ETV Bharat / state

ಅಖಾಡದಲ್ಲಿ ಗೆದ್ದ ಬಿಜೆಪಿ- ಕೈ ಕಲಿಗಳು ಹೇಳಿದ್ದೇನು?

author img

By

Published : May 13, 2023, 11:03 PM IST

ಕೊರೊನಾ ಸಮಯದಲ್ಲಿ‌ ಸಿಪಾಯಿಯಂತೆ ಕೆಲಸ‌ ಮಾಡಿದ್ದೆ. ಸೋಲಿಗೆ ಕಾರಣ ಗೊತ್ತಾಗುತ್ತಿಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ‌ ಸುಧಾಕರ್ ಸೋಲಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಕಾಂಗ್ರೆಸ್
ಬಿಜೆಪಿ ಕಾಂಗ್ರೆಸ್

ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅತಂತ್ರ ಫಲಿತಾಂಶ ಬರಲಿದೆ ಎಂಬ ಗೊಂದಲಕ್ಕೆ ತೆರೆಬಿದ್ದಿದೆ. ಮಿತಿ ಮೀರಿದ ಭ್ರಷ್ಟಾಚಾರ ಆರೋಪ ಬಿಜೆಪಿಗೆ ಮುಳುವಾದರೆ ಕಾಂಗ್ರೆಸ್​ಗೆ ವರದಾನವಾಗಿದೆ. ಪರಾಜಿತ ಅಭ್ಯರ್ಥಿಗಳ ಗೆಲ್ಲದಿರುವ ಕುರಿತಂತೆ ಆತ್ಮಾಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರೆ ಗೆದ್ದ ಕೈ ಕಲಿಗಳು ಜನಾಶೀರ್ವಾದಕ್ಕೆ ತಲೆ ಬಾಗಿದ್ದಾರೆ.

ನಗರದ‌‌ ಸೈಂಟ್​ ಜೊಸೆಫ್ ಶಾಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಬಿಜೆಪಿ ಹಾಗೂ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಮಂಜುಳಾ ಲಿಂಬಾವಳಿಗೆ 44,501 ಅಂತರದಲ್ಲಿ ಭರ್ಜರಿ ಗೆದ್ದರೆ ಯಲಹಂಕ ಬಿಜೆಪಿ ಅಭ್ಯರ್ಥಿ ಎಸ್ ಆರ್ ವಿಶ್ವನಾಥ್​ಗೆ 62,228 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ.

ಬ್ಯಾಟರಾಯನಪುರ ಕೃಷ್ಣಬೈರೇಗೌಡ 38,250, ಆನೇಕಲ್ ಕಾಂಗ್ರೆಸ್ ಅಭ್ಯರ್ಥಿ ಶಿವಣ್ಣ 31,404 ಅಂತರದ ಗೆಲುವು ದಾಖಲಿಸಿದ್ದಾರೆ. ಕಳೆದ ಬಾರಿ ಸೋತಿದ್ದ ದಾಸರಹಳ್ಳಿ ಬಿಜೆಪಿ‌ ಅಭ್ಯರ್ಥಿ ಮುನಿರಾಜು 9,235, ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್ 14,928, ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ಎಂ ಕೃಷ್ಣಪ್ಪ 49,312 ಮತಗಳ ಜಯ ದಕ್ಕಿಸಿಕೊಂಡಿದ್ದಾರೆ.

ಹಿರಿಯರ ಕಡೆಗಣಿಸಿದ್ದೇ ಪ್ರಮಾದ : ತನ್ನ ಪತ್ನಿ ಮಂಜುಳ‌ ಜಯ ಗಳಿಸುತ್ತಿದ್ದಂತೆ ಮಾಜಿ ಶಾಸಕ ಅರವಿಂದ್ ಲಿಂಬಾವಳಿ ಮಾತನಾಡಿ, ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆಯಿದೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಆಡಳಿತ ಕೊಟ್ಟರೂ ಹಿನ್ನೆಡೆಯಾಗಿದೆ. ಆಡಳಿತ ಹಾಗೂ ಸಂಘಟನೆ ಮಾಡಿದ್ದರೂ ಅವರಿಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಿರಿಯರನ್ನ ಬದಿಗೊತ್ತದೆ ಸಂಘಟನೆಯಲ್ಲಿ ಸೇರಿಸಿಕೊಳ್ಳದಿರುವುದು ಸೇರಿ ಒಟ್ಟಾಗಿ ಸೇರಿ ಎದುರಿಸೋ ಅವಕಾಶ ಮಾಡಿಕೊಡದಿರುವುದೇ ಸೋಲಿಗೆ ಕಾರಣ ಎಂಬುದು ನನ್ನ ಭಾವನೆಯಾಗಿದೆ.

