ETV Bharat / state

ಕಾಂಗ್ರೆಸ್ ಕುಂಟು ನೆಪಗಳ ವಿರುದ್ಧ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇವೆ: ಮಾಜಿ ಸಿಎಂ ಬೊಮ್ಮಾಯಿ‌..!

author img

By

Published : May 20, 2023, 8:12 PM IST

we-will-raise-our-voice-against-the-lame-excuses-of-congress-former-cm-bommai
ಕಾಂಗ್ರೆಸ್ ಕುಂಟು ನೆಪಗಳ ವಿರುದ್ಧ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇವೆ: ಮಾಜಿ ಸಿಎಂ ಬೊಮ್ಮಾಯಿ‌..!

ಚುನಾವಣೆಯಲ್ಲಿ ಗೆದ್ದ ಬಳಿಕ ಈಗ ಮತದಾರರಿಗೆ ಎಷ್ಟು ಗೌರವ ಕೊಡುತ್ತಿದ್ದಾರೆ ಎಂದು ಗೊತ್ತಾಗುತ್ತಿದೆ. ಕಾಂಗ್ರೆಸ್ ‌ನಿಧಾನವಾಗಿ ತನ್ನ ಬಣ್ಣ ಬದಲಾಯಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದರು.

ಬೆಂಗಳೂರು: ಮೊದಲ ಸಚಿವ ಸಂಪುಟ ಸಭೆಯಲ್ಲೇ ಗ್ಯಾರಂಟಿ ಜಾರಿಯ ಭರವಸೆ ನೀಡಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಕರ್ನಾಟಕದ ಜನತೆಯ ನಿರೀಕ್ಷೆಯನ್ನು ಹುಸಿಗೊಳಿಸಿದೆ, ಕಾಂಗ್ರೆಸ್ ಕುಂಟು ನೆಪಗಳ ವಿರುದ್ಧ ವಿಧಾನಸಭೆಯಲ್ಲಿ ನಾವು ಧ್ವನಿ ಎತ್ತುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದ್ದಾರೆ.

ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದ ಬಗ್ಗೆ ಕರ್ನಾಟಕದ ಮಹಾಜನತೆ ಬಹಳ‌ ನಿರೀಕ್ಷೆ ಇಟ್ಟುಕೊಂಡಿದ್ದರು. ಹೆಣ್ಣು ಮಕ್ಕಳು ಇವತ್ತೇ ಬಸ್ ಹತ್ತಲು ತಯಾರಾಗಿದ್ದರು. ಆದರೆ, ಸಿದ್ದರಾಮಯ್ಯ ಅವರಿಗೆ ನಿರಾಶೆ ಮೂಡಿಸಿದ್ದಾರೆ. ಕೇವಲ ಘೋಷಣೆ ಮಾತ್ರ ಮಾಡಲಾಗಿದ್ದು, ಎಂದಿನಿಂದ ಜಾರಿ ಅಂತ ವಿವರವಾಗಿ ಹೇಳಿಲ್ಲ ಎಂದರು.

ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಹೇಳುತ್ತೇವೆ ಎಂದಿದ್ದಾರೆ. ಇದರಿಂದ ಜನರ ನಿರೀಕ್ಷೆ ಹುಸಿಗೊಳಿಸುವ ಸಂಪುಟ ನಿರ್ಣಯ ಆಗಿದೆ. ಐದು ಗ್ಯಾರೆಂಟಿ ಈಡೇರಿಕೆಗೆ 50 ಸಾವಿರ ಕೋಟಿ ಆಗುತ್ತದೆ ಎಂದು ಹೇಳಿದ್ದಾರೆ. ಇದರಿಂದಾಗಿ ಹಣಕಾಸು ಒದಗಿಸಲು ಯಾವುದೇ ಪೂರ್ವ ಆಲೋಚನೆ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ದಾರಿಯಲ್ಲಿ ಹೋಗುವವರಿಗೆ ಕೊಡಲು ಆಗುತ್ತಾ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ದಾರಿಯಲ್ಲಿದ್ದವರು, ಮನೆಯಲ್ಲಿದ್ದವರು ಎಲ್ಲರೂ ಸೇರಿಯೇ ವೋಟ್ ಹಾಕಿದ್ದಾರೆ. ಚುನಾವಣೆಯಲ್ಲಿ ಗೆದ್ದ ಬಳಿಕ ಈಗ ಮತದಾರರಿಗೆ ಎಷ್ಟು ಗೌರವ ಕೊಡುತ್ತಿದ್ದಾರೆ ಎಂದು ಗೊತ್ತಾಗುತ್ತಿದೆ. ಕಾಂಗ್ರೆಸ್ ‌ನಿಧಾನವಾಗಿ ತನ್ನ ಬಣ್ಣ ಬದಲಾಯಿಸುತ್ತಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಮನಸ್ಸು ‌ಮಾಡಿದರೆ ನಾಳೆಯೇ 2000ರೂ. ಹಾಕಬಹುದು. ಬಿಪಿಎಲ್ ಕಾರ್ಡ್​ದಾರರ ಬಗ್ಗೆ ರಾಜ್ಯ ಸರ್ಕಾರದ ಬಳಿ ಈಗಾಗಲೇ ಮಾಹಿತಿ ಇದೆ. ಮನಸ್ಸಿದ್ದರೆ ಮಾತ್ರ ಮಾರ್ಗ ಎಂದ ಮಾಜಿ ಸಿಎಂ, ವಿದ್ಯುತ್ ಉಚಿತ ನೀಡಲು ಕುಂಟು ನೆಪ ಹೇಳುತ್ತಿದ್ದಾರೆ. ಈ ವರ್ಷ ಪಾಸಾದ ಪದವೀಧರರಿಗೆ ಭತ್ಯೆ ಅಂತ ಹೇಳಿದ್ದಾರೆ. ನಿಜವಾದ ಕಷ್ಟದಲ್ಲಿರುವ ನಿರುದ್ಯೋಗಿಗಳಿಗೆ ಸಹಾಯ ಮಾಡುವ ಉದ್ದೇಶ ಇವರಿಗಿಲ್ಲ ಎಂದರು.

