ETV Bharat / state

ಶಿಷ್ಟಾಚಾರ ಉಲ್ಲಂಘನೆಯಾಗಿದೆ, ಹಕ್ಕುಚ್ಯುತಿ ಮಂಡಿಸುವೆ; ಶರತ್ ಬಚ್ಚೇಗೌಡ

author img

By

Published : Feb 1, 2021, 2:23 PM IST

ಸಂಗ್ರಹ ಚಿತ್ರ

ಹೊಸಕೋಟೆ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವುದು ಶಿಷ್ಟಾಚಾರ ಉಲ್ಲಂಘನೆ ಮಾಡಿದಂತಾಗಿದೆ. ಈ ಬಗ್ಗೆ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಲಿದ್ದೇನೆ ಎಂದು ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ.

ಬೆಂಗಳೂರು: ಹೊಸಕೋಟೆ ಕ್ಷೇತ್ರದ ಕಾರ್ಯಕ್ರಮದಲ್ಲಿ ತಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ ಎಂದು ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಹೊಸಕೋಟೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಶಾಸಕರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂದು ತಿಳಿಸಿದ್ದೆವು, ಇದರ ಬಗ್ಗೆ ಪ್ರತಿಭಟನೆ ಮಾಡಿದ್ದೆವು. ಆದರೆ ನಮ್ಮ ಬೆಂಬಲಿಗರ ಮೇಲೆ ಹಲ್ಲೆಯಾಗಿದೆ. ಇದು ನನ್ನೊಬ್ಬನ ಮೇಲಿನ ಶಿಷ್ಟಾಚಾರ ಉಲ್ಲಂಘನೆಯಲ್ಲ. ಸದನದ 224 ಸದಸ್ಯರಿಗೂ ಅವಮಾನ ಮಾಡಿದಂತೆ. ಅದಕ್ಕೆ ನನ್ನ ಹಕ್ಕಿನ ಚ್ಯುತಿ ಬಗ್ಗೆ ದೂರು ಕೊಟ್ಟಿದ್ದೇನೆ. ಈಗಷ್ಟೇ ಸ್ಪೀಕರ್ ಭೇಟಿಯಾಗಿ ನೊಟೀಸ್ ಕೊಟ್ಟಿದ್ದೇನೆ. ಸದನದಲ್ಲಿ ಹಕ್ಕುಚ್ಯುತಿಯ ಪ್ರಸ್ತಾಪ ಮಾಡುತ್ತೇನೆ. ತಪ್ಪಿತಸ್ಥ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು. ಒತ್ತಡ ತಂದವರ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಚಿವ ಎಂಟಿಬಿ‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶರತ್ ಬಚ್ಚೇಗೌಡ, ಸಭ್ಯತೆ ಮರೆತು ರಾಜಕಾರಣ ಮಾಡುವುದಕ್ಕೆ ಸಾಧ್ಯವಿಲ್ಲ. ನಾವು ಪ್ರಾಣಿಗಳಿಂದ ಮನುಷ್ಯ ರೂಪಕ್ಕೆ ಬಂದಿದ್ದೇವೆ, ಸಭ್ಯತೆ ಮರೆತರೆ ನಾವು ಮತ್ತೆ ಪ್ರಾಣಿಗಳೇ ಆಗುತ್ತೇವೆ. ಅಧಿಕಾರಿಗಳ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ. ಮೊದಲು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು. ರಾತ್ರೋರಾತ್ರಿ ಕಾರ್ಯಕ್ರಮ ಆಯೋಜಿಸುವುದು ಬೇಕಿತ್ತೇ? 8 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮ ಮಾಡುವ ಉದ್ದೇಶವೇನಿತ್ತು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರ ಮಾತನಾಡಿ, ಸೂಕ್ತ ಸಮಯದಲ್ಲಿ ಪಕ್ಷ ಸೇರ್ಪಡೆಯಾಗುತ್ತೇನೆ. ಈಗಾಗಲೇ ಅಂತಿಮ ಹಂತದ ಮಾತುಕತೆ ಮುಗಿದಿದೆ. ಕೆಪಿಸಿಸಿ ಅಧ್ಯಕ್ಷರು, ಸಿಎಲ್​ಪಿ ಲೀಡರ್ ಹೇಳಿದಾಗ ಸೇರ್ಪಡೆಯಾಗಲಿದ್ದೇನೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.