ಪ್ರಧಾನಿ ಮೋದಿಯವರು ರಾಜ್ಯಕ್ಕೆ ಬಂದು ಪ್ರಚಾರ ಮಾಡಿದ್ದಕ್ಕೆ‌ ಇಷ್ಟಾದ್ರು ಗೆದ್ದಿದ್ದೇವೆ. ಮುಂದಿನ ಬಾರಿ ತಾವು ಮಾಡಿದ ಕೆಲಸದಿಂದ ಗೆಲ್ಲಬೇಕು. ಟಿಕೆಟ್ ವಿತರಣೆ, ಸರ್ಕಾರದ ನೇತೃತ್ವದ‌‌ ಹಿರಿಯರ ಕಡೆಗಣನೆ, ಸಂಘಟನೆಗೆ ಬದ್ಧವಾಗಿರೋರನ್ನೂ ನಿರ್ಲಕ್ಷ್ಯ ಮಾಡಲಾಗಿದೆ. ಚುನಾವಣೆ ‌ನೇತೃತ್ವದ ವಹಿಸಿದ್ದವರಿಗೆ ನನ್ನ ಮಾತು‌ ಮುಟ್ಟಲಿ ಎಂದು ಹೇಳುತ್ತಿದ್ದೇನೆ‌ ಎಂದರು.

ಬ್ಯಾಟರಾಯನಪುರ‌ ಕ್ಷೇತ್ರದ ವಿಜೇತ ಅಭ್ಯರ್ಥಿ ಕೃಷ್ಣಬೈರೇಗೌಡ ಮಾತನಾಡಿ, 25 ವರ್ಷ ಬಳಿಕ ಸ್ಪಷ್ಟ ಹಾಗೂ‌ ಸುಭದ್ರ ಸರ್ಕಾರ ರಚನೆಗೆ ಮತದಾರರು ಒಲವು ತೋರಿರುವುದು ಸ್ವಾಗತಾರ್ಹ. ಬಿಜೆಪಿಯ ವ್ಯಾಪಕ ಭ್ರಷ್ಟಾಚಾರಕ್ಕೆ ಬೇಸತ್ತು ಕಾಂಗ್ರೆಸ್ ಒಲವು ತೋರಿದ್ದಾರೆ. ಮೋದಿಗೆ ಮತ ಹಾಕಿ ಎಂದು ಹೊರತುಪಡಿಸಿದರೆ ಬೇರೆ ಯಾವ ನಾಯಕರನ್ನ ಬಳಸದೆ ಬಿಜೆಪಿಯು ಚುನಾವಣಾ ಪ್ರಚಾರದಲ್ಲಿ ಬಳಸಿರಲಿಲ್ಲ.

ಮೋದಿ ವರ್ಸಸ್ ಕಾಂಗ್ರೆಸ್ ಎಂದೇ ಬಿಂಬಿತವಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಮೋದಿ ಸೋತಿದ್ದ ಉಳಿಸು ಭ್ರಷ್ಟಾಚಾರಕ್ಕೆ‌ ಕಡಿವಾಣ ಹಾಕಿ‌ ಸುಭದ್ರ ಸರ್ಕಾರ ಕಲ್ಪಿಸುವುದೇ‌ ಪಕ್ಷದ ಆದ್ಯ ಕರ್ತವ್ಯವಾಗಿದೆ. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ್ದ ಅಭ್ಯರ್ಥಿಗಳು ಸೋತಿದ್ದಾರೆ. ಪಕ್ಷಾಂತರ ಮಾಡಿದ್ದೆ ಮೊದಲ ತಪ್ಪು.

