ETV Bharat / state

ತಡವಾಗಿ ಬಂದರೆಂದು ರಾಜ್ಯಪಾಲರನ್ನೇ ಬಿಟ್ಟು ಹಾರಿದ ವಿಮಾನ: ವಿಷಾದ ವ್ಯಕ್ತಪಡಿಸಿದ ಎಐಎಕ್ಸ್ ಕನೆಕ್ಟ್​ ವಿಮಾನ

author img

By

Published : Jul 28, 2023, 5:20 PM IST

Updated : Jul 28, 2023, 7:02 PM IST

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ತಡವಾಗಿ ವಿಮಾನ ನಿಲ್ದಾಣಕ್ಕೆ ಬಂದರು ಎಂಬ ಕಾರಣಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಅವರನ್ನೇ ಬಿಟ್ಟು ಏರ್​ ಏಷ್ಯಾ ವಿಮಾನವು ಪ್ರಯಾಣ ಬೆಳೆಸಿದೆ. ಈ ಘಟನೆಯ ಬಗ್ಗೆ ರಾಜ್ಯಪಾಲರ ಪ್ರೋಟೋಕಾಲ್ ಅಧಿಕಾರಿ ಎಂ. ವೇಣುಗೋಪಾಲ್ ಅವರು ದೂರು ದಾಖಲು ಮಾಡಿದ್ದಾರೆ.

ದೇವನಹಳ್ಳಿ : ಒಂದು ನಿಮಿಷ ತಡವಾಗಿ ಬಂದರು ಎಂಬ ಕಾರಣಕ್ಕೆ ಹೈದರಾಬಾದ್​ಗೆ ಪ್ರಯಾಣಿಸಬೇಕಿದ್ದ ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್​ ಅವರನ್ನೇ ಬಿಟ್ಟು ಏರ್ ಏಷ್ಯಾ ವಿಮಾನವು ಪ್ರಯಾಣ ಬೆಳೆಸಿರುವ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಜುಲೈ 27ರ ಗುರುವಾರದಂದು, ರಾಜ್ಯಪಾಲರಾದ ಥಾವರ್​ ಚಂದ್ ಗೆಹ್ಲೋಟ್​ ಪೂರ್ವನಿಗದಿತ ಸಭೆೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಹೈದರಾಬಾದ್​ಗೆ ಪ್ರಯಾಣಿಸಲು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಮಧ್ಯಾಹ್ನ 2.05 ಗಂಟೆಗೆ ಏರ್ ಏಷ್ಯಾದ ( ಎಐಎಕ್​​ ಕನೆಕ್ಟ್​) ವಿಮಾನದ ಮೂಲಕ ಅವರು ಹೈದರಾಬಾದ್‌ಗೆ ಪ್ರಯಾಣಿಸಬೇಕಿತ್ತು. ಏರ್​ಪೋರ್ಟ್​ಗೆ ಬಂದ ರಾಜ್ಯಪಾಲರನ್ನು ವಿಐಪಿ ಲಾಂಜ್​ನಲ್ಲಿ ಕುಳ್ಳಿರಿಸಿದ ಅಧಿಕಾರಿಗಳು, ಅವರ ಲಗೇಜ್‌ಗಳನ್ನು ವಿಮಾನದಲ್ಲಿ ಇರಿಸಲು ಏರ್ ಏಷ್ಯಾ ಸಿಬ್ಬಂದಿಗೆ ಹಸ್ತಾಂತರಿಸಿದ್ದರು. ಆದರೆ, ವಿಳಂಬವಾಗಿದೆ ಎಂಬ ಕಾರಣಕ್ಕೆ ರಾಜ್ಯಪಾಲರನ್ನು ಬಿಟ್ಟು ವಿಮಾನ ಹೊರಟಿದೆ. ಬಳಿಕ 90 ನಿಮಿಷಗಳ ನಂತರ ಇನ್ನೊಂದು ವಿಮಾನದ ಮೂಲಕ ರಾಜ್ಯಪಾಲರು ಹೈದಾರಬಾದ್‌ಗೆ ಪ್ರಯಾಣ ಬೆಳೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಾಜ್ಯಪಾಲರ ಪ್ರೋಟೋಕಾಲ್ ಅಧಿಕಾರಿ ಎಂ. ವೇಣುಗೋಪಾಲ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಶಿಷ್ಟಾಚಾರದ ಉಲ್ಲಂಘನೆಗೆ ಸಂಬಂಧಿಸಿದಂತೆ ದೂರು ದಾಖಲು ಮಾಡಿದ್ದಾರೆ.

