ETV Bharat / state

ರಾಜ್ಯದ ಹಲವೆಡೆ ಅಕಾಲಿಕ ಮಳೆ: ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಡಿಸಿಗಳಿಗೆ ಕಂದಾಯ ಇಲಾಖೆ ಸೂಚನೆ

author img

By

Published : Oct 21, 2022, 9:21 AM IST

Revenue department instructs DCs  DCs to take necessary action due to rain  Rain in Karnataka state  ರಾಜ್ಯದ ಹಲವೆಡೆ ಅಕಾಲಿಕ ಮಳೆ  ಡಿಸಿಗಳಿಗೆ ಕಂದಾಯ ಇಲಾಖೆ ಸೂಚನೆ  ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ  ಮನೆ ಪರಿಹಾರ ಪಡೆದಿರುವ ಮನೆಗಳು  ಬೆಳೆ ಹಾನಿ ಇನ್‌ಪುಟ್ ಸಬ್ಸಿಡಿ  ತುರ್ತು ನಿರ್ವಹಣಾ ಕೇಂದ್ರ
ರಾಜ್ಯದ ಹಲವೆಡೆ ಅಕಾಲಿಕ ಮಳೆ

ರಾಜ್ಯದ ಹಲವೆಡೆ ಅಕಾಲಿಕ ಮಳೆ ಹಿನ್ನೆಲೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಡಿಸಿಗಳಿಗೆ ಕಂದಾಯ ಇಲಾಖೆ ಸೂಚನೆ ನೀಡಿದೆ.

ಬೆಂಗಳೂರು: ರಾಜ್ಯದ ಹಲವೆಡೆ ಅಕಾಲಿಕ ಮಳೆ ಆರ್ಭಟಿಸುತ್ತಿದೆ.‌ ಈ ಹಿನ್ನೆಲೆ ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಿಲ್ಲಾಧಿಕಾರಿಗಳಿಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದ್ದಾರೆ. ಅದರಂತೆ 2019, 2020 ಮತ್ತು 2021ನೇ ಸಾಲಿನಲ್ಲಿ ಭಾಗಶಃ ಹಾನಿಯಾದ 'ಸಿ' ವರ್ಗದಲ್ಲಿ ರೂ.50,000 ದಂತೆ ಮನೆ ಪರಿಹಾರ ಪಡೆದಿರುವ ಮನೆಗಳು ಪುನಃ 2022ನೇ ಸಾಲಿನಲ್ಲಿ ಜಂಟಿ ಸಮೀಕ್ಷೆ, ಅನುಸಾರ ಅತಿವೃಷ್ಟಿಯಿಂದ 'ಎ', 'ಬಿ' ಮತ್ತು 'ಸಿ' ವರ್ಗದಲ್ಲಿ ಹಾನಿಯಾದಲ್ಲಿ ಪರಿಹಾರ ಪಾವತಿಸಬೇಕು.

ಅತಿವೃಷ್ಟಿಯಿಂದ ರಾಜ್ಯದ ಬಹುತೇಕ ಕೆರೆಗಳು ತುಂಬಿ ಹರಿಯುತ್ತಿದ್ದು, ಇದರಿಂದ ಕೃಷಿ ಭೂಮಿಯಲ್ಲಿ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿರುವುದು ಕಂಡು ಬಂದಿದೆ. ಇಂತಹ ಪ್ರಕರಣಗಳಿಗೆ ಕೇಂದ್ರ ಸರ್ಕಾರದ SDRF/NDRF ಮಾರ್ಗಸೂಚಿಯನ್ವಯ ಪರಿಹಾರ ಪಾವತಿಸಲು ಅವಕಾಶವಿದೆ. ಜಿಲ್ಲಾಧಿಕಾರಿಗಳು ಇಂತಹ ಪ್ರಕರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಪರಿಹಾರ ಪಾವತಿಸುವಂತೆ ತಿಳಿಸಲಾಗಿದೆ.

