ETV Bharat / state

ಚುನಾವಣೆ ವೇಳೆ ಅಮುಲ್​​ ವಿವಾದ.. ಕಾಂಗ್ರೆಸ್- ಜೆಡಿಎಸ್​​​ ಆಕ್ಷೇಪ ಏಕೆ?.. ಈ ಬಗ್ಗೆ ಬಿಜೆಪಿ ನಿಲುವೇನು?

author img

By

Published : Apr 8, 2023, 1:09 PM IST

Updated : Apr 8, 2023, 1:36 PM IST

Amul
ಅಮುಲ್

ಆಡಳಿತ ಪಕ್ಷ ಬಿಜೆಪಿ ಅಮುಲ್ ಆಗಮನವನ್ನು ಸ್ವಾಗತಿಸದಿದ್ದರೂ, ವಿರೋಧಿಸುವ ಕಾರ್ಯ ಮಾಡುತ್ತಿಲ್ಲ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್​ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಅಮುಲ್ ಆಗಮನ ರಾಜ್ಯದ ಜನಪ್ರಿಯ ಉತ್ಪನ್ನವಾದ ನಂದಿನಿಗೆ ಅಡ್ಡಿ ಎಂದೇ ಬಣ್ಣಿಸಲಾಗುತ್ತಿದೆ.

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಗುಜರಾತ್ ಮೂಲದ ಹೈನು ಉತ್ಪನ್ನ ಸಂಸ್ಥೆ 'ಅಮುಲ್' ಕರ್ನಾಟಕ ಪ್ರವೇಶ ಮಾಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಆಡಳಿತ ಪಕ್ಷ ಬಿಜೆಪಿ ಅಮುಲ್ ಆಗಮನವನ್ನು ಸ್ವಾಗತಿಸದಿದ್ದರೂ, ವಿರೋಧಿಸುವ ಕಾರ್ಯ ಮಾಡುತ್ತಿಲ್ಲ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್​ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಅಮುಲ್ ಆಗಮನ ರಾಜ್ಯದ ಜನಪ್ರಿಯ ಉತ್ಪನ್ನವಾದ ನಂದಿನಿಗೆ ಅಡ್ಡಿ ಮಾಡಲು ಎಂದೇ ಬಣ್ಣಿಸಲಾಗುತ್ತಿದೆ.

ಅಮುಲ್ ಮೂಲಕ ನಂದಿನಿಯ ಜನಪ್ರಿಯತೆ ಹತ್ತಿಕ್ಕುವ ಕಾರ್ಯ ಮಾಡಲಾಗುತ್ತಿದೆ ಎಂದು ರಾಜಕೀಯ ಪಕ್ಷಗಳು ಆರೋಪಿಸುತ್ತಿವೆ. ಈ ಮಧ್ಯೆ ಬಿಜೆಪಿ ತಟಸ್ಥ ನಿಲುವು ತಾಳಿದೆ. ಇದು ಡಬಲ್​ ಎಂಜಿನ್ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಾಗಿರುವ ಸಂದರ್ಭದಲ್ಲಿ ನಂದಿನಿ ಉತ್ಪನ್ನಗಳಿಗೆ ನಿಜವಾದ ಸ್ಪರ್ಧಿಯಾಗಬಲ್ಲ, ದೇಶದ ಅತ್ಯಂತ ಜನಪ್ರಿಯ ಹಾಗೂ ಶ್ರೀಮಂತ ಹೈನು ಉತ್ಪನ್ನ ಸಂಸ್ಥೆ ಅಮುಲ್ ರಾಜ್ಯ ಪ್ರವೇಶ ಮಾಡುತ್ತಿರುವುದು ದೊಡ್ಡ ಸುದ್ದಿಯಾಗುತ್ತಿದೆ. ಪರವಾಗಿ ಅಷ್ಟು ಮಾತು ಕೇಳಿಬರುತ್ತಿಲ್ಲವಾದರೂ, ಇದನ್ನು ವಿರೋಧಿಸುವ ಹಾಗೂ ಇದರ ಉತ್ಪನ್ನ ಮಾರಾಟಕ್ಕೆ ರಾಜ್ಯದಲ್ಲಿ ಅವಕಾಶ ನೀಡಬಾರದು ಎನ್ನುವ ಮಾತುಗಳೇ ಹೆಚ್ಚಾಗಿ ಕೇಳಿ ಬರುತ್ತಿದೆ.

