ETV Bharat / state

ವಿಧಾನಸಭೆಯಲ್ಲಿ ಬಳ್ಳಾರಿ ಪಾಲಿಟಿಕ್ಸ್ ಗದ್ದಲ: ಜನಾರ್ದನ್​ ರೆಡ್ಡಿ - ಭರತ್‌ ರೆಡ್ಡಿ ನಡುವೆ ಮಾತಿನ ಚಕಮಕಿ

author img

By ETV Bharat Karnataka Team

Published : Dec 13, 2023, 11:12 AM IST

Updated : Dec 14, 2023, 4:45 PM IST

ವಿಧಾನಸಭೆಯಲ್ಲಿ ಬಳ್ಳಾರಿ ಪಾಲಿಟಿಕ್ಸ್ ಗದ್ದಲ
ವಿಧಾನಸಭೆಯಲ್ಲಿ ಬಳ್ಳಾರಿ ಪಾಲಿಟಿಕ್ಸ್ ಗದ್ದಲ

ವಿಧಾನಸಭೆ ಕಲಾಪದಲ್ಲಿ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ವಿಚಾರ ತೀವ್ರ ಚರ್ಚೆ ಎಡೆಮಾಡಿಕೊಟ್ಟಿತು. ಜನಾರ್ದನರೆಡ್ಡಿ ಮತ್ತು ಕಾಂಗ್ರೆಸ್​ ಶಾಸಕರ ಮಧ್ಯೆ ವಾಗ್ವಾದಕ್ಕೂ ಕಾರಣವಾಯಿತು.

ವಿಧಾನಸಭೆಯಲ್ಲಿ ಬಳ್ಳಾರಿ ಪಾಲಿಟಿಕ್ಸ್ ಗದ್ದಲ

ಬೆಳಗಾವಿ: ವಿಧಾನಸಭೆಯಲ್ಲಿ ಮಂಗಳವಾರ ಬಳ್ಳಾರಿ ರಾಜಕೀಯ ಗುದ್ದಾಟ ಜೋರಾಗಿತ್ತು. ಸದನ ಜನಾರ್ದನ ರೆಡ್ಡಿ ಹಾಗೂ ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್‌ ಶಾಸಕರ ವಾಕ್ಸಮರಕ್ಕೆ ಸಾಕ್ಷಿಯಾಯಿತು.

ಉತ್ತರ ಕರ್ನಾಟಕ ಚರ್ಚೆಯ ವೇಳೆ ಮಾತನಾಡುವಾಗ ಕಾಂಗ್ರೆಸ್​ ಶಾಸಕ ನಾ ರಾ ಭರತ್‌ರೆಡ್ಡಿ, ಬ್ರಾಹ್ಮಿಣಿ ಸ್ಟೀಲ್ಸ್​ ಸಂಸ್ಥೆ, ಬಳ್ಳಾರಿ ಜಿಲ್ಲೆಯಲ್ಲಿ 10 ಸಾವಿರ ಎಕರೆ ಜಮೀನನ್ನು ಬಲವಂತವಾಗಿ ರೈತರಿಂದ ವಶಪಡಿಸಿಕೊಂಡಿತ್ತು. ರೈತರ ಮೇಲೆ ಗೂಂಡಾಗಿರಿ ಮಾಡಿ ಭೂಮಿಯನ್ನ ಕಿತ್ತುಕೊಂಡಿದ್ದ ವ್ಯಕ್ತಿಗಳು ಈಗ ನಮ್ಮಿಂದಲೇ ಬಳ್ಳಾರಿ ಅಭಿವೃದ್ಧಿಯಾಗಿದೆ ಎನ್ನುತ್ತಿದ್ದಾರೆ. ವಿಮಾನ ನಿಲ್ದಾಣ ಆರಂಭಿಸುವುದಾಗಿ ಹೇಳಿ, ಗೋಲಿಬಾರ್‌ ನಡೆಸಿದ್ದರು. ಸ್ವಾಧೀನ ಮಾಡಿಕೊಂಡ ಭೂಮಿಯಲ್ಲಿ ಇಲ್ಲಿಯವರೆಗೆ ವಿಮಾನ ನಿಲ್ದಾಣ ಮಾಡಿಲ್ಲ ಎಂದು ಜನಾರ್ದನ ರೆಡ್ಡಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಜನಾರ್ದನ ರೆಡ್ಡಿ ಅವರು, ಬ್ರಾಹ್ಮಿಣಿ ಸ್ಟೀಲ್ಸ್​ ಕೈಗಾರಿಕೆ ಹೆಸರಲ್ಲಿ ಪಡೆದಿರುವ ಭೂಮಿಯಲ್ಲಿ ಕೆಲಸವಾಗಿಲ್ಲ ಎನ್ನುವುದಾದರೆ ಸರ್ಕಾರ ಭೂಮಿಯನ್ನು ಹಿಂಪಡೆಯಲಿ. ಅದನ್ನು ಬಿಟ್ಟು ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದು ಅಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಅಸಮಾಧಾನಗೊಂಡ ಭರತ್‌ ರೆಡ್ಡಿ, ಜನಾರ್ದನ ರೆಡ್ಡಿ ಅವರು ಮಾತನಾಡುವಾಗ ನಾನು ಮಧ್ಯಪ್ರವೇಶಿಸಿಲ್ಲ. ಈಗ ಅವರು ಪ್ರವೇಶಿಸುವುದು ಬೇಡ ಎಂದು ಆಕ್ಷೇಪಿಸಿದರು. ಏಕವಚನದಲ್ಲಿ 'ನೀನು ಸ್ವಂತ ಹಿತಕ್ಕೆ ಆಂಧ್ರಪ್ರದೇಶಕ್ಕೆ ಕರ್ನಾಟಕದ ಭೂಮಿಯನ್ನು ಸೇರಿಸಿಲ್ಲವೇ' ಎಂದು ವಾಗ್ದಾಳಿ ನಡೆಸಿದರು.

ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ತಪ್ಪು ಮಾಡಿದ್ದರೆ ಕ್ರಮವಾಗುತ್ತದೆ. ಹೀಗಿರುವಾಗ ಆರೋಪ ಮಾಡುವುದು ಸರಿಯಲ್ಲ ಎಂದು ಜನಾರ್ದನ ರೆಡ್ಡಿ ಅಕ್ಷೇಪಿಸಿದಾಗ, ತಲೆ ಇಲ್ಲದೇ ನೀನು ಮಾತನಾಡಬೇಡ ಎಂದು ಭರತ್ ರೆಡ್ಡಿ ಹೇಳಿದರು. ನಿಮ್ಮವರು 20 ವರ್ಷ ಹೊರಗೆ (ಜೈಲಿನಿಂದ) ಬಂದಿರಲಿಲ್ಲ. ನೀನೇನು ಮಾತಾಡೋದು ಎಂದು ಜನಾರ್ದನರೆಡ್ಡಿ ಟೀಕಿಸಿದರು.

ಜನಾರ್ದನ ರೆಡ್ಡಿ ಹಾಗೂ ನಾರಾ ಭರತ್‌ ರೆಡ್ಡಿ ನಡುವಿನ ವಾಕ್ಸಮರದ ವೇಳೆ ಮಧ್ಯಪ್ರವೇಶಿಸಿದ ಬಳ್ಳಾರಿ ಉಸ್ತುವಾರಿ ಸಚಿವ ಬಿ. ನಾಗೇಂದ್ರ, ಪ್ರತಿ ಸರ್ಕಾರಗಳು ಅಧಿಕಾರಕ್ಕೆ ಬಂದಾಗಲೂ ಜಿಲ್ಲೆಯನ್ನು ಅಭಿವೃದ್ಧಿಪಡಿಸಬೇಕು ಎನ್ನುವ ಆಶಯವನ್ನು ವ್ಯಕ್ತಪಡಿಸುತ್ತಾರೆ. ಅದೇ ರೀತಿ ಜನಾರ್ದನ ರೆಡ್ಡಿ ಅವರಿದ್ದಾಗ ಅಭಿವೃದ್ಧಿಪಡಿಸಿರಬಹುದು. ಆದರೆ, ನಾವು ಅದಕ್ಕಿಂತ ಉತ್ತಮ ರೀತಿಯಲ್ಲಿ ಜಿಲ್ಲೆಯನ್ನು ಅಭಿವೃದ್ಧಿಪಡಿಸಬೇಕು ಎನ್ನುವ ಆಶಯವನ್ನು ಹೊಂದಿದ್ದೇವೆ. ಇನ್ನು ಗಡಿ ವಿವಾದ ಸೇರಿದಂತೆ ಭೂಕಬಳಿಕೆ ಯಾರೇ ಮಾಡಿದ್ದರೂ, ಅವರ ವಿರುದ್ಧ ಕಾನೂನಾತ್ಮಕವಾಗಿ ನಮ್ಮ ಸರ್ಕಾರ ಕ್ರಮವಹಿಸಲಿದೆ ಎಂದರು.

ಇದನ್ನೂ ಓದಿ: ಕಲಾಪದಲ್ಲಿ ಉತ್ತರ ಕರ್ನಾಟಕ ಚರ್ಚೆ: ನೀರಾವರಿ ಸಮಸ್ಯೆ ಬಗ್ಗೆ ಸರ್ಕಾರ ಗಮನ ಹರಿಸಲಿ- ಯತ್ನಾಳ್

Last Updated :Dec 14, 2023, 4:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.