ETV Bharat / state

ಚೈತ್ರಾ ಕುಂದಾಪುರ ಆರೋಗ್ಯ ಸ್ಥಿರ: ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ಮಾಹಿತಿ

author img

By ETV Bharat Karnataka Team

Published : Sep 15, 2023, 3:49 PM IST

victoria-hospital-doctor-informed-chaitra-kundapura-health-is-stable
ಚೈತ್ರಾ ಕುಂದಾಪುರ ಆರೋಗ್ಯ ಸ್ಥಿರವಾಗಿದೆ: ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ಮಾಹಿತಿ

ವಂಚನೆ ಆರೋಪ ಪ್ರಕರಣದಲ್ಲಿ ಬಂಧನದಲ್ಲಿರುವ ಚೈತ್ರಾ ಕುಂದಾಪುರ ಅವರ ಆರೋಗ್ಯದಲ್ಲಿ ಯಾವುದೇ ರೀತಿಯ ಏರುಪೇರಾಗಿಲ್ಲ. ಚಿಕಿತ್ಸೆ ಮುಂದುವರೆದಿದೆ ಎಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್​ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ವಂಚಿಸಿರುವ ಆರೋಪ ಸಂಬಂಧ ಸಿಸಿಬಿ ಪೊಲೀಸರ ವಿಚಾರಣೆ ಎದುರಿಸುತ್ತಿರುವ ಆರೋಪಿತೆ ಚೈತ್ರಾ ಕುಂದಾಪುರ ಕುಸಿದು ಬಿದ್ದ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ತಪಾಸಣೆ ಬಳಿಕ ಚೈತ್ರಾ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಕರೆತಂದ ಕೆಲವೇ ಕ್ಷಣಗಳಲ್ಲಿ ಚೈತ್ರಾ ಕುಸಿದುಬಿದ್ದಿದ್ದರು. ಬಾಯಲ್ಲಿ ನೊರೆ ಕಂಡು ಬಂದ ಹಿನ್ನೆಲೆಯಲ್ಲಿ ಕೂಡಲೇ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಿಪಿ, ಶುಗರ್ ಹಾಗೂ ಇಸಿಜಿ, ರಕ್ತಪರೀಕ್ಷೆ ಸೇರಿದಂತೆ‌ ಅಗತ್ಯವಿರುವ ಎಲ್ಲಾ ರೀತಿಯ ಪರೀಕ್ಷೆ ನಡೆಸಲಾಗಿದೆ. ಎಲ್ಲವೂ ನಾರ್ಮಲ್ ಆಗಿದ್ದು ಚೈತ್ರಾ ಅವರ ಆರೋಗ್ಯದಲ್ಲಿ ಯಾವುದೇ ರೀತಿಯ ಏರುಪೇರಾಗಿಲ್ಲ. ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

victoria-hospital-doctor-informed-chaitra-kundapura-health-is-stable
ಚೈತ್ರಾ ಕುಂದಾಪುರ ಆರೋಗ್ಯದ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ಮಾಹಿತಿ

ವಂಚನೆ ಪ್ರಕರಣದಲ್ಲಿ ಹತ್ತಕ್ಕೂ ಹೆಚ್ಚು ಆರೋಪಿಗಳು ಭಾಗಿಯಾಗಿರುವ ಆರೋಪವಿದೆ. ಸದ್ಯ ಏಳು ಜನರನ್ನು ಅರೆಸ್ಟ್ ಮಾಡಲಾಗಿದೆ. ಚೈತ್ರಾ ಕುಂದಾಪುರ, ಗಗನ್ ಕಡೂರು, ರಮೇಶ್, ಧನರಾಜ್, ಚೆನ್ನಾ ನಾಯ್ಕ್, ಶ್ರೀಕಾಂತ್ ಪ್ರಜ್ವಲ್ ಎಂಬವರನ್ನು ಬಂಧಿಸಲಾಗಿದೆ. ಇನ್ನುಳಿದಂತೆ, ಅಭಿನವ ಹಾಲಶ್ರೀ ಸ್ವಾಮೀಜಿ ಸೇರಿ ಕೆಲವು ಆರೋಪಿಗಳಿಗಾಗಿ ಸಿಸಿಬಿ ಶೋಧ ನಡೆಸುತ್ತಿದೆ. ಬಂಧಿತರ ವಿಚಾರಣೆ ನಡೆಸುತ್ತಿರುವ ಸಿಸಿಬಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.

ವಂಚಿಸಿರುವ ಹಣ ಎಲ್ಲಿದೆ, ಐದು ಕೋಟಿ ಏನು ಮಾಡಿದ್ದರು ಎಂಬುದರ ಬಗ್ಗೆ ಪೊಲೀಸರು ಆರೋಪಿಗಳನ್ನು ಪ್ರಶ್ನಿಸಿದ್ದಾರೆ. ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಕಳೆದ ಆರು ತಿಂಗಳಲ್ಲಿ ಇವರ ಬ್ಯಾಂಕ್​ ಖಾತೆಗಳಲ್ಲಿ ಹಣ ವರ್ಗಾವಣೆಯಾಗಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ವಂಚನೆ ಹಣದಲ್ಲಿ ಆರೋಪಿಗಳು ಕಾರು, ಸ್ತಿರಾಸ್ಥಿ, ಚರಾಸ್ತಿ ಖರೀದಿಸಿರುವ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಬಂಧಿತರ ಮೊಬೈಲ್​ಗಳನ್ನು ಎಫ್​ಎಸ್​ಎಲ್​ಗೆ ಕಳುಹಿಸಲಾಗಿದ್ದು, ಇಂದು ಅಥವಾ ನಾಳೆಯೊಳಗೆ ಮೊಬೈಲ್ ರಿಟ್ರೀವಲ್ ಆದ ಡೇಟಾ ತನಿಖಾಧಿಕಾರಿಗಳ ಕೈ ಸೇರುವ ಸಾಧ್ಯತೆಯಿದೆ.

2018ರಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗುರುಪ್ರಸಾದ್ ಎಂಬವರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಚೈತ್ರಾಳರನ್ನು ಪೊಲೀಸರು ಬಂಧಿಸಿದ್ದರು. ಆಗ ಸುಳ್ಯ ನ್ಯಾಯಾಲಯ 14 ದಿನಗಳ‌ ಕಾಲ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ ಅನಾರೋಗ್ಯ ಹಿನ್ನೆಲೆಯಲ್ಲಿ ಚೈತ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.‌ ಈ ಬಗ್ಗೆ ಚೈತ್ರಾರನ್ನು ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಾಲಯ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಿಸಿತ್ತು‌.

ವಂಚನೆಗೊಳಗಾದ ಉದ್ಯಮಿ ಗೋವಿಂದ ಬಾಬು ಪೂಜಾರಿ ನಿನ್ನೆ ಸಿಸಿಬಿ ಕಚೇರಿ ಮುಂದೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಸಿಸಿಬಿಯವರು ಕೇಳಿರುವುದನ್ನು ಕೊಟ್ಟಿದ್ದೇನೆ. ಪೆನ್ ಡ್ರೈವ್‌ನಲ್ಲಿ ದಾಖಲೆಗಳನ್ನು ಕೊಟ್ಟಿದ್ದೇನೆ. ಪ್ರಕರಣ ವಿಚಾರಣೆ ಹಂತದಲ್ಲಿದೆ. ಹಾಗಾಗಿ ಹೆಚ್ಚು ಹೇಳುವುದಿಲ್ಲ ಎಂದಿದ್ದರು.

ಇದನ್ನೂ ಓದಿ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಸೇರಿ 6 ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.