ETV Bharat / state

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್​: ಎನ್ಐಎ ಚಾರ್ಜ್​ಶೀಟ್​​ನಲ್ಲಿ ದಾಖಲಾದ ಅಂಶಗಳೇನು?

author img

By

Published : Jan 21, 2023, 6:36 AM IST

Updated : Jan 21, 2023, 5:23 PM IST

praveen nettar
ಪ್ರವೀಣ್ ನೆಟ್ಟಾರು

ಬಿಜೆಪಿ ಮುಖಂಡ ಪ್ರವೀಣ್​ ಹತ್ಯೆ ಪ್ರಕರಣ - ನ್ಯಾಯಾಲಯಕ್ಕೆ ಆರೋಪಿಗಳ ಚಾರ್ಚ್​ಶೀಟ್​ ಸಲ್ಲಿಸಿದ ಎನ್​ಐಎ - 2047 ರ ವೇಳೆಗೆ ಇಸ್ಲಾಂ ಆಡಳಿತ ಗುರಿ- ಸರ್ವೀಸ್​ ಟೀಂ, ಕಿಲ್ಲರ್​ ಸ್ಕ್ವಾಡ್​ಗಳ ರಚನೆ

ಬೆಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. 1,500 ಪುಟಗಳ ಚಾರ್ಜ್‌ಶೀಟ್‌ನಲ್ಲಿ 240 ಸಾಕ್ಷಿಗಳ ಹೇಳಿಕೆಗಳು ಒಳಗೊಂಡಿದ್ದು, ಒಟ್ಟು 20 ಆರೋಪಿಗಳ ಹೆಸರು ಉಲ್ಲೇಖಿಸಲಾಗಿದೆ. ಅಲ್ಲದೇ, 2047 ರ ವೇಳೆಗೆ ದೇಶದಲ್ಲಿ ಇಸ್ಲಾಮಿಕ್​ ಆಡಳಿತ ರಚನೆ, ಕಿಲ್ಲರ್​ ಸ್ಕ್ವಾಡ್​, ಸರ್ವೀಸ್​ ಟೀಂನಂತಹ ರಹಸ್ಯ ತಂಡಗಳನ್ನು ರಚಿಸಿಕೊಂಡು ಹತ್ಯೆ, ಹಲ್ಲೆಗಳನ್ನು ನಡೆಸುತ್ತಿತ್ತು ಎಂದು ಹೇಳಿದೆ. ಎನ್‌ಐಎ ಪರ ವಕೀಲರಾದ ಪಿ.ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದರು. ಇದುವರೆಗೆ 14 ಆರೋಪಿಗಳನ್ನು ಬಂಧಿಸಲಾಗಿದ್ದು, 6 ಆರೋಪಿಗಳಿಗಾಗಿ ಹುಡುಕಾಟ ಚುರುಕುಗೊಂಡಿದೆ.

ಆರೋಪಿ ಸುಳಿವು ಕೊಟ್ಟವರಿಗೆ ಬಹುಮಾನ: ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ತಾಲ್ಲೂಕಿನ ಕೊಡಾಜೆಯ ಅದ್ದ ಎಂಬವರ ಮಗ, ಮೊಹಮ್ಮದ್‌ ಶರೀಫ್‌ (53) ಮತ್ತು ನೆಕ್ಕಿಲಾಡಿಯ ಅಗ್ನಾಡಿ ಅಬೂಬಕರ್ ಎಂಬವರ ಮಗ ಕೆ.ಎ ಮಸೂದ್‌ (40) ಎಂಬವರ ಸುಳಿವು ನೀಡಿದವರಿಗೆ ತಲಾ 5 ಲಕ್ಷ ರೂ. ನಂತೆ ಒಟ್ಟು 10 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‌ಐಎ ಅಧಿಕಾರಿಗಳು ಘೋಷಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆ ಚುರುಕುಗೊಳಿಸಿದ್ದು, ಇಷ್ಟಾದರೂ ಕೆಲ ಆರೋಪಿಗಳ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಆರೋಪಿಗಳ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದೆ.

ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಮತ್ತೋರ್ವ ಆರೋಪಿ ಬಂಧಿಸಿದ ಎನ್‌ಐಎ

ಪ್ರಕರಣದ ಹಿನ್ನೆಲೆ: ಕಳೆದ ವರ್ಷ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್​ ನೆಟ್ಟಾರು ಎಂಬವರ ಮೇಲೆ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಪ್ರವೀಣ್ ಬೈಕ್‌ನಲ್ಲಿ ಮನೆಗೆ ಹೊರಡಲು ಸಿದ್ದರಾಗಿದ್ದಾಗ ಬೈಕ್‌ನಲ್ಲಿ​ ಆಗಮಿಸಿದ ಮುಸುಕುಧಾರಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅವರು ಮಾರ್ಗಮಧ್ಯೆ ಮೃತಪಟ್ಟಿದ್ದರು.

ಪ್ರವೀಣ್ ಹತ್ಯೆ ಖಂಡಿಸಿ ಹಿಂದೂ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ್ದರು. ಶಾಸಕ ಸಂಜೀವ ಮಠಂದೂರು, ಸಚಿವ ಎಸ್​.ಅಂಗಾರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್​ ಕುಮಾರ್​ ಕಟೀಲ್​ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಲ್ಲಿ ಜಿಲ್ಲೆಯಲ್ಲಿ ನಿಷೇಧಾಜ್ಞೆ​ ಜಾರಿ ಮಾಡಲಾಗಿತ್ತು. ಹತ್ಯೆಗೆ ಸಂಬಂಧಿಸಿ ಆರೋಪಿಗಳ ಪತ್ತೆಗಾಗಿ ಪೊಲೀಸ್​ ಇಲಾಖೆಯು ವಿಶೇಷ ತಂಡಗಳನ್ನು ರಚಿಸಿತ್ತು. ನಂತರ ನಡೆದ ಬೆಳವಣಿಗೆಗಳಲ್ಲಿ ಕೊಲೆಗೆ ಸಹಕಾರ ನೀಡಿದ ಹಲವು ಆರೋಪಿಗಳನ್ನು ಬಂಧಿಸಲಾಗಿತ್ತು.

ಕೆಲವೇ ದಿನದಲ್ಲಿ ಪ್ರಕರಣ ಭೇದಿಸಿದ ಪೊಲೀಸರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ದಾಖಲಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸೂಕ್ಷ್ಮ ವಾತಾವರಣ ಸೃಷ್ಟಿಯಾಗಿತ್ತು. ಯಾವುದೇ ಸುಳಿವೂ ಇಲ್ಲದೇ ಇದ್ದ ಈ ಪ್ರಕರಣದಲ್ಲಿ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ಡ ಮಟ್ಟದ ಸವಾಲಾಗಿತ್ತು. ಆರೋಪಿಗಳನ್ನು ಪತ್ತೆ ಹಚ್ಚಲು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಪಶ್ಚಿಮ ವಲಯದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ತನಿಖಾ ತಂಡವನ್ನು ರಚಿಸಿ, ರಾಜ್ಯದಲ್ಲಿ ಮತ್ತು ಹೊರ ರಾಜ್ಯದ ವಿವಿಧೆಡೆಗಳಲ್ಲಿ ಪತ್ತೆಗೆ ಪ್ರಯತ್ನಿಸಲಾಗಿತ್ತು.

ಇದಕ್ಕೆ ಒಟ್ಟು 82 ಜನ ಅಧಿಕಾರಿ ಮತ್ತು ಸಿಬ್ಬಂದಿ ತನಿಖಾ ತಂಡ ಹಗಲು ರಾತ್ರಿ ಕರ್ತವ್ಯ ನಿರ್ವಹಿಸಿ, ಸ್ಪಷ್ಟ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಅಂತಿಮವಾಗಿ ಆರೋಪಿಗಳನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೇ ಈ ಕೋಮು ಸೂಕ್ಷ್ಮ ಪ್ರಕರಣದ ಹಿನ್ನೆಲೆಯಲ್ಲಿ ಪುತ್ತೂರು, ಸುಳ್ಯ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ನೆರೆದಿದ್ದು, ಇದನ್ನೂ ಹತೋಟಿಗೆ ತಂದು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ ಪೊಲೀಸರು ಯಶಸ್ವಿಯಾಗಿದ್ದರು.

