ಪಿಎಸ್ಐ ಪರೀಕ್ಷೆ ಹಗರಣ.. ನೀವು ಈವೆಂಟ್ ಮ್ಯಾನೇಜರ್ ಎಂದ ಸಿಎಂ: ನನ್ನನ್ನು ಟಾರ್ಗೆಟ್ ಮಾಡಿದಷ್ಟು ಲಾಭ ಎಂದ ಸಿದ್ದು

author img

By

Published : Sep 20, 2022, 8:08 PM IST

psi-recruitment-exam-scam-uproar-in-assembly

ಇಡೀ ಸರ್ಕಾರ ನನ್ನನ್ನು ಟಾರ್ಗೆಟ್ ಮಾಡಿದ್ದೀರಿ. ನೀವು ಎಷ್ಟು ನಮ್ಮನ್ನು ಟಾರ್ಗೆಟ್ ಮಾಡುತ್ತೀರಿ ಅಷ್ಟು ನಮಗೆ ಲಾಭ. ನೀವು ಏನು ಮಾಡಿದರೂ ಜನ ನಿಮ್ಮನ್ನು ನಂಬಲ್ಲ. ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ಇದಕ್ಕೆಲ್ಲ ನಾನು ಹೆದರಲ್ಲ ಎಂದು ಸಿದ್ದರಾಮಯ್ಯ ಗುಡುಗಿದರು.

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣ ಕೋಲಾಹಲಕ್ಕೆ ಕಾರಣವಾಯಿತು. ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ನಿಯಮ 69ರಡಿ ಚರ್ಚೆ ವೇಳೆ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿಭಟನಾನಿರತ ಪಿಎಸ್​ಐ ಅಭ್ಯರ್ಥಿಗಳ ಪೋಷಕರು ನೀಡಿದ ದವಸ ಧಾನ್ಯವನ್ನು ಸಿದ್ದರಾಮಯ್ಯ ಸ್ಪೀಕರ್​ಗೆ ನೀಡಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ಯೂ ಆರ್ ದಿ ಗ್ರೇಟ್ ಈವೆಂಟ್ ಮ್ಯಾನೇಜರ್' ಎಂದು ತಿರುಗೇಟು ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಇಡೀ ಸರ್ಕಾರ ನನ್ನನ್ನು ಟಾರ್ಗೆಟ್ ಮಾಡಿದ್ದೀರಿ. ನೀವು ಎಷ್ಟು ನಮ್ಮನ್ನು ಟಾರ್ಗೆಟ್ ಮಾಡುತ್ತೀರಿ ಅಷ್ಟು ನಮಗೆ ಲಾಭ. ನೀವು ಏನು ಮಾಡಿದರೂ ಜನ ನಿಮ್ಮನ್ನು ನಂಬಲ್ಲ. ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ಇದಕ್ಕೆಲ್ಲ ನಾನು ಹೆದರಲ್ಲ ಎಂದು ಗುಡುಗಿದರು.

ಆದ ನೀವು ಡಿಸ್ಟ್ರಕ್ಟಿವ್ (ವಿನಾಶಕಾರಿ) ವಿರೋಧ ಪಕ್ಷ ಎಂದು ಸಿಎಂ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ಸಿಎಂ ಬೊಮ್ಮಾಯಿ ಹಾಗೂ ಸಿದ್ದರಾಮಯ್ಯ ಈಗಲೇ ಚುನಾವಣೆಗೆ ಹೋಗೋಣ ಎಂದು ಪರಸ್ಪರ ಸವಾಲು ಪ್ರತಿ ಸವಾಲು ಹಾಕಿದರು. ಈ ಸಂದರ್ಭದಲ್ಲಿ ಎದ್ದುನಿಂತ ಸಚಿವ ಮಾಧುಸ್ವಾಮಿ, ಯಾರದ್ದೋ ತೀಟೆ ತೀರಿಸಲು ಈ ಸಭೆ ಅಲ್ಲ ಎಂದು ದವಸ ಧಾನ್ಯ ತಂದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣದ ಕೋಲಾಹಲ

