ETV Bharat / state

ಅಕ್ರಮ ಕೃಷಿ ಪಂಪ್‌ಸೆಟ್‌ ಸಕ್ರಮಗೊಳಿಸುವ ಯೋಜನೆ ಮುಂದುವರೆದಿದೆ: ಸಚಿವ ಸುನಿಲ್‌ ಕುಮಾರ್

author img

By

Published : Dec 29, 2022, 10:36 PM IST

Energy Minister Sunil Kumar spoke
ವಿಧಾನಸಭೆ ಪ್ರಶ್ನೋತ್ತರ ವೇಳೆ ಮಾತನಾಡಿದ ಇಂಧನ ಸಚಿವ ಸುನೀಲ್ ಕುಮಾರ

ವಿಧಾನಸಭೆ ಪ್ರಶ್ನೋತ್ತರ ಕಲಾಪದ ವೇಳೆ ಇಂಧನ ಸಚಿವ ಸುನೀಲ್ ಕುಮಾರ್ ಅವರು ಅಕ್ರಮ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಯೋಜನೆ ಕುರಿತು ಸದನಕ್ಕೆ ಮಾಹಿತಿ ನೀಡಿದರು.

ಬೆಳಗಾವಿ: ರಾಜ್ಯದಲ್ಲಿ ಅಕ್ರಮ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಯೋಜನೆ ಮುಂದುವರೆದಿದೆ. ಮಧುಗಿರಿ ಕ್ಷೇತ್ರದಲ್ಲಿ 2014 ರಿಂದ 2022 ರ ನವೆಂಬರ್‌ವರೆಗೆ ತತ್ಕಾಲ್ ಯೋಜನೆಯಡಿ 666 ರೈತರು ಕೃಷಿ ಪಂಪ್‌ಸೆಟ್​​​ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅರ್ಜಿ ಸಲ್ಲಿಸಿದ್ದರು. ಈಗಾಗಲೇ 532 ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಬಾಕಿ ಉಳಿದಿರುವ 134 ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿದೆ ಎಂದು ಸಚಿವ ಸುನಿಲ್‌ ಕುಮಾರ್ ಮಾಹಿತಿ ನೀಡಿದರು.

ಹುಣಸೂರಿಗೆ 100 ಹಾಸಿಗೆಗಳ ಆಸ್ಪತ್ರೆ: ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ 100 ಹಾಸಿಗೆಗಳ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆ ಎರಡು ತಿಂಗಳೊಳಗೆ ಸಿದ್ಧವಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, ಕಾಂಗ್ರೆಸ್ ಶಾಸಕ ಮಂಜುನಾಥ್ ಪ್ರಶ್ನೆಗೆ ಉತ್ತರಿಸಿದರು.

ಆಸ್ಪತ್ರೆ ಈ ಹಿಂದೆಯೇ ಉದ್ಘಾಟನೆಯಾಗಬೇಕಿತ್ತು. ಹೆಚ್ಚುವರಿ ಕಾಮಗಾರಿ ನಡೆಸುತ್ತಿರುವ ಕಾರಣ ವಿಳಂಬವಾಗಿದೆ. 9.95 ಕೋಟಿ ರೂ. ಪರಿಷ್ಕೃತ ಅಂದಾಜು ಮೊತ್ತದ ಅನುಮೋದನೆ ನೀಡುವಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅಲ್ಲಿಂದ ಅನುಮತಿ ಸಿಕ್ಕರೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುವುದಾಗಿ ಹೇಳಿದರು.

ಆಡಳಿತಾತ್ಮಕ ಅನುಮೋದನೆ: ಈ ಹಿಂದೆ 2018 ಡಿಸೆಂಬರ್ 12 ರಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿತ್ತು. ಆರ್​​ಐಡಿಎಫ್ ನಬಾರ್ಡ್ 23 ಯೋಜನೆಯಡಿ 25 ಕೋಟಿ ರೂ. ಮೊತ್ತಕ್ಕೆ ಅನುಮೋದನೆ ನೀಡಲಾಗಿತ್ತು. ಅರುಣಾ ಕನ್ಸ್‌ಟ್ರಕ್ಷನ್ ಪ್ರವೈಟ್ ಲಿ. ಅವರಿಗೆ ಟೆಂಡರ್ ನೀಡಲಾಗಿದ್ದು, 18 ತಿಂಗಳು ಕಾಲಾವಧಿಯೊಳಗೆ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ. ಆದರೆ, ಮಳೆಗಾಲ ಬಂದ ಕಾರಣ ವಿಳಂಬವಾಗಿದೆ. ಇದರ ಕಾಮಗಾರಿ ಪರಿಷ್ಕರಿಸಿ 31.15 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.

94 ಹುದ್ದೆ ಮಂಜೂರು: ಈ ಆಸ್ಪತ್ರೆಗೆ ಒಟ್ಟು 94 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಒಂದು ವೇಳೆ ಸಿಬ್ಬಂದಿ ಕೊರತೆ ಇದ್ದರೆ ಹೊರಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದರು.

ಕುಮಟಾ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ: ಕಾಂಗ್ರೆಸ್ ಹಿರಿಯ ಸದಸ್ಯ ಆರ್.ವಿ.ದೇಶಪಾಂಡೆ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಗೆ ನೀವು ಘೋಷಣೆ ಮಾಡಿದಂತೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು. ಇದಕ್ಕೆ ಉತ್ತರ ನೀಡಿದ ಸಚಿವ ಡಾ.ಸುಧಾಕರ್, ಈಗಾಗಲೇ ಮುಖ್ಯಮಂತ್ರಿಗಳು ಘೋಷಣೆ ಮಾಡಿರುವಂತೆ ಉತ್ತರ ಕನ್ನಡ ಜಿಲ್ಲೆಯ ಕುಮುಟಾದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: ಗಡಿ ಕ್ಯಾತೆ ಬಳಿಕ ಜಲ ತಂಟೆ: ಆಲಮಟ್ಟಿ ಜಲಾಶಯದ ಎತ್ತರಕ್ಕೆ ಮಹಾರಾಷ್ಟ್ರ ತಗಾದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.