ETV Bharat / state

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಸಂಪೂರ್ಣ ಕಡೆಗಣನೆ, ತರಾತುರಿಯಲ್ಲಿ ಸರ್ವಪಕ್ಷ ಸಭೆ : ಅಶ್ವತ್ಥ್​ನಾರಾಯಣ್

author img

By ETV Bharat Karnataka Team

Published : Aug 23, 2023, 6:33 PM IST

ಅಶ್ವತ್ಥ್​ನಾರಾಯಣ್
ಅಶ್ವತ್ಥ್​ನಾರಾಯಣ್

ತಮಿಳುನಾಡಿಗೆ ನೀರು ಬಿಟ್ಟು ಈಗ ಸರ್ವಪಕ್ಷ ಸಭೆ ಕರೆದಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್​ ನಾರಾಯಣ್​ ಅವರು ಟೀಕಿಸಿದ್ದಾರೆ.

ಬೆಂಗಳೂರು : ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ಸಂಪೂರ್ಣವಾಗಿ ಕಡೆಗಣಿಸಿದೆ. ತಮಿಳುನಾಡಿಗೆ ನೀರು ಬಿಟ್ಟ ಬಳಿಕ ಇದೀಗ ತರಾತುರಿಯಲ್ಲಿ ಸರ್ವಪಕ್ಷ ಸಭೆ ಕರೆದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್​ ನಾರಾಯಣ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಊರು ಕೊಳ್ಳೆ ಹೊಡೆದ ಮೇಲೆ ಡಿಡ್ಡಿ ಬಾಗಿಲು ಹಾಕಿದ ರೀತಿ ರಾಜ್ಯ ಸರ್ಕಾರದ ವರ್ತನೆ ಇದೆ ಎಂದು ಅವರು ಟೀಕಿಸಿದ್ದಾರೆ. ಇಂದಿನ ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ಮುಖಂಡರು, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ ವಿ ಸದಾನಂದಗೌಡ, ಮತ್ತಿತರ ಪ್ರಮುಖರು ಭಾಗವಹಿಸಿ ಪಕ್ಷದ ನಿಲುವನ್ನು ಸಮರ್ಥವಾಗಿ ಮಂಡಿಸಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ವಿವರ ನೀಡಿದ್ದಾರೆ.

ಸರ್ವಪಕ್ಷ ಸಭೆಗೆ ವಿಳಂಬ - ಬಿ. ಎಸ್ ಯಡಿಯೂರಪ್ಪ ಆಕ್ಷೇಪ: ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಹಿರಿಯ ನಾಯಕ ಬಿ. ಎಸ್ ಯಡಿಯೂರಪ್ಪ, ತಮಿಳುನಾಡಿಗೆ ನೀರನ್ನು ಬಿಟ್ಟು ಇದೀಗ ಸರ್ವ ಪಕ್ಷ ಸಭೆ ಕರೆದಿರುವುದು ಸರಿಯಲ್ಲ. 25ನೇ ತಾರೀಖು ಸುಪ್ರೀಂ ಕೋರ್ಟ್‍ನಲ್ಲಿ ಸಮರ್ಥವಾಗಿ ರಾಜ್ಯದ ಪರವಾಗಿ ವಾದ ಮಂಡನೆ ಮಾಡಬೇಕು. ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲವೆಂದು ಮನದಟ್ಟು ಮಾಡಿಕೊಡಬೇಕು ಎಂದು ಆಗ್ರಹಿಸಿದರು ಎಂದು ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.

ಮೇಕೆದಾಟು ಕಾನೂನು ತೊಡಕು ನಿವಾರಿಸಿ- ಡಿವಿಎಸ್: ಮಾಜಿ ಸಿಎಂ ಡಿ ವಿ ಸದಾನಂದಗೌಡ ಮಾತನಾಡಿ, ನೀರು ಬಿಟ್ಟ ಬಳಿಕ ಸರ್ವಪಕ್ಷ ಸಭೆ ಕರೆದಿರುವುದು ಸರಿಯಲ್ಲ. ಮೇಕೆದಾಟು ಯೋಜನೆ ಬಗ್ಗೆ ಕಾನೂನು ತೊಡಕುಗಳನ್ನು ನಿವಾರಿಸಿಕೊಂಡು ಮುಂದೆ ಸಾಗಬೇಕಿದೆ. ತಮಿಳುನಾಡಿನಲ್ಲಿ ಇರುವ ಡ್ಯಾಂಗಳ ನೀರಿನ ವಿವರ, ಅಲ್ಲಿನ ರೈತರ ಬೆಳೆ ಪದ್ಧತಿ, ಮೂರು ಬೆಳೆಯನ್ನ ಬೆಳೆಯುತ್ತಿರುವುದರ ಬಗ್ಗೆ ಅವರು ತಿಳಿಸಿದರು. ನಮ್ಮ ರೈತರು ಕೇವಲ ಎರಡು ಬೆಳೆ ಮಾತ್ರ ಬೆಳೆಯುತ್ತಿರುವುದರ ಬಗ್ಗೆ ಸುಪ್ರೀಂ ಕೋರ್ಟಿಗೆ ಮನದಟ್ಟು ಮಾಡಿಕೊಟ್ಟು, ಮೇಕೆದಾಟು ಯೋಜನೆ ಬಗ್ಗೆ ಅನುಮತಿ ಪಡೆಯಬೇಕು ಎಂದು ಸಲಹೆ ನೀಡಿದರು ಎಂದು ಅಶ್ವತ್ಥ್​ನಾರಾಯಣ್ ತಿಳಿಸಿದ್ದಾರೆ.

ಐಸಿಸಿ ಸಭೆ ಕರೆದಿಲ್ಲವೇಕೆ? - ಬಸವರಾಜ ಬೊಮ್ಮಾಯಿ : ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನೀರಾವರಿ ಸಭೆಯನ್ನೇ ಕರೆದಿಲ್ಲ. ಐಸಿಸಿ ಸಭೆಯಲ್ಲಿ ಕರ್ನಾಟಕದ ರೈತರಿಗೆ ರಾಗಿ ಬೆಳೆಯಿರಿ, ಹುರುಳಿ ಬೆಳೆಯಿರಿ ಎಂದು ಹೇಳಿ ತಮಿಳುನಾಡು ರೈತರಿಗೆ ನೀರು ಕೊಟ್ಟಿದ್ದೀರಾ? ಎಂದು ಆಕ್ಷೇಪಿಸಿದರು. ಜೂನ್, ಜುಲೈ, ಆಗಸ್ಟ್ ತಿಂಗಳಿನಲ್ಲಿ ತಮಿಳುನಾಡಿಗೆ ಕೊಡಬೇಕಾಗಿರುವ ನೀರಿಗಿಂತಲೂ ಕಡಿಮೆ ನೀರನ್ನು ಕೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಆದರೆ, ಕರ್ನಾಟಕದ ರೈತರಿಗೆ ಬಿಟ್ಟಿರುವ ನೀರು ಎಷ್ಟು? ಎಂದು ಹೇಳುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು ಎಂದು ಸರ್ವಪಕ್ಷ ಸಭೆಯಲ್ಲಿ ವ್ಯಕ್ತವಾದ ಬಿಜೆಪಿ ನಾಯಕರ ನಿಲುವುಗಳ ಕುರಿತು ವಿವರ ನೀಡಿದರು.

ಇದನ್ನೂ ಓದಿ: ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ, ಕಾವೇರಿ ವಿವಾದ.. ಸಂಕಷ್ಟ ಹಂಚಿಕೆ ಸೂತ್ರ ಅಗತ್ಯ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.