ETV Bharat / state

ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ, ಕಾವೇರಿ ವಿವಾದ.. ಸಂಕಷ್ಟ ಹಂಚಿಕೆ ಸೂತ್ರ ಅಗತ್ಯ: ಸಿಎಂ ಸಿದ್ದರಾಮಯ್ಯ

author img

By ETV Bharat Karnataka Team

Published : Aug 23, 2023, 4:04 PM IST

ಕಾವೇರಿ, ಮಹದಾಯಿ, ಮೇಕೆದಾಟು ವಿಚಾರಕ್ಕೆ ಸಂಬಂಧಿಸಿದಂತೆ ಸರ್ವಪಕ್ಷ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಚಿಂತನೆ ಇದೆ ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

cauvery-water-dispute-all-party-delegation-will-meet-pm-says-cm-siddaramaih
ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ, ಕಾವೇರಿ ವಿವಾದ: ಸಂಕಷ್ಟ ಹಂಚಿಕೆ ಸೂತ್ರ ಅಗತ್ಯ: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮೇಕೆದಾಟು, ಕಾವೇರಿ, ಮಹದಾಯಿ, ಕೃಷ್ಣಾ ಸಮಸ್ಯೆಗಳ ಕುರಿತು ಪ್ರಧಾನ ಮಂತ್ರಿಗಳ ಬಳಿ ಸರ್ಕಾರದ ಸರ್ವಪಕ್ಷ ನಿಯೋಗ ತೆರಳೋಣ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕಾವೇರಿ, ಮೇಕೆದಾಟು ಮತ್ತು ಮಹದಾಯಿ ಜಲ ವಿವಾದಗಳ ಕುರಿತಂತೆ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಸರ್ವಪಕ್ಷ ಸಭೆಯ ನಂತರ ಮಾಧ್ಯಮಗಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹಿತ ಕಾಪಾಡಲು ನಾವು ಎಂದಿಗೂ ಬದ್ಧರಾಗಿರುತ್ತೇವೆ. ಐದಾರು ವರ್ಷಗಳಿಗೊಮ್ಮೆ ಮಳೆಯ ಕೊರತೆಯಿಂದಾಗಿ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಂಕಷ್ಟ ಎದುರಾಗುತ್ತದೆ. ಈ ಕುರಿತು ಸಂಕಷ್ಟ ಹಂಚಿಕೆ ಸೂತ್ರ ನಿರ್ದಿಷ್ಟ ಪಡಿಸಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್​ನಲ್ಲಿ ವಕೀಲರು ಸಮರ್ಥವಾಗಿ ವಾದ ಮಂಡಿಸಬೇಕು. ಇದಕ್ಕೆ ಸರ್ಕಾರ ಎಲ್ಲ ಅಗತ್ಯ ಬೆಂಬಲ ನೀಡಲಿದೆ ಎಂದು ತಿಳಿಸಿದರು.

