ETV Bharat / state

ಬೆಳಗಾವಿ ಮಹಿಳೆ ಹಲ್ಲೆ ಪ್ರಕರಣ: ಸಿಎಂ ಇಡೀ ದೇಶದ ಮಹಿಳೆಯರ ಕ್ಷಮೆ ಕೇಳಬೇಕು: ಕೇಂದ್ರ ಬಿಜೆಪಿ ಸತ್ಯಶೋಧನಾ ಸಮಿತಿ ಆಗ್ರಹ

author img

By ETV Bharat Karnataka Team

Published : Dec 16, 2023, 8:18 PM IST

Belagavi Woman Assault Case: ಬೆಳಗಾವಿಯ ಮಹಿಳೆ ಮೇಲಿನ ಹಲ್ಲೆ ಪ್ರಕರಣ ದುರ್ದೈವದ ಘಟನೆ. ಇದಕ್ಕೆ ಸರ್ಕಾರ ಉತ್ತರಿಸಬೇಕು. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಬಹಿರಂಗವಾಗಿ ಮಹಿಳಾ ಸಮುದಾಯದ ಕ್ಷಮೆ ಕೇಳಬೇಕು ಎಂದು ಕೇಂದ್ರ ಬಿಜೆಪಿ ಸತ್ಯಶೋಧನಾ ಸಮಿತಿ ಸದಸ್ಯರು ಆಗ್ರಹಿಸಿದ್ದಾರೆ.

ಕೇಂದ್ರ ಬಿಜೆಪಿ ಸತ್ಯಶೋಧನಾ ಸಮಿತಿ
ಕೇಂದ್ರ ಬಿಜೆಪಿ ಸತ್ಯಶೋಧನಾ ಸಮಿತಿ

ಕೇಂದ್ರ ಬಿಜೆಪಿ ಸತ್ಯಶೋಧನಾ ಸಮಿತಿ

ಬೆಳಗಾವಿ: ದಲಿತ ಮಹಿಳೆಯ ಮೇಲೆ ನಡೆದ ದೌರ್ಜನ್ಯವನ್ನು ಇಡೀ ಭಾರತ ದೇಶ ಗಮನಿಸುತ್ತಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡದೇ ಸಂತ್ರಸ್ತ ಮಹಿಳೆಗೆ ಸಾಂತ್ವನ ಹೇಳದ ಸಿಎಂ ಸಿದ್ದರಾಮಯ್ಯ ದೇಶದ ಮಹಿಳೆಯರ ಕ್ಷಮೆ ಕೇಳಬೇಕು ಎಂದು‌ ಬಿಜೆಪಿ ಸಂಸದೆ ಸುನಿತಾ ದುಗ್ಗಲ್ ಆಗ್ರಹಿಸಿದರು.

ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ನೊಂದ ಮಹಿಳೆಯ ಆರೋಗ್ಯ ವಿಚಾರಿಸಿ, ವಂಟಮೂರಿಗೆ ತೆರಳಿ ಮಾಹಿತಿ ಪಡೆದ ಬಳಿಕ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಈ ರೀತಿ ಕೃತ್ಯ ನಡೆದಿರುವುದು ನಿಜಕ್ಕೂ ದುರ್ದೈವದ ಸಂಗತಿ. ಘಟನೆ ಮಾಹಿತಿ ತಿಳಿದರೂ ಕೂಡ ಪೊಲೀಸರು ಯಾಕೆ ತಡವಾಗಿ ಬಂದರು..? ಬೀಟ್ ಪೊಲೀಸರು ಎಲ್ಲಿದ್ದರು..? ಇದಕ್ಕೆ ಸರ್ಕಾರ ಉತ್ತರಿಸಬೇಕು. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಬಹಿರಂಗವಾಗಿ ಮಹಿಳಾ ಸಮುದಾಯದ ಕ್ಷಮೆ ಕೇಳಬೇಕು. ಶೀಘ್ರವೇ ಎಲ್ಲ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ನೊಂದ ಮಹಿಳೆಯ ಕುಟುಂಬಸ್ಥರು ಸರ್ಕಾರದಿಂದ ನಮಗೆ ಯಾವುದೇ ರೀತಿ ದುಡ್ಡು ಬೇಡ. ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದಿದ್ದಾರೆ. ಭವಿಷ್ಯದಲ್ಲಿ ಈ ರೀತಿ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇಲ್ಲಿ ನಾವು ಭಾರವಾದ ಮನಸಿನಿಂದ ಕುಳಿತಿದ್ದೇವೆ: ಸಂಸದೆ ಅಪ್ರಜಿತಾ ಸಾರಂಗಿ ಮಾತನಾಡಿ, ’’ನಾವು ಭಾರವಾದ ಮನಸ್ಸಿನಿಂದ ಇಲ್ಲಿ ಕುಳಿತಿದ್ದೇವೆ. ರಾಜಕೀಯ ಕಾರಣದಿಂದ ಇಲ್ಲಿಗೆ ಬಂದಿಲ್ಲ. ಡಿ.11ರಂದು ಘಟನೆ ಬಗ್ಗೆ ಮಾತನಾಡಲು ಬಂದಿದ್ದೇವೆ. ಜೆ.ಪಿ‌.ನಡ್ಡಾ ಮತ್ತು ಪ್ರಧಾನಿ ಮೋದಿ ಅವರ ಆದೇಶದ ಮೇರೆಗೆ ಆಗಮಿಸಿದ್ದೇವೆ. ಈ ವಿಷಯದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಮಧ್ಯರಾತ್ರಿ‌ 1.30ರ ಸುಮಾರಿಗೆ ಘಟನೆ ನಡೆದಿದೆ‌‌. ಎರಡೂವರೆ ಗಂಟೆ ಕಾಲ ಮಹಿಳೆ ಮೇಲೆ ನಿರಂತರವಾಗಿ ದೌರ್ಜನ್ಯ ನಡೆದಿದೆ. 4 ಗಂಟೆ ಸುಮಾರಿಗೆ ಪೊಲೀಸರು ಸ್ಥಳಕ್ಕೆ ಬರುತ್ತಾರೆ. 9ಗಂಟೆಗೆ ಮಹಿಳೆಯನ್ನು ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕರೆ ತರುತ್ತಾರೆ. ಆಸ್ಪತ್ರೆಯಲ್ಲಿ ಮಹಿಳೆ ಜೊತೆ ಮಾತಾಡಿದ್ದೇವೆ‌‌‌. ಬಳಿಕ ವಂಟಮೂರಿಗೆ ಹೋಗಿ ಕುಟುಂಬಸ್ಥರು ಮತ್ತು ನೆರೆ ಹೊರೆಯವರಿಂದ ಮಾಹಿತಿ ಪಡೆದಿದ್ದೇವೆ. ಕಾಕತಿ ಪೊಲೀಸ್ ಠಾಣೆ ಸಿಪಿಐ ಅಮಾನತ್ತು ಮಾಡಲಾಗಿದೆ. ಇದರಲ್ಲಿ ಅವರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈ ಪರಿಸ್ಥಿತಿಯಿಂದ ನಮಗೆ ತುಂಬಾ ಆಘಾತವಾಗಿದೆ‘‘ ಎಂದರು.