ಇದೇ ವೇಳೆ, ಸಿದ್ದರಾಮಯ್ಯ, ನಾನು ಅಸಂಸದೀಯ ಭಾಷೆ ಬಳಸಿದರೆ ಅದನ್ನು ನೀವು ತೆಗೆಯಬಹುದು. ನಾನು ವಿಷಯಾಂತರ ಮಾಡಿಲ್ಲ ಎಂದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸ್ಪೀಕರ್ ಕಾಗೇರಿ, ಇಲ್ಲಿ ಏನೇ ಆದರೂ ನಾನೇ ಜವಾಬ್ದಾರಿ. ನಿಯಮಗಳ ಪ್ರಕಾರ ದವಸ ಧಾನ್ಯವನ್ನು ಒಳಗಡೆ ತರುವ ಹಾಗೆ ಇಲ್ಲ ಎಂದರು.

ಸಿಎಂ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ ಜಟಾಪಟಿ ಹೀಗಿತ್ತು:

ಸಿದ್ದರಾಮಯ್ಯ - ನಾನು ದವಸ ಧಾನ್ಯವನ್ನು ಬೆಳಗ್ಗೆ ತಂದು ಇಟ್ಟಿದ್ದೆ. ಯಾರೋ ಅದನ್ನು ಇಲ್ಲದಂತೆ ಮಾಡಿದ್ದಾರೆ. ನಿಮ್ಮ (ಸ್ಪೀಕರ್) ಮೂಲಕ ಸರ್ಕಾರಕ್ಕೆ ತಲುಪಿಸೋಣ ಎಂದು ಕೊಂಡಿದ್ದೆ.

ಸ್ಪೀಕರ್ - ನಮ್ಮ ನಿಯಮಾವಳಿಗಳ ಪ್ರಕಾರ ಸದನದ ಒಳಗೆ ತರಬಾರದು‌.‌ ರಾಜೇಗೌಡರು ಅದನ್ನು ತಂದು ಕೊಡುವುದು ನಿಯಮ ಬಾಹಿರ. ನೀವು ತಂದಿದ್ದೀರಾ ಎಂದು ನಮಗೆ ಮಾಹಿತಿ ಬಂತು‌. ಇವರು ಏನೇನೋ ತಂದಿದ್ರು.

ಸಿಎಂ ಬೊಮ್ಮಾಯಿ - ಇವೆಂಟ್ ಮ್ಯಾನೇಜ್ಮೆಂಟ್ ಚೆನ್ನಾಗಿ ಮಾಡಿದ್ದಾರೆ. ಆ ಹುಡುಗರ ಹತ್ತಿರ ತೆಗೆದುಕೊಂಡು ಬಂದಿರುವುದು ನೀವು. ನೀವು ಗ್ರೇಟ್ ಇವೆಂಟ್ ಮ್ಯಾನೇಜ್ಮೆಂಟ್ ಈಗ.

ಸಿದ್ದರಾಮಯ್ಯ - ನಮಗೆ ಇವೆಂಟ್ ಮ್ಯಾನೇಜ್ಮೆಂಟ್ ಮಾಡಲು ಬರುವುದಿಲ್ಲ. ನಾವು ಮಾಡೋದೂ ಇಲ್ಲ. ದೊಡ್ಡಬಳ್ಳಾಪುರದಲ್ಲಿ ಮತ್ತು ಸದನದಲ್ಲಿ ಯಾರನ್ನು ಅಟ್ಯಾಕ್ ಮಾಡಿದ್ದೀರಿ ಎಂದು ಗೊತ್ತಿದೆ. ಅದಕ್ಕೆ ನಾನು ಹೇಳದೇ ಮೋರ್ ಸ್ಟ್ರಾಂಗ್, ಮೋರ್ ಎನಿಮಿಸ್.

