ETV Bharat / state

ರಾಷ್ಟ್ರೀಯ ಶಿಕ್ಷಣ ನೀತಿಗೆ ಸೆಡ್ಡು: ರಾಜ್ಯ ಶಿಕ್ಷಣ ನೀತಿ ಸಮಿತಿ ರಚಿಸಿದ ಸರ್ಕಾರ

author img

By ETV Bharat Karnataka Team

Published : Oct 12, 2023, 6:41 AM IST

Updated : Oct 12, 2023, 11:51 AM IST

state-govt-formed-state-education-policy-committee
ರಾಷ್ಟ್ರೀಯ ಶಿಕ್ಷಣ ನೀತಿಗೆ ಸೆಡ್ಡು : ರಾಜ್ಯ ಶಿಕ್ಷಣ ನೀತಿ ಸಮಿತಿ ರಚಿಸಿದ ಸರ್ಕಾರ

ರಾಜ್ಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರ ಶಿಕ್ಷಣ ನೀತಿಯ ಕರಡು ರಚಿಸಲು ರಾಜ್ಯ ಶಿಕ್ಷಣ ನೀತಿ ಸಮಿತಿ ರಚಿಸಿ ಮಹತ್ವದ ಆದೇಶ ಹೊರಡಿಸಿದೆ.

ಬೆಂಗಳೂರು : ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಬದಲು ಪ್ರತ್ಯೇಕ ರಾಜ್ಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಶಿಕ್ಷಣ ನೀತಿಯ ಕರಡು ಸಿದ್ಧಪಡಿಸಲು ಪ್ರೊ. ಸುಖ್‌ದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಶಿಕ್ಷಣ ನೀತಿ ಸಮಿತಿಯನ್ನು ರಚಿಸಿ ಮಹತ್ವದ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ತರುವ ಕುರಿತು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಅಧಿಕಾರಕ್ಕೆ ಬಂದ ಕೂಡಲೇ ಪಠ್ಯ ಪರಿಷ್ಕರಣೆಗೆ ಕೈ ಹಾಕಿದ್ದ ಸರ್ಕಾರ ರಾಜ್ಯ ಶಿಕ್ಷಣ ನೀತಿ ಜಾರಿಗೆ ಪೂರಕವಾಗಿ ರಾಜ್ಯ ಶಿಕ್ಷಣ ನೀತಿ ಆಯೋಗ ರಚನೆ ಮಾಡಿದೆ. 2024ರ ಫೆ.28ರೊಳಗೆ ವರದಿ ಸಲ್ಲಿಸುವಂತೆ ಆಯೋಗಕ್ಕೆ ಸರ್ಕಾರ ಸೂಚನೆ ನೀಡಿದ್ದು, ರಾಜ್ಯ ಶಿಕ್ಷಣ ನೀತಿ ಆಯೋಗಕ್ಕೆ ಒಟ್ಟು 15 ಸದಸ್ಯರನ್ನು ನೇಮಕ ಮಾಡಲಾಗಿದೆ. 8 ವಿಷಯ ತಜ್ಞರು, ಪ್ರೊ.ನಿರಂಜನಾರಾಧ್ಯ, ರಹಮತ್ ತರೀಕೆರೆ ಸೇರಿದಂತೆ ಪ್ರಮುಖ ಸಾಹಿತಿಗಳಿಗೂ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.

  • A committee has been established, under the chairmanship of Prof. Sukhdev Thorat, to prepare the draft of the Karnataka State Education Policy.

