಈ ಯಾತ್ರೆ ಆರಂಭ ಮಾಡುತ್ತಿದ್ದೇವೆ ಎಂದರು.

ಬಿಜೆಪಿ ಸರ್ಕಾರ ಭ್ರಷ್ಟಾಚಾರದ ರಾಜಧಾನಿಯಾಗಿದೆ. ನಮ್ಮ ಯಾತ್ರೆ ಬಿಜೆಪಿ ಟೀಕೆ ಮಾಡಲಿ, ಮಾಡಬೇಕು, ನಮಗೂ ಅನುಕೂಲ. ಪಾಪದ ಪುರಾಣಕ್ಕೆ ಬಿಜೆಪಿ ಈ ರಾಜ್ಯದ ಜನರಿಗೆ ಉತ್ತರ ಕೊಡಬೇಕು. ಪಾಪದ ಪುರಾಣದ ಪಟ್ಟಿ ನಮ್ಮ ಬಳಿ ಇದೆ. ಅದನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಪಾಪದ ಕೊಡ ಇವತ್ತು ತುಂಬಿದೆ.. ಪ್ರಜಾಧ್ವನಿ ಬಸ್ ಯಾತ್ರೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಬೆಳಗಾವಿ ಐತಿಹಾಸಿಕ ಸ್ಥಳವಾಗಿದೆ. 1924 ರಲ್ಲಿ ಮಹಾತ್ಮ ಗಾಂಧಿ ಅವರು ಮೊದಲ ಬಾರಿಗೆ ಕಾಂಗ್ರೆಸ್ ಅಧಿವೇಶನ ಅಧ್ಯಕ್ಷರಾದರು. ಆ ಅಧಿವೇಶನ ಬೆಳಗಾವಿಯಲ್ಲಿ ನಡೆಯಿತು. ಆ ಸ್ಥಳವೇ ಈಗ ವೀರಸೌಧವಾಗಿದೆ ಎಂದರು.

ಈ ವೀರಸೌಧದಿಂದ ನಾವು ಇಂದು ಪ್ರಜಾಧ್ವನಿ ಬಸ್ ಯಾತ್ರೆ ಆರಂಭಿಸಿದ್ದೇವೆ. ನಾನು, ಡಿ ಕೆ ಶಿವಕುಮಾರ್, ರಣದೀಪ್‌ಸಿಂಗ್ ಸುರ್ಜೇವಾಲಾ, ಎಂ.ಬಿ. ಪಾಟೀಲ್, ಹರಿಪ್ರಸಾದ್, ದೇಶಪಾಂಡೆ, ಹೆಚ್.ಕೆ.ಪಾಟೀಲ್ ಸೇರಿ ಎಲ್ಲ ನಾಯಕರು ಪಾಲ್ಗೊಂಡಿದ್ದಾರೆ. ಈ ಯಾತ್ರೆ ಮೂಲಕ ಬಿಜೆಪಿ ಸರ್ಕಾರದ ಆರೋಪ ಪಟ್ಟಿಯನ್ನು ಜನರ ಮುಂದೆ ಇಡುವುದು ನಮ್ಮ ಉದ್ದೇಶ. ಇಡೀ ಸರ್ಕಾರ ಭ್ರಷ್ಟಾಚಾರ, ದುರಾಡಳಿತದಲ್ಲಿ ಮುಳುಗಿದೆ. ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಪ್ರಶ್ನೆ ಮಾಡಿದ್ರೆ ಕೇಸ್ ಹಾಕೋದು, ಅರೆಸ್ಟ್ ಮಾಡುತ್ತಿದ್ದಾರೆ. ಇದು ಬಿಜೆಪಿ ಸರ್ಕಾರ ಮಾಡುತ್ತಿರುವ ದ್ವೇಷದ ರಾಜಕಾರಣ. ಇದರಿಂದ ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು, ರೈತರು ಯಾರು ಕೂಡಾ ಧೈರ್ಯದಿಂದ ಇರಲು ಆಗುತ್ತಿಲ್ಲ. ಎಲ್ಲರೂ ಆತಂಕದಿಂದ ಬದುಕುತ್ತಿದ್ದಾರೆ. ಬಿಜೆಪಿಯವರ ಪಾಪದ ಕೊಡ ಇವತ್ತು ತುಂಬಿದೆ. ನಾವು ಕಾಂಗ್ರೆಸ್ ಪಕ್ಷದವರು ಬೆಳಗಾವಿಯಿಂದ ಶುಚಿಗೊಳಿಸುವ ಕಾರ್ಯ ಆರಂಭಿಸಿದ್ದೇವೆ. ಇವರ ಪಾಪದ ಕೊಳೆ, ಭ್ರಷ್ಟಾಚಾರ ತೊಲಗಿಸಲು ಪೊರಕೆ ಹಿಡಿದು, ಕಾಂಗ್ರೆಸ್ ಬಾವಿಯ ಪವಿತ್ರ ಜಲದಿಂದ ಸ್ವಚ್ಛಗೊಳಿಸುವ ಕಾರ್ಯ ಪ್ರಾರಂಭಿಸಿದ್ದೇವೆ ಎಂದು ಅವರು ಆಡಳಿತಾರೂಢ ಪಕ್ಷದ ವಿರುದ್ಧ ಹರಿಹಾಯ್ದರು.

