ETV Bharat / state

ಬೆಂಗಳೂರು: ಹೈಫೈ ಜೀವನಕ್ಕಾಗಿ ಕಳ್ಳತನ ಎಸಗುತ್ತಿದ್ದ ಆರೋಪಿಯ ಬಂಧನ

author img

By

Published : Jul 23, 2023, 5:29 PM IST

Bengaluru crime: ಬೀಗ ಹಾಕಿದ ಮನೆ ಮತ್ತು ಅಂಗಡಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

crime-thief-arrested-who-was-stealing-for-hifi-life-in-bengaluru
ಬೆಂಗಳೂರು: ಹೈಫೈ ಜೀವನಕ್ಕಾಗಿ ಕಳ್ಳತನ ಎಸಗುತ್ತಿದ್ದ ಆರೋಪಿಯ ಬಂಧನ

ಬೆಂಗಳೂರು: ಐಷಾರಾಮಿ ಜೀವನ ಶೈಲಿಗಾಗಿ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಕಳ್ಳನನ್ನು ರಾಜಾಜಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಮೂಲದ ರಫೀಕ್ (29) ಬಂಧಿತ ಆರೋಪಿ. ಒಂದು ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿ ನೆಲಮಂಗಲ ಹಾಗೂ ರಾಜಾಜಿನಗರದಲ್ಲಿ ಮತ್ತೆ ಕೈಚಳಕ ತೋರಿಸಿ ಪೊಲೀಸರ ಅತಿಥಿಯಾಗಿದ್ದಾನೆ.

ಐಷಾರಾಮಿ ಜೀವನಕ್ಕಾಗಿ ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಆರೋಪಿ, ಬೆಂಗಳೂರು ಸೇರಿದಂತೆ ಹಲವು ಕಡೆ ಕಳ್ಳತನ ಮಾಡಿದ್ದ. ಬೀಗ ಹಾಕಿದ ಮನೆ, ಅಂಗಡಿಗಳನ್ನೇ ಗುರಿಯಾಗಿಸಿಕೊಂಡು ಬರೋಬ್ಬರಿ 20 ಕಡೆ ಕಳ್ಳತನ ಮಾಡಿ ಜೈಲು ಸೇರಿದ್ದ. ಕಳೆದ ತಿಂಗಳಷ್ಟೇ ಜೈಲಿನಿಂದ ಹೊರಬಂದಿದ್ದವನು ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ವಿಚಾರಣೆ ವೇಳೆ ನೆಲಮಂಗಲದ ಬಳಿ ಫಿಶ್ ಟೆಂಡರ್ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರ ಮನೆಯಲ್ಲಿಯೂ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಈ ಎರಡು ಪ್ರಕರಣಗಳಿಂದ 22 ಲಕ್ಷ ಮೌಲ್ಯದ 409 ಗ್ರಾಂ ಚಿನ್ನ, 425 ಗ್ರಾಂ ಬೆಳ್ಳಿ, 189 ಗ್ರಾಂ ತೂಕದ ನಕಲಿ ಚಿನ್ನ ವಶಕ್ಕೆ ಪಡೆದಿರುವ ಮಾಹಿತಿ ಪೊಲೀಸರಿಂದ ಸಿಕ್ಕಿದೆ.

ಇದನ್ನೂ ಓದಿ: ಹಣಕಾಸಿನ ವಿಚಾರಕ್ಕೆ ಕಿರಿಕ್: ಸ್ನೇಹಿತನಿಗೆ ಮಚ್ಚಿನೇಟು

ಟೊಮೆಟೊ ತುಂಬಿದ ಗೂಡ್ಸ್ ವಾಹನ‌ ಕದ್ದೊಯ್ದಿದ್ದ ದಂಪತಿ ಬಂಧನ: ಟೊಮೆಟೊ ತುಂಬಿದ್ದ ಗೂಡ್ಸ್ ವಾಹನವನ್ನು ಕಳ್ಳತನ ಮಾಡಿದ್ದ ದಂಪತಿಯನ್ನು ಬೆಂಗಳೂರಿನ ಆರ್​ಎಂಸಿ ಯಾರ್ಡ್ ