ETV Bharat / state

ಪಂಚ ಗ್ಯಾರಂಟಿ, ಬರ ನಿರ್ವಹಣೆಯ ಹೊರೆ ಮಧ್ಯೆ ನಿರೀಕ್ಷಿತ ಗುರಿ ತಲುಪದ ರಾಜ್ಯ ಸರ್ಕಾರದ ತೆರಿಗೆ ಸಂಗ್ರಹ

author img

By ETV Bharat Karnataka Team

Published : Sep 28, 2023, 6:12 PM IST

Updated : Sep 28, 2023, 10:08 PM IST

ಆರ್ಥಿಕ ಇಲಾಖೆಯ ಮಾಹಿತಿ ಪ್ರಕಾರ 2023-24 ಸಾಲಿನ ಐದು ತಿಂಗಳ ಪರಿಷ್ಕೃತ ತೆರಿಗೆ ಸಂಗ್ರಹದ ಗುರಿ ಇದ್ದಿದ್ದು 71,312.45 ಕೋಟಿ ರೂ. ಕಳೆದ ಐದು ತಿಂಗಳಲ್ಲಿ ಪ್ರಮುಖ ತೆರಿಗೆಗಳ ಸಂಗ್ರಹ 63,352.12 ಕೋಟಿ ರೂ. ಮಾತ್ರ. ಅಂದರೆ ಐದು ತಿಂಗಳಲ್ಲಿ 7,960 ಕೋಟಿ ರೂ. ತೆರಿಗೆ ಸಂಗ್ರಹದಲ್ಲಿ ಕುಸಿತ ಕಂಡಿದೆ. ನಿಗದಿತ ಗುರಿ ಮುಟ್ಟಲು ರಾಜ್ಯ ಸರ್ಕಾರದ ಯಾವ ತೆರಿಗೆ ಇಲಾಖೆಗಳಿಗೂ ಸಾಧ್ಯವಾಗುತ್ತಿಲ್ಲ.

Bangalore VidhanaSoudha
ಬೆಂಗಳೂರು ವಿಧಾನಸೌಧ

ಬೆಂಗಳೂರು: ಪಂಚ ಗ್ಯಾರಂಟಿ ಅನುಷ್ಠಾನ ಹಾಗೂ ಬರದ ನಿರ್ವಹಣೆ ನಿಭಾಯಿಸಬೇಕಾದ ರಾಜ್ಯ ಸರ್ಕಾರಕ್ಕೆ ಹೊಸ ತಲೆ ನೋವು ಆರಂಭವಾಗಿದೆ. ರಾಜ್ಯದ ಪ್ರಮುಖ ತೆರಿಗೆಗಳ ಸಂಗ್ರಹ ನಿರೀಕ್ಷಿತ ಗುರಿ ತಲುಪದೇ ಇರುವುದು ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.‌ ಆಗಸ್ಟ್ ವರೆಗೆ ರಾಜ್ಯದ ತೆರಿಗೆ ಸಂಗ್ರಹದಲ್ಲಿನ ಸ್ಥಿತಿಗತಿ ಏನಿದೆ ಎಂಬುದರ ವರದಿ ಇಲ್ಲಿದೆ..

ಕಾಂಗ್ರೆಸ್ ಸರ್ಕಾರಕ್ಕೆ ಮೊದಲ ವರ್ಷದ ಆಡಳಿತ ದೊಡ್ಡ ಸವಾಲಿನಿಂದ ಕೂಡಿದೆ. ಒಂದೆಡೆ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಬೃಹತ್​ ಪ್ರಮಾಣದಲ್ಲಿ ಅನುದಾನ ಕ್ರೋಢೀಕರಣದ ಕಸರತ್ತು, ಇನ್ನೊಂದೆಡೆ ತೀವ್ರ ಬರ‌ ಪರಿಸ್ಥಿತಿ. ರಾಜ್ಯದ 195 ತಾಲೂಕುಗಳಲ್ಲಿ ಬರ ಉಂಟಾಗಿದ್ದು, ಇದರಿಂದ ಒಟ್ಟು 30,432 ಕೋಟಿ ರೂ. ನಷ್ಟ ಉಂಟಾಗಿದೆ. ಈ ಪೈಕಿ NDRF ಮಾನದಂಡದ‌ ಪ್ರಕಾರ 4,860.13 ಕೋಟಿ ಬರ ಪರಿಹಾರ ಕೋರಿ‌ ಕೇಂದ್ರಕ್ಕೆ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ಪಂಚ ಗ್ಯಾರಂಟಿಯ ದೊಡ್ಡ ಹೊರೆ, ಅಭಿವೃದ್ಧಿ ಕಾಮಗಾರಿ ಹಾಗೂ ಬರ ನಿರ್ವಹಣೆ ರಾಜ್ಯ ಸರ್ಕಾರವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.

