ETV Bharat / state

ಬೆಳೆಹಾನಿಗೆ 2 ಸಾವಿರ ರೂ.ಗಳ ಮೊದಲ ಕಂತು ಮುಂದಿನ ವಾರ ಪಾವತಿ: ಕೃಷ್ಣ ಬೈರೇಗೌಡ

author img

By ETV Bharat Karnataka Team

Published : Dec 6, 2023, 1:51 PM IST

Updated : Dec 6, 2023, 2:33 PM IST

compensation for crop damage
ಬೆಳೆಹಾನಿಗೆ ಪರಿಹಾರ

ಬರ ಪರಿಹಾರದ ಹಣ ಪಾವತಿ ಕುರಿತು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.

ಸಚಿವ ಕೃಷ್ಣ ಬೈರೇಗೌಡ

ಬೆಳಗಾವಿ/ಬೆಂಗಳೂರು: ಕೇಂದ್ರದಿಂದ ಬರ ಪರಿಹಾರದ ಹಣ ಬಿಡುಗಡೆಯಾಗುತ್ತಿದ್ದಂತೆ ರೈತರಿಗೆ ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೂ ತಾತ್ಕಾಲಿಕವಾಗಿ ಭಾಗಶಃ ಪರಿಹಾರದ ಭಾಗವಾಗಿ 2 ಸಾವಿರ ರೂ.ಗಳ ಮೊದಲ ಕಂತನ್ನು ಮುಂದಿನ ವಾರ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವರ್ಷ ಬರ ಜನರಿಗೆ ಬಾಧೆಯಾಗುತ್ತಿದೆ, ಸರ್ಕಾರ ಏನೆಲ್ಲಾ ಮಾಡಬೇಕೋ ಅದನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಸಿಎಂ ಅಧ್ಯಕ್ಷತೆಯಲ್ಲಿ ರಾಜ್ಯ ವಿಪತ್ತು ಪ್ರಾಧಿಕಾರ ಮೂರು ಸಭೆ ಮಾಡಿದೆ, ಸಂಪುಟ ಉಪ ಸಮಿತಿ ಇದೆ, 10 ಸಭೆ ಬರದ ಸಲುವಾಗಿ ಮಾಡಿದ್ದೇವೆ. ದೇಶದ 12 ರಾಜ್ಯಗಳಲ್ಲಿ ಮುಂಗಾರು ಅವಧಿಯ ಬರಗಾಲ ಇದೆ, 18 ರಾಜ್ಯಗಳಲ್ಲಿ ಹಿಂಗಾರು ಅವಧಿಯಲ್ಲಿ ಬರಗಾಲ ಆವರಿಸಿದೆ. ಮುಂಗಾರು ಅವಧಿಯಲ್ಲಿ ಸೆಪ್ಟಂಬರ್ 13 ರಂದೇ ರಾಜ್ಯದಲ್ಲಿ ಬರಗಾಲ ಘೋಷಣೆ ಆಗಿತ್ತು. ಬೇರೆ ರಾಜ್ಯಗಳು ನಾವು ಘೋಷಿಸಿದ 2 ತಿಂಗಳ ನಂತರ ಘೋಷಣೆ ಮಾಡಿವೆ, ಇತರ ರಾಜ್ಯಕ್ಕೂ ಮೊದಲು ನಾವಿದ್ದೇವೆ. ಸೆಪ್ಟಂಬರ್ 22 ರಂದು ಮೊದಲ ಮನವಿಯನ್ನು ಕೇಂದ್ರಕ್ಕೆ ಮಾಡಿದ್ದೇವೆ. ಮೇವಿನ ಕೊರತೆ ಬರಬಹುದು ಎಂದು 7 ಲಕ್ಷ ಬಿತ್ತನೆ ಬೀಜದ ಕಿಟ್ ಗಳನ್ನು ಬರಪೀಡಿತ ತಾಲ್ಲೂಕುಗಳಲ್ಲಿ ರೈತರಿಗೆ ಕೊಟ್ಟಿದ್ದೇವೆ. 90 ವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಅದರಲ್ಲಿ 60 ಕಡೆ ಖಾಸಗಿ ಬೋರ್​ವೆಲ್​ ಬಾಡಿಗೆ ಪಡೆದಿದ್ದು, 25 ಕಡೆ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಚಿತ್ರದುರ್ಗ ಸೇರಿ ಕೆಲವಡೆ ಹೆಚ್ಚಿನ ಸಮಸ್ಯೆ ಇದೆ, ಅಲ್ಲಿ ಗೋಶಾಲೆ ಆರಂಭಕ್ಕೆ ಸೂಚಿಸಲಾಗಿದೆ. ಜಿಲ್ಲಾಡಳಿತಗಳ ಬಳಿ 894 ಕೋಟಿ ಹಣವನ್ನು ಸಿದ್ಧವಿಟ್ಟಿದ್ದೇವೆ, ಕುಡಿಯುವ ನೀರಿನ ಸಮಸ್ಯೆ ಆದ 24 ಗಂಟೆಯ ಒಳಗೆ ಟ್ಯಾಂಕರ್ ಮೂಲಕವಾದರೂ ಪೂರೈಸಿ ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದೇವೆ ಎಂದು ಸರ್ಕಾರ ಕೈಗೊಂಡ ಕ್ರಮಗಳ ಕುರಿತು ವಿವರಿಸಿದರು.

