ETV Bharat / state

ಹೊಸ ಸಂಸತ್​​ ಭವನವು ನಮ್ಮ ಹೆಮ್ಮೆಯ ಕಟ್ಟಡ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

author img

By

Published : May 29, 2023, 4:05 PM IST

the-new-parliament-building-is-pride-of-the-country-says-minister-meenakshi-lekhi
ಹೊಸ ಸಂಸತ್ ಭವನ ದೇಶದ ಹೆಮ್ಮೆಯ ಕಟ್ಟಡ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ಪ್ರಧಾನಿ ನರೇಂದ್ರ ಮೋದಿ ಸೆಂಗೋಲ್ ಮೂಲಕ ನಾಗರಿಕತೆಯ ಜಾಗೃತಿ ಕುರಿತು ಹೆಮ್ಮೆ ಮೂಡಿಸಿದ್ದಾರೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹೇಳಿದರು.

ಬೆಂಗಳೂರು: ಹೊಸ ಪಾರ್ಲಿಮೆಂಟ್ ಭವನವು ನಮ್ಮ ಹೆಮ್ಮೆಯ ಕಟ್ಟಡ. ಹೊಸ ತಂತ್ರಜ್ಞಾನಕ್ಕೆ ಉದಾಹರಣೆ ಇದಾಗಿದೆ. ಭಾರತದ ಸಂಸ್ಕೃತಿಯ ಅತ್ಯುತ್ತಮ ವಿಚಾರಗಳನ್ನು ಇಲ್ಲಿ ಅನಾವರಣಗೊಳಿಸಲಾಗಿದೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹೇಳಿದರು. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜದಂಡ (ಸೆಂಗೋಲ್) ಪ್ರತಿಷ್ಠಾಪನೆಯೂ ಆಗಿದೆ, ಸೆಂಗೋಲ್ ಇದೆಯೆಂದು ಹೆಚ್ಚು ಜನರಿಗೆ ತಿಳಿದಿರಲಿಲ್ಲ, ಆದರೆ, ಮೋದಿ ಸೆಂಗೋಲ್ ಮೂಲಕ ನಾಗರಿಕತೆಯ ಜಾಗೃತಿ ಕುರಿತು ಹೆಮ್ಮೆಯನ್ನು ಮೂಡಿಸಿದ್ದಾರೆ ಎಂದರು.

ಬಡವರು, ರೈತರು ಮತ್ತು ಅವಕಾಶ ವಂಚಿತರಿಗೆ ಸಮರ್ಪಿತ ಸರ್ಕಾರದ ತಮ್ಮದೆಂದು ನರೇಂದ್ರ ಮೋದಿ ತಿಳಿಸಿದ್ದಾರೆ. ಉತ್ತಮ ಆಡಳಿತದ ಮೂಲಕ ವೇಗದ ಅಭಿವೃದ್ಧಿ ಸಾಧ್ಯವಾಗಿದೆ. 9 ವರ್ಷಗಳಲ್ಲಿ ಅಭಿವೃದ್ಧಿಯ ಭಾರಿ ಸಾಹಸವನ್ನು ಸಾಕಾರಗೊಳಿಸಿದ್ದಾರೆ. ನಿರಂತರ ಅಭಿವೃದ್ಧಿ ವಿಚಾರದಲ್ಲಿ ಭಗೀರಥ ಪ್ರಯತ್ನ ಅವರದಾಗಿತ್ತು, ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಹೊಂದಿದ ದೇಶಗಳು ಆರ್ಥಿಕ ಸಮಸ್ಯೆಗೆ ಸಿಲುಕಿದ್ದವು. ಆದರೆ, ಗರಿಷ್ಠ ಜನಸಂಖ್ಯೆ ಹೊಂದಿದ ಭಾರತದಲ್ಲಿ ಮೋದಿ ಅವರ ಕರ್ತವ್ಯನಿಷ್ಠೆಯ ಪರಿಣಾಮವಾಗಿ ಉಚಿತ ಲಸಿಕೆ ಲಭಿಸಿತು ಎಂದರು.

