ETV Bharat / state

2006ರಿಂದ ಇಲ್ಲಿಯವರೆಗೆ ನಡೆದ ಎಲ್ಲ ಹಗರಣಗಳ ನ್ಯಾಯಾಂಗ ತನಿಖೆ ನಡೆಸಿ: ಸಿದ್ದರಾಮಯ್ಯ ಆಗ್ರಹ

author img

By

Published : Sep 24, 2022, 2:35 PM IST

Opposition leader Siddaramaiah
ವಿಪಕ್ಷ ನಾಯಕ ಸಿದ್ದರಾಮಯ್ಯ

2006 ರಿಂದ ಇಲ್ಲಿಯವರೆಗೆ ನಡೆದ ಎಲ್ಲ ಹಗರಣಗಳನ್ನು ನ್ಯಾಯಾಂಗ ತನಿಖೆಗೆ ಕೊಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬೆಂಗಳೂರು: ಐಪಿಎಸ್ ಅಧಿಕಾರಿ ಅಮೃತ್ ಪೌಲ್ ವಿರುದ್ಧ ಸಾಕಷ್ಟು ದೂರುಗಳಿದ್ದರೂ ಅದನ್ನು ಕಡೆಗಣಿಸಿ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಮಾಡಿದ್ದೇ ಬಸವರಾಜ ಬೊಮ್ಮಾಯಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೊಮ್ಮಾಯಿ ಗೃಹ ಸಚಿವರಾಗಿದ್ದ ಸಂದರ್ಭ ಪೌಲ್​ ಅವರನ್ನು ನೇಮಕಾತಿ ವಿಭಾಗಕ್ಕೆ ಎಡಿಜಿಪಿಯನ್ನಾಗಿ ನೇಮಿಸಿದ್ದರು. ನಂತರ ನಡೆದ ಪಿಎಸ್ಐ ನೇಮಕಾತಿ ಹಗರಣ ಎಲ್ಲರಿಗೂ ತಿಳಿದಿದೆ. ನಮ್ಮ ಅವಧಿಯಲ್ಲಿ ಒಟ್ಟು 8 ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದೆವು. ಈ ಸರ್ಕಾರ ಯಾಕೆ ಒಂದನ್ನೂ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸೂಕ್ತ ತನಿಖೆ ಆಗಬೇಕು: ಡಬಲ್ ಇಂಜಿನ್ ಸರ್ಕಾರಕ್ಕೆ ಅಂಜಿಕೆ ಏಕೆ?, ಪೌಲ್ ಬಗ್ಗೆ ದೂರುಗಳಿದ್ದರೂ ಪ್ರಮುಖ ಹುದ್ದೆ ನೀಡಿದ್ದರು ಬೊಮ್ಮಾಯಿ. ಇದರ ತನಿಖೆ ಆಗಬೇಕಲ್ಲವಾ?. ಪಿಎಸ್ಐ ಹಗರಣ ಬಯಲಿಗೆ ಎಳೆದದ್ದೇ ಕಾಂಗ್ರೆಸ್. ಸಿಐಡಿ ದಾಳಿ ನಂತರ ಪೌಲ್ ಅವರನ್ನು ವರ್ಗಾವಣೆ ಮಾಡಿದ್ದರು. ಒತ್ತಡ ಹೆಚ್ಚಾದ ಮೇಲೆ ಬಂಧಿಸಿದರು ಎಂದು ವಿವರಿಸಿದ್ದಾರೆ.

ವಿಪರ್ಯಾಸವೆಂದರೆ ಅಮೃತ್ ಪಾಲ್​​ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಸಿಆರ್​ಪಿಸಿ 164ರ ಹೇಳಿಕೆ ಕೊಡಿಸಿಲ್ಲ. ಅವರ ಮಂಪರು ಪರೀಕ್ಷೆ ಆಗಬೇಕು. ಆಗ ಇದರ ಹಿಂದೆ ಇರುವ ರಾಜಕಾರಣಿಗಳ ಹೆಸರು ಬಯಲಿಗೆ ಬರುತ್ತದೆ. ಸಾಕಷ್ಟು ರಾಜಕಾರಣಿಗಳು ಈ ಹಗರಣದ ಹಿಂದೆ ಇದ್ದಾರೆ. ಇದರಿಂದ ಸೂಕ್ತ ತನಿಖೆ ಆಗಬೇಕು. ಸಣ್ಣಪುಟ್ಟ ವ್ಯಕ್ತಿಗಳನ್ನು ಮಾತ್ರ ಬಂಧಿಸಿ ತನಿಖೆ ಮಾಡಲಾಗುತ್ತಿದೆ. ಸಾಕಷ್ಟು ದೊಡ್ಡವರ ಕೈವಾಡ ಇಲ್ಲದೆ ಎಂದರು.

