ETV Bharat / state

ಮಾಡಾಳು ಮೇಲೆ ಕ್ರಮಕ್ಕೆ ಪಕ್ಷದಲ್ಲಿ ಪ್ರೊಸೀಜರ್ ನಡೆಯುತ್ತಿದೆ: ಸಿಎಂ ಬೊಮ್ಮಾಯಿ‌

author img

By

Published : Mar 7, 2023, 8:14 AM IST

Chief Minister Basavaraj Bommai
ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ

ಮಾಡಾಳು ವಿರೂಪಾಕ್ಷಪ್ಪನವರ ವಿರುದ್ಧ ಕ್ರಮ ಹಾಗು ಪ್ರತಿಪಕ್ಷಗಳ ಆರೋಪಗಳ ಕುರಿತಾಗಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು : "ಮಾಡಾಳು ವಿರೂಪಾಕ್ಷಪ್ಪ ಮೇಲೆ ಕ್ರಮ ತೆಗೆದುಕೊಳ್ಳಲು ಪಕ್ಷದಲ್ಲಿ ಪ್ರಕ್ರಿಯೆ ನಡೆಯುತ್ತಿದೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸೋಮವಾರ ಪದ್ಮನಾಭನಗರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

"ಕಾಂಗ್ರೆಸ್ ರಾಜ್ಯ ಬಂದ್ ಕರೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸೇ ಬಂದ್ ಆಗುತ್ತಿದೆ. ಮಾಡಾಳು ಪ್ರಕರಣದಲ್ಲಿ ಮುಜುಗರ ಪ್ರಶ್ನೆಯೇ ಇಲ್ಲ. ನಮ್ಮವರೇ ಇರಲಿ ಯಾರೇ ಇರಲಿ ನಾವು ತನಿಖೆಗೆ ಮುಕ್ತ ಅವಕಾಶ ನೀಡಿದ್ದೇವೆ. ಸಿದ್ದರಾಮಯ್ಯ ಕಾಲದಲ್ಲಿ ಎಲ್ಲ ಕೇಸುಗಳನ್ನು ಮುಚ್ಚಿ ಹಾಕಿದ್ದರು. ಅವರ ಕಾಲದಲ್ಲಿ ಸಚಿವರ ಕಚೇರಿಯಲ್ಲಿ ಹಣ ಸಿಕ್ಕಿತ್ತು. ಆ ಪ್ರಕರಣದ ಜತೆಗೆ ಲೋಕಾಯುಕ್ತವನ್ನೂ ಮುಚ್ಚಿದರು. ನಾವು ಲೋಕಾಯುಕ್ತಕ್ಕೆ ಶಕ್ತಿ ನೀಡಿದ್ದೇವೆ" ಎಂದರು.

"ವಿಜಯ ಸಂಕಲ್ಪ ಯಾತ್ರೆಯಿಂದ ನಮ್ಮ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ. ನಾವು ಗೆದ್ದೇ ಗೆಲ್ಲುತ್ತೇವೆ. ನಮ್ಮಲ್ಲಿ ನಾಯಕರು ಮೋದಿ. ಅವರು ಪ್ರಚಾರಕ್ಕೆ ಬಂದರೆ ತಪ್ಪೇನು?. ಕಾಂಗ್ರೆಸ್‌ಗೆ ಯಾಕೆ ಆತಂಕ ಎಂದು ಕೇಳಿದರು. ನಾಲ್ಕು ಭಾಗಗಳಲ್ಲಿ ರಥಯಾತ್ರೆ ನಡೆಯುತ್ತಿದೆ. ಪ್ರತಿದಿನವೂ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಜನಬೆಂಬಲ ನೋಡಿದರೆ ಬಿಜೆಪಿ ಸುನಾಮಿ ಎದ್ದಿದೆ. ಫಲಾನುಭವಿಗಳ ರ್ಯಾಲಿಯಲ್ಲೂ ಬಹಳಷ್ಟು ಜನರು ಸೇರುತ್ತಿದ್ದಾರೆ. ಇದರಲ್ಲೂ ಜನ ಸೇರಿದ್ದು ನೋಡಿದರೆ ವಿಜಯ ಶತಸಿದ್ದ ಅಂತ ಹೇಳುತ್ತೇನೆ. ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದಿಂದ ಗೆಲ್ಲಲಿದೆ" ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ವಿ.ಸೋಮಣ್ಣ ಅಸಮಾಧಾನಗೊಂಡಿರುವ ವಿಚಾರವಾಗಿ ಮಾತನಾಡಿ, "ಅವರು ನಮ್ಮ ಜೊತೆಗಿದ್ದಾರೆ. ನಮ್ಮ ಹೃದಯದಲ್ಲಿ ಇದ್ದಾರೆ. ನಮ್ಮ ಜೊತೆಗೇ ಇರುತ್ತಾರೆ" ಎಂದು ಹೇಳಿದರು.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, "ಶಿಕ್ಷಕರ ನೇಮಕಾತಿ, ಪೊಲೀಸ್ ನೇಮಕಾತಿಯಲ್ಲಿ ಕಾಂಗ್ರೆಸ್​ ಭ್ರಷ್ಟಾಚಾರ ಮಾಡಿತ್ತು. ಇಡೀ ಕಾಂಗ್ರೆಸ್ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಬೇಲ್ ಮೇಲೆ ಇದ್ದಾರೆ. ಆದರೆ ಬೊಮ್ಮಾಯಿ‌ ಮೇಲೆ ಒಂದು ರೂಪಾಯಿ ಭ್ರಷ್ಟಾಚಾರ ಇಲ್ಲ. ಸಿದ್ದರಾಮಯ್ಯ ಹಾಗೂ ಬೊಮ್ಮಾಯಿ‌ ಅವರನ್ನು ತಕ್ಕಡಿಯಲ್ಲಿ ತೂಗಿದ್ರೆ, ಸಿದ್ದರಾಮಯ್ಯಗಿಂತ ಒಂದು ಹಂತದ ಮೇಲೆ ಬೊಮ್ಮಾಯಿ‌ ಇರ್ತಾರೆ" ಎಂದರು.