ರೈತರಿಗೆ ಪರಿಹಾರ ಕೊಡುವ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಕೊಟ್ಟಿದ್ದೇವೆ. ಕೇಂದ್ರ ಕೃಷಿ ಇಲಾಖೆ ಕಾರ್ಯದರ್ಶಿ, ಗೃಹ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದೆವು. ಕೇಂದ್ರ ಸಚಿವರ ಸಮಯಾವಕಾಶ ಸಿಗದ ಕಾರಣ ಕಾರ್ಯದರ್ಶಿ ಭೇಟಿ ಮಾಡಿದ್ದೆವು. ಹಣಕಾಸು ಸಚಿವರು ಸಮಯ ಕೊಟ್ಟಿದ್ದಾರೆ, ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ. ರಾಜ್ಯದ ರೈತರ ಸ್ಥಿತಿಗತಿ ಕಷ್ಟವಿದೆ, ರಾಜ್ಯಕ್ಕೆ ಬರಬೇಕಾದ ಹಣ ಬೇಗ ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದೆವು, ಅವರು ಇನ್ನು ತೀರ್ಮಾನ ಮಾಡದ ಕಾರಣ ಭಾಗಶಃ ಪರಿಹಾರವಾಗಿ 2 ಸಾವಿರ ರೂ.ಗಳ ಹಣವನ್ನು ಕೊಡಲು ಸಿಎಂ ತೀರ್ಮಾನಿಸಿದ್ದಾರೆ. ಡಿಬಿಟಿ ಮೂಲಕ ಮುಂದಿನ ವಾರ ಭಾಗಶಃ ಪರಿಹಾರದ ಮೊದಲ ಕಂತನ್ನು ಹಾಕಲಿದ್ದು, ಕೇಂದ್ರದಿಂದ ಪರಿಹಾರದ ಹಣ ಬರುತ್ತಿದ್ದಂತೆ ಬಾಕಿ ಪರಿಹಾರದ ಹಣ ಜಮೆ ಮಾಡಲಾಗುತ್ತದೆ. ಪರಿಹಾರದ ಹಣ ಕಡಿಮೆ ಎನ್ನುವುದು ನಿಜ. ವಿಮೆ ಮೂಲಕ ಪರಹಾರವೂ ಸಿಗಲಿದೆ, ಎಲ್ಲ ಸೇರಿ 4 ಸಾವಿರ ಕೋಟಿ ರೂಪಾಯಿ ಪರಿಹಾರ ಕೊಡುವ ಚಿಂತನೆ ಇದೆ ಎಂದರು.