ಈ ಮಧ್ಯೆ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಆದಾಯ ಕ್ರೋಢೀಕರಣಕ್ಕಾಗಿ ನಾನಾ ಕಸರತ್ತು ನಡೆಸುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಈ ಬಾರಿ ಬಹುವಾಗಿ ಹೆಚ್ಚಿನ ತೆರಿಗೆ ಸಂಗ್ರಹದ ಗುರಿಯನ್ನು ನಿಗದಿ ಮಾಡಿದೆ. 2023-24 ಸಾಲಿನಲ್ಲಿ 2,38,410 ಕೋಟಿ ರೂ.ಗಳ ರಾಜಸ್ವ ಜಮೆಯ ಅಂದಾಜು ಮಾಡಲಾಗಿದೆ. ಇದರಲ್ಲಿ ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವ ಜಿಎಸ್​ಟಿ ಪರಿಹಾರ ಒಳಗೊಂಡಂತೆ 1,75,653 ಕೋಟಿ ರೂ.ಗಳಾಗಿದ್ದು, ತೆರಿಗೆಯೇತರ ರಾಜಸ್ವಗಳಿಂದ 12,500 ಕೋಟಿ ರೂ.ಗಳನ್ನು ಸಂಗ್ರಹಿಸುವ ನಿರೀಕ್ಷೆ ಇಟ್ಟಿದೆ. ಹೆಚ್ಚಿನ ತೆರಿಗೆ ಸಂಗ್ರಹದ ಗುರಿ ನೀಡಿರುವ ರಾಜ್ಯ ಸರ್ಕಾರಕ್ಕೆ ಇದೀಗ ತೆರಿಗೆ ಸಂಕಷ್ಟದ ಬರೆ ಬಿದ್ದಿದೆ.

ನಿರೀಕ್ಷಿತ ಗುರಿ ತಲುಪದ ತೆರಿಗೆ ಸಂಗ್ರಹ: ರಾಜ್ಯ ಸರ್ಕಾರಕ್ಕೆ ಗಾಯದ ಮೇಲೆ ಬರೆ ಎಂಬಂತೆ ಪ್ರಮುಖ ತೆರಿಗೆಗಳಾದ ವಾಣಿಜ್ಯ ತೆರಿಗೆ, ಅಬಕಾರಿ ತೆರಿಗೆ, ಮೋಟಾರು ವಾಹನ ತೆರಿಗೆ, ಮುದ್ರಾಂಕ ಹಾಗೂ ನೋಂದಣಿ ಶುಲ್ಕದ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ. ಆರ್ಥಿಕ ವರ್ಷದ ಐದು ತಿಂಗಳ ತೆರಿಗೆ ಸಂಗ್ರಹದ ಪ್ರಗತಿ ಗತಿ ಕಳೆದುಕೊಂಡಿರುವುದು ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಈ ಸಾಲಿನಲ್ಲಿ ಸುಮಾರು 24% ಬೆಳವಣಿಗೆ ದರದಲ್ಲಿ ತೆರಿಗೆ ಸಂಗ್ರಹದ ಗುರಿ ನೀಡಲಾಗಿದೆ. ಆದರೆ, ಈವರೆಗಿನ ಒಟ್ಟು ತೆರಿಗೆ ಸಂಗ್ರಹದ ಬೆಳವಣಿಗೆ ದರ ಕೇವಲ 15% ಆಸುಪಾಸಿನಲ್ಲಿದೆ ಎಂದು ಆರ್ಥಿಕ ಇಲಾಖೆ ಅಂಕಿಅಂಶ ನೀಡಿದೆ. ಎಲ್ಲಾ ಪ್ರಮುಖ ತೆರಿಗೆಗಳ ಸಂಗ್ರಹ ಗುರಿ ತಲುಪಲು ಸಾಧ್ಯವಾಗಿಲ್ಲ. ಇದರಿಂದ ಸಿಎಂ ಸಿದ್ದರಾಮಯ್ಯ ಎಲ್ಲಾ ತೆರಿಗೆ ಸಂಗ್ರಹಿಸುವ ಇಲಾಖೆಗಳಿಗೆ ಗುರಿ ಮೀರಿ ತೆರಿಗೆ ಸಂಗ್ರಹಿಸುವಂತೆ ನಿರ್ದೇಶನ ನೀಡಿದ್ದಾರೆ. ಪಂಚ ಗ್ಯಾರಂಟಿಗಾಗಿ ಹಣ ಹಾಗೂ ಬರ ನಿರ್ವಹಣೆಯ ಆರ್ಥಿಕ ಹೊರೆಯ ಮಧ್ಯೆ ತೆರಿಗೆ ಸಂಗ್ರಹದ ಬರೆ ದೊಡ್ಡ ಆಘಾತ ನೀಡಿದಂತಿದೆ.

