ETV Bharat / state

SSLC ಫಲಿತಾಂಶ: ಚಿಕ್ಕೋಡಿಗೆ 12, ಬೆಳಗಾವಿ ಜಿಲ್ಲೆಗೆ 26ನೇ ಸ್ಥಾನ... 625ಕ್ಕೆ 625 ಅಂಕ ಪಡೆದ ಅನುಪಮಾ‌ ಮನೆಯಲ್ಲಿ ಸಂಭ್ರಮ

author img

By

Published : May 8, 2023, 11:07 PM IST

chikkodi-12th-belagavi-district-26th-in-sslc-exam-result
ಚಿಕ್ಕೋಡಿ 12, ಬೆಳಗಾವಿ ಶೈಕ್ಷಣಿಕ ಜಿಲ್ಲೆಗೆ 26ನೇ ಸ್ಥಾನ: ರಾಜ್ಯಕ್ಕೆ ಪ್ರಥಮ ಬಂದ ಅನುಪಮಾ‌ ಮನೆಯಲ್ಲಿ ಸಂಭ್ರಮ

2023ರ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಚಿಕ್ಕೋಡಿ ಮತ್ತು ಬೆಳಗಾವಿ ಶೈಕ್ಷಣಿಕ ಜಿಲ್ಲೆಗಳ ಫಲಿತಾಂಶದ ಮಾಹಿತಿ ಇಲ್ಲಿದೆ.

ಬೆಳಗಾವಿ: 2022-23ನೇ ಸಾಲಿನ ಎಸ್​​​ಎಸ್​​ಎಲ್​​ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ 12 ಹಾಗೂ ಬೆಳಗಾವಿ ಶೈಕ್ಷಣಿಕ ಜಿಲ್ಲೆ 26ನೇ ಸ್ಥಾನ ಪಡೆದಿದೆ. ಕಳೆದ ಸಾಲಿನಲ್ಲಿ ಶೇ.89.99ರಷ್ಟು ಫಲಿತಾಂಶದೊಂದಿಗೆ 16ನೇ ಸ್ಥಾನ ಗಳಿಸಿದ್ದ ಚಿಕ್ಕೋಡಿ, ಈ ಬಾರಿ ಶೇ.90.39ರಷ್ಟು ಫಲಿತಾಂಶದೊಂದಿಗೆ 12ನೇ ಸ್ಥಾನಕ್ಕೇರಿದೆ.

ವಿದ್ಯಾರ್ಥಿಗಳು ಪಡೆದ ಅಂಕಗಳ ಆಧಾರದಲ್ಲಿ ಈ ಬಾರಿಯೂ 'ಎ' ಗ್ರೇಡ್ ಪಡೆಯುವ ಮೂಲಕ‌ ಉತ್ತಮ ಸಾಧನೆ ಮಾಡಿದೆ. 43,185 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 39,037 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇ.87.44ರಷ್ಟು ಬಾಲಕರು ಹಾಗೂ ಶೇ.93.51ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಕಳೆದ ಬಾರಿ ಶೇ.87.8ರಷ್ಟು ಫಲಿತಾಂಶದೊಂದಿಗೆ 18ನೇ ಸ್ಥಾನ ಗಳಿಸಿದ್ದ ಬೆಳಗಾವಿ ಶೈಕ್ಷಣಿಕ ಜಿಲ್ಲೆ ಈ ಬಾರಿ ಶೇ.85.85ರಷ್ಟು ಫಲಿತಾಂಶದೊಂದಿಗೆ 26ನೇ ಸ್ಥಾನಕ್ಕೆ ಕುಸಿದಿದೆ. ಪರೀಕ್ಷೆಗೆ ಹಾಜರಾಗಿದ್ದ 31,678 ವಿದ್ಯಾರ್ಥಿಗಳ ಪೈಕಿ 27,048 ವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದಾರೆ. ಶೇ.81.51 ರಷ್ಟು ಬಾಲಕರು, ಶೇ. 89.25ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಒಟ್ಟು 71 ಪ್ರೌಢಶಾಲೆಗಳು ಶೇ‌. 100ರಷ್ಟು ಫಲಿತಾಂಶ ದಾಖಲಿಸಿವೆ.

ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ್‌ ಹಂಚಾಟೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದು, ಎಸ್​​ಎಸ್​​​ಎಲ್​​ಸಿ ಪರೀಕ್ಷೆ ಫಲಿತಾಂಶ ಸುಧಾರಿಸುವ ಸಂಬಂಧ ಶಾಲೆಗಳಲ್ಲಿ ಹಲವು ಶೈಕ್ಷಣಿಕ ಚಟುವಟಿಕೆ ಕೈಗೊಂಡಿದ್ದೆವು. ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಜತೆಗೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಡೆ ಹೆಚ್ಚಿನ ಗಮನಹರಿಸಿದ್ದೆವು. ಶಿಕ್ಷಕರು ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರಿಂದ ಫಲಿತಾಂಶ ಉತ್ತಮವಾಗಿದೆ ಎಂದಿದ್ದಾರೆ‌.