ಸುಧಾಕರ್, ಸಿ ಟಿ ರವಿ ಸೇರಿದಂತೆ ಕೆಲ ಅಭ್ಯರ್ಥಿಗಳ ದುರಾಡಳಿತ, ದುರಹಂಕಾರ ತೋರಿದ ಹಾಗೂ ಪಕ್ಷಾಂತರಿಗಳಿಗೆ ಜನರು ತಕ್ಕಪಾಠ ಕಲಿಸಿದ್ದಾರೆ. ಅಧಿಕಾರಕ್ಕೆ ಕೈಯಿದ್ದ ಮಾತ್ರಕ್ಕೆ ಅಹಂಕಾರದಿಂದ ವರ್ತಿಸುವುದು ಸರಿಯಲ್ಲ. ಶಾಸಕರು ಏನು ಪಾಳೆಗಾರರಲ್ಲ. ನಾನು‌ ಸೇರಿದಂತೆ ಎಲ್ಲರೂ ಇದರಿಂದ ಅರಿತುಕೊಳ್ಳಬೇಕು.‌ ಜನರ ವಿಶ್ವಾಸ ಉಳಿಸುವ ನಿಟ್ಟಿನಲ್ಲಿ ಕೆಲಸ‌ ಮಾಡುವುದಾಗಿ ಭರವಸೆ ನೀಡಿದರು.

ಸೋಲಿಗೆ ಕಾರಣ ಗೊತ್ತಾಗುತ್ತಿಲ್ಲ: ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ಮಾತನಾಡಿ, 'ಜನಸೇವಕನಾಗಿ ಮತ್ತೆ‌ ಆಶೀರ್ವಾದ ಮಾಡಿದ್ದಕ್ಕೆ ಮತದಾರರಿಗೆ ಧನ್ಯವಾದ ತಿಳಿಸಿದ ಅವರು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮತಗಳ ಅಂತರ ಕಡಿಮೆಯಿದೆ.‌ ಜನರ‌ ನಿರ್ಧಾರ ತೀರ್ಮಾನಕ್ಕೆ ತಲೆಬಾಗುವೆ.‌ ಚಿಕ್ಕಬಳ್ಳಾಪುರದಲ್ಲಿ‌ ಸುಧಾಕರ್ ಸೋಲಿನ ಬಗ್ಗೆ ಪ್ರತಿಕ್ರಿಯಿಸಿ, ಕೊರೊನಾ ಸಮಯದಲ್ಲಿ‌ ಸಿಪಾಯಿಯಂತೆ ಕೆಲಸ‌ ಮಾಡಿದ್ದೆ. ಸೋಲಿಗೆ ಕಾರಣ ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಯಲಹಂಕ ವಿಜೇತ ಅಭ್ಯರ್ಥಿ ಎಸ್ ಆರ್​ ವಿಶ್ವನಾಥ್, ನಾನು ಗೆದ್ದಿರುವುದು ಸಂತೋಷ ತಂದರೆ, ಅಧಿಕಾರಕ್ಕೆ ಬಿಜೆಪಿ ಬರದಿರುವುದು ಬೇಸರವಾಗಿದೆ. ನಾವು ಆತ್ಮಾಲೋಕನ ಮಾಡಿಕೊಳ್ಳುವುದಕ್ಕೆ ಸಕಾಲವಾಗಿದೆ. ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸದಿರುವುದು ಗ್ಯಾರಂಟಿ ಯೋಜನೆಗಳಿಗೆ ಜನರು ಮರುಳಾಗಿರುವುದೇ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಿದರು.

ಇದನ್ನೂ ಓದಿ: 'ಜನ ಮತಹಾಕಿ ವಿಶ್ವಾಸ ತೋರಿಸಿದ್ದಾರೆ, ಭರವಸೆಗಳನ್ನು ಬೇಗ ಈಡೇರಿಸುವ ಜವಾಬ್ದಾರಿ ಇದೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.