ಆರ್ಥಿಕ ಇಲಾಖೆಯ ಅಂಕಿಅಂಶದ ಪ್ರಕಾರ 2023-24 ಸಾಲಿನ ಐದು ತಿಂಗಳ ಪರಿಷ್ಕೃತ ತೆರಿಗೆ ಸಂಗ್ರಹದ ಗುರಿ ಇದ್ದಿದ್ದು 71,312.45 ಕೋಟಿ ರೂ. ಆದರೆ ಕಳೆದ ಐದು ತಿಂಗಳಲ್ಲಿ ಪ್ರಮುಖ ತೆರಿಗೆಗಳ ಸಂಗ್ರಹವಾಗಿದ್ದು 63,352.12 ಕೋಟಿ ರೂ. ಮಾತ್ರ. ಅಂದರೆ ಐದು ತಿಂಗಳಲ್ಲಿ 7,960 ಕೋಟಿ ರೂ. ತೆರಿಗೆ ಸಂಗ್ರಹದಲ್ಲಿ ಕುಸಿತ ಕಂಡಿದೆ. ನಿಗದಿತ ಗುರಿ ಮುಟ್ಟಲು ಯಾವ ತೆರಿಗೆ ಇಲಾಖೆಗಳಿಗೂ ಸಾಧ್ಯವಾಗುತ್ತಿಲ್ಲ.

ವಾಣಿಜ್ಯ ಇಲಾಖೆ: 2023-23 ಸಾಲಿನಲ್ಲಿ ವಾರ್ಷಿಕ ಅಂದಾಜು 98,650 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹದ ಗುರಿ ನಿಗದಿ ಮಾಡಲಾಗಿದೆ. ಅದರಂತೆ ಮಾಸಿಕ 8,220.83 ಕೋಟಿ ರೂ. ಗುರಿ ನಿಗದಿ ಮಾಡಲಾಗಿದೆ. ಏಪ್ರಿಲ್ ನಿಂದ ಆಗಸ್ಟ್ ವರೆಗೆ ಒಟ್ಟು 41,104.15 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಆದರೆ ಐದು ತಿಂಗಳಲ್ಲಿ ಸಂಗ್ರಹವಾದ ವಾಣಿಜ್ಯ ತೆರಿಗೆ 37,755.49 ಕೋಟಿ ರೂ. ಮಾತ್ರ. ಆ ಮೂಲಕ 3,348.66 ಕೋಟಿ ರೂ. ಕುಸಿತ ಕಂಡಿದೆ.

