ETV Bharat / state

ಎಸ್ಸಿ, ಎಸ್ಟಿ ಹಣ ಗ್ಯಾರಂಟಿ ಯೋಜನೆಗೆ ಬಳಕೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

author img

By ETV Bharat Karnataka Team

Published : Dec 6, 2023, 8:01 PM IST

Etv Bharat
Etv Bharat

ಕಾಂಗ್ರೆಸ್​ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಬೆಳಗಾವಿಯ ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನೆ ನಡೆಸಿದರು.

ಎಸ್ಸಿ, ಎಸ್ಟಿ ಹಣ ಗ್ಯಾರಂಟಿ ಯೋಜನೆಗೆ ಬಳಕೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಬೆಳಗಾವಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರ ಬಳಕೆ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಬೆಳಗಾವಿಯ ಸುವರ್ಣ ಗಾರ್ಡನ್ ಬಳಿಯ ಟೆಂಟ್​​ನಲ್ಲಿ ಇಂದು ಪ್ರತಿಭಟನೆ ನಡೆಸಿದರು. ದಲಿತರಿಗೆ ಮೀಸಲಿಟ್ಟ ಅನುದಾನ ನಮ್ಮ ಮಕ್ಕಳ ಶಿಕ್ಷಣ, ಸಮಾಜದ ಅಭಿವೃದ್ಧಿಗೆ ಮೀಸಲಿಡಬೇಕು. ನಮಗೆ ಮೀಸಲಿದ್ದ ಅನುದಾನ ಗ್ಯಾರಂಟಿ ಯೋಜನೆಗೆ ಬಳಕೆ ಮಾಡುತ್ತಿರುವುದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಖಾನಾಪುರ ತಾಲ್ಲೂಕಿನ ಪ್ರಭುನಗರ ಜನತಾ ಪ್ಲಾಟ್‌ನ 80 ಕುಟುಂಬಗಳಿಗೆ ಸೇರಿದ ಜಮೀನು ಖಾಸಗಿಯವರಿಗೆ ವರ್ಗಾವಣೆ ಮಾಡಲಾಗಿದೆ. ಕಳೆದ 40 ವರ್ಷಗಳಿಂದ ಇಲ್ಲಿ ಈ ಕುಟುಂಬಗಳು ಮನೆ ಕಟ್ಟಿಕೊಂಡು ವಾಸವಾಗಿದ್ದು, ಈ 80 ಕುಟುಂಬಗಳಿಗೆ ಇ-ಸ್ವತ್ತು ಒದಗಿಸಬೇಕು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿರುವ ಕಿತ್ತೂರು, ಖಾನಾಪುರ ವಿಧಾನಸಭಾ ಕ್ಷೇತ್ರವನ್ನು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸೇರಿಸಬೇಕು. ಉತ್ತರ ಕನ್ನಡ ಸಂಸದರು ಕೇವಲ ಮತ ಕೇಳಲು ಮಾತ್ರ ಬರುತ್ತಾರೆ. ಆಮೇಲೆ ಬರೋದೇ ಇಲ್ಲ. ಹೀಗಾಗಿ ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪುರ ಎರಡೂ ಕ್ಷೇತ್ರ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಸೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಪ್ರಧಾ‌ನ ಕಾರ್ಯದರ್ಶಿ ಪರಶುರಾಮ ಮಾದರ ಮಾತನಾಡಿ, ಉತ್ತರಕರ್ನಾಟಕ ಅಭಿವೃದ್ಧಿ ಗುರಿ ಇಟ್ಟುಕೊಂಡು ಬೆಳಗಾವಿಯ ಸುವರ್ಣ‌ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಸಲಾಗುತ್ತದೆ. ಆದರೆ, ಅಧಿವೇಶನ ಮುಗಿದ ಬಳಿಕ ಅಭಿವೃದ್ಧಿ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಕಳೆದ ಅಧಿವೇಶನದಲ್ಲೂ ಹತ್ತು ಹಲವಾರು ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಿದ್ದೆವು. ಅದರಲ್ಲಿ ಯಾವ ಸಮಸ್ಯೆಯೂ ಬಗೆಹರಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳಾ ಹೋರಾಟಗಾರ್ತಿ ಲಕ್ಷ್ಮೀ ಪಮ್ಮಾರ ಮಾತನಾಡಿ, ಪ್ರತಿ ಬಾರಿ ಪ್ರತಿಭಟನೆಗೆ ಬಂದಾಗಲೂ ಸರ್ಕಾರ ನಮಗೆ ಬರೀ ಆಶ್ವಾಸನೆ ನೀಡುತ್ತದೆ ಹೊರತು ನಮ್ಮ ಬೇಡಿಕೆ ಈಡೇರಿಸುತ್ತಿಲ್ಲ. ಈ ಸಲವೂ ನಮಗೆ ನ್ಯಾಯ ಸಿಗದಿದ್ದರೆ ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಚಿವ ಎಚ್​ ಕೆ ಪಾಟೀಲ್​ ಹೇಳಿಕೆ

