ETV Bharat / state

ಜನರಿಗೆ ಹೊರೆಯಾಗದ ರೀತಿ ಇಲಾಖೆ ಲಾಭದಾಯಕವಾಗಿ ಮಾಡಬೇಕಿದೆ: ಸಚಿವ ಶ್ರೀರಾಮುಲು

author img

By

Published : Aug 24, 2021, 9:14 PM IST

transport minister sriramulu pressmeet
ಸಾರಿಗೆ ಸಚಿವ ಬಿ. ಶ್ರೀರಾಮುಲು ಸುದ್ದಿಗೋಷ್ಟಿ

ಸಾರಿಗೆ ಇಲಾಖೆ ನಷ್ಟ ಮತ್ತಿತರ ಸಮಸ್ಯೆಗಳ ಪರಿಶೀಲನೆ ಹಾಗೂ ಪರಿಹಾರಕ್ಕೆ ವಿಶೇಷ ಟಾಸ್ಕ್ ಫೋರ್ಸ್ ರಚನೆ ಮಾಡಲು ಉದ್ದೇಶಿಸಲಾಗಿದೆ. ಜನರಿಗೆ ಅನುಕೂಲ ಆಗುವ ರೀತಿ ಟಾಸ್ಕ್ ಫೋರ್ಸ್ ರಚನೆ ಮಾಡುತ್ತೇವೆ ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಬೆಂಗಳೂರು: ಕೋವಿಡ್​​ನಿಂದಾಗಿ ನಷ್ಟದಲ್ಲಿರುವ ಸಾರಿಗೆ ಇಲಾಖೆಯನ್ನು ಲಾಭದಾಯಕವಾಗಿ ಮಾಡುವುದೇ ನನ್ನ ಗುರಿ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ತಮ್ಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಂಟಿಸಿ, ಕೆಎಸ್ಆರ್‌ಟಿಸಿ, ನಾಲ್ಕು ನಿಗಮದ ಜೊತೆ ಸುದೀರ್ಘ ಚರ್ಚೆ ಮಾಡಲಾಗಿದೆ.

ಸಾರಿಗೆ ಸಚಿವ ಬಿ. ಶ್ರೀರಾಮುಲು ಸುದ್ದಿಗೋಷ್ಠಿ

ಇದರ ಜೊತೆಗೆ ದೇವರಾಜ್ ಅರಸ್ ಟರ್ಮಿನಲ್ ಬಗ್ಗೆ ಚರ್ಚೆ ಮಾಡಿದ್ದೇವೆ. ಪ್ರತಿಯೊಂದು ಇಲಾಖೆಯೂ ಪ್ರಗತಿಯಾಗಬೇಕು. ಪ್ರತಿಯೊಂದನ್ನೂ ಚರ್ಚೆ ಮಾಡಬೇಕು. ಕೋವಿಡ್ ಅಲೆಯ ಬಳಿಕ ಪರಿಸ್ಥಿತಿ ಬಗ್ಗೆ ಕೂಡ ಚರ್ಚೆಯಾಗಿದೆ. ನಷ್ಟದಲ್ಲಿರುವ ಸಂಸ್ಥೆಯನ್ನು, ಲಾಭದಾಯಕವಾಗಿ ತರಬೇಕು. ಅದಕ್ಕಾಗಿ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ನಷ್ಟದಲ್ಲಿದ್ದೇವೆ:

  • ಕೆಎಸ್​ಆರ್​ಟಿಸಿ - 427 ಕೋಟಿ ರೂ.
  • ಬಿಎಂಟಿಸಿ- 548 ಕೋಟಿ ರೂ.
  • ಹೊಸ ಕೆಎಸ್​ಆರ್​ಟಿಸಿ -389 ಕೋಟಿ ರೂ.
  • ಕಲ್ಯಾಣ ಕರ್ನಾಟಕ - 191 ಕೋಟಿ ರೂ.

