ETV Bharat / state

ಆರ್ಯ ಈಡಿಗ ಸಮುದಾಯಕ್ಕೆ ಮತ್ತೊಂದು ಸಚಿವ ಸ್ಥಾನ ನೀಡುವಂತೆ ಸರ್ಕಾರಕ್ಕೆ ಒತ್ತಾಯ

author img

By ETV Bharat Karnataka Team

Published : Dec 10, 2023, 5:11 PM IST

Urge the government to give another ministerial post to the Arya Ediga community
ಆರ್ಯ ಈಡಿಗ ಸಮುದಾಯಕ್ಕೆ ಮತ್ತೊಂದು ಸಚಿವ ಸ್ಥಾನ ನೀಡುವಂತೆ ಸರ್ಕಾರಕ್ಕೆ ಒತ್ತಾಯ

ಆರ್ಯ ಈಡಿಗ ಸಮುದಾಯಕ್ಕೆ ಮತ್ತೊಂದು ಸಚಿವ ಸ್ಥಾನ ನೀಡುವಂತೆ ಆರ್ಯ ಈಡಿಗ ಬೃಹತ್​ ಸಮಾವೇಶದಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಯಿತು.

ಬೆಂಗಳೂರು: ಆರ್ಯ ಈಡಿಗ ಅಭಿವೃದ್ಧಿ ನಿಗಮಕ್ಕೆ ಸರ್ಕಾರವು 500 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವಂತೆ ಹಾಗೂ ತಮ್ಮ ಸಮುದಾಯಕ್ಕೆ ಮತ್ತೊಂದು ಸಚಿವ ಸ್ಥಾನ ನೀಡುವಂತೆ ಆರ್ಯ ಈಡಿಗ ಸಮಾವೇಶದಲ್ಲಿ ಆಗ್ರಹಿಸಲಾಯಿತು.

ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಆರ್ಯ ಈಡಿಗರ ಸಂಘ ಅಮೃತ ಮಹೋತ್ಸವ ಹಾಗೂ ಈಡಿಗ, ಬಿಲ್ಲವ, ನಾಮಧಾರಿ ಸೇರಿದಂತೆ 25 ಪಂಗಡಗಳ ಬೃಹತ್ ಜಾಗೃತ ಸಮಾವೇಶದಲ್ಲಿ ಮಾತನಾಡಿದ ಆರ್ಯ ಈಡಿಗ ಸಮುದಾಯದ ಪ್ರಮುಖ ನಾಯಕರು, ಶಾಸಕರುಗಳು ಆರ್ಯ ಈಡಿಗ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂಪಾಯಿ ಅನುದಾನ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅಲ್ಲದೇ ಆರ್ಯ ಈಡಿಗ ಸಮಾಜಕ್ಕೆ ಮತ್ತೊಂದು ಸಚಿವ ಸ್ಥಾನ ನೀಡುವಂತೆಯೂ ಇದೇ ಸಂದರ್ಭದಲ್ಲಿ ಕೇಳಿಕೊಂಡಿದ್ದಾರೆ.

ಸಮಾವೇಶದಲ್ಲಿ ಮಾತನಾಡಿದ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ, "ಆರ್ಯ ಈಡಿಗರ ಗುರುಗಳಾದ ನಾರಾಯಣ ಗುರುಗಳ ಹೆಸರಿನಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಪೀಠಗಳು ಸ್ಥಾಪನೆಯಾಗಬೇಕಿದೆ. ಅಲ್ಲದೇ, 50 ಲಕ್ಷ ಜನಸಂಖ್ಯೆ ಇರುವ ಈ ಸಮಾಜಕ್ಕೆ ಒಂದು ನಿಗಮ ಮಾಡುವ ಮೂಲಕ 500 ಕೋಟಿ ರೂಪಾಯಿ ಹಣ ಒದಗಿಸಬೇಕು" ಎಂದು ಆಗ್ರಹಿಸಿದರು. ಜೊತೆಗೆ, ಈಡಿಗ ಸಮುದಾಯದಿಂದ ಯಾರಾದರೂ ಸರಿ, ಇನ್ನೊಬ್ಬರಿಗೆ ಮಂತ್ರಿ ಸ್ಥಾನ ನೀಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಬಳಿಕ ಮಾತನಾಡಿದ ಸಾಗರ ಕ್ಷೇತ್ರದ ಮಾಜಿ ಶಾಸಕ ಹರತಾಳು ಹಾಲಪ್ಪ, "ಈಡಿಗ ಸಮಾಜಕ್ಕೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಮಂತ್ರಿ ಸ್ಥಾನ ಕೊಡಿ" ಎಂದು ಆಗ್ರಹಿಸಿದರು.

ಬೃಹತ್​ ಜಾಗೃತ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಆರ್ಯ ಈಡಿಗ ಸಮಾಜದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀ ರೇಣುಕಾನಂದ ಸ್ವಾಮೀಜಿ, ಯೋಗೇಂದ್ರ ಅವಧೂತರು, ಅರುಣಾನಂದ ಸ್ವಾಮೀಜಿ, ಸತ್ಯಾನಂದ ತೀರ್ಥ ಸ್ವಾಮೀಜಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಮಧು ಬಂಗಾರಪ್ಪ, ಸ್ಯಾಂಡಲ್​ವುಡ್​ ನಟ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್, ಶ್ರೀಮುರಳಿ, ಚಿನ್ನೇಗೌಡ, ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ. ಎಂ. ತಿಪ್ಪೇಗೌಡ, ಶಾಸಕರುಗಳಾದ ಗೋಪಾಲಕೃಷ್ಣ ಬೇಳೂರು, ಭೀಮಣ್ಣ ನಾಯಕ, ಮಾಜಿ ಶಾಸಕ ಹರತಾಳು ಹಾಲಪ್ಪ, ಶಾಸಕ ಹೆಚ್.ಆರ್. ಗವಿಯಪ್ಪ, ಶಾಸಕ ಉಮಾನಾಥ್ ಕೋಟ್ಯನ್​, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್, ಕುಮಾರ ಬಂಗಾರಪ್ಪ ಸಮಾವೇಶದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಅಧ್ಯಕ್ಷರು, ಸದಸ್ಯರ ನೇಮಕವಾಗುತ್ತಿದ್ದಂತೆ ಮಾನವ ಹಕ್ಕುಗಳ ಆಯೋಗ ಚುರುಕು; 150 ಪ್ರಕರಣಗಳ ಪ್ರಾಥಮಿಕ ತನಿಖೆಗೆ ಸಿದ್ಧತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.