    I am confident that this committee will provide suitable recommendations for nurturing scientific temperament, intellectual growth, and… pic.twitter.com/hfF6Rymnoz

    — CM of Karnataka (@CMofKarnataka) October 11, 2023 " class="align-text-top noRightClick twitterSection" data=" ">

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ರಾಜ್ಯ ಶಿಕ್ಷಣ ನೀತಿಯ ಕರಡು ಸಿದ್ಧಪಡಿಸಲು ಪ್ರೊ. ಸುಖ್‌ದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಶಿಕ್ಷಣ ನೀತಿ ಸಮಿತಿ ರಚಿಸಿ ಆದೇಶಿಸಲಾಗಿದೆ. ಈ ಸಮಿತಿಯು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕತೆ, ವೈಚಾರಿಕತೆ ಬೆಳೆಸುವ ಮತ್ತು ಅವರ ಮನೋವಿಕಾಸಕ್ಕೆ ಅಗತ್ಯವಾದ ಶಿಕ್ಷಣ ನೀಡಲು ಸೂಕ್ತ ಶಿಫಾರಸುಗಳನ್ನು ನೀಡಲಿದೆ ಎಂಬ ಭರವಸೆಯಿದೆ. ಕರ್ನಾಟಕ ರಾಜ್ಯ ಶಿಕ್ಷಣ ನೀತಿಯು ದೇಶಕ್ಕೆ ಮಾದರಿ ಶಿಕ್ಷಣ ನೀತಿಯಾಗಿ ಹೊರಹೊಮ್ಮಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ಸಂವಿಧಾನದ ಆಶಯದಂತೆ ಶಿಕ್ಷಣ ವ್ಯವಸ್ಥೆ ರೂಪಿಸಬೇಕು : ಕಳೆದ ತಿಂಗಳು ಆಲ್​ ಇಂಡಿಯಾ ಸ್ಟೂಡೆಂಟ್​ ಫೆಡೆರೇಷನ್​​ ಆಯೋಜನೆ ಮಾಡಿದ್ದ ದುಂಡು ಮೇಜಿನ ಸಭೆಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ನೀತಿ ರೂಪಿಸಲು ಶಿಕ್ಷಣ ತಜ್ಞರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದರು. ಈ ವೇಳೆ ಮಾತನಾಡಿದ್ದ ಶಿಕ್ಷಣ ತಜ್ಞ ನಿರಂಜನ್​ ಆರಾಧ್ಯ, ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸುವುದಾಗಿ ಹೇಳಿತ್ತು. ಜೊತೆಗೆ ಈ ಸಂಬಂಧ ಸಮಿತಿಯನ್ನು ರಚಿಸಿತ್ತು. ಆದರೆ ಈ ಸಮಿತಿಯಲ್ಲಿ ಶಿಕ್ಷಣ ತಜ್ಞರೇ ಇರಲಿಲ್ಲ ಎಂದು ವ್ಯಂಗ್ಯವಾಡಿದ್ದರು.

ಶಿಕ್ಷಣ ವ್ಯವಸ್ಥೆಯನ್ನು ಸಂವಿಧಾನದ ಆಶಯದಂತೆ ಕಟ್ಟಬೇಕಿದೆ. ರಾಜ್ಯ ಶಿಕ್ಷಣ ನೀತಿ ರೂಪಿಸಲು ಸಮರ್ಥ, ಪ್ರಾತಿನಿಧಿಕ ಸಮಿತಿ ರಚನೆ ಮಾಡಬೇಕು. ರಾಜ್ಯ ಶಿಕ್ಷಣ ನೀತಿ ರೂಪಿಸುವವರು ಯೋಗ್ಯರಾಗಿರಬೇಕು. ಪ್ರಾಮಾಣಿಕ ಚಿಂತಕರು, ಅಲ್ಪಸಂಖ್ಯಾತರು ,ಮಹಿಳೆಯರಿಗೆ ಸಮಿತಿಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಇದೇ ವೇಳೆ ಒತ್ತಾಯಿಸಿದ್ದರು.

ಇದನ್ನೂ ಓದಿ : ಸರ್ಕಾರಿ ಶಾಲೆಗಳಿಗೆ 20 ಸಾವಿರ ಶಿಕ್ಷಕರ ನೇಮಕಾತಿಗೆ ನಿರ್ಧಾರ: ಶಿಕ್ಷಣ ಸಚಿವ ಮಧು ಬಂಗಾರಪ್ಪ

Last Updated :Oct 12, 2023, 11:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.