ಒಟ್ಟು 1,121 ಕೋಟಿ ರೂ. ನಷ್ಟವಾಗಿದೆ ಎಂದು ಮಾಹಿತಿ ನೀಡಿದರು. ಸೇವೆಯ ಜೊತೆಯಲ್ಲಿ ಲಾಭದಾಯಕವಾಗಿ ಮಾಡಬೇಕು. ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರ ಜೊತೆ ಚರ್ಚೆ ಮಾಡಿದ್ದೇನೆ. ಇಷ್ಟು ದೊಡ್ಡ ನಷ್ಟಕ್ಕೆ ಕಾರಣ ಡೀಸಲ್ ದರ ಹೆಚ್ಚಳ. ಅದರ ಜೊತೆಗೆ ಕೊರೊನಾ ಬಂದ ಹಿನ್ನೆಲೆಯಲ್ಲಿ ನಷ್ಟವಾಗಿದೆ ಎಂದರು.

ಟಾಸ್ಕ್ ಫೋರ್ಸ್ ರಚನೆ: ಸಾರಿಗೆ ಇಲಾಖೆ ನಷ್ಟ ಮತ್ತಿತರ ಸಮಸ್ಯೆಗಳ ಪರಿಶೀಲನೆ ಹಾಗೂ ಪರಿಹಾರಕ್ಕೆ ವಿಶೇಷ ಟಾಸ್ಕ್ ಫೋರ್ಸ್ ರಚನೆ ಮಾಡಲು ಉದ್ದೇಶಿಸಲಾಗಿದೆ. ಜನರಿಗೆ ಅನುಕೂಲ ಆಗುವ ರೀತಿ ಟಾಸ್ಕ್ ಫೋರ್ಸ್ ರಚನೆ ಮಾಡುತ್ತೇವೆ. ಲಾಭದಾಯಕವಾಗಿ ಮಾಡಲು ಕ್ರಮ ವಹಿಸಲಾಗುವುದು. ನಾನ್ ಫೇರ್ ಬಾಕ್ಸ್ ಕೂಡ ಆಗಬೇಕಿದೆ.

ಜನರಿಗೂ ಆತಂಕ ಹೋಗುವಂತ ಕೆಲಸ ಆಗಬೇಕಿದೆ. ಟೆಕ್ನಾಲಜಿ ಬಳಸಿ ಕ್ಯಾಶ್​​​​ಲೆಸ್ ಟಿಕೆಟ್ ದೊರೆಯುವಂತೆ ಮಾಡಬೇಕು. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಬಸ್ ಖರೀದಿ ಹಗರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಟಾಸ್ಕ್ ಫೋರ್ಸ್ ರಚನೆ ಮಾಡುತ್ತಿರುವುದೇ ಇಂತಹ ವಿಚಾರಗಳಿಗೆ. ನಷ್ಟ ಕಡಿಮೆ ಮಾಡುವ ನಿಟ್ಟಿನಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುತ್ತಿದೆ ಎಂದರು. ಲಾಂಗ್ ಡ್ರೈವ್ ರೂಟ್‌ಗಳಲ್ಲಿ ಡೀಸಲ್ ನಷ್ಟ ಆಗುತ್ತಿದೆ. ನಷ್ಟ ಕಡಿಮೆ ಮಾಡಲು ಒಂದಷ್ಟು ಯೋಜನೆ ಮಾಡಲಾಗಿದೆ. ಇಲಾಖೆಯನ್ನು ಲಾಭದಾಯಕವಾಗಿ ಮಾಡುತ್ತೇವೆ ಎಂದರು.

ಅಂತರ ನಿಗಮ ವರ್ಗಾವಣೆ : 2,365 ಮಂದಿಯನ್ನು ಅಂತರ ನಿಗಮದ ವರ್ಗಾವಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಹೆಚ್ಚು ಎಲೆಕ್ಟ್ರಿಕ್ ಬಸ್: ಡೀಸೆಲ್​​ ಬೆಲೆ ಹೆಚ್ಚಳದಿಂದಲೇ ನಷ್ಟ ಅನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಟ್ರಾವೆಲ್ ಮಾಡುವ ಜನರು ಕಡಿಮೆಯಾದಾಗ ನಷ್ಟವಾಗುತ್ತದೆ. ಹೀಗಾಗಿ ಡೀಸೆಲ್ ಬೆಲೆ ಮಾತ್ರವಲ್ಲ. ವಾಹನ ಚಲಾಯಿಸುವುದರಿಂದಲೂ ನಷ್ಟವಾಗುತ್ತಿದೆ. ಎಲೆಕ್ಟ್ರಾನಿಕ್ ಬಸ್ ಹೆಚ್ಚು ತರುವುದರಿಂದ ನಷ್ಟ ಕಡಿಮೆ ಮಾಡಬಹುದು ಎಂದ್ರು.