"ವಿಜಯ ರಥಯಾತ್ರೆಯಲ್ಲಿ ಜನಸ್ತೋಮ ನೋಡಿದರೆ ಬಿಜೆಪಿ ಸಂಪೂರ್ಣ ಬಹುಮತದಿಂದ ಗೆದ್ದು ಬರುತ್ತದೆ. ಈ ಯಾತ್ರೆ ನೋಡಿ ಕಾಂಗ್ರೆಸ್‌ಗೆ ಹತಾಶೆ ಆಗಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಕಂಗೆಟ್ಟು ಹೋಗಿದ್ದಾರೆ. ಮೋದಿ ರೋಡ್ ಶೋ ಹಾಗೂ ಶಿವಮೊಗ್ಗ ಕಾರ್ಯಕ್ರಮದಲ್ಲಿ ದಾಖಲೆ ಮಟ್ಟದಲ್ಲಿ ಜನ ಸೇರಿದ್ದರು" ಎಂದು ಹೇಳಿದರು.

ದಶಪಥ ರಸ್ತೆಯ ಕ್ರೆಡಿಟ್ ಕಾಂಗ್ರೆಸ್‌ಗೂ ಸಿಗಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಆರ್.ಅಶೋಕ್, "ಸಿದ್ದರಾಮಯ್ಯ ಅನ್ನಬಾಗ್ಯ ನಾನೇ ಕೊಟ್ಟಿದ್ದೇನೆ ಅಂತಾರೆ. ಹಕ್ಕುಪತ್ರನೂ ನಾನು ಕೊಟ್ಟಿದ್ದೇನೆ ಅಂತಾರೆ. ಹಂಗೆ ಮಾತಾಡೋದು ಅವರಿಗೆ ಏನೋ ಒಂಥರಾ ಚಟ. ಟಿಪ್ಪು ಜಯಂತಿ ಆದ್ಮೇಲೆ ಭ್ರಮಣೆ ಆಗಿಬಿಟ್ಟದೆ. ಏನು ಮಾಡಿದರೂ ನಾನೇ ನಾನೇ ಅಂತಾರೆ. ಕುಕ್ಕರ್ ಬ್ಲಾಸ್ಟ್ ಬಗ್ಗೆ ಮಾತಾಡಿಸಿದರೇ ಅದನ್ನು ನಾನೇ ಮಾಡಿಸಿದ್ದು ಅಂತಾರೆ" ಎಂದು ವ್ಯಂಗ್ಯವಾಡಿದರು.

"ನೇಣು ಹಾಕಲು ಹಗ್ಗ ಕೊಡುತ್ತೇನೆ ಅಂದ್ರೆ ಅದನ್ನು ನಾನೇ ಕೊಟ್ಟಿದ್ದು ಅಂತಾರೆ. ಆ ಮಟ್ಟಕ್ಕೆ ಅವರು ಬಂದಿದ್ದಾರೆ. ಅವರಿಗೆ ಅಭಿವೃದ್ಧಿ ಮಾಡೋಕೆ ಆಗಿಲ್ಲ. ಈಗ ಮೋದಿ ರೈಲು ಕೊಟ್ಟವ್ರೇ, ವಿಮಾನ ನಿಲ್ದಾಣ ಕೊಟ್ಟವ್ರೇ. ಕಾಂಗ್ರೆಸ್ ಎಲ್ಲಾ ರೀತಿಯ ಆರೋಪ ಮಾಡುತ್ತಾರೆ. ಆದರೆ ಅಭಿವೃದ್ಧಿ ಬಗ್ಗೆ ಮಾತ್ರ ಮಾತಾಡಲ್ಲ. ಯಾಕೆಂದರೆ ಅವರು ಅಭಿವೃದ್ಧಿ ಮಾಡಿಲ್ಲ. ಕಾಂಗ್ರೆಸ್ ಕರಷ್ಶನ್ ಕಿಂಗ್" ಎಂದು ವಾಗ್ದಾಳಿ ನಡೆಸಿದರು.

ಸಿಡಿಮದ್ದಿನಿಂದ ಅಗ್ನಿ ಅವಘಡ: ರಥಯಾತ್ರೆ ಸಾಗುವ ವೇಳೆ ಕಾರ್ಯಕರ್ತರು ಸಿಡಿಸಿದ ರಾಕೆಟ್ ತೆಂಗಿನ ಮರಕ್ಕೆ ತಾಗಿದ ಕಾರಣ ಬೆಂಕಿ ಹತ್ತಿದ ಘಟನೆ ನಡೆಯಿತು. ರಾಕೆಟ್ ಸಿಡಿಸಿದ ಪರಿಣಾಮ ತೆಂಗಿನ ಮರ ಸುಟ್ಟು ಹೋಯಿತು. ಇಟ್ಟಮಡು ಮಾರ್ಗವಾಗಿ ಯಾತ್ರೆ ಸಾಗುತ್ತಿದ್ದಾಗ ಪಕ್ಕದ ಮನೆಯವರ ತೆಂಗಿನ ಮರಕ್ಕೆ ಬೆಂಕಿ ತಗುಲಿದೆ.

ಇದನ್ಣು ಓದಿ :ಚನ್ನಪಟ್ಟಣದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ - ದಳಪತಿಗಳ ಅಖಾಡದಲ್ಲಿ ಕಮಲ ಕಲಿಗಳ ಶಕ್ತಿ ಪ್ರದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.