ಭಾರತ ದೂರದೃಷ್ಟಿ ಇರುವ ದೇಶವಾಗಿ ಬೆಳೆದಿದೆ. ಕಟ್ಟಿಗೆ, ನೀರು, ಶೌಚಾಲಯದ ಸಮಸ್ಯೆಗಳನ್ನು ಪರಿಹರಿಸಿದ ದೂರದೃಷ್ಟಿಯ ನಾಯಕ ಮೋದಿಜಿ. ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕೆ ಅವರು ಆದ್ಯತೆ ಕೊಟ್ಟಿದ್ದಾರೆ. ಪಾರ್ಲಿಮೆಂಟ್ ಹೌಸ್ ಒಂದೆಡೆ ಕಟ್ಟಿಸಿದ ಮೋದಿ ಅವರು, ಇನ್ನೊಂದೆಡೆ ಉಜ್ವಲ, ಜನ್‍ಧನ್ ಖಾತೆ, ಆಯುಷ್ಮಾನ್ ಯೋಜನೆ, ಸ್ಯಾನಿಟರಿ ಪ್ಯಾಡ್ ವಿತರಣೆಯಂಥ ಯೋಜನೆಗಳನ್ನೂ ಅನುಷ್ಠಾನಕ್ಕೆ ತಂದಿದ್ದಾರೆ, ವೇಗವಾಗಿ, ಸಕಾಲದಲ್ಲಿ ಯೋಜನೆಗಳ ಜಾರಿ ಆಗಿದೆ. ಹಿಂದೆ ಗರೀಬಿ ಹಠಾವೋ ಕೇವಲ ಮಾತಿನಲ್ಲಿತ್ತು. ಬಡತನ ದೂರ ಆಗಿರಲಿಲ್ಲ. ಭ್ರಷ್ಟಾಚಾರ ಹೆಚ್ಚಾಗಿತ್ತು. ಬಡತನ ದೂರ ಮಾಡಲು ಬಳಸುವ ಹಣ ಕೆಲವರ ಜೇಬು ಸೇರುತ್ತಿತ್ತು ಎಂದು ಟೀಕಿಸಿದರು.

ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕು ಆರೋಪ ಕುರಿತು ಬ್ರಿಜ್ ಭೂಷಣ್ ವಿರುದ್ಧ ಕ್ರಮ ಕೈಗೊಳ್ಳದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ಸಂಸ್ಕೃತಿ ಸಚಿವೆ ಮೀನಾಕ್ಷಿ ಲೇಖಿ, ಈ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡಲ್ಲ. ಆದರೆ, ಈ ಬಗ್ಗೆ ಕಾನೂನು ರೀತಿಯ ಕ್ರಮ ಆಗಲಿದೆ. ಕೋರ್ಟ್ ಇದೆ, ಕಾನೂನು ಇದೆ. ಒಬ್ಬ ರಾಜನಿಗೂ ಕೂಡ ಈ ದೇಶದ ಕಾನೂನು ಅನ್ವಯ ಆಗಲಿದೆ. ಕಾನೂನು ಪ್ರಕಾರವೇ ಎಲ್ಲವೂ ನಡೆಯೋದು. ಈ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದರು.

9 ವರ್ಷ ರಾಷ್ಟ್ರದಲ್ಲಿ ಬಹಳಷ್ಟು ಬೆಳವಣಿಗೆ ಆಗಿದೆ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ನೆಚ್ಚಿನ ನಾಯಕರು ಹಾಗೂ ವಿಶ್ವಮಾನ್ಯ ನಾಯಕ ನರೇಂದ್ರ ಮೋದಿ ಸರ್ಕಾರ 9 ವರ್ಷ ಪೂರ್ಣಗೊಳಿಸಿದೆ. 9 ವರ್ಷ ರಾಷ್ಟ್ರದಲ್ಲಿ ಬಹಳಷ್ಟು ಬೆಳವಣಿಗೆ, ಬದಲಾವಣೆ ಆಗಿದೆ. ದೇಶವು ಬಹಳ ಕ್ಷೇತ್ರಗಳಲ್ಲಿ ಮುನ್ನಡೆದಿದೆ. ಪ್ರತಿಯೊಬ್ಬ ನಾಗರಿಕನ ಬದುಕಿನಲ್ಲೂ ಬಹಳ ದೊಡ್ಡ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಬದಲಾವಣೆ- ಉನ್ನತೀಕರಣ ಆಗಿದೆ ಎಂದು ತಿಳಿಸಿದರು.