ಮೇಕೆದಾಟು ಯೋಜನೆ.. ತಮಿಳುನಾಡಿಗೆ ಅನುಕೂಲ : ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಸಂಕಷ್ಟ ಹಂಚಿಕೆ ಸೂತ್ರದ ಕುರಿತು ತೀರ್ಮಾನ ಆಗಲೇಬೇಕು. ಇಂತಹ ಸಂಕಷ್ಟದ ಸಮಯದಲ್ಲಿ 67 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯದ ಮೇಕೆದಾಟು ಸಮತೋಲನಾ ಜಲಾಶಯ ನಿರ್ಮಿಸಿದರೆ, ಅವರಿಗೆ ನೀರು ಬಿಡಲು ಅನುಕೂಲವಾಗುತ್ತದೆ. ಈ ಯೋಜನೆಗೆ ತಮಿಳುನಾಡು ವಿನಾಕಾರಣ ವಿರೋಧಿಸುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅಧಿಕಾರಿಗಳಿಂದ ಸಮರ್ಥ ವಾದ ಮಂಡನೆ : ಕಾವೇರಿ ವಿವಾದ ಹಳೆಯದು. ಸರ್ವೋಚ್ಛ ನ್ಯಾಯಾಲಯ ನಮಗೆ ತೀರ್ಪು ಕೊಟ್ಟ ನಂತರ 2018ರಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾಗಿದೆ. ಕಾವೇರಿ ನೀರು ನಿಯಂತ್ರಣಾ ಸಮಿತಿ ಸ್ಥಾಪನೆಯಾಗಿದೆ. ಇವರು ಅನೇಕ ಸಭೆಗಳನ್ನು ಮಾಡಿದ್ದಾರೆ. ಕಾವೇರಿ ಪ್ರಾಧಿಕಾರ 22 ಸಭೆ ಹಾಗೂ ನಿಯಂತ್ರಣ ಸಮಿತಿ 84 ಸಭೆ ನಡೆಸಿದೆ. ಈ ಸಮಿತಿಗಳಾದ ಮೇಲೆ, ರಾಜ್ಯದಲ್ಲಿ ಸಂಕಷ್ಟದ ದಿನಗಳು ಎದುರಾಗಿವೆ. ಆಗ ನಾವು ನಿಯಂತ್ರಣ ಸಮಿತಿ, ಪ್ರಾಧಿಕಾರದಲ್ಲಿ ಚರ್ಚಿಸಿ, ಅದರ ತೀರ್ಮಾನದಂತೆ ನಡೆದುಕೊಂಡ ಅನೇಕ ನಿದರ್ಶನಗಳಿವೆ ಎಂದರು.

ಕಾವೇರಿ ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಅಧಿಕಾರಿಗಳು ಸಂಕಷ್ಟದ ಬಗ್ಗೆ ಪ್ರತಿಪಾದನೆ ಮಾಡಿದ್ದಾರೆ. ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ವರ್ಷ ಮಳೆ ಕಡಿಮೆ ಆಯಿತು. ಜೂನ್‌ ಹಾಗೂ ಆಗಸ್ಟ್‌ ನಲ್ಲಿ ಮಳೆ ಕೊರತೆಯಾಗಿದೆ. ಇಲ್ಲಿಯವರೆಗೆ ನೀರು ಬಿಡಬೇಕಾಗಿದ್ದುದ್ದು 86.38 ಟಿಎಂಸಿ. ಆದರೆ 20ನೇ ತಾರೀಕಿನವರೆಗೆ ನೀರು ಬಿಟ್ಟಿರುವುದು 24 ಟಿಎಂಸಿ. ಅಂದರೆ ನಾವು ವಿರೋಧ ಮಾಡಿದ್ದೇವೆ. ವಾಸ್ತವವನ್ನು ಪ್ರಾಧಿಕಾರದ ಮುಂದೆ ಬಿಡಿಸಿಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.

ಮಳೆ ಕೊರತೆಯಿಂದಾಗಿ ಬೆಳೆಗಳಿಗೆ ನೀರು ಬಿಟ್ಟಿಲ್ಲ : ಕುಡಿಯುವ ನೀರಿಗೆ ನೀರು ಬೇಕಾಗುತ್ತದೆ ಎಂದು ವಿವರಿಸಲಾಗಿದೆ. ನಾವು ವಾದ ಮಾಡಿದ್ದರಿಂದಲೇ 15,000 ಕ್ಯೂಸೆಕ್​ ನೀರಿನಿಂದ 10,000 ಕ್ಯೂಸೆಕ್​ ನೀರಿಗೆ ಇಳಿಕೆ ಮಾಡಲಾಯಿತು. ಅದನ್ನೂ ಮರು ಪರಿಶೀಲನೆ ಮಾಡುವಂತೆ ಅರ್ಜಿ ಸಲ್ಲಿಸಿದೆವು. 15,000 ಕ್ಯೂಸೆಕ್​ ನೀರು ಕೊಡಲಾಗದು ಎಂದು ರಾಜ್ಯದ ಅಧಿಕಾರಿಗಳು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ವಾದ ಮಂಡಿಸುತ್ತಿರುವಾಗಲೇ ತಮಿಳುನಾಡಿದ ಅಧಿಕಾರಿಗಳು ಸಭಾತ್ಯಾಗ ಮಾಡಿದರು. ನಂತರ ಸುಪ್ರೀಂ ಕೋರ್ಟಿನಲ್ಲಿ ಮನವಿ ಸಲ್ಲಿಸಿದ್ದಾರೆ. ಆ. 25ರಂದು ಈ ಪ್ರಕರಣ ವಿಚಾರಣೆಗೆ ಬರಲಿದ್ದು, ಈ ವಿಷಯದಲ್ಲಿ ವಕೀಲರು ಸಮರ್ಥವಾಗಿ ವಾದ ಮಾಡುತ್ತಾರೆ ಎಂದರು.