ಪ್ರತಿಪಕ್ಷಗಳ ಆಕ್ರೋಶ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಜೆಡಿಎಸ್​ನ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಅಮುಲ್ ರಾಜ್ಯ ಪ್ರವೇಶವನ್ನು ವಿರೋಧಿಸುತ್ತಿದ್ದಾರೆ. ಆದರೆ ಆಗಲೇ ಅಮುಲ್​ ರಾಜ್ಯ ಮಾರುಕಟ್ಟೆಗೆ ಪ್ರವೇಶ ಮಾಡಿದ್ದು ಇದನ್ನು ಯಾವ ರೀತಿ ಪರಿಣಾಮ ಬೀರಲಿದೆ ಎಂಬ ಚರ್ಚೆ, ಪರ ವಿರೋಧದ ಮಾತುಗಳು ದಂಡಿಯಾಗಿ ಕೇಳಿ ಬರುತ್ತಿವೆ.

Amul
ಅಮುಲ್

ಕನ್ನಡಿಗರೇ ಎಚ್ಚರ- ಸಿದ್ದರಾಮಯ್ಯ ಟ್ವೀಟ್​: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಕರ್ನಾಟಕದಲ್ಲಿ ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದ ಬ್ಯಾಂಕುಗಳನ್ನು ತಿಂದು ಮುಕ್ಕಿದ್ದಾಯಿತು. ಈಗ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ಆಪೋಶನ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್​ ಶಾ ಸಂಚು ಹೂಡಿದ್ದಾರೆ. ಕನ್ನಡಿಗರೇ ಎಚ್ಚರ!. ಕೆಎಂಎಫ್ ಮತ್ತು ಅಮುಲ್ ಸಂಸ್ಥೆಗಳ ವಿಲೀನದ ಬಗ್ಗೆ ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಪ್ರಸ್ತಾಪ ಮಾಡಿದ ದಿನದಿಂದ ರಾಜ್ಯದ ಹೈನು ಉದ್ಯಮಕ್ಕೆ ಗರ ಬಡಿದಿದೆ. ವಿಲೀನದ ಪ್ರಸ್ತಾವಕ್ಕೆ ಕನ್ನಡಿಗರ ತೀವ್ರ ವಿರೋಧದ ಹಿನ್ನೆಲೆ ಹಿಂಬಾಗಿಲಿನಿಂದ ಅಮುಲ್ ಪ್ರವೇಶಿಸುತ್ತಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರು ಮಾರುಕಟ್ಟೆಯಲ್ಲಿ ಮಾಯವಾಗುತ್ತಿದೆ. ಇದೇ ವೇಳೆ ಅಮುಲ್ ಉತ್ಪನ್ನಗಳ ಮಾರಾಟ ಭರದಿಂದ ಪ್ರಾರಂಭವಾಗಿದೆ. ಸಚಿವ ಅಮಿತ್ ಶಾ ನೇರ ಉಸ್ತುವಾರಿಯಲ್ಲಿಯೇ ಇವೆಲ್ಲ ನಡೆಯುತ್ತಿದೆ ಎನ್ನುವುದು ನಿಸ್ಸಂಶಯ. ಗುಜರಾತ್ ಮೂಲದ ಅಮುಲ್ ಹಾಲು ಮತ್ತು ಮೊಸರು ಮಾರಾಟದ ಮೂಲಕ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸಲು ಹಿಂದೆಯೂ ಪ್ರಯತ್ನಿಸಿತ್ತು. ಅದಕ್ಕೆ ನಾವು ಅವಕಾಶ ಕೊಡಲಿಲ್ಲ. ಈಗ ರಾಜ್ಯದ ಬಿಜೆಪಿ ಸರ್ಕಾರ ಕೆಂಪುಕಂಬಳಿ ಹಾಸಿ ಸ್ವಾಗತಿಸಿದೆ" ಎಂದು ವಿರೋಧಿಸಿದ್ದಾರೆ.

