ETV Bharat / state

ಖಾಸಗಿ ವೈದ್ಯಕೀಯ ಸಂಸ್ಥೆಗಳು, ಭೂ ಕಂದಾಯ 3ನೇ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ

author img

By

Published : Dec 28, 2022, 10:04 PM IST

Updated : Dec 28, 2022, 10:12 PM IST

Approval of two bills in Vidhan Parishad
ಪರಿಷತ್​ನಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ಹಾಗೂ ಭೂ ಕಂದಾಯ ಮೂರನೇ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ

ವಿಧಾನ ಪರಿಷತ್‌ನಲ್ಲಿಂದು ಎರಡು ಪ್ರಮುಖ ಮಸೂದೆಗಳು ಮಂಡನೆಯಾಗಿದ್ದು, ಮೇಲ್ಮನೆಯ ಒಪ್ಪಿಗೆ ಪಡೆದುಕೊಂಡಿವೆ.

ಬೆಂಗಳೂರು/ಬೆಳಗಾವಿ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ 2022 ಹಾಗೂ ಕರ್ನಾಟಕ ಭೂ ಕಂದಾಯ ಮೂರನೇ ತಿದ್ದುಪಡಿ ವಿಧೇಯಕ 2022 ಇಂದು ವಿಧಾನ ಪರಿಷತ್​ನಲ್ಲಿ ಮಂಡನೆಯಾಯಿತು. ನಾಳೆ ವಿಧಾನಸಭೆಯಲ್ಲಿ ಮಂಡನೆಯಾಗಬೇಕಿದೆ. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕವನ್ನು ಸಚಿವ ಮಾಧುಸ್ವಾಮಿ ಮಂಡಿಸಿದರು. ಕರ್ನಾಟಕ ಭೂ ಕಂದಾಯ ಮೂರನೇ ತಿದ್ದುಪಡಿ ವಿಧೇಯಕವನ್ನು ಕಂದಾಯ ಸಚಿವ ಆರ್.ಅಶೋಕ್ ವಿಧಾನ ಪರಿಷತ್​ನಲ್ಲಿ ಮಂಡಿಸಿದರು. ನಂತರ ವಿವರಣೆ ನೀಡಲಾಯಿತು.

ಕರ್ನಾಟಕ ಭೂ ಕಂದಾಯ ಮೂರನೇ ತಿದ್ದುಪಡಿ ವಿಧೇಯಕ ಕುರಿತು ವಿವರಣೆ ನೀಡಿದ ಸಚಿವ ಅಶೋಕ್, 2005ರ ಹಿಂದೆ ಸರ್ಕಾರಿ ಜಮೀನುಗಳಲ್ಲಿ ಕಾಫಿ ಬೆಳೆದು ವ್ಯವಸಾಯ ಮಾಡುತ್ತಿದ್ದಾರೋ ಅವರಿಗೆ ಕಂದಾಯ ಭೂಮಿಯಲ್ಲಿ ಗುತ್ತಿಗೆ ನೀಡಲು ಇದು ಸಹಕಾರಿಯಾಗಲಿದೆ. ಕಾಫಿ ಬೆಳೆಗಾರರಿಗೆ ಅನುಕೂಲ ಆಗಬೇಕು ಹಾಗೂ ಸರ್ಕಾರಕ್ಕೂ ಆದಾಯ ಬರಬೇಕು ಎನ್ನುವುದು ನಮ್ಮ ಆಶಯ. ಬಜೆಟ್​ನಲ್ಲಿ ಸಹ ಈ ಕಾರ್ಯ ಮಾಡುವ ಘೋಷಣೆ ಸರ್ಕಾರ ಮಾಡಿತ್ತು. ಕಾಫಿ ರಫ್ತು ಹಾಗೂ ಯಾಲಕ್ಕಿ ಬೆಳೆಗಾರರಿಗೆ ಅನುಕೂಲವಾಗುವ ಕಾರ್ಯ ಆಗಲಿದೆ ಎಂದರು.

ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಸರ್ಕಾರದ ಈ ವಿಧೇಯಕ 25 ಎಕರೆ ಸರ್ಕಾರಿ ಜಮೀನಿನಲ್ಲಿ 2005ರ ಹಿಂದೆ ವಾಣಿಜ್ಯ ಬೆಳೆ ಬೆಳೆಯುತ್ತಾ ಬಂದವರಿಗೆ ಆ ಭೂಮಿಯನ್ನು ಲೀಸ್ ಮೇಲೆ ನೀಡಬೇಕೆಂಬ ನಿರ್ಧಾರ ಕೈಗೊಳ್ಳುತ್ತಿದೆ. ಜನಸಾಮಾನ್ಯರಿಗೆ ಇದರಿಂದ ಏನು ಅನುಕೂಲ ಆಗಲಿದೆ ಎನ್ನುವುದನ್ನು ನೋಡಬೇಕು. ಕಾಫಿ ಬೆಳೆಗಾರರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಸರ್ಕಾರ ಹೇಳಿದೆ. ಅದು ಉತ್ತಮ. ಸಣ್ಣ ಹಿಡುವಳಿದಾರರಿಗೆ 25 ಎಕರೆ ನೀಡುತ್ತೀರಾ? ದೊಡ್ಡ ಹಿಡುವಳಿದಾರರಿಗೆ ನೀಡುತ್ತೀರಾ ಅನ್ನುವುದನ್ನು ತಿಳಿಸಿದೆ. ಅಲ್ಲಿ ಕಾಫಿ ತೋಟ ಕೊಳ್ಳುವವರು 1000 ಎಕರೆಗಿಂತ ಕಡಿಮೆ ಭೂಮಿ ಕೊಳ್ಳುತ್ತಿಲ್ಲ. ಅಲ್ಲಿನ ಪ್ರಪಂಚವೇ ಬೇರೆ. ಸರ್ಕಾರದಿಂದ ಒಂದು ನೀತಿ ಬರುವಾಗ ಜನಸಾಮಾನ್ಯರ ಸ್ವತ್ತಿಗೆ ಎಷ್ಟು ಬೆಲೆ ಕೊಟ್ಟಿದೆ ಎನ್ನುವುದನ್ನು ತಿಳಿಸಬೇಕು ಎಂದು ಪ್ರಶ್ನಿಸಿದರು.

ನಂತರ ಮಾತನಾಡಿ, ಬಲಾಢ್ಯರು ಯಾವುದೇ ಕಾರಣಕ್ಕೂ ಭೂಮಿ ಬಿಟ್ಟುಕೊಡಲ್ಲ. ಚರ್ಚೆ ಇಲ್ಲದೇ ಇಂತಹ ವಿಧೇಯಕವನ್ನು ಜಾರಿಗೆ ತರುವುದು ಸರಿಯಲ್ಲ. ಉತ್ತಮ ಬಿಲ್​ಗಳು ಬಂದರೆ ವಿರೋಧಿಸಲ್ಲ. ಚುನಾವಣೆ ಸಂದರ್ಭದಲ್ಲಿ ಇಂತಹ ಬಿಲ್ ತಂದರೆ ಅನುಮಾನ ಸಹಜ. ವಾಣಿಜ್ಯ ಬೆಳೆ ವಿಚಾರದಲ್ಲಿ ವಿಧೇಯಕ ಬಂದಾಗ ಅನುಮಾನ ಮೂಡುವುದು ಸಹಜ. ಪ್ರತಿಭಟನಾಸೂಚಕವಾಗಿ ಬೆಂಬಲಿಸುತ್ತೇನೆ ಎಂದರು.

ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿ, 80,500 ಎಕರೆಯಷ್ಟು ಒತ್ತುವರಿ ಭೂಮಿಯಲ್ಲಿ 10 ಎಕರೆ ಒಳಗಿನ ಭೂಮಿ ಹೊಂದಿದವರಿದ್ದಾರೆ. ಶೇ.90ರಷ್ಟು ಸಣ್ಣ ಹಿಡುವಳಿದಾರರೇ ಇದ್ದಾರೆ. 25 ಎಕರೆಗಿಂತ ಹೆಚ್ಚಿನ ಭೂಮಿ ಇರುವವರು ಒತ್ತುವರಿ ಮಾಡಿಕೊಂಡಿದ್ದರೆ ಅವರ ಭೂಮಿಯನ್ನು ವಶಕ್ಕೆ ಪಡೆಯುತ್ತೇವೆ. ದೊಡ್ಡ ಹಿಡುವಳಿದಾರರು ಒತ್ತುವರಿ ಮಾಡಿಕೊಂಡಿದ್ದು ಕಡಿಮೆ ಇದೆ. ಒತ್ತುವರಿ ಭೂಮಿಯನ್ನು ವ್ಯಕ್ತಿಗೆ ನೀಡುತ್ತಿಲ್ಲ. ಕುಟುಂಬಕ್ಕೆ ನೀಡುತ್ತಿದ್ದೇವೆ. ಹಿಂದೆ ಇದು ಕಾಂಗ್ರೆಸ್ ಸರ್ಕಾರ ಪ್ರಸ್ತಾಪಿಸಿದ ವಿಧೇಯಕ. ಅದನ್ನು ನಾವು ಮುಂದುವರಿಸುತ್ತಿದ್ದೇವೆ. ಇದರಿಂದ ಸಾಕಷ್ಟು ಚರ್ಚೆ ಅಗತ್ಯವಿಲ್ಲ ಎಂದು ವಿವರಣೆ ನೀಡಿದರು.

ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ, ಭಾರತಿ ಶೆಟ್ಟಿ, ಮಂಜೇಗೌಡ, ಮರಿತಿಬ್ಬೇಗೌಡ, ತುಳಸಿ ಮುನಿರಾಜುಗೌಡ, ಪಿ.ಆರ್. ರಮೇಶ್, ತೇಜಸ್ವಿನಿ ಗೌಡ, ಪ್ರತಾಪ್​ ಸಿಂಹ ನಾಯಕ್, ಎಸ್. ರವಿ, ಮತ್ತಿತರ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು. ಅಂತಿಮವಾಗಿ ಒಂದಿಷ್ಟು ಬದಲಾವಣೆಗೆ ಒಪ್ಪಿಕೊಂಡ ಬಳಿಕ ಸದನದಲ್ಲಿ ಕರ್ನಾಟಕ ಭೂ ಕಂದಾಯ ಮೂರನೇ ತಿದ್ದುಪಡಿ ವಿಧೇಯಕ 2022 ಅನ್ನು ಅಂಗೀಕರಿಸಲಾಯಿತು.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ 2022 ಮಂಡಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ ಬಿಲ್​ನ ವಿವರಣೆ ನೀಡಿದರು. ಕೇವಲ ಒಂದು ನೀಡಿಕೆಯನ್ನು ಹಿಂಪಡೆಯುವುದನ್ನು ಬಿಟ್ಟರೆ ಬೇರೆ ಬದಲಾವಣೆ ಇಲ್ಲ ಎಂದು ಸಚಿವರು ತಿಳಿಸಿದರು. ವಿಧೇಯಕ ಸದನದಲ್ಲಿ ಅಂಗೀಕೃತವಾಗಿ ಅನುಮೋದನೆ ಪಡೆಯಿತು.

ವಿಧಾನ ಪರಿಷತ್​ನಲ್ಲಿ ಮತ್ತೊಂದು ಬಿಲ್ ಮಂಡನೆಗೆ ಸಭಾ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಮುಂದಾದಾಗ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ವಿರೋಧಿಸಿದರು. ಅಜೆಂಡಾದಲ್ಲಿರುವ ವಿಚಾರವನ್ನು ಮೊದಲು ಮುಗಿಸಿ, ಇಲ್ಲವಾದರೆ ನಾವು ಹೊರಟು ಹೋಗುತ್ತೇವೆ. ನೀವು ಬೇಕಾದ ರೀತಿ ಸದನ ಮುಂದುವರಿಸಿಕೊಳ್ಳಿ ಎಂದು ಸಲಹೆ ನೀಡಿದರು. ಸಭಾನಾಯಕರು ಆ ರೀತಿ ಮಾಡುವುದು ಬೇಡ ಅಂತ ಸಮಾಧಾನ ಪಡಿಸಿದರು. ಒಂದು ಬಿಲ್​ ಅತ್ಯಂತ ಅವಶ್ಯಕವಾಗಿದೆ. ಪಾಸ್ ಮಾಡಿಕೊಡಿ ಎಂದು ಸಚಿವ ಮುರುಗೇಶ್ ನಿರಾಣಿ ಅವರು ಬಿ.ಕೆ.ಹರಿಪ್ರಸಾದ್ ಅವರಲ್ಲಿ ಮನವಿ ಮಾಡಿದರು. ಆದರೆ ಅದನ್ನು ವಿರೋಧಿಸಿದ ಹರಿಪ್ರಸಾದ್ ಅವರು ಇಲ್ಲಾ ನಿಯಮ 330 ಹಾಗೂ ಇತರೆ ಚರ್ಚೆಗಳು ಅಜೆಂಡಾದಲ್ಲಿದೆ. ಅದು ಮುಗಿದ ಬಳಿಕ ಬಿಲ್ ತನ್ನಿ. ನಾವು ಪಾಸ್ ಮಾಡಿಕೊಡುತ್ತೇವೆ ಎಂದರು.

ಇದನ್ನೂ ಓದಿ:ಹಸಿರು ಕಾರಿಡಾರ್‌ನಡಿ 10 ಯೋಜನೆಗಳ ಅಭಿವೃದ್ದಿಗೆ ಕ್ರಮ: ಸಚಿವ ಸಿ.ಸಿ.ಪಾಟೀಲ್

Last Updated :Dec 28, 2022, 10:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.