ETV Bharat / state

ನಾಳೆ ಸಿದ್ದರಾಮಯ್ಯ, ಡಿಕೆಶಿ ದಿಲ್ಲಿಗೆ ; ವಿವಿಧ ಸಮಿತಿಗೆ ಸಮನ್ವಯದ ಪದಾಧಿಕಾರಿಗಳ ನೇಮಕಕ್ಕೆ ಅಸ್ತು!?

author img

By

Published : Jul 18, 2021, 9:45 PM IST

D K Sivakumar and Siddaramaiah
ಡಿ ಕೆ ಶಿವಕುಮಾರ್​ ಮತ್ತು ಸಿದ್ದರಾಮಯ್ಯ

ಇದರಿಂದ ಪಕ್ಷ ಬಲವರ್ಧನೆಗೆ ಒತ್ತು ಕೊಡಿ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಗೆಲ್ಲಲು ಹೇರಳ ಅವಕಾಶ ಇದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಿ, ನಾಯಕತ್ವ ಹೊಣೆ ಯಾರಿಗೆ ಸಿಕ್ಕರೂ, ಇನ್ನೊಬ್ಬರು ಅವರಿಗೆ ಸಹಕಾರ ನೀಡಿ ಎಂದು ಹೇಳಿ ಕಳುಹಿಸುವ ಸಾಧ್ಯತೆ ಹೆಚ್ಚಿದೆ..

ಬೆಂಗಳೂರು : ಕೆಪಿಸಿಸಿ ವಿವಿಧ ಸಮಿತಿಗಳ ರಚನೆ, ಪದಾಧಿಕಾರಿ ನೇಮಕ, ಪಕ್ಷ ಸಂಘಟನೆಗೆ ಒತ್ತು ಹಾಗೂ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಾಗಿರುವ ಕಾರ್ಯಕ್ರಮಗಳ ಕುರಿತು ಹೈಕಮಾಂಡ್ ನಾಯಕರ ಜತೆ ಚರ್ಚಿಸಲು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಾಳೆ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ನಾಳೆ ಸಂಜೆ ಬೆಂಗಳೂರಿನಿಂದ ನಾಯಕರು ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಮಂಗಳವಾರ ಮಧ್ಯಾಹ್ನ ರಾಷ್ಟ್ರೀಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ರಾಷ್ಟ್ರೀಯ ನಾಯಕರಾದ ಪ್ರಿಯಂಕಾ ಗಾಂಧಿ, ರಂದೀಪ್ ಸಿಂಗ್ ಸುರ್ಜೇವಾಲಾ, ಕೆ ಸಿ ವೇಣುಗೋಪಾಲ್ ಮುಂತಾದ ನಾಯಕರ ಜತೆ ಚರ್ಚೆ ನಡೆಸಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಳೆದ ತಿಂಗಳು ದಿಲ್ಲಿಗೆ ತೆರಳಿ ವರಿಷ್ಠರೊಂದಿಗೆ ಸಮಾಲೋಚಿಸಿ ವಾಪಸಾಗಿದ್ದರು. ಇದಾದ ನಂತರ ಕೆಪಿಸಿಸಿ ವಿವಿಧ ಸಮಿತಿಗಳ ರಚನೆ ಸಂಬಂಧ ಪ್ರಕ್ರಿಯೆ ಆರಂಭಿಸಿದ್ದರು. ನೇಮಕದ ವಿಚಾರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನೂ ವಿಶ್ವಾಸಕ್ಕೆ ಪಡೆಯುವ ನಿಟ್ಟಿನಲ್ಲಿ ಇದೀಗ ಅವರೊಂದಿಗೆ ಇನ್ನೊಮ್ಮೆ ದಿಲ್ಲಿಗೆ ಪ್ರಯಾಣ ಮಾಡುತ್ತಿದ್ದಾರೆ ಡಿಕೆಶಿ.

ಏನೇನು ಚರ್ಚೆ?: ಕಾಂಗ್ರೆಸ್ ಪಕ್ಷದ ಆಂತರಿಕ ಬಲ ವರ್ಧನೆ, ಒಳ ಬೇಗುದಿ ಶಮನ, ಕೆಪಿಸಿಸಿ ಸಮಿತಿ ಪದಾಧಿಕಾರಿಗಳ ಆಯ್ಕೆ ಸೇರಿದಂತೆ ಹಲವು ವಿಚಾರದ ಚರ್ಚೆ ನಡೆಯಲಿದೆ. ಜುಲೈ ತಿಂಗಳ ಅಂತ್ಯದೊಳಗೆ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ.

ಇದಲ್ಲದೇ 12ಕ್ಕೂ ಹೆಚ್ಚು ಜಿಲ್ಲೆಯ ಅಧ್ಯಕ್ಷರನ್ನು ಬದಲಿಸುವ, ಮುಂಚೂಣಿ ಘಟಕಗಳಿಗೆ ಅಧ್ಯಕ್ಷರ ನೇಮಕ ಸಂಬಂಧ ಚರ್ಚೆ, ಅಲ್ಪಸಂಖ್ಯಾತ, ಒಬಿಸಿ, ಮಹಿಳಾ, ಸೇವಾದಳ ಅಧ್ಯಕ್ಷರ ಬದಲಾವಣೆ ಹಾಗೂ ಹೊಸಬರ ನೇಮಕ ಸಂಬಂಧವಾಗಿ ಚರ್ಚೆ ನಡೆಯಲಿದೆ. ರಾಜ್ಯದ ಇಬ್ಬರೂ ನಾಯಕರ ಜತೆ ಚರ್ಚೆ ಹಾಗೂ ಒಮ್ಮತದ ನಿರ್ಧಾರದ ಬಳಿಕವೇ ಹೈಕಮಾಂಡ್ ಅಂತಿಮ ಪಟ್ಟಿ ಪ್ರಕಟಿಸಲಿದೆ.

