ETV Bharat / state

ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ ಸುತ್ತೂರು ಶ್ರೀ, ಅಶ್ವತ್ಥ್​ನಾರಾಯಣ, ಅಶೋಕ್

author img

By ETV Bharat Karnataka Team

Published : Sep 1, 2023, 10:38 PM IST

ಮಾಜಿ ಸಿಎಂ ಕುಮಾರಸ್ವಾಮಿ
ಮಾಜಿ ಸಿಎಂ ಕುಮಾರಸ್ವಾಮಿ

ಹೆಚ್‌.ಡಿ.ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏನೂ ತೊಂದರೆ ಇಲ್ಲ ಎಂದು ಸುತ್ತೂರು ಶ್ರೀಗಳು ತಿಳಿಸಿದ್ದಾರೆ.

ಬೆಂಗಳೂರು : ಅನಾರೋಗ್ಯದ ಹಿನ್ನೆಲೆಯಲ್ಲಿ ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಲು ಇಂದು ಸುತ್ತೂರು ಶ್ರೀಗಳು, ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಮಾಜಿ ಸಚಿವರಾದ ಡಾ.ಅಶ್ವತ್ಥ್​ನಾರಾಯಣ, ಆರ್.ಅಶೋಕ್, ಸಿ.ಪಿ.ಯೋಗೇಶ್ವರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರು ಆಗಮಿಸಿದ್ದರು.

ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬಳಿಕ ಸುತ್ತೂರು ಶ್ರೀಗಳು ಮಾತನಾಡಿ, ಈಗ ಆರೋಗ್ಯವಾಗಿದ್ದಾರೆ. ಲವಲವಿಕೆಯಿಂದಿದ್ದಾರೆ. ನಾನು ಹೋದಾಗ ಪೇಪರ್ ಓದುತ್ತಾ ಕುಳಿತಿದ್ದರು. ನಿಖಿಲ್ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಕೂಡ ಅಲ್ಲೇ ಇದ್ರು. ಡಾ.ಸತೀಶ್ ಚಂದ್ರ ಕೂಡ ಮೊದಲಿನಿಂದಲೂ ಪರಿಚಯ. ಕುಮಾರಸ್ವಾಮಿ ಆರೋಗ್ಯದಲ್ಲಿ ಏನು ತೊಂದರೆ ಇಲ್ಲ. ತುಂಬಾ ಹೊತ್ತು ಮಾತಾಡಿದ್ರು ಎಂದು ಹೇಳಿದರು.

ಮಾಜಿ ಸಚಿವ ಆರ್.ಅಶೋಕ್ ಮಾತನಾಡಿ, ಈಗ ತಾನೇ ಕುಮಾರಣ್ಣನನ್ನು ಭೇಟಿ ಮಾಡಿದೆ. ಅವರ ಕುಟುಂಬ ಕೂಡ ಜೊತೆಯಲ್ಲಿದ್ರು. ನನ್ನ ಜೊತೆ ರಾಜಕಾರಣ, ಬೇರೆ ಬೇರೆ ವಿಚಾರ ಚರ್ಚೆ ಮಾಡಿದ್ರು. ಕಂಫರ್ಟಬಲ್ ಆಗಿದ್ದಾರೆ. ನಾಳೆ ಅವರ ಮನೆಗೆ ಡಿಸ್ಚಾರ್ಜ್ ಆಗಿ ತೆರಳಲಿದ್ದಾರೆ. ಕುಮಾರಣ್ಣ ಅವರ ಮೈಂಡ್ ಸ್ಟ್ರೆಂತ್ ಚೆನ್ನಾಗಿದೆ. ದೇವರ ಆಶೀರ್ವಾದ ಇದೆ. ತಿರುಪತಿ ತಿಮ್ಮಪ್ಪನ ಆಶೀರ್ವಾದ ಇದೆ. ಕುಮಾರಸ್ವಾಮಿ ರಾಜಕೀಯ ಜೀವನ ದೊಡ್ಡದಿದೆ. ಅವರಿಗೆ ಆರೋಗ್ಯ ಭಾಗ್ಯ ಕೊಡಲಿ ಎಂದರು.

