ETV Bharat / state

ಸನಾತನ ಧರ್ಮ ಕುರಿತು ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ.. ದೇಶದ ಜನತೆಯ ಕ್ಷಮೆಯಾಚಿಸುವಂತೆ ಅಶ್ವತ್ಥ್​ ನಾರಾಯಣ್ ಆಗ್ರಹ

author img

By ETV Bharat Karnataka Team

Published : Sep 3, 2023, 6:16 PM IST

ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ದುರಹಂಕಾರದ ಹೇಳಿಕೆಯಾಗಿದೆ ಎಂದು ಮಾಜಿ ಡಿಸಿಎಂ ಡಾ. ಅಶ್ವತ್ಥ್​ ನಾರಾಯಣ್​ ಖಂಡಿಸಿದ್ದಾರೆ.

ಮಾಜಿ ಡಿಸಿಎಂ ಡಾ ಅಶ್ವತ್ಥ್​ ನಾರಾಯಣ್
ಮಾಜಿ ಡಿಸಿಎಂ ಡಾ ಅಶ್ವತ್ಥ್​ ನಾರಾಯಣ್

ಬೆಂಗಳೂರು : ಸನಾತನ ಧರ್ಮದ ಕುರಿತು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಖಂಡನೀಯವಾಗಿದ್ದು, ಕೂಡಲೇ ಅವರು ದೇಶದ ಕ್ಷಮೆಯಾಚಿಸಬೇಕು ಎಂದು ಮಾಜಿ ಡಿಸಿಎಂ ಡಾ ಅಶ್ವತ್ಥ್​ನಾರಾಯಣ್​ ಆಗ್ರಹಿಸಿದ್ದಾರೆ.

ಮಲ್ಲೇಶ್ವರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ದುರಹಂಕಾರದ ಹೇಳಿಕೆಯಾಗಿದೆ. ಅವರ ಹೇಳಿಕೆ ಅಜ್ಞಾನದಿಂದ ಕೂಡಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಪಕ್ಷದಿಂದ ಈ ಸಚಿವನ ಉಚ್ಛಾಟನೆ ಮಾಡಬೇಕು. ತಮಿಳುನಾಡು ಡಿಎಂಕೆ ಸರ್ಕಾರ ವಜಾ ಆಗಬೇಕು. ಡಿಎಂಕೆ ಪಕ್ಷದ ಮಾನ್ಯತೆಯನ್ನು ರದ್ದು ಮಾಡಬೇಕಿದೆ ಎಂದು ಹೇಳಿದರು.

ಈ ಸಚಿವರ ದುರಹಂಕಾರದ ಹೇಳಿಕೆಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಕೂಡಲೇ ಉದಯನಿಧಿ ಸ್ಟಾಲಿನ್ ತಮ್ಮ ಈ ಹೇಳಿಕೆಯನ್ನು ವಾಪಸ್ ಪಡೆದು, ದೇಶದ ಜನರ ಕ್ಷಮೆ ಕೇಳಬೇಕು ಎಂದು ಅಶ್ವತ್ಥ್​ನಾರಾಯಣ ಒತ್ತಾಯಿಸಿದರು.

ಇದನ್ನೂ ಓದಿ: ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ವಾಪಸ್ ಬೇಡ: ಸಂತ ಸಮಾವೇಶದ ನಿರ್ಣಯ

ಎಲ್ಲದಕ್ಕೂ ವಿರೋಧ ಮಾಡೋದು ಸರಿಯಲ್ಲ: ಒಂದು ದೇಶ, ಒಂದು ಚುನಾವಣೆ ಅನ್ನೋದು ಜನರ ಅಪೇಕ್ಷೆ. ಇದಕ್ಕೆ ಇಂಡಿಯ ಒಕ್ಕೂಟದ ವಿರೋಧ ಸರಿಯಲ್ಲ. ಅವರೂ ಸಮಿತಿಯಲ್ಲಿ ಇದ್ದಾರೆ. ಅವರ ಅಭಿಪ್ರಾಯವನ್ನು ಅವರು ಸಲ್ಲಿಸಲಿ, ನಾಳೆಯೇ ಒಂದು ದೇಶ ಒಂದು ಚುನಾವಣೆ ಆಗಲ್ಲ. ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ಶುರುವಾಗಿವೆ. ಎಲ್ಲದಕ್ಕೂ ವಿರೋಧ ಮಾಡೋದು ಸರಿಯಲ್ಲ. ರಾಜಕಾರಣ ಮಾಡೋದು ಸರಿಯಲ್ಲ ಎಂದರು.

