ETV Bharat / state

ಬೆಂಗಳೂರು: ಗ್ಯಾಸ್‌ ಗೀಸರ್‌ ಸೋರಿಕೆಯಾಗಿ ಗರ್ಭಿಣಿ ಸಾವು, ಮಗು ಸ್ಥಿತಿ ಗಂಭೀರ

author img

By ETV Bharat Karnataka Team

Published : Dec 23, 2023, 8:43 PM IST

pregnant-woman-dies-of-suffocation-due-to-gas-geyser-leak-in-bengaluru
ಬೆಂಗಳೂರು: ಗ್ಯಾಸ್‌ ಗೀಸರ್‌ ಸೋರಿಕೆಯಾಗಿ ಗರ್ಭಿಣಿ ಸಾವು, ಮಗು ಸ್ಥಿತಿ ಗಂಭೀರ

ಗ್ಯಾಸ್ ಗೀಸರ್‌ ಲೀಕ್‌ ಆಗಿ ಗರ್ಭಿಣಿಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಅಶ್ವಥ್​ ನಗರದಲ್ಲಿ ನಡೆದಿದೆ.

ಬೆಂಗಳೂರು: ಗ್ಯಾಸ್ ಗೀಸರ್ ಸೋರಿಕೆಯಾಗಿ ಗರ್ಭಿಣಿಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಅಶ್ವಥ್ ನಗರದಲ್ಲಿ ನಡೆದಿದೆ. ರಮ್ಯ(23) ಮೃತ ಮಹಿಳೆ. ಇತ್ತ ರಮ್ಯ ಅವರ ನಾಲ್ಕು ವರ್ಷದ ಮಗುವಿಗೆ ಎಂಎಸ್ ರಾಮಯ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಬೆಳಗ್ಗೆ ರಮ್ಯ ಅವರು ತಮ್ಮ ನಾಲ್ಕು ವರ್ಷದ ಮಗುವಿನೊಟ್ಟಿಗೆ ಸ್ನಾನ ಮಾಡಲು ಹೋಗಿದ್ದಾಗ ಗ್ಯಾಸ್ ಗೀಸರ್​ನಿಂದ ವಿಷ ಅನಿಲ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿದೆ. ವಿಷ ಅನಿಲ ಸೇವಿಸಿದ್ದರಿಂದ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ತಾಯಿ - ಮಗು ಕುಸಿದು ಬಿದ್ದಿದ್ದಾರೆ. ಕೆಲ ಹೊತ್ತಾದರೂ ಸಾನ್ನದ ಮನೆಯಿಂದ ಹೊರ ಬಾರದಿದ್ದಕ್ಕೆ ಅನುಮಾನ ಕೊಂಡು ಪತಿ ಹೋಗಿ ನೋಡಿದಾಗ ಕುಸಿದು ಬಿದ್ದಿರುವುದು ಗೊತ್ತಾಗಿದೆ. ತಕ್ಷಣ ಸ್ಥಳೀಯರ ನೆರವಿನಿಂದ ತಾಯಿ - ಮಗುವನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಮ್ಯ ಮೃತಪಟ್ಟಿದ್ದಾರೆ. ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯರಾದ ಸುಧೀರ್ ಎಂಬುವರು ಪ್ರತಿಕ್ರಿಯಿಸಿ,"ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ದುರಂತ ಸಂಭವಿಸಿದೆ. ತಾನು ಬೇಕರಿ ಕೆಲಸದಲ್ಲಿ ತೊಡಗಿಸಿಕೊಂಡಿರುವಾಗ ಜಗದೀಶ್ ಅವರು ಘಟನೆ ಬಗ್ಗೆ ತಿಳಿಸಿ ಸಹಾಯ ಮಾಡುವಂತೆ ಕೋರಿದರು. ಕೂಡಲೇ ಅವರ ಮನೆಗೆ ಹೋಗಿ ತಾಯಿ-ಮಗುವನ್ನ ಆಸ್ಪತ್ರೆಗೆ ದಾಖಲಿಸಿದೆವು. ರಮ್ಯ ಅವರು ಸಾವನ್ನಪ್ಪಿದ್ದಾರೆ, ಮಗು ಚಿಕಿತ್ಸೆ ಪಡೆಯುತ್ತಿದೆ. ದಂಪತಿ ಕಳೆದ ಒಂದು ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು" ಎಂದರು.

ಇದನ್ನೂ ಓದಿ: ಶಾರ್ಟ್​ ಸರ್ಕ್ಯೂಟ್​ನಿಂದ ಹೀಟರ್​ಗೆ ಬೆಂಕಿ: ತಂದೆ - ಮಗಳು ಸ್ಥಳದಲ್ಲೇ ಸಾವು, ತಾಯಿಗೆ ಗಂಭೀರ ಗಾಯ

ಸಿಲಿಂಡರ್ ಸ್ಫೋಟ, ಚಿಕಿತ್ಸೆ ಫಲಿಸದೆ ಗಾಯಾಳು ಮಹಿಳೆ ಸಾವು(ಬೆಳಗಾವಿ): ಸಿಲಿಂಡರ್ ಸ್ಫೋಟದಿಂದ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಶುಕ್ರವಾರ ಮೃತಪಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ರಾಜಶ್ರೀ ಅಶೋಕ ನಿರ್ವಾಣಿ (42) ಮತರು. ಗೋಕಾಕ್​​ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ಭಾನುವಾರ ಸಿಲಿಂಡರ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ 9 ತಿಂಗಳ ಹಸುಗೂಸು ಸೇರಿ ಒಂದೇ ಕುಟುಂಬದ 7 ಮಂದಿ ಗಾಯಗೊಂಡಿದ್ದರು. ಗಂಭೀರ ಗಾಯಗೊಂಡಿದ್ದ ಈ ಮೂವರನ್ನು ಕೆಎಲ್ಇ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕುಟುಂಬಸ್ಥರಿಗೆ ಮಹಿಳೆಯ ಮೃತದೇಹವನ್ನು ಹಸ್ತಾಂತರಿಸಲಾಗಿದೆ. ಇನ್ನಿಬ್ಬರು ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿತ್ತು.

ಮನೆ ಸಂಪೂರ್ಣ ಭಸ್ಮ(ಉತ್ತರ ಕನ್ನಡ): ಅಡುಗೆ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡು ಮನೆ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹೆಗಡೆ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ನಡೆದಿತ್ತು. ಹೆಗಡೆ ಗ್ರಾಮದ ನಾರಾಯಣ ಮುಕ್ರಿ ಅವರ‌ ಮನೆಯಲ್ಲಿ ಅವಘಡ ಸಂಭವಿಸಿದ್ದು, ಅಪಾರ ಹಾನಿಯುಂಟಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.