ಪ್ರವೀಣ್​ ಪತ್ನಿಗೆ ಉದ್ಯೋಗ ನೀಡಿದ ಸರ್ಕಾರ: ಕಳೆದ ವರ್ಷ ದೊಡ್ಡಬಳ್ಳಾಪುರದಲ್ಲಿ ನಡೆದಿದ್ದ ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ಅದರಂತೆ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಸಿ ಗ್ರೂಪ್​​ ಹುದ್ದೆಗೆ ನೂತನ ಅವರನ್ನು ನೇಮಕಾತಿ ಮಾಡಲಾಗಿದೆ.

ಆರೋಪಪಟ್ಟಿಯಲ್ಲಿ ಭಯಾನಕ ಅಂಶಗಳು: ತನಿಖಾ ಕಾಲದಲ್ಲಿ ಪಿಎಫ್ಐ ಸಂಘಟನೆಯು ಹಿಂದೂಗಳಲ್ಲಿ ಭಯವನ್ನುಂಟು ಮಾಡುವ ಮತ್ತು 2047ರ ವೇಳೆಗೆ ಇಸ್ಲಾಂ ಆಡಳಿತ ಜಾರಿಗೆ ತರುವ ಉದ್ದೇಶ ಹೊಂದಿದ್ದು, ಅದಕ್ಕಾಗಿಯೇ ತನ್ನದೇ ಆದ ಸರ್ವಿಸ್ ಟೀಂ / ಕಿಲ್ಲರ್ಸ್ ಸ್ಕ್ವಾಡ್ ಹೊಂದಿರುವುದು ಕಂಡು ಬಂದಿದೆ. ಸರ್ವಿಸ್ ಟೀಂನ ಸದಸ್ಯರು ಶಸ್ತ್ರಾಸ್ತ್ರ ತರಬೇತಿ ಹೊಂದಿದ್ದು ಪಿಎಫ್ಐನ ಹಿರಿಯ ನಾಯಕರುಗಳ ಆಜ್ಞೆಯಂತೆ ಹತ್ಯೆ, ಹಲ್ಲೆಗಳನ್ನು ನಡೆಸುತ್ತಿದ್ದರು.

ಬೆಂಗಳೂರು, ಸುಳ್ಯ, ಬೆಳ್ಳಾರೆಯಲ್ಲಿ ನಡೆದ ಸಭೆಗಳಲ್ಲಿ ಹತ್ಯೆಯ ಟಾರ್ಗೆಟ್​ಗಳನ್ನು ಗುರುತಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಸರ್ವೀಸ್ ಟೀಂ ಮುಖ್ಯಸ್ಥ ಮಸ್ತಫಾ ಪೈಚಾರ್​ಗೆ ಸೂಚಿಸಲಾಗಿತ್ತು. ಅದರಂತೆ ನಾಲ್ವರನ್ನು ಗುರುತಿಸಲಾಗಿತ್ತು. ನಾಲ್ವರಲ್ಲಿ ಬಿಜೆಪಿಯ ಯುವ ಮೋರ್ಚಾದ ಜಿಲ್ಲಾ ಕಮಿಟಿ ಸದಸ್ಯ ಪ್ರವೀಣ್ ನೆಟ್ಟಾರುನನ್ನು 26 ಜುಲೈ 2022ರಂದು ಸಾರ್ವಜನಿಕರ ಕಣ್ಣೆದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯಲಾಯಿತು ಎಂದು ಎನ್ಐಎ ತನ್ನ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದೆ.

2047 ರ ವೇಳೆಗೆ ಇಸ್ಲಾಂ ಆಡಳಿತ ಗುರಿ: ಎನ್‌ಐಎ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಭಯಾನಕ ಅಂಶಗಳು ದಾಖಲಾಗಿವೆ. 2047 ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತ, ಭಯೋತ್ಪಾದನೆ ಮತ್ತು ಜನರಲ್ಲಿ ಭಯವನ್ನು ಉಂಟುಮಾಡುವ ಉದ್ದೇಶವನ್ನು ನಿಷೇಧಿತ ಸಂಸ್ಥೆ ಹೊಂದಿತ್ತು ಎಂದು ದಾಖಲಿಸಲಾಗಿದೆ.