ಬೆಳೆಹಾನಿ ಪರಿಹಾರದ ಮೊತ್ತ ಕಡಿಮೆ ಇದೆ, ಇದನ್ನು ಪರಿಷ್ಕರಿಸಲು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಇದರ ಜೊತೆಗೆ ನಾವು ನಮ್ಮ ಸರ್ಕಾರದ ವತಿಯಿಂದ ರೈತರಿಗೆ ಉಂಟಾಗುವ ನಷ್ಟ ಕಡಿಮೆ ಮಾಡಲು ಎಲ್ಲ ರೀತಿಯ ಪ್ರಯತ್ನ ನಡೆಸಲಿದೆ. ಕೇಂದ್ರದ ಹಣ ಬಂದರೆ ರಾಜ್ಯ ಕೂಡ ತನ್ನ ಇತರ ಸಂಪನ್ಮೂಲ ಕ್ರೋಢೀಕರಿಸಿ ರೈತರಿಗೆ ನೆರವು ನೀಡಲು ಬದ್ಧವಿದೆ ಸಚಿವರು ತಿಳಿಸಿದರು.

ಮದರಸಾಗಳಲ್ಲಿ ಇತರ ವಿಷಯಗಳ ಪಠ್ಯ ಬೋಧನೆಗೆ ನಿರ್ಧಾರ: ನ್ಯಾಷನಲ್ ಓಪನ್ ಯೂನಿವರ್ಸಿಟಿ ಅಫಿಲಿಯೇಷನ್ ಸಿಕ್ಕ ತಕ್ಷಣವೇ ರಾಜ್ಯದ 100 ಮದರಸಾಗಳಲ್ಲಿ ಪ್ರಾಯೋಗಿಕವಾಗಿ ಧರ್ಮೇತರ ಪಠ್ಯದ ಇತರ ವಿಷಯಗಳ ಕುರಿತು ಶಿಕ್ಷಣ ನೀಡಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಬಿ.ಎಂ ಫಾರೂಕ್ ಪ್ರಶ್ನೆಗೆ ವಕ್ಫ್ ಸಚಿವರ ಪರವಾಗಿ ಉತ್ತರಿಸಿದ ಕೃಷ್ಣ ಬೈರೇಗೌಡ, ಮದರಸಾಗಳಲ್ಲಿ ಬೇರೆ ಶಿಕ್ಷಣ ಕೊಡದಿದ್ದಲ್ಲಿ ಪ್ರಚಲಿತ ಸಮಾಜದಿಂದ ಅಲ್ಲಿನ ವಿದ್ಯಾರ್ಥಿಗಳು ವಿಮುಖರಾಗಲಿದ್ದಾರೆ. ಹಾಗಾಗಿ ಬೇರೆ ವಿಷಯಗಳ ಪಾಠ ಮದರಸಾಗಳಲ್ಲಿ ಆಗಬೇಕು ಎನ್ನುವ ಚರ್ಚೆ ಬಹಳ ವರ್ಷಗಳಿಂದ ಇತ್ತು. ನಮ್ಮ ಸರ್ಕಾರ ಬಂದ ನಂತರ ಈ ಬಗ್ಗೆ ಚರ್ಚಿಸಿದ್ದು, ತಕ್ಷಣವೇ ಈ ವರ್ಷದಿಂದಲೇ ಮದರಸಾಗಳಲ್ಲಿ ಬೇರೆ ವಿಷಯಗಳ ಪಠ್ಯ ಬೋಧನೆ ಮಾಡುವ ಯೋಜನೆ ಅನುಷ್ಠಾನ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ. ಕನ್ನಡ, ಇಂಗ್ಲಿಷ್, ವಿಜ್ಞಾನ, ಗಣಿತ, ಸಮಾಜ ಹಾಗು ಇತರ ವಿಷಯಗಳ ಕುರಿತ ಶಿಕ್ಷಣ ನೀಡಿ ಎಸ್.ಎಸ್.ಎಲ್.ಸಿ ಹಾಗು ಪಿಯುಸಿ ಪಾಸಾಗುವ ಮಟ್ಟಕ್ಕೆ ಬೆಳೆಸುವ ಚಿಂತನೆ ಇದೆ. ನ್ಯಾಷನಲ್ ಓಪನ್ ಯೂನಿವರ್ಸಿಟಿ ಮೂಲಕ ಇದನ್ನು ಮಾಡಲಿದ್ದೇವೆ.