ಮುಂದುವರಿದು ಮಾತನಾಡಿದ ಸಂಸದೆ, ಮಹಿಳೆಗೆ ರಾಜ್ಯ ಸರ್ಕಾರ 5 ಲಕ್ಷ ರೂ. ಮತ್ತು ಕಾನೂನು ಸೇವಾ ಪ್ರಾಧಿಕಾರದಿಂದ 50 ಸಾವಿರ ರೂ. ಪರಿಹಾರ ಕೇವಲ ಘೋಷಿಸಿದೆ‌. ಈ ಘಟನೆ ಯಾಕೆ ನಡೆಯಿತು..? ಘಟನೆ ನಡೆದ ನಂತರ ಕೈಗೊಂಡ ಕ್ರಮಗಳು ಯಾವವು..? ರಾಜ್ಯ ಕಾಂಗ್ರೆಸ್ ಸರ್ಕಾರ ಇದರಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ ಟ್ವೀಟ್ ಮೂಲಕ‌ ಸಾಂತ್ವನ ಹೇಳಿದರೆ ಮುಗಿಯಿತೆ..? ಮುಂದಿನ ಅವರ ಜವಾಬ್ದಾರಿ ಏನು..? ಹೈಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿದೆ. ನೊಂದ ಮಹಿಳೆ ತುಂಬಾ ಆಘಾತಕ್ಕೆ ಒಳಗಾಗಿದ್ದಾಳೆ. ಮಾನಸಿಕವಾಗಿ ಜರ್ಜರಿತಗೊಂಡಿದ್ದಾರೆ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಘಟನೆ ನಡೆದು ಏಳು ದಿನ ಕಳೆದರೂ 13 ಜನರ ಪೈಕಿ 12 ಜನರನ್ನು ಬಂಧಿಸಿದ್ದು, ಉಳಿದವರನ್ನೂ ಬೇಗ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರವು ಕೂಡಲೇ ಘಟನಾ ಸ್ಥಳಕ್ಕೆ ಅಧಿಕಾರಿಗಳನ್ನು ಕಳಿಸಿ ಕೊಟ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಗ್ರಾಮದ ಜನರಿಗೆ ಹಾಗೂ ನೊಂದ‌ಮ ಮಹಿಳೆಯ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಇಲ್ಲಿ ಬಂದಿರುವುದು ಒಳ್ಳೆ ಸಂದರ್ಭದಲ್ಲಿ ಅಲ್ಲ: ಸಂಸದೆ ಲಾಕೆಟ್ ಚಟರ್ಜಿ ಮಾತನಾಡಿ, ’’ನಾವಿಲ್ಲಿ ಬಂದಿರುವುದು ಒಳ್ಳೆಯ ಸಂದರ್ಭಕ್ಕೆ ಅಲ್ಲ. ದುರ್ದೈವದ ಘಟನೆಗೆ ನಾವಿಲ್ಲಿಗೆ ಬಂದಿದ್ದೇವೆ. ಆ ಮಹಿಳೆಗೆ ಎಲ್ಲಿಯವರೆಗೆ ಮಹಿಳೆಗೆ ನ್ಯಾಯ ಸಿಗುವುದಿಲ್ಲವೋ ಅಲ್ಲಿಯವರೆಗೆ ರಾಜ್ಯ ಮತ್ತು ಕೇಂದ್ರದಲ್ಲಿ ಹೋರಾಡುತ್ತೇವೆ. ಮುಖ್ಯಮಂತ್ರಿಗಳು ಇಲ್ಲಿದ್ದರೂ ಕೂಡ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಿಲ್ಲ‌‌‌. ಅವರು ಹೋಗಿ ಬಂದಿದ್ದರೆ ನಾವು ಇಲ್ಲಿಗೆ ಬರುವ ಅವಶ್ಯಕತೆ ಇರಲಿಲ್ಲ. ಒಂದು ಕಡೆ ಸದನ ನಡೆಯುತ್ತಿದ್ದರೆ ಮತ್ತೊಂದು ಕಡೆ ಮಹಿಳೆ ಮೇಲೆ ದೌರ್ಜನ್ಯ ನಡೆದಿದೆ. ಸೋನಿಯಾ ಗಾಂಧಿ ಅವರು ಕೂಡ ಓರ್ವ ಮಹಿಳೆಯಾಗಿ ಈ ಬಗ್ಗೆ ಮಾತಾಡಿಲ್ಲ. ಇನ್ನು ಪ್ರಿಯಾಂಕಾ ಗಾಂಧಿ ಲಡಕಿ ಹೂ ಲಡ್​​ ಸಕತಿ ಹೂ ಎಂದು ಡೈಲಾಗ್ ಹೇಳುವವರು ಎಲ್ಲಿದ್ದಾರೆ..? ಇದರ ಬಗ್ಗೆ ಯಾಕೆ ಪ್ರತಿಕ್ರಿಯೆ ನೀಡುತಿಲ್ಲ. ರಾಹುಲ್ ಗಾಂಧಿ ಕೂಡ ಮಾತನಾಡುತ್ತಿಲ್ಲ. ಆದರೆ, ನಮ್ಮ ಬಿಜೆಪಿ ಕಾರ್ಯಕರ್ತರು ಮಹಿಳೆ ಬೆನ್ನಿಗೆ ನಿಂತಿದ್ದಾರೆ. ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುಂಚೆ ಮಹಿಳೆಯರಿಗೆ ರಕ್ಷಣೆ ಮಾಡುತ್ತೇವೆಂದು‌ ಶಪಥ ಮಾಡಿತ್ತು. ಆದರೆ ಈಗ ಅದರ ವಿರುದ್ಧ ನಡೆದುಕೊಳ್ಳುತ್ತಿದೆ‘‘ ಎಂದು ಆರೋಪಿಸಿದರು.