  • ಗುಜರಾತ್ ಮೂಲದ ಅಮುಲ್ ಹಾಲು ಮತ್ತು ಮೊಸರು ಮಾರಾಟದ ಮೂಲಕ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸಲು ಹಿಂದೆಯೂ ಪ್ರಯತ್ನಿಸಿತ್ತು. ಅದಕ್ಕೆ ನಾವು ಅವಕಾಶ ಕೊಡಲಿಲ್ಲ. ಈಗ @BJP4Karnataka ಕೆಂಪುಕಂಬಳಿ ಹಾಸಿ ಸ್ವಾಗತಿಸಿದೆ.
    4/11#SaveNandini

    — Siddaramaiah (@siddaramaiah) April 7, 2023 " class="align-text-top noRightClick twitterSection" data=" ">

ಕೆಎಂಎಫ್ ಕತ್ತು ಹಿಚುಕುತ್ತಿದೆ - ಹೆಚ್​ಡಿಕೆ ಗರಂ: ಮಾಜಿ ಸಿಎಂ ಹೆಚ್​ಡಿಕೆ ಸಹ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ’’ಕನ್ನಡಿಗರ ಜೀವನಾಡಿ ನಂದಿನಿಯನ್ನು ಮುಗಿಸಲು ಈಗ ನಡೆದಿದೆ 3ನೇ ಸಂಚು. ತನ್ನ ಏಕೈಕ ಪ್ರತಿಸ್ಪರ್ಧಿ ನಂದಿನಿಗೆ ಕರ್ನಾಟಕದಲ್ಲೇ ಅಡ್ಡಿ ಮಾಡಬೇಕೆನ್ನುವುದು ಅಮುಲ್ ದುರಾಲೋಚನೆ. 'ಒಂದು ದೇಶ, ಒಂದು ಅಮುಲ್, ಒಂದೇ ಹಾಲು, ಒಂದೇ ಗುಜರಾತ್ʼ ಎನ್ನುವುದು ಕೇಂದ್ರ ಸರ್ಕಾರದ ಅಧಿಕೃತ ನೀತಿಯಂತಿದೆ. ಅದಕ್ಕೆ ಅಮುಲ್​​​ಗೆ ಒತ್ತಾಸೆಯಾಗಿ ನಿಂತು ಕೆಎಂಎಫ್ ಕತ್ತು ಹಿಚುಕುತ್ತಿದೆ. ಈಗ ಅಮುಲ್ ಹಿಂಬಾಗಿಲ ಮೂಲಕ ಒಳನುಗ್ಗುತ್ತಿದೆ. ಹೈನುಗಾರಿಕೆಯ ಮೂಲ ಉತ್ಪನ್ನ ಹಾಲನ್ನು ತನ್ನ ಬ್ರ್ಯಾಂಡ್ʼನಲ್ಲಿಯೇ ಕರ್ನಾಟಕದಲ್ಲಿಯೇ ಮಾರಲು ಹೊರಟಿರುವ ಅಮುಲ್, ನಂದಿನಿಯನ್ನು ಆಪೋಶನ ತೆಗೆದುಕೊಳ್ಳುವುದು ಖಚಿತ. ವಿಲೀನಕ್ಕೆ, ಹಿಂದಿ ಹೇರಿಕೆಗೆ ಪ್ರಬಲ ಪ್ರತಿರೋಧ ಒಡ್ಡುತ್ತಿರುವ ಕನ್ನಡಿಗರು ಮತ್ತು ಕೆಎಂಎಫ್ʼನ ಕಥೆ ಮುಗಿಸಲೇಬೇಕು ಎಂದು ಅಮುಲ್ ಪಣ ತೊಟ್ಟಂತಿದೆ‘‘ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮೇಲೆ ಅಮುಲ್​ ಹೇರಿಕೆ- ಡಿಕೆಶಿ: "ಕರ್ನಾಟಕದ ಮೇಲೆ ಅಮುಲ್ ಹೇರಿಕೆ ಮಾಡಲಾಗುತ್ತಿದೆ. ಇದರ ಹಿಂದೆ ಗುಜರಾತ್ ಬೆಳೆಯಬೇಕು, ಕರ್ನಾಟಕ ಮುಚ್ಚಬೇಕೆಂಬ ಆಶಯ ಇದ್ದಂತಿದೆ" ಎಂದು ಹೇಳಿದ್ದಾರೆ. ರಾಜ್ಯದೆಲ್ಲೆಡೆ ಕೆಎಂಎಫ್ ನಂದಿನಿಯ ಹಾಲು, ತುಪ್ಪ, ಬೆಣ್ಣೆ ಸಮರ್ಪಕವಾಗಿ ಸಿಗದೇ ಇರುವ ಸನ್ನಿವೇಶದಲ್ಲಿ ಗುಜರಾತ್​​ನ ಅಮುಲ್ ಸಂಸ್ಥೆಯು ಆನ್ ಲೈನ್ ಮಾರುಕಟ್ಟೆಗೆ ಮುಂದಾಗಿರುವ ಈ ಬೆಳವಣಿಗೆ ಏನನ್ನು ಸೂಚಿಸುತ್ತಿದೆ?. ನಂದಿನಿ ಹಾಲು ನಂಬಿ ಬದುಕುತ್ತಿರುವ ಅಸಂಖ್ಯ ಕನ್ನಡಿಗರ ಕೆಲಸದ ಮೇಲೆ ಇದು ಕರಿನೆರಳಿನಂತೆ ಭಾಸವಾಗುವುದಿಲ್ಲವೆ‘‘ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ

  • ಇಲ್ಲಿನ ಡಬಲ್ ಎಂಜಿನ್ @BJP4Karnataka ಸರಕಾರ ಈಗಲಾದರೂ ಎಚ್ಚೆತ್ತು ತಕ್ಷಣ ರಾಜ್ಯದಲ್ಲಿ ಅಮುಲ್ʼನ ಪ್ಯಾಕೆಟ್ ಹಾಲಿನ ಮಾರಾಟಕ್ಕೆ ತಡೆ ಒಡ್ಡಬೇಕು. ಕೇಂದ್ರದ ಒತ್ತಾಸೆಯಿಂದ ಅಮುಲ್ ಕದ್ದುಮುಚ್ಚಿ ಹಿಂಬಾಗಿಲ ಮೂಲಕ ಬರುತ್ತಿದೆ. ಕೆಎಂಎಫ್ ಮತ್ತು ರೈತರ ಕುತ್ತಿಗೆಗೆ ಕುಣಿಕೆ ಬಿಗಿಯುತ್ತಿರುವ ಅಮುಲ್ ವಿರುದ್ಧ ಕನ್ನಡಿಗರು ಸಿಡಿದೇಳಬೇಕು. 10/10

    — ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) April 8, 2023 " class="align-text-top noRightClick twitterSection" data=" ">