ವರ್ಗಾವಣೆಗೆ ಸಿಎಂ ಅನುಮತಿ ಕಡ್ಡಾಯ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥ್​ನಾರಾಯಣ್​, ಸಿದ್ದರಾಮಯ್ಯ ಇನ್ನೂ ನಿದ್ರೆಯಿಂದ ಎದ್ದಿಲ್ಲ. ಎಲ್ಲಾ ಕಡೆ ಕೊಲೆ, ದರೋಡೆ ನಡೆಯುತ್ತಿದೆ. ನೂರು ದಿನಗಳಲ್ಲಿ ನೂರು ಅವತಾರ ಇವರದ್ದು. ಕೆಂಪೇಗೌಡ ಜಯಂತಿ ಮಾಡುವುದಕ್ಕೂ ಅವರಿಗೆ ಸಮಯ ಇಲ್ಲ. ಕಾವೇರಿ ಪ್ರದೇಶದಿಂದ ಬಂದ ಸಿದ್ದರಾಮಯ್ಯ, ಡಿಕೆಶಿ ಅವರು ಎಲ್ಲಿದ್ದೀರಾ? ಅಂತಾ ಕೇಳಬೇಕಾಗಿದೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಸಂಪೂರ್ಣ ಕಡೆಗಣನೆ, ತರಾತುರಿಯಲ್ಲಿ ಸರ್ವಪಕ್ಷ ಸಭೆ : ಅಶ್ವತ್ಥ್​ನಾರಾಯಣ್

ಬ್ಲಾಕ್‌ಮೇಲ್ ವಿಫಲ ಆಗುತ್ತದೆ: ಬಿ. ಸಿ ಪಾಟೀಲ್, ರಾಜುಗೌಡರಿಂದ ಡಿಕೆಶಿ ಭೇಟಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥ್​ನಾರಾಯಣ್​, ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದವರಿದ್ದಾರೆ. ರಾಜಕೀಯದಲ್ಲಿ ಒಬ್ಬರಿಗೊಬ್ಬರು ಪರಿಚಯ ಇದ್ದೇವೆ ಮತ್ತು ಇರುತ್ತೇವೆ. ಗಳೆಯರಾಗಿಯೂ ಇರುತ್ತೇವೆ. ವಿಪಕ್ಷದವರೂ ಸಿಎಂ, ಡಿಸಿಎಂ ಭೇಟಿ ಮಾಡಲೇಬೇಕಾಗುತ್ತದೆ. ಇಂಥ ಭೇಟಿಗಳಿಗೆಲ್ಲ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಆದರೆ, ಕಾಂಗ್ರೆಸ್​ಗೆ ಭವಿಷ್ಯ ಇಲ್ಲ. ಕಾಂಗ್ರೆಸ್​ನವರೇ ಕೆಲವರಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಅವರ ಬ್ಲಾಕ್‌ಮೇಲ್ ವಿಫಲ ಆಗುತ್ತದೆ ಎಂದು ಆಪರೇಷನ್ ಹಸ್ತ ಸಫಲವಾಗಲ್ಲ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ: ಶೀಘ್ರದಲ್ಲೇ ಕಾಂಗ್ರೆಸ್ ಸರ್ಕಾರ ಪತನ: ಮಾಜಿ ಸಚಿವ ಅಶ್ವತ್ಥ ನಾರಾಯಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.