100 ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭ ಮಾಡಲಾಗುತ್ತದೆ. ರಾಷ್ಟ್ರೀಯ ಓಪನ್ ವಿವಿ ಜೊತೆ ಕರೆಸ್ಪಾಂಡೆನ್ಸ್ ಆಗಿ ಮಾಡಲಿದ್ದೇವೆ. ಅವರ ಅಫಿಲಿಯೇಷನ್ ಗೆ ಪ್ರಯತ್ನ ಮಾಡುತ್ತಿದ್ದು, ಅಫಿಲಿಯೇಷನ್ ಸಿಕ್ಕ ಕೂಡಲೇ ಮದರಸಾಗಳಲ್ಲಿ ಇತರ ವಿಷಯಗಳ ಪಠ್ಯದ ಬೋಧನಾ ಕಾರ್ಯ ಆರಂಭಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಗೊಲ್ಲರಹಟ್ಟಿಗಳಿಗೆ ಕಂದಾಯ ಗ್ರಾಮ ಸ್ಥಾನ: ರಾಜ್ಯದ ಯಾವುದೇ ಗೊಲ್ಲರಹಟ್ಟಿಯನ್ನೂ ಕಂದಾಯ ಗ್ರಾಮದ ಸ್ಥಾನ ನೀಡುವ ಪ್ರಕ್ರಿಯೆಯಿಂದ ಕೈಬಿಡುವುದಿಲ್ಲ, ಒಂದು ವೇಳೆ ಕೈಬಿಟ್ಟಿರುವ ಕುರಿತು ಯಾರೇ ಮಾಹಿತಿ ನೀಡಿದರೂ ಅದನ್ನು ಪರಿಗಣಿಸಿ ಕಂದಾಯ ಗ್ರಾಮದ ಸ್ಥಾನ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಏಳನೇ ವೇತನ ಆಯೋಗದ ಜಾರಿಗೆ ಆಗ್ರಹಿಸಿ ವಿಧಾನ ಪರಿಷತ್​ನಲ್ಲಿ ಬಿಜೆಪಿ ಧರಣಿ

ವಿಧನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 300ಕ್ಕೂ ಹೆಚ್ಚಿನ ಗೊಲ್ಲರಹಟ್ಟಿಗಳಿವೆ. ಪ್ರತಿ 15 ದಿನಕ್ಕೊಮ್ಮೆ ಡಿಸಿಗಳ ಜೊತೆ ವಿಡಿಯೋ ಸಂವಾದ ನಡೆಸುತ್ತಿದ್ದೇನೆ. ಕಂದಾಯ ಗ್ರಾಮದ ಸ್ಥಾನಮಾನ ನೀಡುವ ಯೋಜನೆಯಡಿ ಯಾವುದೇ ಗೊಲ್ಲರಹಟ್ಟಿ ಬಿಟ್ಟಿದ್ದರೂ ಅದನ್ನು ಸೇರಿಸಲು ಡಿಸಿ, ತಹಶೀಲ್ದಾರ್ ಗೆ ಸೂಚಿಸಿದ್ದೇನೆ. ಡ್ರೋಣ್​ ಸರ್ವೆ ಆರಂಭಿಸಿದ್ದೇವೆ. ಯಾವುದು ಕಂದಾಯ ಗ್ರಾಮ ಆಗಿದೆಯೋ ಇಲ್ಲವೋ ಎಂದು ತಂತ್ರಜ್ಞಾನ ಬಳಸಿ ಪರಿಶೀಲಿಸಲಾಗುತ್ತಿದೆ. ಯಾರೇ ನಮಗೆ ಪಟ್ಟಿ ಕೊಟ್ಟರೆ ಬಡವರಿಗೆ ಸಹಾಯ ಆಗಲಿದೆ ಎಂದರೆ ಅದನ್ನು ಪುರಸ್ಕರಿಸಲಾಗುತ್ತದೆ. ಕಂದಾಯ ಗ್ರಾಮದ ಸ್ಥಾನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

Last Updated :Dec 6, 2023, 2:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.