ಸಾರಿಗೆ ನೌಕರರ ಪರವಾಗಿಯೇ ಇದ್ದೇನೆ:

ಸಾರಿಗೆ ನೌಕರರ ಬೇಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೆ ಲಕ್ಷ್ಮಣ ಸವದಿ ಇದ್ದರು, ನಾನು ಆಗ ಚರ್ಚೆ ಮಾಡಿದ್ದೆ. ಸಾರಿಗೆ ನೌಕರರ ಪರವಾಗಿಯೇ ಇದ್ದೇನೆ. ಕೋವಿಡ್ ಹಿನ್ನೆಲೆಯಲ್ಲಿ ಯಾರೆಲ್ಲ ಸಾವನ್ನಪ್ಪಿದರು, ಅವರಿಗೆ ಪರಿಹಾರ ಕೊಡಲು ನಿರ್ಧರಿಸಲಾಗಿತ್ತು. ನಾನಾಗ ಆರೋಗ್ಯ ಇಲಾಖೆ ಸಚಿವನಾಗಿದ್ದೆ. ಇದರ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು.

ಸಾರಿಗೆ ನೌಕರರಿಗೆ ಈವರೆಗೂ ಸರ್ಕಾರದಿಂದ ಹಣ ಬಿಡುಗಡೆ ಮಾಡಿ‌, ವೇತನ ನೀಡಲಾಗಿದೆ. ಕಳೆದ ವರ್ಷ 1,953 ಕೋಟಿ ರೂ.‌ಹಾಗೂ ಈ ವರ್ಷ 597 ಕೋಟಿ ರೂ. ಒಟ್ಟಾರೆ 2,551 ಕೋಟಿ ರೂ.ಹಣ ಬಿಡುಗಡೆ ಮಾಡಲಾಗಿದೆ ಎಂದರು.

ಆನ್​​ಲೈನ್​​ನಲ್ಲಿ ಬಸ್ ಪಾಸ್ : ನಿನ್ನೆಯಿಂದ ಶಾಲೆ ಆರಂಭವಾಗಿದೆ. ವಿದ್ಯಾರ್ಥಿಗಳಿಗೆ ಇಂದಿನಿಂದ ಆನ್​​​​ಲೈನ್ ನಲ್ಲಿ ಬಸ್ ಪಾಸ್ ವಿತರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಆನ್​​​​ಲೈನ್ ನಲ್ಲಿ ಅಪ್ಲೈ ಮಾಡಿ ಬಸ್ ಪಾಸ್ ಪಡೆಯಬಹುದು ಎಂದು ಹೇಳಿದರು.

ಎಸ್​​ಸಿ, ಎಸ್​​ಟಿ ಮಕ್ಕಳಿಗೆ ಉಚಿತ ಬಸ್​​​ಪಾಸ್: ಸಮಾಜ ಕಲ್ಯಾಣ ಇಲಾಖೆಯ ಹಣ ಬಳಸಿಕೊಂಡು ಎಸ್​​​ಸಿ, ಎಸ್​​ಟಿ ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡಲಾಗುವುದು. ಇತರ ಮಕ್ಕಳಿಗೆ ರಿಯಾಯಿತಿ ನೀಡಲಾಗುವುದು ಎಂದರು.

ಇಂತಹುದ್ದೇ ಖಾತೆ ಬೇಕು ಅನ್ನೋದು ಸರಿಯಲ್ಲ: ಖಾತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಇಂತದ್ದೇ ಖಾತೆ ಬೇಕು ಅನ್ನೋದು ಸರಿಯಲ್ಲ. ಯಾರೂ ಕೂಡ ಅದನ್ನು ಕೇಳಬಾರದು ಎಂದು ನುಡಿದರು. ಆನಂದ್ ಸಿಂಗ್ ಕೂಡ ನಮ್ಮ ಸ್ನೇಹಿತರು. ಇಬ್ಬರೂ ಫೋನ್‌ನಲ್ಲಿ ಮಾತನಾಡಿದ್ದೇವೆ. ಅಧಿಕಾರ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.