ಪ್ರೋಟೋಕಾಲ್ ಅಧಿಕಾರಿಯ ದೂರಿನಲ್ಲಿ ಏನಿದೆ ? : ರಾಜ್ಯಪಾಲರು ಮಧ್ಯಾಹ್ನ 1.10ಕ್ಕೆ ರಾಜಭವನದಿಂದ ಹೊರಟು 1.35ಕ್ಕೆ ಟರ್ಮಿನಲ್-1ರ ವಿಐಪಿ ಲಾಂಜ್ ತಲುಪಿದ್ದರು. ಆ ವೇಳೆಗಾಗಲೇ ಗವರ್ನರ್‌ಗೆ ಸೇರಿದ ಲಗೇಜ್‌ಗಳನ್ನು ವಿಮಾನಕ್ಕೆ ತುಂಬಿಸಲಾಗಿತ್ತು. ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲರಿಗೆ ಪ್ರಯಾಣಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಟರ್ಮಿನಲ್-2 ಕ್ಕೆ ರಾಜ್ಯಪಾಲರು ತಲುಪಲಿದ್ದಾರೆ ಎಂದು ತಿಳಿಸಲಾಗಿತ್ತು. ಅದರಂತೆ ರಾಜ್ಯಪಾಲರು ಮಧ್ಯಾಹ್ನ 2.06ಕ್ಕೆ ವಿಮಾನದ ಲ್ಯಾಡರ್ ಇರುವ ಸ್ಥಳ ತಲುಪಿದ್ದರು. ರಾಜ್ಯಪಾಲರ ಲಗೇಜ್ ಅನ್ನು ಇಳಿಸಲಾಯಿತು. ಆ ವೇಳೆ 10 ನಿಮಿಷ ವ್ಯಯವಾಗಿದೆ. ಆಗಲೂ ಗವರ್ನರ್ ಲ್ಯಾಡರ್ ಬಳಿಯೇ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ವಿಮಾನದ ಬಾಗಿಲು ತೆರೆದೇ ಇತ್ತು. ಆದರೂ ರಾಜ್ಯಪಾಲರನ್ನು ವಿಮಾನದೊಳಗೆ ಬಿಡಲಿಲ್ಲ ಎಂದು ವೇಣುಗೋಪಾಲ್ ದೂರಿನಲ್ಲಿ ಹೇಳಿದ್ದಾರೆ.

ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ವಿಮಾನಯಾನ ಸಂಸ್ಥೆ: ಘಟನೆಗೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎಐಎಕ್ಸ್ ಕನೆಕ್ಟ್​ ಏರ್‌ಲೈನ್‌ನ ಆಡಳಿತ ವಿಭಾಗ ತಪ್ಪುಗಳನ್ನು ಪರಿಹರಿಸಲು ಗವರ್ನರ್ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಎಐಎಕ್ಸ್​​ ಕನೆಕ್ಟ್​​ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಉನ್ನತ ಗುಣಮಟ್ಟದ ವೃತ್ತಿಪರತೆ ಮತ್ತು ಪ್ರೋಟೋಕಾಲ್‌ನ ಅನುಸರಣೆಗೆ ಕಂಪನಿ ಬದ್ಧವಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ದೇಶದ ಅಭಿವೃದ್ಧಿಗೆ ಮಾನವೀಯ ಮೌಲ್ಯಗಳ ಅಳವಡಿಕೆ ಮುಖ್ಯ: ರಾಜ್ಯಪಾಲ ಗೆಹ್ಲೋಟ್

Last Updated :Jul 28, 2023, 7:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.