ETV Bharat / state

ರಾಜ್ಯದೆಲ್ಲೆಡೆ ಬಿಜೆಪಿ ಸುನಾಮಿ‌ ಇದೆ...ನಿಶ್ಚಿತವಾಗಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುತ್ತದೆ : ಸಿಎಂ ಬೊಮ್ಮಾಯಿ ವಿಶ್ವಾಸ

author img

By

Published : Apr 25, 2023, 11:05 PM IST

cm-basavaraja-bommai-road-show-at-belagavi
ರಾಜ್ಯದೆಲ್ಲೆಡೆ ಬಿಜೆಪಿ ಸುನಾಮಿ‌ ಇದೆ...ನಿಶ್ಚಿತವಾಗಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುತ್ತದೆ : ಸಿಎಂ ಬೊಮ್ಮಾಯಿ ವಿಶ್ವಾಸ

ಸಿಎಂ ಬಸವರಾಜ ಬೊಮ್ಮಾಯಿ ಖಾನಾಪುರದಲ್ಲಿ ಬಜೆಪಿ ಅಭ್ಯರ್ಥಿ ವಿಠಲ ಹಲಗೇಕರ್ ಪರ ಮತಯಾಚನೆ ಮಾಡಿದರು.

ನಿಶ್ಚಿತವಾಗಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುತ್ತದೆ : ಸಿಎಂ ಬೊಮ್ಮಾಯಿ ವಿಶ್ವಾಸ

ಬೆಳಗಾವಿ : ನಾನು ಇಡೀ ರಾಜ್ಯದ ಉದ್ದಗಲಕ್ಕೂ ಸುತ್ತಿದ್ದೇನೆ. ರಾಜ್ಯದೆಲ್ಲೆಡೆ ಬಿಜೆಪಿ ಸುನಾಮಿ ಇದೆ. ನೂರಕ್ಕೆ ನೂರು ಈ ಬಾರಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ಜನಪರ, ಜನಕಲ್ಯಾಣ ಸರ್ಕಾರವನ್ನು ಕರ್ನಾಟಕದಲ್ಲಿ ಸ್ಥಾಪಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಖಾನಾಪುರ ತಾಲೂಕಿನ ಬೀಡಿಯಲ್ಲಿ ಬಿಜೆಪಿ ಅಭ್ಯರ್ಥಿ ವಿಠಲ ಹಲಗೇಕರ್ ಪರ ರೋಡ್ ಶೋದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಖಾನಾಪುರದಲ್ಲಿ‌ ಬದಲಾವಣೆ ಗಾಳಿ‌ ಬೀಸುತ್ತಿದೆ. ಈ ಬಾರಿ ಬಿಜೆಪಿ ಅಭ್ಯರ್ಥಿ ವಿಠಲ‌ ಹಲಗೇಕರ್ ನಿಶ್ಚಿತವಾಗಿಯೂ ಜಯಶಾಲಿಯಾಗುತ್ತಾರೆ. ಕಳೆದ ಬಾರಿ ನಾನು ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಂದಿದ್ದಾಗ ತಾಲೂಕಿನ ಅಭಿವೃದ್ದಿಗೆ ಸುಮಾರು 20 ಸಾವಿರ ಜನ ಸಂಕಲ್ಪ ಮಾಡಿದ್ದೆವು. ಖಾನಾಪುರ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ನಾವೆಲ್ಲ ಕಂಕಣಬದ್ಧರಾಗಿ ಕೆಲಸ ಮಾಡುತ್ತೇವೆ. ಯಾರಿಗೆ ಟಿಕೆಟ್ ಸಿಕ್ಕರೂ ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದೇವು. ಈ ಗ ವಿಠಲ ಅವರಿಗೆ ಟಿಕೆಟ್ ಸಿಕ್ಕ ತಕ್ಷಣ ಟಿಕೆಟ್ ಬಯಸಿದ್ದ ಎಲ್ಲ ಆಕಾಂಕ್ಷಿಗಳು ಒಗ್ಗಟ್ಟಾಗಿ ಸಹಕಾರ ಕೊಡುತ್ತಿರುವುದನ್ನು ನೋಡಿ ಇವತ್ತು ನನಗೆ ಬಹಳ ಸಂತೋಷವಾಗಿದೆ. ಹೀಗಾಗಿ ಎಲ್ಲ ಮತದಾರ ಬಾಂಧವರು ವಿಠಲ ಹಲಗೇಕರ್ ಅವರಿಗೆ ಸಂಪೂರ್ಣ ಬೆಂಬಲ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕೆಂದು ಸಿಎಂ ಬೊಮ್ಮಾಯಿ ಮನವಿ ಮಾಡಿದರು.