ರಾಜಕೀಯ ಇಲ್ಲ : ಕರ್ನಾಟಕದ ನೆಲ, ಜಲ, ಗಡಿ, ಭಾಷೆಗಳ ಬಗ್ಗೆ ಮೊದಲಿನಿಂದಲೂ ಎಲ್ಲ ರಾಜಕೀಯ ಪಕ್ಷಗಳೂ ಒಕ್ಕೋರಲಿನಿಂದ ಮಾತನಾಡಿವೆ. ಈ ವಿಷಯಗಳಲ್ಲಿ ರಾಜಕೀಯವನ್ನು ಯಾರೂ ಮಾಡಿಲ್ಲ, ಮಾಡಲೂಬಾರದು. ಯಾಕೆಂದರೆ ನಾವೆಲ್ಲರೂ ರಾಜ್ಯದ ಏಳು ಕೋಟಿ ಜನರ ಹಿತ ಕಾಪಾಡಬೇಕಾಗಿದೆ. ನಾವು ಆಡಳಿತ ಪಕ್ಷದವರಾಗಲಿ, ವಿರೋಧ ಪಕ್ಷದವರಾಗಲಿ ರಾಜ್ಯದ ಹಿತ ಕಾಪಾಡುವುದು ಎಲ್ಲರ ಜವಾಬ್ದಾರಿ. ಹಾಗಾಗಿಯೇ ರಾಜಕೀಯ ಮಾಡಿಲ್ಲ ಎಂದು ತಿಳಿಸಿದರು.

ಸಭೆಯ ಪ್ರಾರಂಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌, ನೀರಾವರಿ ವಿಷಯದಲ್ಲಿ ರಾಜ್ಯದ ಹಿತ ರಕ್ಷಣೆಯಲ್ಲಿ ಯಾವುದೇ ರಾಜಿ ಇಲ್ಲ. ಸರ್ಕಾರದ ಕಾನೂನು ಹೋರಾಟ ಮುಂದುವರೆಯಲಿದ್ದು, ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳ ಮುಖಂಡರ ಸಹಕಾರ ಕೋರಿದರು. ಕರ್ನಾಟಕ ಮತ್ತು ಕೇರಳದ ಕಾವೇರಿ ಕಣಿವೆಯ ಪ್ರದೇಶದಲ್ಲಿ ನೈಋತ್ಯ ಮಾನ್ಸೂನ್‌ ವೈಫಲ್ಯದಿಂದಾಗಿ 2023-24ರ ಜಲ ವರ್ಷವು ಸಂಕಷ್ಟದ ವರ್ಷವಾಗಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿಯು ತನ್ನ ಸಭೆಯಲ್ಲಿ ಜೂನ್​ವರೆಗಿನ ಮಳೆಯ ಕೊರತೆಯನ್ನು ಗಮನಿಸಿದೆ. ಆಗಸ್ಟ್‌ 10 ರಂದು 15,000 ಕ್ಯೂಸೆಕ್‌ ನೀರು ಬಿಡಲು ಸೂಚಿಸಿತು. ಇದನ್ನು ರಾಜ್ಯ ಬಲವಾಗಿ ವಿರೋಧಿಸಿದ್ದು, ಬಳಿಕ ನೀರಿನ ಪ್ರಮಾಣವನ್ನು 10,000 ಕ್ಯೂಸೆಕ್‌ಗೆ ಇಳಿಕೆ ಮಾಡಿದೆ. ಇದರಿಂದ ಅಸಮಾಧಾನಗೊಂಡ ತಮಿಳುನಾಡು ಸುಪ್ರೀಂ ಕೋರ್ಟಿನಲ್ಲಿ ನೀರು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದು, ಶುಕ್ರವಾರ ಮೂವರು ನ್ಯಾಯಾಧೀಶರ ಪೀಠದ ಮುಂದೆ ವಿಚಾರಣೆಗೆ ಬರಲಿದೆ.