ಸಿಎಂ ಬೊಮ್ಮಾಯಿ - ನಿಮ್ಮ ಕರ್ಮ ಕಾಂಡ ಹೊರತರುತ್ತೇವೆ. ನಾವು ಯಾವುದೇ ಚರ್ಚೆಗೆ ಸಿದ್ದರಿದ್ದೇವೆ. ನಾನು ಚರ್ಚೆ ಕೇಳಲು ತಯಾರಿದ್ದೇವೆ. ಉತ್ತರ ಕೊಡಲು ತಯಾರಿದ್ದೇವೆ. ಆದರೆ, ವಿಷಯಾಂತರ ಮಾಡಿ ರಾಜಕೀಯ ಮಾಡುವುದು ಸರಿಯಲ್ಲ.‌ ನೀವು ಜನರ ದಾರಿ ತಪ್ಪಿಸುವ ವಿರೋಧ ಪಕ್ಷ, ಯಾರನ್ನು ‌ಮೋಸ ಮಾಡಲು ಸಾಧ್ಯವಿಲ್ಲ, ಜನ ತೀರ್ಮಾನ ಮಾಡುತ್ತಾರೆ.

ವಿಧಾನಸಭೆಯಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣದ ಕೋಲಾಹಲ

ಆರ್​ಡಿ ಪಾಟೀಲ್ ಕಾಂಗ್ರೆಸ್ ಕಾರ್ಯಕರ್ತ - ಸಿಎಂ: ನಂತರ ಸಿಎಂ ಬೊಮ್ಮಾಯಿ ತಮ್ಮ ಮಾತು ಮುಂದುವರೆಸಿ, ಸಿಐಡಿಗೆ ಆರೋಪಿ ಆರ್​ಡಿ ಪಾಟೀಲ್ ನೀಡಿದ ಹೇಳಿಕೆಯನ್ನು ‌ಉಲ್ಲೇಖಿಸಿದರು. ಪೊಲೀಸರಿಗೆ ಹೇಳಿಕೆ ಕೊಡುವಾಗ ನಾನು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. 2010ರಲ್ಲಿ ಗ್ರಾಮ ಪಂಚಾಯತಿ ಸದಸ್ಯನಾಗಿ ಆಯ್ಕೆ ಆಗಿದ್ದೆ.‌ 2015ರ ವರಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಗಿದ್ದೆ. ಜಿಲ್ಲೆಯ ಎಲ್ಲ ರಾಜಕಾರಣಿಗಳ ಪರಿಚಯ ಇದೆ.‌ ಶಾಸಕ ಎಂವೈ ಪಾಟೀಲ್ ಹಾಗೂ ಪ್ರಿಯಾಂಕ್ ಖರ್ಗೆ ಕೂಡ ಆತ್ಮೀಯವಾಗಿದ್ದಾರೆ ಎಂದು ಆರ್​ಡಿ ಪಾಟೀಲ್ ಹೇಳಿಕೆ ಕೊಟ್ಟಿದ್ದಾರೆ. ಸೋ ಯಾರ್ಯಾರ ಕನೆಕ್ಷನ್ ಇದೆ ಎಂದು ಪ್ರಶ್ನೆ ಹಾಕಿದರು.

