ETV Bharat / state

ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಲ್ಲಿ ಟಿಇಟಿ ಅರ್ಹತೆ ಆಧರಿಸಿ ಹಲವು ಹಲವರಿಗೆ ಗೇಟ್​ಪಾಸ್: ಶಿಕ್ಷಕರ ಅಸಮಾಧಾನ

author img

By

Published : May 23, 2023, 7:49 PM IST

ಒಂದು ದಶಕಗಳಿಂದ ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಬಿಬಿಎಂಪಿ ಮನೆಗೆ ಕಳುಹಿಸಲು ಮುಂದಾಗಿರುವುದು ಸರಿಯಲ್ಲ ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

BBMP
ಬಿಬಿಎಂಪಿ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಲ್ಲಿ ಟಿಇಟಿ ಅರ್ಹತೆ ಉಲ್ಲೇಖಿಸಿ ಹಲವು ಶಿಕ್ಷಕರನ್ನು ಹೊರ ಕಳುಹಿಸುತ್ತಿರುವ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಹೊರಗುತ್ತಿಗೆ ಶಿಕ್ಷಕರ ಹಿತ ಕಾಪಾಡಬೇಕೆಂದು ಹಲವು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

ಪಾಲಿಕೆಯ ಅಡಿಯಲ್ಲಿ 163 ಶಾಲಾ, ಕಾಲೇಜುಗಳಿದ್ದು 840 ಬೋಧಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಬರೀ 110 ಕಾಯಂ ಬೋಧಕರಿದ್ದರೆ, 720 ಹೊರಗುತ್ತಿಗೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಇದೀಗ ಟಿಇಟಿ ಪರೀಕ್ಷೆಯ ನೆಪ ಹೇಳಿ ಕಳೆದ ಒಂದು ದಶಕಗಳಿಂದ ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಬಿಬಿಎಂಪಿ ಮನೆಗೆ ಕಳುಹಿಸಲು ಮುಂದಾಗಿರುವುದು ಸರಿಯಲ್ಲ ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಡಿಮೆ ಫಲಿತಾಂಶದ ಕಾರಣ ನೀಡಿ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ವಜಾಗೊಳಿಸಿ ಅವರ ಬದುಕನ್ನು ದುಸ್ಥಿಗೆ ತಳ್ಳಲು ಹೊರಟಿದೆ. ಕಡಿಮೆ ಫಲಿತಾಂಶಕ್ಕೆ ಹೊರಗುತ್ತಿಗೆ ನೌಕರರೇ ಕಾರಣವೆಂಬ ಆರೋಪ ಸರಿಯಲ್ಲ. ಈವರೆಗೂ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಬೇಸರ ಹೊರಹಾಕಿದ್ದಾರೆ.

160ಕ್ಕೂ ಹೆಚ್ಚು ಶಿಕ್ಷಕರಿಗೆ ಸಮಸ್ಯೆ: ಪಾಲಿಕೆಯು ಕಳೆದ ವರ್ಷವೇ ಅನರ್ಹ ಹೊರಗುತ್ತಿಗೆ ಶಿಕ್ಷಕರನ್ನು ಕೈಬಿಡಲು ಮುಂದಾಗಿತ್ತು. ಆದರೆ ಶಿಕ್ಷಕರು ಕಾಲಾವಕಾಶ ಕೇಳಿದ ಹಿನ್ನೆಲೆ ಒಂದು ವರ್ಷಗಳ ಕಾಲ ಮುಂದೂಡಲಾಗಿತ್ತು. ಆದರೆ ಈಗ ಪಾಲಿಕೆಯು ದಾಖಲಾತಿಗಳ ಪರಿಶೀಲನೆಗೆ ಮುಂದಾಗಿದ್ದು, ನೇಮಕಾತಿ ಪರಿಶೀಲನೆ ವೇಳೆ ಟಿಇಟಿ ಸರ್ಟಿಫಿಕೇಟ್ ಪರಿಶೀಲನೆ ಮಾಡಲಾಗುತ್ತದೆ. ಪ್ರೌಢಶಾಲೆ ಹಾಗೂ ಕಾಲೇಜಿಗೂ ಕೂಡ, ಬೇಕಾದ ಅರ್ಹತೆಯಿಲ್ಲದಿದ್ದರೆ ಕೈ ಬಿಡಲಾಗುತ್ತದೆ. ಪಾಲಿಕೆಯ ಶಾಲಾ ಕಾಲೇಜುಗಳಲ್ಲಿರುವ 160ಕ್ಕೂ ಅಧಿಕ ಶಿಕ್ಷಕರು ಅರ್ಹತೆ ಹೊಂದಿಲ್ಲ. ಹೀಗಾಗಿ ಪಾಲಿಕೆಯು ಅನರ್ಹ ಶಿಕ್ಷಕರನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದ್ದರಿಂದ 163 ಶಾಲಾ ಕಾಲೇಜುಗಳಲ್ಲಿರುವ 160ಕ್ಕೂ ಅಧಿಕ ಶಿಕ್ಷಕರಿಗೆ ಸಮಸ್ಯೆಯಾಗಲಿದೆ.

