ETV Bharat / state

ಬೆಂಗಳೂರು: ಡೆತ್ ನೋಟ್ ಬರೆದಿಟ್ಟು ಪದವಿ ವಿದ್ಯಾರ್ಥಿನಿ ಆತ್ಮಹತ್ಯೆ

author img

By

Published : Apr 30, 2023, 2:27 PM IST

Bengaluru
ಬೆಂಗಳೂರು

ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ- ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

ಬೆಂಗಳೂರು: ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಬೆಳಗ್ಗೆ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಯಿಶಾ ಬಿ.ಆರ್ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ. ಬಿಎಸ್​ಸಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ ಆಯಿಶಾ ಇಂದು ಬೆಳಗ್ಗೆ ಬಿನ್ನಿ ಮಿಲ್ ಸಮೀಪದ ಪೊಲೀಸ್ ಕ್ವಾರ್ಟರ್ಸ್​ನ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಕರಣ ದಾಖಲಾಗಿದೆ.

ಬಳ್ಳಾರಿ ಮೂಲದ ಆಯಿಶಾ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಎಸ್​ಸಿ ಕಂಪ್ಯೂಟರ್ ಸೈನ್ಸ್ ಒದುತ್ತಿದ್ದಳು. ಆದರೆ ಕಳೆದ ಎರಡ್ಮೂರು ವರ್ಷಗಳ ಹಿಂದೆ ಸಿಐಡಿನಲ್ಲಿ ಸಬ್ ಇನ್ಸ್​​ಪೆಕ್ಟರ್ ಆಗಿದ್ದ ಭೀಮೇಶ್ ನಾಯಕ ಎಂಬಾತನ ಪರಿಚಯವಾಗಿತ್ತು. ಇದೇ ಪರಿಚಯ ಪ್ರೇಮಕ್ಕೆ ತಿರುಗಿ ನಂತರ ಮನಸ್ತಾಪ ಕೂಡ ಉಂಟಾಗಿತ್ತಂತೆ. ಬಳಿಕ ಆಯಿಶಾ ಭೀಮೇಶ್ ನಾಯಕನ ಮೇಲೆ ದೂರು ನೀಡಿದ್ದಳು.

ಪೋಕ್ಸೋ ಪ್ರಕರಣದಲ್ಲಿ ಭೀಮೇಶ್ ಜೈಲು ಶಿಕ್ಷೆಯನ್ನೂ ಅನುಭವಿಸಿ ಬಂದಿದ್ದ. ಜೈಲಿನಿಂದ ಹೊರಬಂದ ಮೇಲೂ ಸಹ ಇಬ್ಬರೂ ಒಂದಾಗಿ ವಾಸಿಸಲಾರಂಭಿಸಿದ್ದರು. ಆಯಿಶಾ ಮಂಗಳೂರಿನಿಂದ ಬೆಂಗಳೂರಿನ ಸಿರ್ಸಿ ಸರ್ಕಲ್ ಬಳಿ ಇರುವ ಪೊಲೀಸ್ ಕ್ವಾರ್ಟರ್ಸ್​ನ ಭೀಮೇಶ್ ಮನೆಯಲ್ಲಿ ಬಂದು ಉಳಿದುಕೊಳ್ಳುತ್ತಿದ್ದಳು. ಹೀಗೆ ಏ.24ರಂದು ಬೆಂಗಳೂರಿಗೆ ಬಂದಿದ್ದ ಆಯಿಶಾ ಭೀಮೇಶ್ ಜತೆ ಉಳಿದುಕೊಂಡಿದ್ದಳು. ಆದರೆ ಇಂದು ಬೆಳಗ್ಗೆ 8.30ಕ್ಕೆ ಭೀಮೇಶ್ ಊರಿಗೆ ತೆರಳಿದ್ದರು. ಮನೆಯಲ್ಲಿದ್ದ ಆಯಿಶಾ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಪೊಲೀಸರು ತಿಳಿಸಿದ್ದಾರೆ.