ಈ ವೇಳೆ ಅವರ ಹೇಳಿಕೆ ಬರೆದುಕೊಂಡು ಹೇಳಿದರೆ ಆಗಲ್ಲ, ಜಾರ್ಜ್ ಶೀಟ್ ಮಂಡಿಸಿ. ಇದನ್ನು ನಂಬಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಆಗ ಕೋರ್ಟ್​ಗೆ ಚಾರ್ಜ್​ ಶೀಟ್ ಮಂಡನೆ ಮಾಡಲಾಗಿದೆ ಎಂದ ಸಿಎಂ ಹೇಳಿದರು. ಇತ್ತ, ಪ್ರಿಯಾಂಕ್ ‌ಖರ್ಗೆ ಮಾತನಾಡಿ, ನಾನು ಪಿಎಸ್ಐ ನೇಮಕ ಪರೀಕ್ಷೆ ಹಗರಣ ಸಂಬಂಧ ಆಡಿಯೋ ರಿಲೀಸ್ ಮಾಡಿದ್ದೆ. ಅದಕ್ಕೆ ನನ್ನನ್ನು ವಿಚಾರಣೆಗೆ ಬರುವಂತೆ ಸಿಐಡಿ ನೋಟಿಸ್ ಕೊಟ್ಟಿದೆ. ಆದರೆ, ಅಕ್ರಮದ ಬಗ್ಗೆ ಸಿಎಂಗೆ ಪತ್ರ ಬರೆದ ಸಚಿವ ಪ್ರಭು ಚವ್ಹಾಣ್​ ಅವರನ್ನು ಏಕೆ ವಿಚಾರಣೆಗೆ ಕರೆದಿಲ್ಲ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ: ಪ್ರಕರಣ ಸಿಐಡಿ ತನಿಖೆ.. ಸಚಿವ ಬಿ ಸಿ ನಾಗೇಶ್

ನಿಮ್ಮತ್ರ ದಾಖಲೆ ಇದ್ದರೆ ಅರೆಸ್ಟ್ ಮಾಡಿ, ಕತ್ತೆ ಕಾಯ್ತಿದ್ರಾ?, ನನಗೆ ಪೊಲೀಸ್ ನೋಟಿಸ್ ಸಿಕ್ಕಿದ್ದು 19(1) ಹಾಗೂ ಸಿಆರ್ ಪಿಸಿ 160 ಅಡಿಯಲ್ಲಿ. ನೋಟಿಸ್​ನಲ್ಲಿ ನಾನು ಖುದ್ದು ಹಾಜರಾಗಬೇಕು ಎಂದು ಹೇಳಿಲ್ಲ. ನನಗೆ ಹೇಗೆ ದಾಖಲೆ ಸಿಕ್ತು ಎಂದು ನಾನು ಲಿಖಿತವಾಗಿ ಉತ್ತರ ಕೊಟ್ಟಿದ್ದೇನೆ. ನಾನು ತನಿಖಾ ಪತ್ರಿಕೋದ್ಯಮ ಮಾಡಿಲ್ಲ. ಮೊದಲ ನೋಟಿಸ್​ಗೆ ಉತ್ತರ ಕೊಟ್ಟಿದ್ದೇನೆ ಎಂದು ಪ್ರಿಯಾಂಕ್​ ಹೇಳಿದರು.

ಆಗ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಯಾಕೆ ಬೆನ್ನು ತೋರಿಸಿ ಓಡಿ ಹೋಗುತ್ತೀರಿ. ದಾಖಲೆ ಇದ್ದರೆ ಬಂದು ನೀಡಿ. ಯಾವುದೇ ದಾಖಲೆ ಕೊಟ್ಟಿಲ್ಲ. ಕೇವಲ ಪತ್ರಿಕಾ ವರದಿ ಕೊಟ್ಟಿದ್ದಾರೆ. ಯಾವುದೇ ದಾಖಲೆ ಕೊಟ್ಟಿಲ್ಲ ಎಂದರು.

