ETV Bharat / state

Teacher Pay Scale: ತರಬೇತಿ ರಹಿತ ಶಿಕ್ಷಕರ ವೇತನ ಶ್ರೇಣಿಯನ್ನು ಮೇಲ್ದರ್ಜೆಗೇರಿಸಿ ರಾಜ್ಯ ಸರ್ಕಾರ ಆದೇಶ

author img

By

Published : Jun 17, 2023, 3:11 PM IST

ಹೈಕೋರ್ಟ್ ಹಾಗೂ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ನಿರ್ದೇಶನದಂತೆ ಹೊಸ ವೇತನ ನಿಗದಿಪಡಿಸಲಾಗಿದೆ.

Vidhanasoudha
ವಿಧಾನಸೌಧ

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲಾ ತರಬೇತಿ ರಹಿತ ಶಿಕ್ಷಕರ ವೇತನ ಶ್ರೇಣಿಯನ್ನು ತರಬೇತಿ ಹೊಂದಿದ ಶಿಕ್ಷಕರ ವೇತನ ಶ್ರೇಣಿಗೆ ಮೇಲ್ದರ್ಜೆಗೇರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪ್ರಾಥಮಿಕ ಶಾಲೆಗಳ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಶಿಕ್ಷಕರ ವಿದ್ಯಾರ್ಹತೆಯ ಆಧಾರದ ಮೇಲೆ ತರಬೇತಿ ಹೊಂದಿದ ಶಿಕ್ಷಕರು ಮತ್ತು ತರಬೇತಿ ರಹಿತ ಶಿಕ್ಷಕರು ಎಂದು ಎರಡು ಪ್ರತ್ಯೇಕ ವೃಂದಗಳು ಇದ್ದು, ಈ ಎರಡೂ ವೃಂದಗಳ ವೇತನ ಶ್ರೇಣಿಗಳು ಬೇರೆ ಬೇರೆಯಾಗಿರುತ್ತವೆ. ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರುವ, ನೇಮಕಗೊಂಡರೂ ತರಬೇತಿ ಹೊಂದದ ಶಿಕ್ಷಕರ ಹುದ್ದೆಯಲ್ಲಿಯೇ ಮುಂದುವರೆದ ಹಾಗೂ 50 ವರ್ಷಗಳ ವಯೋಮಿತಿಯನ್ನು ದಾಟಿದ ಶಿಕ್ಷಕರ ಮತ್ತು ಶಿಕ್ಷಕರ ಸಂಘದ ಬೇಡಿಕೆಯಂತೆ ತರಬೇತಿ ಹೊಂದದ ಶಿಕ್ಷಕರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕರ ವೇತನ ಶ್ರೇಣಿಯನ್ನು ತರಬೇತಿ ಹೊಂದಿದ ಶಿಕ್ಷಕರ ಹುದ್ದೆಯ ವೇತನ ಶ್ರೇಣಿಗೆ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಲಾಗಿದೆ.

ಹೈಕೋರ್ಟ್ ಹಾಗೂ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ನಿರ್ದೇಶನದಂತೆ ನಿಗದಿತ ವಿದ್ಯಾರ್ಹತೆಯನ್ನು ಹೊಂದಿಲ್ಲದೆ ಪ್ರಾಥಮಿಕ ಶಾಲಾ ತರಬೇತಿ ರಹಿತ (ಹೊಂದದ) ಶಿಕ್ಷಕರ ಹುದ್ದೆಯಲ್ಲಿ ಕನಿಷ್ಠ 15 ವರ್ಷ ಸೇವೆಯನ್ನು ಪೂರ್ಣಗೊಳಿಸಿದ ಶಿಕ್ಷಕರ ವೇತನವನ್ನು ಪ್ರಾಥಮಿಕ ಶಾಲಾ ತರಬೇತಿ ಹೊಂದಿದ ಶಿಕ್ಷಕರ ಹುದ್ದೆಯ ವೇತನ ಶ್ರೇಣಿಯಲ್ಲಿ 2011 ರ ಸರ್ಕಾರಿ ಆದೇಶ ಹಾಗೂ 2019 ರ ಆದೇಶಗಳ ನಿಯಮಾನುಸಾರ ನಿಗದಿಪಡಿಸಲಾಗಿದೆ.

ಒಂದೊಮ್ಮೆ ಪ್ರಾಥಮಿಕ ಶಾಲಾ ತರಬೇತಿ ಹೊಂದದ ಶಿಕ್ಷಕರಿಗೆ ತರಬೇತಿ ಹೊಂದಿದ ಶಿಕ್ಷಕರ ಹುದ್ದೆಯ ವೇತನ ಶ್ರೇಣಿಯನ್ನು 2011 ರ ಆದೇಶದ ಆಶಯಕ್ಕೆ ವ್ಯತಿರಿಕ್ತವಾಗಿ ನಿಗದಿಪಡಿಸಿ ಅವರಿಗೆ ಹೆಚ್ಚುವರಿಯಾಗಿ ವೇತನ ಪಾವತಿಸಿದಲ್ಲಿ ಅದನ್ನು ಸರ್ಕಾರ ವಸೂಲಿ ಮಾಡುವಂತಿಲ್ಲ. 2011 ರ ಆದೇಶದಡಿ ಹೊರಡಿಸಲಾದ ಸೇರ್ಪಡೆ ಆದೇಶ ಮತ್ತು ಸ್ಪಷ್ಟೀಕರಣಗಳ ಬೆಳಕಿನಲ್ಲಿ ತರಬೇತಿ ಹೊಂದಿದ ಶಿಕ್ಷಕರ ವೇತನ ಶ್ರೇಣಿಯಲ್ಲಿ ವೇತನವನ್ನು ಪುನರ್ ನಿಗದಿಪಡಿಸಿದ ನಂತರ ನಿಯಮಾನುಸಾರ ಶಿಕ್ಷಕರ ಪಿಂಚಣಿಯನ್ನು ಪರಿಷ್ಕರಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವೇತನ ನಿಗದಿಯಲ್ಲಿ ಒಂದೊಮ್ಮೆ ಶಿಕ್ಷಕರ ವೇತನವು ಕೆಳಗಿನ ಹಂತಕ್ಕೆ ನಿಗದಿಯಾದಲ್ಲಿ ಅವರಿಗೆ ಪಾವತಿಸಿರುವ ಹೆಚ್ಚುವರಿ ವೇತನ ಅಥವಾ ಪಿಂಚಣಿಯನ್ನು ವಸೂಲಿ ಮಾಡುವಂತಿಲ್ಲ. ವೇತನ ನಿಗದಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಉದ್ಭವಿಸಿದ್ದಲ್ಲಿ ಅಂತಹ ಪ್ರಕರಣಗಳನ್ನು ಸೂಕ್ತ ಆದೇಶಕ್ಕಾಗಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಮತ್ತು ಈ ಕುರಿತು ಸರ್ಕಾರವು ಕೈಗೊಳ್ಳುವ ನಿರ್ಧಾರ ಅಂತಿಮವಾಗಿರುತ್ತದೆ. ಈ ಆದೇಶಗಳು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಲ್ಲಿ ಟಿಇಟಿ ಅರ್ಹತೆ ಆಧರಿಸಿ ಹಲವು ಹಲವರಿಗೆ ಗೇಟ್​ಪಾಸ್: ಶಿಕ್ಷಕರ ಅಸಮಾಧಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.