ರಸ್ತೆ ತೊಳೆದ ಕೈ ನಾಯಕರು.. ಪ್ರಜಾಧ್ವನಿ ಬಸ್ ಯಾತ್ರೆಯ ಚಾಲನೆಗೂ ಮುನ್ನ ಬಾವಿಯಿಂದ ತಂದ ನೀರು ಹಾಕಿ ರಸ್ತೆಯನ್ನು ಸ್ವಚ್ಛಗೊಳಿಸಿದರು. ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಕೈಯಲ್ಲಿ ಪೊರಕೆ ಹಿಡಿದು ರಸ್ತೆ ತೊಳೆದರು. ಇವರ ಸ್ವಚ್ಛತಾ ಕಾರ್ಯಕ್ರಮದಿಂದ ಅರ್ಧ ಗಂಟೆ ಕಾಲ ರಸ್ತೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ವಾಹನ ಸಂಚಾರ ಸ್ಥಗಿತಗೊಂಡ ಹಿನ್ನೆಲೆ ಸಾರ್ವಜನಿಕರು, ವಾಹನ ಸವಾರರು ಪರದಾಟ ನಡೆಸಬೇಕಾಯಿತು. ಬಸ್ ಯಾತ್ರೆ​ ಚಿಕ್ಕೋಡಿಯತ್ತ ಪ್ರಯಾಣ ಬೆಳೆಸುತ್ತಿದ್ದಂತೆ ಸಂಚಾರ ದಟ್ಟಣೆ ಕಡಿಮೆಗೊಂಡಿತು. ಬಸ್​ನಲ್ಲಿ ಒಟ್ಟು 40 ನಾಯಕರು ಪ್ರಯಾಣ ಬೆಳೆಸಿದರು.

ಅಕ್ಕ-ಪಕ್ಕದಲ್ಲಿ ಸವಾರಿ: ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಪ್ರಪಕ್ಷ ನಾಯಕ ಸಿದ್ದರಾಮಯ್ಯ ಬಸ್‌ನಲ್ಲಿ ಅಕ್ಕಪಕ್ಕದಲ್ಲೇ ಕುಳಿತು ಪ್ರಯಾಣ ಮಾಡಿದ್ದು ಕಂಡುಬಂತು. ಇದಕ್ಕೂ ಮುನ್ನ ವೀರಸೌಧಕ್ಕೆ ಆಗಮಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ‌ ಸಚಿವರಾದ ಸತೀಶ್ ಜಾರಕಿಹೊಳಿ, ಬಸವರಾಜ ರಾಯರೆಡ್ಡಿ, ಆರ್.ವಿ.ದೇಶಪಾಂಡೆ, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, ಶಾಸಕಿಯರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ‌ ನಿಂಬಾಳ್ಕರ್ ವೀರಸೌಧದಲ್ಲಿ ಮಹಾತ್ಮ ಗಾಂಧಿ ಮೂರ್ತಿಗೆ ಮಾಲಾರ್ಪಣೆ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.