ETV Bharat / state

ಕೆಎಸ್ಆರ್​ಪಿಯಲ್ಲಿ ಭ್ರಷ್ಟಾಚಾರದ ಆರೋಪ: ಮೇಲಾಧಿಕಾರಿಗಳ ವಿರುದ್ಧ ಎಡಿಜಿಪಿಗೆ ದೂರು ನೀಡಿದ ಪೊಲೀಸ್ ಸಿಬ್ಬಂದಿ

author img

By

Published : Jul 23, 2023, 7:47 PM IST

police-person-give-complainant-to-ksrp-adgp-against-the-superiors-in-bengaluru
ಕೆಎಸ್ಆರ್​ಪಿಯಲ್ಲಿ ಭ್ರಷ್ಟಾಚಾರದ ಆರೋಪ: ಮೇಲಾಧಿಕಾರಿಗಳ ವಿರುದ್ಧ ಎಡಿಜಿಪಿಗೆ ದೂರು ನೀಡಿದ ಪೊಲೀಸ್ ಸಿಬ್ಬಂದಿ

ಸೌಲಭ್ಯ ಪಡೆಯಲು ಮೇಲಾಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಸಿಬ್ಬಂದಿಯೊಬ್ಬರು ಕೆಎಸ್ಆರ್​ಪಿ ಎಡಿಜಿಪಿಗೆ ದೂರು ನೀಡಿದ್ದಾರೆ.

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ರಜೆ ಸೇರಿದಂತೆ ಹಲವು ಸೌಲಭ್ಯ ಪಡೆಯಲು ಮೇಲಾಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಎಡಿಜಿಪಿಗೆ ಸಿಬ್ಬಂದಿ ದೂರು ನೀಡಿದ್ದಾರೆ. ಕೂಡ್ಲುನಲ್ಲಿರುವ 9ನೇ ಕೆಎಸ್ಆರ್​ಪಿ ತುಕಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ. ಓಂಕಾರಪ್ಪ ಎಂಬುವರು ಐವರ ವಿರುದ್ಧ 11 ಅಂಶಗಳನ್ನು ಉಲ್ಲೇಖಿಸಿ ಕೆಎಸ್ಆರ್​ಪಿ ಎಡಿಜಿಪಿಗೆ ದೂರು ನೀಡಿದ್ದಾರೆ.

ಕೆಎಸ್​ಆರ್​ಪಿ ಕೆಲವು ಮೇಲಾಧಿಕಾರಿಗಳು ತಮ್ಮ ಕೆಳಗಿನ ಹಂತದ ಅಧಿಕಾರಿಗಳಿಂದಲೇ ಲಂಚ ಪಡೆಯುತ್ತಿದ್ದಾರೆ. ಸುಮಾರು 5 ಕ್ಕೂ ಹೆಚ್ಷು ಜನರ ಹೆಸರು ಉಲ್ಲೇಖಿಸಿ ಈ ದೂರು ಸಲ್ಲಿಕೆಯಾಗಿದೆ. ಎಸ್ 1 ಮುಪ್ಪಣ್ಣ, ಎಸಿ 2 ಚಂದ್ರಶೇಖರ್, ಆರ್​ಪಿಐ ರವಿ, ಆರ್​ಎಸ್​ಐ ಮಹಾಂತೇಶ್ ಬನ್ನಪ್ಪ ಗೌಡರ್, ಆರ್​​ಎಸ್​ಐ ಇರ್ಫಾನ್ ನಧಾಫ್, ಆರ್​ಎಸ್​ಐ ಶಂಭುಲಿಂಗ ವಿರುದ್ಧ ದೂರು ನೀಡಿದ್ದಾರೆ. ಇಲಾಖಾ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ನಾಲ್ಕು ಪುಟಗಳಲ್ಲಿ ಸಲ್ಲಿಸಿದ ದೂರಿನಲ್ಲಿ ಏನಿದೆ?: ಹೆಚ್ಚಿನ ರಜೆ ಬೇಕಾದರೆ ಹಣವನ್ನು ನೀಡಬೇಕು. ರಜೆಯಲ್ಲಿದ್ದರೆ ಪ್ರತಿ ದಿನಕ್ಕೆ 500 ರೂ. ನಂತೆ ಹಣ ನೀಡಬೇಕು. ಹಣದ ಜೊತೆಗೆ ಖಾಲಿ ಹಾಳೆ ಮೇಲೆ‌ ಸಹಿ ಮಾಡಿಸಿಕೊಳ್ಳುತ್ತಾರೆ. ಹಣ ಕೊಡದಿದ್ದರೆ ಪರೇಡ್ ಮಾಡಿಸಿ ಕಿರುಕುಳ ನೀಡುತ್ತಾರೆ. ಕಲ್ಯಾಣಿ ಪಹರೆ ಕರ್ತವ್ಯಕ್ಕೆ ಐದು ಸಾವಿರ ಪಡೆಯುತ್ತಾರೆ. ಹಣ ಪಡೆದು ಕೆಲ‌ ಸಿಬ್ಬಂದಿಗಳಿಂದ ಊರಿನಲ್ಲಿರಲು ಅವಕಾಶ ನೀಡಿದ್ದಾರೆ ಎಂದು ಓಂಕಾರಪ್ಪ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಈ ದೂರನ್ನ ಗಂಭೀರವಾಗಿ ಪರಿಗಣಿಸಿರುವ ಇಲಾಖೆ, ಯಾವ ರೀತಿಯ ಕ್ರಮಕ್ಕೆ ಮುಂದಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಬೆಂಗಳೂರು: ಹೈಫೈ ಜೀವನಕ್ಕಾಗಿ ಕಳ್ಳತನ ಎಸಗುತ್ತಿದ್ದ ಆರೋಪಿಯ ಬಂಧನ