ಶಿಕ್ಷಕರ ಅಳಲು: ಈ ಕುರಿತು ಶಾಲಾ ಶಿಕ್ಷಕರೊಬ್ಬರು ಮಾತನಾಡಿ, ವರ್ಷದಲ್ಲಿ 11 ತಿಂಗಳು ಮಾತ್ರ ಗೌರವ ಧನ ನೀಡುತ್ತಾರೆ. ಅತೀ ಕಡಿಮೆ ಸಂಬಳ. ಅದು ಸಹ ತಿಂಗಳಿಗೆ ಸರಿಯಾಗಿ ಕೊಡದೆ ಮೂರು ತಿಂಗಳಿಗೊಮ್ಮೆ ನೀಡಲಾಗುತ್ತಿದೆ. ಇದರಿಂದ ಬದುಕು ಸಾಗಿಸುವುದು ಕಷ್ಟಕರವಾಗಿದೆ. ಈ ಹಿಂದೆಯೇ ಇದನ್ನು ಬಿಬಿಎಂಪಿ ಆಯುಕ್ತರ ಗಮನಕ್ಕೆ ತಂದರೂ, ಯಾವುದೇ ಬದಲಾವಣೆ ಕಂಡಿಲ್ಲ ಎಂದಿದ್ದಾರೆ.

ಪಾಲಿಕೆ ಪ್ರೌಢಶಾಲೆಗಳಲ್ಲಿ ಗುಮಾಸ್ತರು ಇಲ್ಲ. ಹೀಗಾಗಿ, ಈ ಕೆಲಸವನ್ನು ಶಿಕ್ಷಕರೇ ನಿರ್ವಹಿಸಬೇಕು. ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಶಿಕ್ಷಕರನ್ನು ಒಒಡಿ ಕೆಲಸಕ್ಕೆ ನಿಯೋಜಿಸಿ ವಾರದಲ್ಲಿ ಎರಡು ಮೂರು ಶಾಲೆಗಳಿಗೆ ಸುತ್ತಾಡಿಸುತ್ತಾರೆ. ಪ್ರತಿಶಾಲೆಗೂ ಒಬ್ಬ ದೈಹಿಕ ಶಿಕ್ಷಕರು ಇರುವುದು ಕಡ್ಡಾಯ. ಆದರೆ ಎಷ್ಟೋ ಬಿಬಿಎಂಪಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರಿಲ್ಲ. ಇದನ್ನು ನಾವೇ ಮಾಡಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.

ಪಾಲಿಕೆಯ ನಿಜವಾದ ಉದ್ದೇಶ ಗುಣಮಟ್ಟದ ಶಿಕ್ಷಣ ಫಲಿತಾಂಶ ಗಳಿಸುವುದು ಆಗಿದ್ದರೆ, ಈಗಿರುವ ಎಲ್ಲ ನೌಕರರನ್ನು ಪೂರ್ಣ ಪ್ರಮಾಣದ ಖಾಯಂ ನೌಕರರನ್ನಾಗಿ ನೇಮಿಸಿಕೊಳ್ಳಲಿ. ಜತೆಗೆ, ಸೂಕ್ತ ತರಬೇತಿ ನೀಡಲಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: UPSC Results 2023: ಬೆಳಗಾವಿ ಯುವತಿ ಶೃತಿಗೆ 362ನೇ ರ‍್ಯಾಂಕ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.