ಬೆಳೆ ಹಾನಿ ಇನ್‌ಪುಟ್ ಸಬ್ಸಿಡಿಯನ್ನು ಶ್ರೀಘ್ರವಾಗಿ ತಂತ್ರಾಂಶದಲ್ಲಿ ನಮೂದಿಸುವ ಕಾರ್ಯವನ್ನು ತ್ವರಿತಗೊಳಿಸಬೇಕು. 2019, 2020 ಮತ್ತು 2021ನೇ ಸಾಲಿನಲ್ಲಿ 'ಎ' ಅಥವಾ 'ಬಿ' ವರ್ಗದಲ್ಲಿ ಹಾನಿಯಾದ ಮನೆಗಳು ಈವರೆಗೂ ಮನೆ ನಿರ್ಮಾಣ ಕಾರ್ಯ ಪ್ರಾರಂಭವಾಗದಂತಹ ಮನೆಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿ ರದ್ದುಗೊಳಿಸಬೇಕು. ಪ್ರಾರಂಭವಾಗಿರುವ ಮನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮನೆ ಮಾಲೀಕರಿಗೆ ನೋಟೀಸ್‌ಗಳನ್ನು ನೀಡುವಂತೆ ಸೂಚಿಸಿದ್ದಾರೆ.

ರಾಜ್ಯದಲ್ಲಿ ಕಳೆದ 4 ವರ್ಷಗಳಿಂದ ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವುದರಿಂದ, ಪರಿಹಾರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ ವಿಪತ್ತು ನಿರ್ವಹಣೆ ಬಲಗೊಳಿಸಬೇಕಾಗಿದೆ. ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರವು ರಾಜ್ಯ ತುರ್ತು ನಿರ್ವಹಣಾ ಕೇಂದ್ರದೊಂದಿಗೆ ನಿರಂತರವಾಗಿ ಸಂಪರ್ಕದೊಂದಿಗೆ ಕಾರ್ಯ ನಿರ್ವಹಿಸಬೇಕು. ಪ್ರವಾಹ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಕುರಿತು ನಿಗಾ ಇಡಲು ವಿಪತ್ತು ನಿರ್ವಹಣಾ ಟಾಸ್ಕ್ ಫೋರ್ಸ್ ಅನ್ನು ಜಿಲ್ಲಾ ಮಟ್ಟದಲ್ಲಿ ರಚಿಸಬೇಕೆಂದು ನಿರ್ದೇಶನ‌ ನೀಡಿದ್ದಾರೆ.

ಇತ್ತೀಚೆಗೆ ಕೆರೆಗಳು ಶೀಘ್ರವಾಗಿ ತುಂಬುತ್ತಿರುವುದರಿಂದ ನೀರಿನ ರಭಸ ತಡೆದುಕೊಳ್ಳಲು ಸಾಧ್ಯವಾಗದ ಶಿಥಿಲಗೊಂಡ ಕೆರೆಗಳು ಒಡೆಯುತ್ತಿದ್ದು, ಅಪಾರ ಪ್ರಮಾಣದಲ್ಲಿ ಹಾನಿಯಾಗುತ್ತಿರುವುದು ಕಂಡು ಬಂದಿದೆ. ಇಂತಹ ಪ್ರಕರಣಗಳನ್ನು ತಡೆಗಟ್ಟಲು ಶಿಥಿಲಗೊಂಡ ಕರೆಗಳ ಸರ್ವೆ ನಡೆಸಿ ಬಲಗೊಳಿಸಬೇಕು. ಪ್ರತಿ ಬಾರಿ ಪ್ರವಾಹ ಎದುರಾಗುತ್ತಿರುವ ಜಲಾನಯನ ಗ್ರಾಮಗಳನ್ನು ಗುರುತಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಓದಿ: ರಾಜ್ಯದಲ್ಲಿ ಮುಂದುವರೆಯಲಿರುವ ವರ್ಷಧಾರೆ, 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.