ಇಡೀ ಸರ್ಕಾರವೇ ಭ್ರಷ್ಟಾಚಾರದಿಂದ ಮುಳುಗಿದೆ: ಅಕ್ರಮ ನಡೆದಿದೆ ಎನ್ನುವುದಕ್ಕೆ ಬಿಜೆಪಿ ಶಾಸಕ ಬಸವರಾಜ ದಡೇಸೂಗುರು ಆಡಿಯೋ ಸಾಕ್ಷಿ. ಧ್ವನಿ ನನ್ನದೆ, ನಾನು 15 ಲಕ್ಷ ತೆಗೆದುಕೊಂಡಿರುವುದು ಸತ್ಯ. ಆದರೆ ಅದನ್ನು ನನ್ನ ಬಳಿ ಇಟ್ಟುಕೊಂಡಿಲ್ಲ. ಕೊಡಬೇಕಾದವರಿಗೆ ಕೊಟ್ಟಿದ್ದೇನೆ ಎಂದಿದ್ದಾರೆ. ಶಾಸಕರ ವಿಚಾರಣೆ ಮಾಡಿಲ್ಲ. ಬಸನಗೌಡ ಪಾಟೀಲ ಯತ್ನಾಳ್ ಅವರು ಈ ಹಗರಣದಲ್ಲಿ ಒಬ್ಬ ಮಾಜಿ ಮುಖ್ಯಮಂತ್ರಿ ಮಗನ ಕೈವಾಡವಿದೆ ಎಂದು ಹೇಳಿದ್ದಾರೆ. ಕೈವಾಡವಿರುವುದು ಯಡಿಯೂರಪ್ಪ ಅವರ ಮಗನಾ?, ದೇವೇಗೌಡ ಅಥವಾ ಸಿದ್ದರಾಮಯ್ಯನ ಮಗನಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಸೂಕ್ತ ತನಿಖೆಯಿಂದ ಮಾತ್ರ ಸತ್ಯ ಹೊರ ಬರಲು ಸಾಧ್ಯ ಎಂದರು.

ಲಂಚದ ಹಣವನ್ನು ಸರ್ಕಾರಕ್ಕೆ ನೀಡಿದ್ದೇನೆ ಎಂದು ದಡೇಸುಗೂರು ಹೇಳಿದ್ದಾರೆ. ಈಗ ಯಾವ ಸರ್ಕಾರ ಇದೆ?, ಹಣ ಕೊಟ್ಟಿರುವುದು ಮುಖ್ಯಮಂತ್ರಿಗಾ?, ಗೃಹ ಸಚಿವರಿಗಾ?. ಹಗರಣದಲ್ಲಿ 92 ಜನರ ಬಂಧನವಾಗಿದೆ. ಆದರೆ, ಅವರಲ್ಲಿ ಒಬ್ಬ ರಾಜಕಾರಣಿಯೂ ಇಲ್ಲವೇ ಎಂದು ಕುಟುಕಿದ ಸಿದ್ದರಾಮಯ್ಯ ಇಡೀ ಸರ್ಕಾರವೇ ಭ್ರಷ್ಟಾಚಾರದಿಂದ ಮುಳುಗಿದೆ. ಜನರೇ ಇವರಿಗೆ ಪಾಠ ಕಲಿಸಬೇಕು ಎಂದರು.

ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲವೇ?: ಸಂತೋಷ್ ನನ್ನ ಸಾವಿಗೆ ಈಶ್ವರಪ್ಪ ಕಾರಣ ಎಂದಿದ್ದರು. ಆದರೆ ಈಶ್ವರಪ್ಪನನ್ನ ವಿಚಾರಣೆ ಮಾಡಲಿಲ್ಲ. 2006 ರಿಂದಲೂ ನಡೆದ ಎಲ್ಲಾ ಹಗರಣಗಳನ್ನು ನ್ಯಾಯಾಂಗ ತನಿಖೆಗೆ ಕೊಡಲಿ. ಕಟೀಲ್ ಗೆ ಕಾನೂನು ಗೊತ್ತಿಲ್ಲ ಏನೂ ಇಲ್ಲ ಅಂತಾರೆ. ಕೇಶವಕೃಪಾದಲ್ಲಿ ಸುಳ್ಳು ಟೈಪ್ ಮಾಡಿ ಕೊಟ್ಟಿದ್ದಾರೆ. ಇವನು ಆರ್​ಎಸ್​ಎಸ್​ ಅಲ್ವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪಿಎಸ್ಐ ಪರೀಕ್ಷೆ ಹಗರಣ.. ನೀವು ಈವೆಂಟ್ ಮ್ಯಾನೇಜರ್ ಎಂದ ಸಿಎಂ: ನನ್ನನ್ನು ಟಾರ್ಗೆಟ್ ಮಾಡಿದಷ್ಟು ಲಾಭ ಎಂದ ಸಿದ್ದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.