ETV Bharat / state

ತುಂಗಾ ತೀರದ ಬಳಿ ಸ್ಫೋಟ ಪ್ರಕರಣ: ಎನ್ಐಎಯಿಂದ ಇನ್ನಿಬ್ಬರು ಆರೋಪಿಗಳ ಬಂಧನ

author img

By

Published : Jan 11, 2023, 2:47 PM IST

Updated : Jan 11, 2023, 3:34 PM IST

NIA
ಎನ್ಐಎ

ಶಿವಮೊಗ್ಗ ಸ್ಫೋಟ ಪ್ರಕರಣ. ದಕ್ಷಿಣ ಕನ್ನಡ ಜಿಲ್ಲೆ ತೊಕ್ಕುಟ್ಟುವಿನ ಮಜಿನ್ ಅಬ್ದುಲ್ ರೆಹಮಾನ್ ಹಾಗೂ ದಾವಣಗೆರೆ ಜಿಲ್ಲೆ ದೇವನಾಯಕನಹಳ್ಳಿಯ ನದೀಂ ಅಹಮದ್ ಎಂಬಾತನನ್ನ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ‌.

ಶಿವಮೊಗ್ಗ/ ಬೆಂಗಳೂರು: ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಫೋಟಸಿದ್ದ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳನ್ನ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಬಂಧಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ತೊಕ್ಕುಟ್ಟುವಿನ ಮಜಿನ್ ಅಬ್ದುಲ್ ರೆಹಮಾನ್ ಹಾಗೂ ದಾವಣಗೆರೆ ಜಿಲ್ಲೆ ದೇವನಾಯಕನಹಳ್ಳಿಯ ನದೀಂ ಅಹಮದ್ ಬಂಧಿತ ಆರೋಪಿಗಳು.

ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ಸ್ ಭಯೋತ್ಪಾದಕ ಚಟುವಟಿಕೆಗಳನ್ನ ಹೆಚ್ಚಿಸಲು ಮಜಿನ್ ಅಬ್ಧುಲ್ ರೆಮಾನ್ ಹಾಗೂ ನದೀಂ ಅಹಮದ್ ಅವರನ್ನು ಪ್ರಮುಖ ಆರೋಪಿಗಳಾದ ಮಾಜ್ ಮುನೀರ್ ಹಾಗೂ ಸೈಯದ್ ಯಾಸೀನ್ ನೇಮಕಗೊಳಿಸಿದ್ದರು. ಸಂಚನ್ನು ಮತ್ತಷ್ಟು ದೊಡ್ಡಮಟ್ಟದಲ್ಲಿ ವಿಸ್ತರಿಸುವ ಭಾಗವಾಗಿ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕ ಸ್ಪೋಟ ನಡೆಸಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಎನ್ಐಎ ಪ್ರಕಟಣೆಯಲ್ಲಿ ತಿಳಿಸಿದೆ.

ತುಂಗಾ ತೀರದಲ್ಲಿ ಬಾಂಬ್ ಸ್ಫೋಟಿಸಿದ ಆರೋಪದಡಿ 19 ಸೆಪ್ಟೆಂಬರ್ 2022ರಂದು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ನ.4ರಂದು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಎನ್ಐಎ ಈ ಮೊದಲು ನಾಲ್ವರು ಆರೋಪಿಗಳನ್ನ ಬಂಧಿಸಿತ್ತು.