ಸಂಪೂರ್ಣ ಸಹಕಾರ.. ಸರ್ವಪಕ್ಷಗಳ ಬೆಂಬಲ : ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಡಿ ವಿ ಸದಾನಂದ ಗೌಡ, ವೀರಪ್ಪ ಮೊಯ್ಲಿ, ಜಗದೀಶ ಶೆಟ್ಟರ್, ಹೆಚ್ ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಸಂಸದರಾದ ಸುಮಲತಾ ಅಂಬರೀಶ್​, ಜಗ್ಗೇಶ್, ಡಾ. ಹನುಮಂತಯ್ಯ, ಮುನಿಸ್ವಾಮಿ, ಜಿ ಎಂ ಸಿದ್ದೇಶ್ವರ, ಜಿ ಸಿ ಚಂದ್ರಶೇಖರ್‌, ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮೊದಲಾದವರು ರಾಜ್ಯದ ಕಾನೂನು ಹೋರಾಟಕ್ಕೆ ಬೆಂಬಲ ಸೂಚಿಸಿದರು. ರೈತರ ಹಿತ ರಕ್ಷಣೆಗೆ ಸರ್ಕಾರದೊಂದಿಗೆ ಇರುವುದಾಗಿ ಬೆಂಬಲ ವ್ಯಕ್ತಪಡಿಸಿದರು. ಹಾಗೂ ಸಂಕಷ್ಟ ಹಂಚಿಕೆ ಸೂತ್ರವನ್ನು ಇನ್ನಷ್ಟು ನಿರ್ದಿಷ್ಟಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಮಹದಾಯಿ ವಿವಾದ : ಮಹದಾಯಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕಳಸಾ ಮತ್ತು ಬಂಡೂರಿ ಯೋಜನೆಗೆ ಅರಣ್ಯ ಮತ್ತು ಪರಿಸರ ಇಲಾಖೆಗಳ ತೀರುವಳಿ ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ತೀರುವಳಿ ಪಡೆಯಲೂ ಸಹ ಅರ್ಜಿ ಸಲ್ಲಿಸಲಾಗಿದೆ. ಆದರೆ ಗೋವಾ ಸರ್ಕಾರ ಈ ಕುರಿತು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಈ ಕುರಿತು ಹೆಚ್ಚಿನ ಗಮನ ಹರಿಸುವಂತೆ ಸಲಹೆ ನೀಡಿದರು. ವಕೀಲರ ತಂಡಕ್ಕೆ ಹಿಂದಿನ ಅನುಭವಗಳನ್ನು ಬಳಸಿ ರಾಜ್ಯದ ಹಿತದೃಷ್ಟಿಯಿಂದ ಸಮರ್ಥವಾಗಿ ವಾದ ಮಂಡಿಸುವ ಕುರಿತು ಸಲಹೆ ನೀಡಲಾಯಿತು.

ಇದನ್ನೂ ಓದಿ : ಕಾವೇರಿ ನದಿ ನೀರು ಹಂಚಿಕೆ ವಿವಾದ: ವಿಧಾನಸೌಧದಲ್ಲಿ ಸರ್ವಪಕ್ಷ ಸಭೆ, ರೈತರ ಬದುಕಿನ 'ಗ್ಯಾರಂಟಿ' ನೀಡಿ- ಎಚ್​ಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.