ಮುಂದಿನ ಸಿಎಂ : ಮುಂದಿನ ಸಿಎಂ ವಿಚಾರವಾಗಿ ರಾಜ್ಯದಲ್ಲಿ ನಡೆಯುತ್ತಿರುವ ಚರ್ಚೆಗೆ ಮಂಗಳವಾರ ಭೇಟಿ ಸಂದರ್ಭದಲ್ಲೇ ರಾಷ್ಟ್ರೀಯ ನಾಯಕರು ರಾಜ್ಯ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೂ ನೀವಾಗಲೀ, ನಿಮ್ಮ ಬೆಂಬಲಿಗರಾಗಲಿ ಮುಂದಿನ ಸಿಎಂ ವಿಚಾರವನ್ನು ಚುನಾವಣೆ ಮುಗಿಯುವವರೆಗೂ ಪ್ರಸ್ತಾಪಿಸುವಂತಿಲ್ಲ.

ಅತ್ಯಂತ ಪ್ರಮುಖವಾಗಿ ಬಹಿರಂಗ ಸಮಾರಂಭಗಳಲ್ಲಿ ಹೇಳಲೇಬಾರದು. ಪಕ್ಷದ ಆಂತರಿಕ ಸಭೆಗಳಲ್ಲಿ ಬೇಕಾದರೆ ವಿಚಾರ ಪ್ರಸ್ತಾಪಿಸಿ. ಇನ್ನೊಮ್ಮೆ ಇಂತಹ ಹೇಳಿಕೆಗಳು ಕೇಳಿ ಬಂದರೆ ಪಕ್ಷದ ಶಿಸ್ತು ಸಮಿತಿ ಶಿಫಾರಸು ಆಧರಿಸಿ ಮುಂದಿನ ಕ್ರಮ ಆಗಲಿದೆ ಎಂದು ವಿಷಯ ಮನವರಿಕೆ ಮಾಡಿ ಕೊಡುವ ಸಾಧ್ಯತೆ ಇದೆ.

ಚುನಾವಣೆ ಗುರಿ : ಮುಂಬರುವ ದಿನಗಳಲ್ಲಿ ರಾಜ್ಯದ ವಿಧಾನಸಭೆ ಉಪ ಚುನಾವಣೆ, ಬಿಬಿಎಂಪಿ, ಸ್ಥಳೀಯ ಸಂಸ್ಥೆ ಚುನಾವಣೆಗಳ ಜತೆ ಇನ್ನೆರಡು ವರ್ಷಕ್ಕೆ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಕಟ್ಟುವ ಕಾರ್ಯ ಮಾಡಿ. ಹೆಚ್ಚಿನ ಚುನಾವಣೆ ಗೆಲ್ಲುವಂತೆ ನೋಡಿಕೊಳ್ಳಿ. ಈಗಾಗಲೇ ಕೇರಳದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು.

ಆದರೆ, ಸಾಧ್ಯವಾಗಿಲ್ಲ. ಆಂಧ್ರಪ್ರದೇಶ, ತೆಲಂಗಾಣದಲ್ಲಿ ನೆಲೆ ಇಲ್ಲದಂತಾಗಿದೆ. ತಮಿಳುನಾಡಿನಲ್ಲಿ ಮೈತ್ರಿ ಕಾರಣ ನಾವು ಹೆಚ್ಚು ಗಮನಕ್ಕೆ ಬಂದಿಲ್ಲ. ಇದರಿಂದ ದಕ್ಷಿಣ ಭಾರತದಲ್ಲಿ ನಮ್ಮ ಅಸ್ತಿತ್ವ ಉಳಿಯುವುದಿದ್ದರೆ ಅದು ಕರ್ನಾಟಕದಲ್ಲಿ ಮಾತ್ರ ಸಾಧ್ಯ.

ಇದರಿಂದ ಪಕ್ಷ ಬಲವರ್ಧನೆಗೆ ಒತ್ತು ಕೊಡಿ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಗೆಲ್ಲಲು ಹೇರಳ ಅವಕಾಶ ಇದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಿ, ನಾಯಕತ್ವ ಹೊಣೆ ಯಾರಿಗೆ ಸಿಕ್ಕರೂ, ಇನ್ನೊಬ್ಬರು ಅವರಿಗೆ ಸಹಕಾರ ನೀಡಿ ಎಂದು ಹೇಳಿ ಕಳುಹಿಸುವ ಸಾಧ್ಯತೆ ಹೆಚ್ಚಿದೆ.

ಓದಿ: ಮಲ್ಲಿಗೆ ನಗರಿಯಲ್ಲಿ ಮಳೆರಾಯನ ಅಬ್ಬರ: ಕುಂಭದ್ರೋಣ ಮಳೆಗೆ ನಲುಗಿದ ಉ.ಕನ್ನಡ ಜಿಲ್ಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.