ಬೆಳಗಾವಿ ಡಿಡಿಪಿಐ ಬಸವರಾಜ ನಾಲತವಾಡ ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶ ಸ್ವಲ್ಪ ಕಡಿಮೆಯಾಗಿರಬಹುದು. ಆದರೆ ವಿದ್ಯಾರ್ಥಿಗಳು ಪಡೆದ ಅಂಕಗಳ ಆಧಾರದಲ್ಲಿ ಕಳೆದ ಬಾರಿ 'ಸಿ' ಗ್ರೇಡ್ ಸಿಕ್ಕಿತ್ತು, ಈ ಬಾರಿ 'ಬಿ' ಗ್ರೇಡ್ ಸಿಕ್ಕಿದೆ ಎಂದರು‌. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಸವದತ್ತಿ ಪಟ್ಟಣದ ಕುಮಾರೇಶ್ವರ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಅನುಪಮಾ ಶ್ರೀಶೈಲ ಹಿರೇಹೊಳಿ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಬಾಲಕಿಗೆ ಕುಟುಂಬಸ್ಥರು ಸಿಹಿ ತಿನಿಸಿ ಅಭಿನಂದಿಸಿದರು. ಅದೇ ರೀತಿ ಡಿಡಿಪಿಐ ಬಸವರಾಜ ನಾಲತವಾಡ, ಬಿಇಓ ಕೇಶವ ಪಾಟ್ಲೂರ ಆಗಮಿಸಿ ಸತ್ಕರಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಶೇ.84.21ರಷ್ಟು ಫಲಿತಾಂಶ
ಬಾಗಲಕೋಟೆ ಜಿಲ್ಲೆ ಶೇ.84.21ರಷ್ಟು ಫಲಿತಾಂಶ

ಬಾಗಲಕೋಟೆ ಜಿಲ್ಲೆ ಶೇ.84.21ರಷ್ಟು ಫಲಿತಾಂಶ: ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 30,283 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 25,502 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಬಾಲಕರು 11,853, ಬಾಲಕಿಯರು 13,649 ತೇರ್ಗಡೆ ಹೊಂದುವ ಮೂಲಕ ಒಟ್ಟಾರೆಯಾಗಿ ಶೇ.84.21ರಷ್ಟು ಫಲಿತಾಂಶದೊಂದಿಗೆ 27ನೇ ಸ್ಥಾನವನ್ನು ಪಡೆದುಕೊಂಡಿದೆ.

ಬನಹಟ್ಟಿ ಎಸ್​​​ಆರ್​​​ಎ ಸಂಯುಕ್ತ ಶಾಲೆಯ ವಿದ್ಯಾರ್ಥಿ ಚಿದಾನಂದ ಪ್ರಕಾಶ 625ಕ್ಕೆ 623 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದರೆ, ಬೀಳಗಿ ಆದರ್ಶ ವಿದ್ಯಾಲಯದ ಅರ್ಪಿತಾ ಸಂತೋಷ ಕುಬಕಡ್ಡಿ, ಸುಪ್ರೀಯಾ ಸತ್ತೇಪ್ಪನವರ, ಬೀಳಗಿ ಸ್ವಾಮಿ ವಿವೇಕಾನಂದ ಆಂಗ್ಲ ಮಾದ್ಯಮ ಪ್ರೌಢಶಾಲೆಯ ಸಹನಾ ಜಂಬಗಿ, ಇಳಕಲ್ಲ ಸರಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆಯ ವಿಜಯಲಕ್ಷ್ಮೀ ಹುಲ್ಯಾಳ, ಜಮಖಂಡಿಯ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಹನಾ ಜಿ.ಎಸ್ 625ಕ್ಕೆ 622 ಅಂಕ ಪಡೆಯುವ ಮೂಲಕ ದ್ವಿತೀಯ ಸ್ಥಾನ ಹಾಗೂ ಬೀಳಗಿ ಆದರ್ಶ ವಿದ್ಯಾಲಯದ ಸ್ಪೂರ್ತಿ 625ಕ್ಕೆ 621 ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: SSLCಯಲ್ಲಿ ಶೇ 83.89 ಫಲಿತಾಂಶ: ನಾಲ್ವರಿಗೆ 625ಕ್ಕೆ 625! ಚಿತ್ರದುರ್ಗ ಫಸ್ಟ್‌; ಯಾದಗಿರಿ ಲಾಸ್ಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.