ನಮ್ಮ‌ ಅವಧಿಯಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಈಗಾಗಲೇ ವಿಧಾನಸಭೆಯಲ್ಲಿ ಉತ್ತರ ಕೊಟ್ಟಿದ್ದೇನೆ. ಕೋವಿಡ್​​ನಿಂದ ಎಲ್ಲ ರಾಜ್ಯದಲ್ಲೂ ಸಾಲ ಹೆಚ್ಚಾಗಿದೆ. ಈಗಲೂ ಕೂಡ ಅವರು ಪ್ರತಿಪಕ್ಷ ನಾಯಕನ ತರಹ ಮಾತಾಡುತ್ತಿದ್ದಾರೆ. ಈಗ ಅವರಿಗೆ ಜವಾಬ್ದಾರಿ ಇದೆ. ಇದು ಕೇವಲ ಘೋಷಣೆ ಇರುವ ಗ್ಯಾರಂಟಿ. ಮುಂದಿನ ಸಚಿವ ಸಂಪುಟದವರೆಗೆ ನಾವು ಕಾಯೋಣ. ಏನು ಹೇಳಿದ್ದಾರೆ, ಏನು ಮಾಡುತ್ತಾರೆ ಎಂದು ನೋಡೋಣ ಎಂದರು.

ಇಡೀ ದೇಶದಲ್ಲಿ ಜಿಎಸ್​​ಟಿ ಆದಾಯದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ ಸಬ್ ಅರ್ಬನ್, ಮೆಟ್ರೋ, ರೈಲ್ವೆಗೆ ಅನುದಾನ ಕೊಡುತ್ತಿದೆ. ಅರ್ಧ ಮಾಹಿತಿ ಹೇಳಿ ಅರ್ಧ ಮಾಹಿತಿ ಮುಚ್ಚಿಡುವ ಕೆಲಸ‌ ಸಿಎಂ ಮಾಡಿದ್ದಾರೆ. ವಿಧಾನಸಭೆಯಲ್ಲಿ ನಾನು ಇದರ ಸಂಪೂರ್ಣ ವಿವರ ಕೊಡಲು ಸಿದ್ಧನಿದ್ದೇನೆ. ನಾವು ಧ್ವನಿ ಎತ್ತಲು ಆರಂಭ ಮಾಡಿದ್ದೇವೆ ಎಂದರು. ನಾವು ಆದಾಯ ಹೆಚ್ಚು ಮಾಡಲು ಏನೆಲ್ಲ ಪ್ರಯತ್ನ ಮಾಡಿದ್ದೇವೆ ಅಂತಾ ನಮ್ಮ‌ ಬಜೆಟ್ ನಲ್ಲಿ ಇದೆ.

ಗ್ಯಾರಂಟಿ ಘೋಷಣೆಗಳ 50 ಸಾವಿರ ಕೋಟಿ ಸಣ್ಣ ಮೊತ್ತವೇ ಎಂದು ಪ್ರಶ್ನೆ ಮಾಡಿದ ಮಾಜಿ ಸಿಎಂ, ಸಿದ್ದರಾಮಯ್ಯ ಕಾಲದಲ್ಲಿ ಮಾಡಿದ ಸಾಲದ ಹತ್ತು ವರ್ಷ ಬಡ್ಡಿ ಕಟ್ಟುವುದೇ ಇತ್ತು. ಈಗ ಅಸಲು ಕಟ್ಟುವ ಕಾಲ ಬಂದಿದೆ. ನಮ್ಮ ಬಜೆಟ್ ಮರು ಹಂಚಿಕೆ ಮಾಡುವ ಅಧಿಕಾರ ಅವರಿಗೆ ಇದೆ, ಮಾಡಲಿ. ಗ್ಯಾರಂಟಿಗಳಿಗೆ ಖಂಡಿತ ಷರತ್ತು ವಿಧಿಸುವ ಕೆಲಸ ಮಾಡುತ್ತಾರೆ. ಅದರ ಬಗ್ಗೆ ಜನ ತೀರ್ಮಾನ ಮಾಡಲಿ. ನಂತರ ನಾವು ಜನರ ಧ್ವನಿಯಾಗಿ ಕೆಲಸ ಮಾಡುತ್ತೇವೆ ಎಂದರು.

ನಾಳೆ ಬಿಜೆಪಿ ಶಾಸಕಾಂಗ ಸಭೆ: ನಾಳೆ ಬಿಜೆಪಿ ಜಿಲ್ಲಾ ಮುಖಂಡರ ಸಭೆ ಇದೆ. ಈ ಸಭೆಯ ಬಳಿಕ ಶಾಸಕಾಂಗ ಸಭೆ ನಿರ್ಧಾರ ಮಾಡುತ್ತೇವೆ. ವಿಪಕ್ಷ ನಾಯಕ ಸ್ಥಾನದ ಬಗ್ಗೆ ನಾನು ಇನ್ನೂ ಏನೂ ಚಿಂತನೆ ಮಾಡಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಜುಲೈ ತಿಂಗಳಲ್ಲಿ 3.25 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಲಿದ್ದೇವೆ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.