ಬಸವರಾಜ ದಡೇಸಗೂರು ಬಗ್ಗೆ ತನಿಖೆ: ಶಾಸಕ ಬಸವರಾಜ ದಡೇಸುಗೂರು ಅವರಿಗೆ ಪರಸಪ್ಪ ಎಂಬುವವರು ದುಡ್ಡು ಕೊಟ್ಟಿದ್ದಾರೆ ಎಂದು ಆರೋಪ ಮಾಡಿದ್ದರು. ಆದರೆ, ಮರು ದಿನ ದುಡ್ಡು ಕೊಟ್ಟೇ ಇಲ್ಲ ಎಂದು ಹೇಳಿದ್ದಾರೆ. ಆದರೂ ಈ ಬಗ್ಗೆ ತನಿಖೆ ಮಾಡುತ್ತೇವೆ. ಸತ್ಯ ಹೊರಬರಲಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು

ವಿಧಾನಸಭೆಯಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣದ ಕೋಲಾಹಲ

ದಿವ್ಯಾ ಹಾಗರಗಿ ಹೆಸರು ಹೇಳಲು ಪರದಾಡಿದ ಸಿದ್ದರಾಮಯ್ಯ: ಪಿಎಸ್​ಐ ನೇಮಕ ಪರೀಕ್ಷೆ ಅಕ್ರಮದಲ್ಲಿ ಬಂಧನವಾಗಿರುವ ಬಿಜೆಪಿ ನಾಯಕ, ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಹೆಸರು ಹೇಳಲು ಸಿದ್ದರಾಮಯ್ಯ ಪರದಾಡಿದರು. ದಿವ್ಯಾ ಹಾಗರಗಿ ಹೆಸರು ಬದಲು ವಿದ್ಯಾ ಹಾಗರಗಿ ಎಂದು ಹೆಸರು ತಪ್ಪಾಗಿ ಹೇಳಿದರು. ಪದೇ ಪದೆ ವಿದ್ಯಾ ಹಾಗರಗಿ ಎಂದು ಹೆಸರು ಹೇಳಿದರು. ಆಗ ವಿದ್ಯಾ ಹಾಗರಗಿ ಅಲ್ಲ, ದಿವ್ಯಾ ಹಾಗರಗಿ ಎಂದು ಸಿದ್ದರಾಮಯ್ಯ ಗಮನಕ್ಕೆ ಕಾಂಗ್ರೆಸ್ ಸದಸ್ಯರು ತಂದರು.

ಅದರೂ, ಸಿದ್ದರಾಮಯ್ಯ ವಿದ್ಯಾ ಹಾಗರಗಿ ಎಂದು ಹೆಸರು ಉಲ್ಲೇಖಿಸಿದರು. ಬಳಿಕ ತಮ್ಮ ತಪ್ಪಿನ ಅರಿವಾಗಿ ಮೂರು ಬಾರಿ ದಿವ್ಯಾ ಹಾಗರಗಿ ಎಂದೇ ಹೇಳಿದರು. ಹಾಗರಗಿ ಎಂದರೆ ಸಾಕಾ?. ನನ್ನ ಮೆಮೊರಿ ಹೋಯ್ತಾ?. ನಿಮ್ಮ ಕಣ್ಣು ಬಿತ್ತಾ? ಎಂದು ಸಿಎಂಗೆ ಕಿಚಾಯಿಸಿದರು. ಅಲ್ಲದೇ, ಮತ್ತೊಮ್ಮೆ ಪ್ರಕರಣದ ಸಂಬಂಧ ತಪ್ಪಾಗಿ ದಿನಾಂಕ ಹೇಳಿದ ಸಿದ್ದರಾಮಯ್ಯ, ಯಾಕೋ ಇಂದು ಮರೆವು ಆಗ್ತಾ ಇದಿಯಲ್ಲಾ?. ಇಂದು ನಾನು ಓದಿಕೊಂಡೇ ಹೇಳುತ್ತೇನೆ. ಸಾಮಾನ್ಯವಾಗಿ ನಾನು ಓದಿ ಮಾತನಾಡುವುದಿಲ್ಲ ಎಂದರು.

ಇದನ್ನೂ ಓದಿ: ಐದು ಸಾವಿರ ಪೊಲೀಸ್ ಪೇದೆ ನೇಮಕ: ಗೃಹ ಸಚಿವ ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.