ನಂದಿನಿಯನ್ನು ಉಳಿಸಿ, ಬಿಜೆಪಿ ಧಿಕ್ಕರಿಸಿ: "ಕರ್ನಾಟಕ ಹಾಲು ಒಕ್ಕೂಟವನ್ನು ಗುಜರಾತ್‌ನ ಅಮುಲ್‌ಗೆ ಮಾರಾಟ ಮಾಡುವ ಬಿಜೆಪಿ ಸಂಚು ಈಗ ಸ್ಪಷ್ಟವಾಗಿದೆ. ಮೊದಲನೇಯದಾಗಿ ಅಮಿತ್ ಶಾ ಅವರು ಬಹಿರಂಗವಾಗಿ ಹೇಳಿದರು. ಇದೀಗ ಶೋಭಾ ಕರಂದ್ಲಾಜೆ ಬೆಂಬಲಿಸಿದ್ದಾರೆ. ನಂದಿನಿ ಸೋಲು, ಅಮುಲ್ ಗಳಿಕೆ, ಬೊಮ್ಮಾಯಿ ಸರ್ಕಾರ 'ಮೂಕ'ವಾಗಿ ಉಳಿದಿದೆ. ನಂದಿನಿಯನ್ನು ಉಳಿಸಿ, ಬಿಜೆಪಿಯನ್ನು ಧಿಕ್ಕರಿಸಿ" ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮೂಲಕ ಕರೆಕೊಟ್ಟಿದ್ದಾರೆ.

ಹೋರಾಟ ಅನಿವಾರ್ಯ - ಲಕ್ಷ್ಮಣ್​: "ಒಂದೆಡೆ ನಂದಿನಿ ಉತ್ಪನ್ನ ಸಿಗದಂತೆ ಮಾಡಿರುವ ಬಿಜೆಪಿ ಸರ್ಕಾರ ಕೃತಕ ಅಭಾವ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಅಮುಲ್ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಉದ್ದೇಶ ಪೂರ್ವಕವಾಗಿ ಕೃತಕ ಅಭಾವ ಸೃಷ್ಟಿಸಿ ಅಮುಲ್ ಪ್ರವೇಶಕ್ಕೆ ಅವಕಾಶ ಮಾಡಿಕೊಡುವ ವ್ಯವಸ್ಥಿತ ಹುನ್ನಾರ ಇದಾಗಿದೆ. ರಾಜ್ಯದಲ್ಲಿ ಹಿಂದಿ ಹೇರಿಕೆ ಪ್ರಯತ್ನದ ಜತೆ ಇದೀಗ ಹಿಂದಿ ರಾಜ್ಯದ ಉತ್ಪನ್ನವನ್ನು ಸ್ಪರ್ಧೆಗೆ ಬಿಡಲಾಗುತ್ತಿದೆ. ಕೆಎಂಎಫ್​ ಕೈಕಾಲು ಕಟ್ಟಿಹಾಕಿ ಹೋರಾಟಕ್ಕಿಳಿಸಲಾಗುತ್ತಿದೆ. ಇಲ್ಲಿ ಗೆಲ್ಲಲು ಹೇಗೆ ಸಾಧ್ಯ? ರಾಜ್ಯದ ರೈತರ ಜೀವನಾಡಿಯಾಗಿದ್ದ ನಂದಿನಿ ಯನ್ನು ವ್ಯವಸ್ಥಿತವಾಗಿ ಸಾಯಿಸುವ ಯತ್ನ ಮಾಡಲಾಗುತ್ತಿದೆ. ರಾಜ್ಯದಲ್ಲಿ ರಾಜಕೀಯ ಅಸ್ಥಿತ್ವ ಉಳಿದರೆ ಸಾಕು ಎನ್ನುತ್ತಿರುವ ಬಿಜೆಪಿ ನಾಯಕರು ಇಲ್ಲಿನ ನೆಲದ ಅಭಿಮಾನ ತ್ಯಾಗ ಮಾಡಿದ್ದಾರೆ. ಕಿಂಚಿತ್ತೂ ಯೋಚಿಸದೇ ಗುಜರಾತಿನ ವ್ಯಾಪಾರಿ ಸಂಸ್ಥೆಗೆ ರಾಜ್ಯದಲ್ಲಿ ಮುಕ್ತ ಆಹ್ವಾನ ನೀಡಿದ್ದಾರೆ. ನಂದಿನ ಪಥನಕ್ಕೆ ಬಿಜೆಪಿ ಸರ್ಕಾರವೇ ಅವಕಾಶ ಮಾಡಿಕೊಡುತ್ತಿದೆ. ಇದಕ್ಕೆ ಪ್ರತಿಪಕ್ಷವಾಗಿ ನಾವು ಜವಾಬ್ದಾರಿ ಅರಿತು ಹೋರಾಡುತ್ತೇವೆ. ಅಮುಲ್ ನಮ್ಮ ರಾಜ್ಯಕ್ಕೆ ಬೇಡ ಎಂಬ ಕೂಗು ಎಬ್ಬಿಸಿದ್ದು, ಇದಕ್ಕೆ ಬಲ ತುಂಬುತ್ತೇವೆ" ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.