ಮನವಿ ಸ್ವೀಕರಿಸಿದ ಸಚಿವ ಎಚ್​.ಕೆ ಪಾಟೀಲ್: ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಾಕಷ್ಟು ಬರಗಾಲ ಪರಿಸ್ಥಿತಿ ನಿರ್ಮಾಣ ಆಗಿದೆ. ರಾಜ್ಯ ಸರ್ಕಾರ ತನ್ನ ಇತಿಮಿತಿಯಲ್ಲಿ ಪರಿಹಾರ ನೀಡಿದೆ. ಕೇಂದ್ರ ಸರ್ಕಾರದ ಬಳಿ ಹೆಚ್ಚಿನ ಬಲ ಇರುತ್ತದೆ. ರೈತರ ರಕ್ಷಣೆಗೆ ಧಾವಿಸಿ ಬರಬೇಕು. ಬರಗಾಲ ಘೋಷಣೆ ಆಗಿ ಇಷ್ಟು ದಿನ ಆದ್ರೂ ಇದುವರೆಗೂ ಕೇಂದ್ರ ಸರ್ಕಾರ ಪರಿಹಾರ ನೀಡುತ್ತಿಲ್ಲ. ಬರ ಪರಿಹಾರ ವಿತರಣೆಯಲ್ಲಿ ಕೇಂದ್ರದ ವಿಳಂಬ ಧೋರಣೆ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ರಾಜ್ಯದ ರೈತರ ಸಹಾಯಕ್ಕೆ ಬರಬೇಕು ಎಂದು ಎಚ್.ಕೆ.ಪಾಟೀಲ ಆಗ್ರಹಿಸಿದರು.

ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ ಎಸ್ಟಿ ಅನುದಾನ ಬಳಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಎಸ್ಸಿ ಎಸ್ಟಿ ಮೀಸಲಿಟ್ಟಿರುವ ಎಸ್ಸಿಪಿ ಟಿಎಸ್ಪಿ ಹಣ ದುರ್ಬಳಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಹಿಂದಿನ ಸರ್ಕಾರದಲ್ಲಿ ಏನಾಗಿತ್ತು ಅದರ ಬಗ್ಗೆ ಬಹಳ ಗಂಭೀರವಾಗಿ ಗಮನಿಸುತ್ತಿದ್ದೇವೆ. ನಮ್ಮ ಸರ್ಕಾರ ಯಾವ ಕಾರಣಕ್ಕೂ ಎಸ್ಸಿಪಿ ಟಿಎಸ್ಪಿ ಹಣ ದುರ್ಬಳಕೆ ಮಾಡಿಕೊಳ್ಳಲು ಮತ್ತು ಬೇರೆ ಕಾರಣಕ್ಕೆ ಅದನ್ನು ವರ್ಗಾಯಿಸಲು ಸರ್ವತಾ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಆರ್​ಎಸ್​ಎಸ್ ಗರ್ಭಗುಡಿಯ ಹೊರಬಾಗಿಲಲ್ಲಿ ನಿಂತು ಜೀ.. ಹುಜೂರ್​ ಎಂದಷ್ಟೇ ಹೇಳಬೇಕು: ಸಿಎಂ ಲೇವಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.