ಇಂತಹ ಕೃತ್ಯವನ್ನು ಯಾವ ಗೂಂಡಾಗಳೂ ಮಾಡುವುದಿಲ್ಲ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಶಾ ಲಾಕ್ರಾ ಮಾತನಾಡಿ, ’’ಜಾರ್ಖಂಡ್ ರಾಜ್ಯದಿಂದ ನಾನು ಬಂದಿದ್ದೇನೆ. ಘಟನಾ ಸ್ಥಳಕ್ಕೆ ಹೋಗಿ ನಾವು ಪರಿಶೀಲನೆ ನಡೆಸಿದ್ದು, ಇಂತಹ ಕೃತ್ಯವನ್ನು ಯಾವ ಗೂಂಡಾಗಳು ಕೂಡ ಮಾಡುವುದಿಲ್ಲ. ದಲಿತರನ್ನು ಕಾಂಗ್ರೆಸ್ ಸರ್ಕಾರ ಹಾಗೂ ಐಎನ್ ಡಿಐಎ ಮಹಾ ಘಟಬಂಧನ ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ. ಈ ಘಟನೆ ಆದಾಗ ಕಾಂಗ್ರೆಸ್ ಸರ್ಕಾರ ಎಲ್ಲಿತ್ತು..? ಮಹಿಳೆಯರ ರಕ್ಷಣೆಯಲ್ಲಿ ಇಲ್ಲಿನ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇಂಥ ಘಟನೆ ಸಣ್ಣ ಘಟನೆ ಎಂದು ಕರೆಯುತ್ತಿರಿ. ಹೀಗೆ ಹೇಳುವವರು ಅಂಜುಬುರಕರು, ಹೇಡಿಗಳು. ನಿಮ್ಮ ತಾಯಿ ಮೇಲೆ ಈ ರೀತಿ ದೌರ್ಜನ್ಯ ಆಗಿದ್ದರೆ ನೀವು ಈ ರೀತಿ ಮಾತನಾಡುತ್ತಿದ್ದಿರಾ ಎಂದು ಪ್ರಶ್ನಿಸಿದರು’’.

ಸಂಸದೆ ರಂಜಿತಾ ಕೋಲಿ ಮಾತನಾಡಿ, ವಂಟಮೂರಿ ಮಹಿಳೆ ಮೇಲೆ ಅಮಾನುಷ ಕೃತ್ಯ ಮೆರೆದಿರುವ ದುಷ್ಕರ್ಮಿಗಳು ಕಾರದ ನೀರನ್ನು ಮೈಮೇಲೆ ಎರಚಿದ್ದಾರೆ. ದಲಿತ ಮಹಿಳೆಗೆ ನ್ಯಾಯ ಸಿಗದಿದ್ದರೆ ನಮ್ಮ ರಾಜ್ಯಗಳು ಸೇರಿ ಇಡೀ ದೇಶಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ. ರಾಜೇಶ ನೇರ್ಲಿ, ಮುಖಂಡರಾದ ಬಸವರಾಜ ಹುಂದ್ರಿ, ಉಜ್ವಲಾ ಬಡವನ್ನಾಚೆ ಇದ್ದರು.

ಇದನ್ನೂ ಓದಿ: ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣ: ಸಂತ್ರಸ್ತ ಮಹಿಳೆಯ ಆರೋಗ್ಯ ವಿಚಾರಿಸಿದ ರಾಷ್ಟ್ರೀಯ ಮಹಿಳಾ ಆಯೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.