ಶಿವಮೊಗ್ಗ ಸ್ಪೋಟ ಪ್ರಕರಣ: ಪ್ರಕರಣದಲ್ಲಿ ಸೈಯದ್ ಯಾಸೀನ್, ಮಾಝ್ ಮುನೀರ್, ಶಾರೀಕ್ ಅಹಮ್ಮದ್ ಎಂಬವರನ್ನು ಬಂಧಿಸಲಾಗಿತ್ತು. ಯಾಸಿನ್ ಶಿವಮೊಗ್ಗದಲ್ಲಿ ಇಂಜಿನಿಯರಿಂಗ್ ಓದಿದ್ದರೆ, ಮತ್ತೋರ್ವ ಕೊಣಾಜೆಯ ನಡುಪದವು ಸಮೀಪದ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಟೆಕ್ ಓದುತ್ತಿದ್ದಾನೆ. ತೀರ್ಥಹಳ್ಳಿ ಮೂಲದ ಶಾರೀಕ್ ಮಹ್ಮದ್ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ವಿಧ್ವಂಸಕ ಕೃತ್ಯಕ್ಕೆ ಸಂಚು: ಬಂಧನಕ್ಕೆ ಒಳಗಾಗಿರುವ ಸೈಯದ್ ಯಾಸಿನ್‌, ಮಾಜ್‌ ಮುನೀರ್‌, ಶಾರೀಕ್‌ ಅಹ್ಮದ್‌ ಶಿಮೊಗ್ಗದ ಅಕ್ಷರ ಕಾಲೇಜಿನಲ್ಲಿ ಒಟ್ಟಿಗೆ ದ್ವಿತೀಯ ಪಿಯುಸಿ ಅಭ್ಯಾಸ ಮಾಡಿದ್ದರು. ಬಳಿಕ ಯಾಸಿನ್ ಶಿವಮೊಗ್ಗದಲ್ಲಿ ಇಂಜಿನಿಯರಿಂಗ್‌ ಓದಿದ್ದರೆ ಮುನೀರ್‌ ಮಂಗಳೂರಿನ ಮುಡಿಪು ಸಮೀಪದ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಟೆಕ್‌ ಓದುತ್ತಿದ್ದ. ತೀರ್ಥಹಳ್ಳಿ ಮೂಲದ ಶಾರೀಕ್‌ ಮಹ್ಮದ್ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದನು. ಈ ಮೂವರು ಶಿವಮೊಗ್ಗವನ್ನು ಕೇಂದ್ರ ಸ್ಥಳವನ್ನಾಗಿಸಿಕೊಂಡು ಮಂಗಳೂರು ಸೇರಿದಂತೆ ವಿವಿಧೆಡೆ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಮೂವರೂ ಬಾಂಬ್‌ ತಯಾರಿಸುವ ಬಗ್ಗೆ ತರಬೇತಿ ಪಡೆದಿದ್ದರು. ವಿದೇಶಿ ಉಗ್ರ ಸಂಘಟನೆಯ ಸದಸ್ಯರ ಜೊತೆ ಇವರು ಸಂವಹನ ನಡೆಸುತ್ತಿದ್ದರು ಎಂಬುದರ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿದೆ ಎನ್ನಲಾಗುತ್ತಿದೆ.

ಶಿವಮೊಗ್ಗದ ಸಿದ್ದೇಶ್ವರ ನಗರ ನಿವಾಸಿಯಾದ ಸೈಯದ್ ಯಾಸಿನ್‌ ಜೆಎನ್‌ಎನ್‌ಸಿ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿದ್ದ. ಈತ ತನ್ನ ನಿವಾಸದಿಂದ 3-4 ದೂರದಲ್ಲಿರುವ ಪುರಲೆ ಸಮೀಪದ ತುಂಗಾ ನದಿ ತೀರವನ್ನು ಆತನ ಕಾರ್ಯ ಚಟುವಟಿಕೆ ಸ್ಥಾನ ಮಾಡಿಕೊಂಡಿದ್ದ. ತುಂಗಾನದಿ ತೀರದಲ್ಲಿ ಪ್ರಯೋಗಿಕವಾಗಿ ಸ್ಫೋಟಕವನ್ನು ಸ್ಫೋಟಿಸುತ್ತಿದ್ದ ಎಂಬ ಮಾಹಿತಿ ಬಹಿರಂಗವಾಗಿತ್ತು. ಈ ಕಾರಣಕ್ಕೆ ಪೊಲೀಸರು ಹಾಗೂ ವಿಧಿ ವಿಜ್ಞಾನ ತಂಡ ಯಾಸಿನ್‌ನನ್ನು ಸ್ಥಳಕ್ಕೆ ಕರೆತಂದು ಮಹಜರು ನಡೆಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ಸ್ಫೋಟ ಪ್ರಕರಣ: ಉಳ್ಳಾಲ ಇಂಜಿನಿಯರಿಂಗ್​ ಕಾಲೇಜ್​ ಮೇಲೆ ಎನ್ಐಎ ದಾಳಿ, ವಿದ್ಯಾರ್ಥಿ ವಶ

Last Updated :Jan 11, 2023, 3:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.