ಹೆಡ್ ಕಾನ್​ಸ್ಟೇಬಲ್ ಲೋಕಾಯುಕ್ತ ಬಲೆಗೆ: ಇತ್ತೀಚಿಗೆ, ಪ್ರಕರಣವೊಂದರಲ್ಲಿ ಆರೋಪಿಗೆ ಸಹಾಯ ಮಾಡುವುದಾಗಿ 50 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಹೆಡ್‌ ಕಾನ್​ಸ್ಟೇಬಲ್​​ ಒಬ್ಬರನ್ನು ಜು.17ರಂದು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಬಂಧಿತನನ್ನು ರಾಮನಗರದ ಸೈಬರ್ ಕ್ರೈಂ, ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯ (ಸಿಇಎನ್) ಪೊಲೀಸ್ ಠಾಣೆಯ ಮಹೇಶ್ (43) ಎಂದು ಗುರುತಿಸಲಾಗಿತ್ತು. ಮಹೇಶ್ ಪರವಾಗಿ ಲಂಚ ಪಡೆಯುತ್ತಿದ್ದ ಆತನ ಸ್ನೇಹಿತನನ್ನು ಸಹ ಪೊಲೀಸರು ಬಂಧಿಸಿದ್ದರು.

2020ರಲ್ಲಿ ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರಿನ ಮಂಜೇಗೌಡ ಎಂಬುವರಿಂದ ಮಹೇಶ್ 2.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈಗಾಗಲೇ 75 ಸಾವಿರ ರೂ. ಲಂಚ ಪಡೆದಿದ್ದ. ಹೆಚ್ಚಿನ ಹಣ ನೀಡಲು ಸಾಧ್ಯವಾಗದಿದ್ದಾಗ ಮಂಜೇಗೌಡ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಭಾನುವಾರ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಪೊಲೀಸರು, ಉತ್ತರಹಳ್ಳಿ ಬಳಿ ದೂರುದಾರನಿಂದ 50,000 ರೂ. ಗಳನ್ನು ಪಡೆಯುತ್ತಿದ್ದಾಗ ಮಹೇಶ್ ಹಾಗೂ ಆತನ ಪರವಾಗಿ ಹಣ ಸ್ವೀಕರಿಸುತ್ತಿದ್ದ ರಮೇಶ್ ಎಂಬಾತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು, ವಶಕ್ಕೆ ಪಡೆದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.