ಕಾವೇರಿ ನೀರು ಬಿಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿದ ಅಶೋಕ್, ಕಾಂಗ್ರೆಸ್‌ನವರು ಏನೇ ಮಾಡಿದ್ರೂ ಓಟಿಗಾಗಿ ರಾಜಕಾರಣ ಮಾಡ್ತಿದ್ದಾರೆ. ಮೇಕೆದಾಟು ಯೋಜನೆಗೆ ಅಂತ ಪಾದಯಾತ್ರೆ ಮಾಡಿದ್ರು. ಬೇಡ ಅಂದ್ರೂ ಕೋವಿಡ್ ಕಾಲದಲ್ಲೂ ಪಾದಯಾತ್ರೆ ಮಾಡಿದರು. ಈಗ ಮೇಕೆನೂ ಇಲ್ಲ ದಾಟೂ ಇಲ್ಲ ಎಂದು ವ್ಯಂಗ್ಯವಾಡಿದರು.

ಬೆಂಗಳೂರು ಜನ ಎಚ್ಚೆತ್ತುಕೊಳ್ಳಬೇಕು. ಹೋರಾಟಕ್ಕೆ ಧುಮುಕಬೇಕು. ಈಗಾಗಲೇ ಪವರ್ ಕಟ್ ಶುರುವಾಗಿದೆ. ಅದರ ಜೊತೆ ನೀರಿನ ತೊಂದರೆ ಶುರುವಾಗಿದೆ.‌ ಜಲಮಂಡಳಿ ಮಧ್ಯರಾತ್ರಿ, ಮುಂಜಾನೆ ನೀರು ಬಿಡೋಕೆ ಶುರುಮಾಡಿದ್ದಾರೆ. ಯಡಿಯೂರಪ್ಪ ಸಿಎಂ‌ ಆಗಿದ್ದಾಗ ಎರಡು ಬಾರಿ ಬಾಗಿನ ಕೊಟ್ಟೆವು. ಬೊಮ್ಮಾಯಿ ಸಿಎಂ‌ ಆಗಿದ್ದಾಗ ಬಾಗಿನ ಕೊಟ್ಟೆವು. ಈಗ ನೀರು ತುಂಬಿಲ್ಲ. ಬರಗಾಲ ಬಂದಿದೆ ಅಂತಾರೆ. ರಾಜ್ಯ ಸರ್ಕಾರ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ಇಷ್ಟಾದರೂ ಮಾತೆತ್ತಿದ್ರೆ ಫ್ರೀ ಫ್ರೀ ಅಂತಿದ್ದಾರೆ ಎಂದು ಕಿಡಿಕಾರಿದರು.

ಮಾಜಿ ಸಚಿವ ಡಾ. ಅಶ್ವತ್ಥ್​ನಾರಾಯಣ ಮಾತನಾಡಿ, ಕುಮಾರಣ್ಣ ಬಹಳ ಆರೋಗ್ಯವಾಗಿದ್ದಾರೆ. ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಯಾವಾಗ ಬೇಕಾದ್ರೂ ಡಿಸ್ಚಾರ್ಜ್ ಆಗಬಹುದು. ಭಗವಂತನ ಆಶೀರ್ವಾದ ಅವರ ಮೇಲಿದೆ. ಅವರಿಗೆ ಆರೋಗ್ಯ ಮತ್ತಷ್ಟು ಸಿಗಲಿ ಎಂದು ಹೇಳಿದರು.

ಸಂಸದ ಪ್ರಜ್ವಲ್ ರೇವಣ್ಣ ಅನರ್ಹತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅನರ್ಹತೆ ಕಾನೂನು ಬದ್ಧವಾಗಿದೆ. ಕಾನೂನು ಪ್ರಕ್ರಿಯೆ ಮುಂದುವರೆಯಲಿದೆ. ಮುಂದಿನ ಪ್ರಕ್ರಿಯೆ ಚುನಾವಣಾ ಆಯೋಗ ನೋಡಿಕೊಳ್ಳಲಿದೆ ಎಂದರು.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮಾತನಾಡಿ, ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದೆ. ವೈಯಕ್ತಿಕವಾಗಿ ನನಗೂ, ಅವರಿಗೂ ಯಾವುದೇ ದ್ವೇಷ ಇಲ್ಲ. ರಾಜಕೀಯವಾಗಿ ಯಾವುದೇ ಒಳ ಒಪ್ಪಂದ ಇಲ್ಲ. ಇಂದು ಅವರ ಆರೋಗ್ಯ ಸರಿ ಇಲ್ಲ. ಅವರನ್ನು ಭೇಟಿ ಮಾಡಿದೆ. ಚೆನ್ನಾಗಿದ್ದಾರೆ, ಏನೂ ತೊಂದರೆ ಇಲ್ಲ. ಅದು ಬಿಟ್ಟು ಯಾವುದೇ ರಾಜಕಾರಣ ಚರ್ಚೆ ಮಾಡಿಲ್ಲ ಎಂದು ಹೇಳಿದರು.

ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಆರೋಗ್ಯವಾಗಿದ್ದಾರೆ. ಚೆನ್ನಾಗಿ ಮಾತಾಡಿದ್ರು. ಒಟ್ಟಾರೆ ಆರಾಮಿದ್ದಾರೆ. ಡಿಸ್ಚಾರ್ಜ್ ಬಗ್ಗೆ ಮಾತಾಡಿಲ್ಲ, ವೈದ್ಯರು ತೀರ್ಮಾನ ಮಾಡ್ತಾರೆ. ನಾನು ಡಿಸ್ಚಾರ್ಜ್ ಆಗ್ತೀನಿ ಅಂತ ಅವರು ಹೇಳಿದ್ದಾರೆ ಎಂದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಜನಪ್ರಿಯ ನೇತಾರ ಕುಮಾರಣ್ಣ ಆರೋಗ್ಯ ಉತ್ತಮವಾಗಿದೆ.
ನಿನ್ನೆಯೇ ನೋಡಲು ಬಂದಿದ್ದೆ. ವೈದ್ಯರ ಸಲಹೆ ಇದ್ದುದರಿಂದ ಸಾಧ್ಯವಾಗಿರಲಿಲ್ಲ. ಹಾಗಾಗಿ ಇಂದು ಭೇಟಿಯಾದೆ. ಮಾತುಕತೆ ಎಲ್ಲವೂ ನಾರ್ಮಲ್ ಇದೆ. ಅವರಿಗೆ ವಿಶ್ರಾಂತಿ ಹೇಳಿದ್ದಾರೆ. ಒಂದೆರಡು ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ. ಅವರು ಆಸ್ಪತ್ರೆಗೆ ಸೇರಿದ್ದಾರೆ ಅನಿಸ್ತಿಲ್ಲ. ವಿಧಾನಸೌಧದಲ್ಲಿ ಹೇಗೆ ಘರ್ಜಿಸ್ತಾರೋ ಹಾಗೆಯೇ ಈಗಲೂ ಇದ್ದಾರೆ ಎಂದು ಹೇಳಿದರು.

ಕಾವೇರಿ ನೀರು ಬಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ ಅವರು, ಕಳೆದ ಮೇನಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ನಾನು ಅವರಿಗೆ ಎಚ್ಚರಿಸಿದ್ದೆ. ಮುಂಗಾರು ಈ ಬಾರಿ ಕೈಕೊಡಲಿದೆ ಎಂದು ಜೂನ್ ಮೊದಲೇ ಹೇಳಿದ್ದೆ. ಕಾವೇರಿ ಮಂಡಳಿಗೆ ಹೇಳಿ ಈ ಬಾರಿ ನೀರು ಕೊಡಲು ಸಾಧ್ಯವಿಲ್ಲ ಅಂತ ಅರ್ಜಿ ಹಾಕಿಕೊಳ್ಳುವಂತೆ ಹೇಳಿದ್ದೆ. ಜೂನ್, ಜುಲೈ ತಿಂಗಳು ಕೊಡಲಾಗಲ್ಲ ಅಂತ ಹೇಳಿ ಎಂದೆ. ಸರ್ಕಾರ ಇಷ್ಟಾದ್ರೂ ಎಚ್ಚೆತ್ತುಕೊಳ್ಳಲಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಆಸ್ಪತ್ರೆಗೆ ಭೇಟಿ ನೀಡಿ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ, ಸಚಿವ ಚಲುವರಾಯಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.