ಸಮಾಜದಲ್ಲಿ ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿ ಮತ್ತು 2047 ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ತನ್ನ ಕಾರ್ಯಸೂಚಿಯ ಭಾಗವಾಗಿ ನಿಷೇಧಿತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) 'ಸರ್ವೀಸ್​ ಟೀಂ, ಕಿಲ್ಲರ್ ತಂಡಗಳನ್ನು ರಹಸ್ಯವಾಗಿ ರಚಿಸಿಕೊಂಡಿದೆ.

ಈ ಸರ್ವೀಸ್​ ಟೀಂಗಳ ಸದಸ್ಯರಿಗೆ ಶಸ್ತ್ರಾಸ್ತ್ರಗಳ ಸರಬರಾಜು, ದಾಳಿ ತರಬೇತಿ ಮತ್ತು ಕಣ್ಗಾವಲು ತಂತ್ರಗಳ ತರಬೇತಿಯನ್ನು ನೀಡಲಾಗುತ್ತಿತ್ತು. ಸಮಾಜದ ಹಿಂದು ಮುಖಂಡರ ಪಟ್ಟಿ ಮತ್ತು ಅವರ ಮೇಲೆ ನಿಗಾ ವಹಿಸಲು ಸೂಚಿಸಲಾಗಿತ್ತು.

ಮಹಮ್ಮದ್ ಶಿಯಾಬ್, ಅಬ್ದುಲ್ ಬಶೀರ್, ರಿಯಾಝ್, ಮುಸ್ತಫಾ ಪೈಚಾರ್, ಮಸೂದ್ ಕೆಎ, ಕೊಡಾಜೆ ಮಹಮ್ಮದ್ ಶೆರೀಫ್, ಅಬೂಬಕ್ಕರ್ ಸಿದ್ದಿಕ್, ನೌಫಲ್ ಎಂ, ಇಸ್ಮಾಯಿಲ್ ಶಾಫಿ ಕೆ, ಕೆ ಮಹಮ್ಮದ್ ಇಕ್ಬಾಲ್, ಶಹೀದ್ ಎಂ, ಮಹಮ್ಮದ್ ಶಫೀಕ್ ಜಿ, ಉಮ್ಮರ್ ಫಾರೂಕ್ ಎಂ ಆರ್, ಮುಹಮ್ಮದ್ ಇಬ್ರಾಹಿ ಸಿಎ, ಅಬ್ದುಲ್ ಕಬೀರ್ ಸಿಎ , ಸೈನುಲ್ ಅಬಿದ್ ವೈ, ಶೇಖ್ ಸದ್ದಾಂ ಹುಸೇನ್, ಝಾಕಿಯಾರ್ ಎ, ಎನ್ ಅಬ್ದುಲ್ ಹ್ಯಾರಿಸ್, ಎಂಎಚ್ ತುಫೈಲ್ ಹೆಸರನ್ನು ಆರೋಪಪಟ್ಟಿ ಹೊಂದಿದೆ.

ಆರೋಪಿ ಸುಳಿವು ಕೊಟ್ಟವರಿಗೆ ಬಹುಮಾನ: ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ತಾಲ್ಲೂಕಿನ ಕೊಡಾಜೆಯ ಅದ್ದ ಎಂಬುವರ ಮಗ, ಮೊಹಮ್ಮದ್ ಶರೀಫ್ (53) ಮತ್ತು ನೆಕ್ಕಿಲಾಡಿಯ ಅಗ್ಗಾಡಿ ಅಬೂಬಕರ್ ಎಂಬವರ ಮಗ ಕೆ.ಎ ಮಸೂದ್ (40) ಎಂಬವರ ಸುಳಿವು ನೀಡಿದವರಿಗೆ ತಲಾ 5 ಲಕ್ಷ ರೂ.ನಂತೆ ಒಟ್ಟು 10 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‌ಐಎ ಅಧಿಕಾರಿಗಳು ಘೋಷಿಸಿದ್ದಾರೆ.

ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ: ಇಬ್ಬರು ಆರೋಪಿಗಳ ಸುಳಿವು ಕೊಟ್ಟವರಿಗೆ ₹10 ಲಕ್ಷ ಬಹುಮಾನ!

Last Updated :Jan 21, 2023, 5:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.