ನಂದಿನಿ ಕರ್ನಾಟಕದ ಹೆಮ್ಮೆ: ನಂದಿನಿ ಬ್ರ್ಯಾಂಡ್ ಕರ್ನಾಟಕದ ಹೆಮ್ಮೆ, ಅದು ಮತ್ತಷ್ಟು ಬೆಳೆಯಬೇಕೆನ್ನುವುದು ರಾಜ್ಯ ಸರ್ಕಾರದ ಪ್ರಮುಖ ಆದ್ಯತೆ. ರಾಜ್ಯದಲ್ಲಿ ಅಮುಲ್ ಹಾಲು ಮತ್ತು ಮೊಸರು ಖರೀದಿ ಜನರ ಆಯ್ಕೆಗೆ ಬಿಟ್ಟ ವಿಚಾರ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದರು.

ಒಟ್ಟಾರೆ ರಾಜ್ಯದಲ್ಲಿ ನಂದಿನಿ ಉತ್ಪನ್ನ ಕೃತಕ ಅಭಾವ ಸೃಷ್ಟಿಸಿ ಅದಕ್ಕೆ ಪರ್ಯಾಯವಾಗಿ ಅಮುಲ್ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಮೂಲಕ ದೇಶದಲ್ಲೇ ಎರಡನೇ ಸ್ಥಾನದಲ್ಲಿರುವ ನಂದಿನಿಯನ್ನು ಮಣಿಸಿ, ಮೊದಲ ಸ್ಥಾನದಲ್ಲಿರುವ ಅಮುಲ್​ ಅನ್ನು ಇನ್ನಷ್ಟು ಬಲಪಡಿಸುವ ಯತ್ನ ನಡೆಯುತ್ತಿದೆ ಎಂದು ಪ್ರತಿಪಕ್ಷ ನಾಯಕರು ಆರೋಪಿಸುತ್ತಿದ್ದಾರೆ. ರಾಜ್ಯದ ಜನಪ್ರಿಯ ಉತ್ಪನ್ನ ನಂದಿನಿಯನ್ನು ಮಣಿಸುವ ನಿಜವಾದ ಪ್ರಯತ್ನ ನಡೆಯುತ್ತಿದೆಯಾ ಅಥವಾ ರಾಜಕೀಯ ಮೇಲಾಟಕ್ಕೆ ಈ ರೀತಿ ಬಳಸಲಾಗುತ್ತಿದೆಯಾ ಅನ್ನುವುದಕ್ಕೆ ಚುನಾವಣೆ ಬಳಿಕವೇ ಉತ್ತರ ಸಿಗಬೇಕಿದೆ.

ಇದನ್ನೂ ಓದಿ: ಕನ್ನಡಿಗರು ಅಮುಲ್ ಉತ್ಪನ್ನ ಖರೀದಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು: ಸಿದ್ದರಾಮಯ್ಯ

Last Updated :Apr 8, 2023, 1:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.