ಡೆತ್‍ ನೋಟ್‍ನಲ್ಲೇನಿದೆ..?: "ನನ್ನ ಸಾವಿಗೆ ಕಾರಣ ಯಾರೂ ಅಲ್ಲ. ಈ ಜೀವನದ ಮೇಲೆ ಜಿಗುಪ್ಸೆ ಬಂದ ಕಾರಣದಿಂದ ನಾನೇ ಸ್ವತಃ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಾನು ನನ್ನ ಕುಟುಂಬಕ್ಕೆ ಹಾಗೂ ಭೀಮೇಶ್ ನಾಯಕ್ ಅವರ ಮೇಲೆ ನೀಡಿದ್ದ ಸುಳ್ಳು ದೂರಿನಿಂದ ತುಂಬಾ ಪಶ್ಚಾತ್ತಾಪ ಪಟ್ಟಿದ್ದೇನೆ. ಭೀಮೆಶ್ ನಾಯಕ್ ತುಂಬಾ ಸೂಕ್ಷ್ಮ ಹಾಗೂ ಮುಗ್ಧ ವ್ಯಕ್ತಿ. ಅವರ ಹಾಗೂ ನನ್ನ ಮಧ್ಯೆ ಯಾವುದೇ ದೈಹಿಕ ಸಂಪರ್ಕವಿರುವುದಿಲ್ಲ. ನಾನು ಮಾಡಿದ ಈ ಸುಳ್ಳು ಕೇಸ್‍ನಿಂದ ಅವರ ತಂದೆ ಅನಾರೋಗ್ಯಕ್ಕೀಡಾಗಿದ್ದಾರೆ. ನನ್ನಿಂದ ಎರಡು ಕುಟುಂಬಗಳಿಗೂ ತುಂಬಾ ನೋವಾಗಿದೆ. ಈ ಪಶ್ಚಾತ್ತಾಪದಿಂದ ಹೊರಬರಲು ಆಗುತ್ತಿಲ್ಲ. ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಭೀಮೇಶ್ ನಾಯಕ್ ನನ್ನ ಆತ್ಮ ಸ್ನೇಹಿತ. ಈ ನನ್ನ ಆತ್ಮಹತ್ಯೆಗೂ ಭೀಮೇಶ್​ಗೂ ಯಾವುದೇ ಸಂಬಂಧ ಇಲ್ಲ" ಎಂದೆಲ್ಲ ಬರೆದುಕೊಂಡಿದ್ದಾಳೆ.

ಸಾಯುವ ಮುನ್ನ ತನ್ನ ಕೈ ಮೇಲೆ ಭೀಮೇಶ್ ಹೆಸರು ಮತ್ತು ಆತನ ಫೋನ್ ನಂಬರ್​ ಕೂಡ ಬರೆದುಕೊಂಡಿದ್ದಾಳೆ. ಅಲ್ಲದೇ ಡೆತ್ ನೋಟ್​​ನಲ್ಲಿ ಏ.24 ದಿನಾಂಕ ನಮೂದಿಸಿದ್ದಾಳೆ. ಹಾಗಾಗಿ ಬೆಂಗಳೂರಿಗೆ ಬರುವಾಗಲೇ ಆಕೆ ಸಾಯುವ ನಿರ್ಧಾರ ಮಾಡಿದ್ದಳಾ? ಎಂಬ ಪ್ರಶ್ನೆ ಮೂಡಿದೆ. ಸದ್ಯ ಮೃತ ದೇಹವನ್ನು ಮರಣೋತ್ತರ ‌ಪರೀಕ್ಷೆಗೆ ರವಾನಿಸಲಾಗಿದೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು‌ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಪಿಯುಸಿಯಲ್ಲಿ ಫೇಲ್‌: ವಿದ್ಯಾರ್ಥಿನಿ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.