ಕಳೆದ ಬಾರಿ ನಮ್ಮಲ್ಲಿನ ಕೆಲವು ವ್ಯತ್ಯಾಸಗಳಿಂದ ಖಾನಾಪುರ ಕ್ಷೇತ್ರವನ್ನು ಕಳೆದುಕೊಂಡಿದ್ದೆವು. ಆದರೆ ಆ ತಪ್ಪನ್ನು ತಿದ್ದಿಕೊಂಡು ಇಂದು ನಿಮ್ಮ ಮುಂದೆ ನಾವೆಲ್ಲ ಒಗ್ಗಟ್ಟಾಗಿ, ಒಂದಾಗಿ ಬಂದು‌ ನಿಂತಿದ್ದೇವೆ. ಕಳೆದ ಬಾರಿ ನಾವು ಈ ಕ್ಷೇತ್ರ ಕಳೆದುಕೊಂಡಿದ್ದರಿಂದ ಈ ಕ್ಷೇತ್ರ ಸಂಪೂರ್ಣವಾಗಿ ಹಿಂದುಳಿದಿತ್ತು. ಈ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸೇರಿ ಏನೆಲ್ಲ ಮಾಡಬೇಕೋ ಅದನ್ನು ಮಾಡಲು ಈಗಿನ ಶಾಸಕರಿಗೆ ಅದು ಸಾಧ್ಯ ಆಗಲಿಲ್ಲ. ಹೀಗಾಗಿ ಈ ಕ್ಷೇತ್ರದ ಜನರಿಗೆ ಅಭಿವೃದ್ಧಿಯಲ್ಲಿ ಬಹಳ ಹಿನ್ನಡೆಯಾಗಿದೆ. ಈ ಬಾರಿ ಹಾಗೆ ಆಗುವುದು ಬೇಡ ಎಂದರು.

ನಾನು ಇಡೀ ರಾಜ್ಯದ ಉದ್ದಗಲಕ್ಕೂ ಸುತ್ತಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಪರ ಸುನಾಮಿ ಇದ್ದು, ಈ ಬಾರಿ ನೂರಕ್ಕೆ ನೂರು ಬಿಜೆಪಿ ಅಧಿಕಾರಕ್ಕೆ ಬರುತ್ತದೆ.ಇಂತಹ ಸಂದರ್ಭದಲ್ಲಿ ಖಾನಾಪುರ ಎಂಎಲ್ಎ ಬಿಜೆಪಿಯವರು ಇರಬೇಕಾಗುತ್ತದೆ. ಹಾಗಾಗಿ ಖಾನಾಪುರ ಅಭಿವೃದ್ಧಿಗಾಗಿ ವಿಠಲ ಹಲಗೇಕರ್ ಅವರನ್ನು ಗೆಲ್ಲಿಸುವಂತೆ ಮುಖ್ಯಮಂತ್ರಿ ಕೋರಿದರು.

ವಿಠಲ ಹಲಗೇಕರ್ ರೈತರನ್ನು ಸಂಘಟನೆ ಮಾಡಿದವರು. ಕಬ್ಬು ಬೆಳೆಗಾರರ ಸಂಕಷ್ಟ ಪರಿಹರಿಸಿದವರು. ಸಮಯಕ್ಕೆ ಸರಿಯಾಗಿ ಕಬ್ಬು ಕಳಿಸಿದ ರೈತರಿಗೆ ಒಳ್ಳೆಯ ಬೆಲೆ ಕೊಟ್ಟವರು. ರೈತರ ಹಿತ ಚಿಂತಕರ ಕೈಯಲ್ಲಿ ಅಧಿಕಾರ ಬಂದರೆ ಬರುವ ದಿನಗಳಲ್ಲಿ ಈ ಭಾಗದ ರೈತರಿಗಾಗಿ ಮತ್ತಷ್ಟು ಅಭಿವೃದ್ಧಿಯನ್ನು ಬಿಜೆಪಿ‌ ಸರ್ಕಾರ ಮಾಡುತ್ತದೆ ಎಂದು ಭರವಸೆ ನೀಡಿದರು. ರೋಡ್ ಶೋ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಅಭ್ಯರ್ಥಿ‌ ವಿಠಲ ಹಲಗೇಕರ್, ಮಾಜಿ ಶಾಸಕರಾದ ಸಂಜಯ ಪಾಟೀಲ, ಅರವಿಂದ ಪಾಟೀಲ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ದೆಹಲಿಯಲ್ಲಿ ಕುಳಿತು ರಾಜ್ಯಗಳನ್ನು ಆಳಲು ಇದು ರಾಜಪ್ರಭುತ್ವ ಅಲ್ಲ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.