ಮೋದಿಜಿ ಅವರು ಅಧಿಕಾರ ಪಡೆದ ಸಂದರ್ಭದಲ್ಲಿ ಭಾರತದ ಆರ್ಥಿಕ ಪ್ರಗತಿ ಕುಂಠಿತವಾಗಿತ್ತು ಸ್ಪಷ್ಟ ನೀತಿ ಇರಲಿಲ್ಲ. ಭಾರತದ ವಿಶ್ವಾಸಾರ್ಹತೆ ಬಹಳ ಕೆಳಮಟ್ಟಕ್ಕೆ ಕುಸಿದಿತ್ತು. ಇಂಥ ಹಿನ್ನೆಲೆಯೊಂದಿಗೆ ಅಧಿಕಾರ ಪಡೆದ ಮೋದಿ ಅವರು, ಗುಜರಾತ್ ಸಿಎಂ ಆಗಿದ್ದಾಗಿನ ಅನುಭವ, ರಾಷ್ಟ್ರವನ್ನು ಅರಿತುಕೊಂಡ ಹಿನ್ನೆಲೆಯಲ್ಲಿ ಕೆಲಸ ಮಾಡಿದ್ದಾರೆ ಎಂದು ಹೇಳೀದರು.

ಸಾಮಾಜಿಕ ಶೈಕ್ಷಣಿಕ ಸುಧಾರಣೆ, ಆಂತರಿಕ- ಬಾಹ್ಯ ಸುರಕ್ಷತೆಗೆ ಅವರು ಒತ್ತು ಕೊಟ್ಟರು. ರಾಷ್ಟ್ರದ ಸಮಗ್ರತೆ, ಸುರಕ್ಷತೆ, ಏಕತೆ ಕಾಪಾಡಿದರು. ಕಾಶ್ಮೀರವನ್ನು ದೇಶದ ಜೊತೆ ಮರು ಜೋಡಣೆ ಮಾಡಿದ್ದಾರೆ. ಜಿಎಸ್‍ಟಿ ಜಾರಿ ಮಾಡಲಾಯಿತು. ಕರ್ನಾಟಕದ ಜಿಎಸ್‍ಟಿ ಸಂಗ್ರಹದಲ್ಲಿ ಆದಾಯ ಹೆಚ್ಚಾಗಿದೆ. ರಾಷ್ಟ್ರದ ಆರ್ಥಿಕತೆ ಬೆಳವಣಿಗೆ, ಆರ್ಥಿಕವಾಗಿ ಹೆಚ್ಚು ಹಂಚಿಕೆ ಸಾಧ್ಯವಾಗಿದೆ ಎಂದರು.

ಉಚಿತ ಕೊಡುಗೆ ವಿಚಾರವಾಗಿ ಸಚಿವರ ಷರತ್ತು ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಬೊಮ್ಮಾಯಿ, ಹಲವು ಸಚಿವರ ಹೇಳಿಕೆ ನೋಡಿದರೆ ಅವರು ಹೇಳೋದು ಒಂದು, ಮಾಡೋದು ಒಂದು. ಚುನಾವಣೆ ಮೊದಲು ಎಲ್ಲರಿಗೂ ಫ್ರೀ. ನನಗೂ ಫ್ರೀ, ನಿನಗೂ ಫ್ರೀ ಅಂತ ಹೇಳಿದ್ದರು, ಈಗ ಕರ್ನಾಟಕ ಜನತೆಗೆ ದೋಖಾ ಮಾಡಿದ್ದಾರೆ. ಈ ಗ್ಯಾರಂಟಿ ಬಗ್ಗೆ ಅವರು ಜಾರಿಗೆ ತರಬೇಕು. ಹಿಂದಿನ ಸರ್ಕಾರ ಬಗ್ಗೆ ಆರೋಪ ಅಂತ‌ ಹೇಳಿದಾಗ, ಇವರಿಗೆ ಜನ ಮತ ಹಾಕಿದ್ದಾರೆ. ಹಿಂದೆ ಸುಳ್ಳು ಹೇಳಿದಾಗ ಮನೆಗೆ ಕಳಿಸಿದ್ದರು, ಈಗ ನಮ್ಮನ್ನೂ ಕಳಿಸಿದ್ದಾರೆ. ಆದರೆ ಕರ್ನಾಟಕದ ಜನತೆಗೆ ಇವರು ಅನ್ಯಾಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಈಶಾನ್ಯ ರಾಜ್ಯಗಳಿಗೆ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್; ಪ್ರಧಾನಿ ಮೋದಿ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.