ಅಬಕಾರಿ ತೆರಿಗೆ: 2023-24 ಸಾಲಿನಲ್ಲಿ ವಾರ್ಷಿಕ 36,000 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹದ ಬಜೆಟ್ ಗುರಿ ನಿಗದಿ ಮಾಡಲಾಗಿದೆ. ಅದರಂತೆ ಮಾಸಿಕ 3,000 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹಿಸಬೇಕಾಗಿದೆ. ಐದು ತಿಂಗಳಲ್ಲಿ ಒಟ್ಟು 15,000 ಕೋಟಿ ರೂ.ಅಬಕಾರಿ ತೆರಿಗೆ ಸಂಗ್ರಹ ಮಾಡಬೇಕಾಗಿತ್ತು. ಆದರೆ ಐದು ತಿಂಗಳಲ್ಲಿ ಸಂಗ್ರಹಿಸಿದ್ದು ಕೇವಲ 14,011.39 ಕೋಟಿ ರೂ. ಅಂದರೆ ಗುರಿಗಿಂತ ಸುಮಾರು 988.61 ಕೋಟಿ ರೂ. ಕುಸಿತ ಕಂಡಿದೆ.

ಮೋಟಾರು ವಾಹನ ತೆರಿಗೆ:2023-24 ಸಾಲಿನಲ್ಲಿ ವಾರ್ಷಿಕ 11,500 ಕೋಟಿ ರೂ. ಮೋಟಾರು ವಾಹನ ತೆರಿಗೆ ಸಂಗ್ರಹದ ಬಜೆಟ್ ಗುರಿ ನಿಗದಿ ಮಾಡಲಾಗಿದೆ. ಅದರಂತೆ ಮಾಸಿಕ 958 ಕೋಟಿ ರೂ. ಮೋಟಾರು ವಾಹನ ತೆರಿಗೆ ಸಂಗ್ರಹಿಸಬೇಕಾಗಿದೆ. ಐದು ತಿಂಗಳ ಮೋಟಾರು ವಾಹನ ತೆರಿಗೆ ಸಂಗ್ರಹದ ಸಂಚಿತ ಗುರಿ ನಿಗದಿಯಾಗಿದ್ದು 4,791.65 ಕೋಟಿ ರೂ. ಆದರೆ, ಐದು ತಿಂಗಳಲ್ಲಿ ಸಂಗ್ರಹಿಸಿದ್ದು ಕೇವಲ 4,283.74 ಕೋಟಿ ರೂ. ಅಂದರೆ ನಿರೀಕ್ಷಿತ ಗುರಿಗಿಂತ ಸುಮಾರು 507.91 ಕೋಟಿ ರೂ. ಕುಸಿತ ಕಂಡಿದೆ.

ಮುದ್ರಾಂಕ ನೋಂದಣಿ ಶುಲ್ಕ: 2023-24 ಸಾಲಿನಲ್ಲಿ ವಾರ್ಷಿಕ 25,000 ಕೋಟಿ ರೂ. ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಸಂಗ್ರಹದ ಬಜೆಟ್ ಗುರಿ ನಿಗದಿ ಮಾಡಲಾಗಿದೆ. ಅದರಂತೆ ಮಾಸಿಕ 2,083 ಕೋಟಿ ರೂ. ತೆರಿಗೆ ಸಂಗ್ರಹಿಸಬೇಕಾಗಿದೆ. ಏಪ್ರಿಲ್- ಆಗಸ್ಟ್ ನ ಐದು ತಿಂಗಳ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಸಂಗ್ರಹದ ಸಂಚಿತ ಗುರಿ ನಿಗದಿಯಾಗಿದ್ದು 10,416.65 ಕೋಟಿ ರೂ. ಆದರೆ, ಐದು ತಿಂಗಳಲ್ಲಿ ಸಂಗ್ರಹಿಸಿದ್ದು ಕೇವಲ 7,301.5 ಕೋಟಿ ರೂ. ಅಂದರೆ ನಿರೀಕ್ಷಿತ ಗುರಿಗಿಂತ ಸುಮಾರು 3,115 ಕೋಟಿ ರೂ. ಕುಸಿತ ಕಂಡಿದೆ.

ಇದನ್ನೂಓದಿ:ಆಸ್ತಿ ನೋಂದಣಿಗೆ ಮುಗಿಬಿದ್ದ ಜನ: ಒಂದೇ ದಿನದಲ್ಲಿ ಸರ್ಕಾರದ ಬೊಕ್ಕಸಕ್ಕೆ ಬಂತು ದಾಖಲೆಯ ಮೊತ್ತ

Last Updated :Sep 28, 2023, 10:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.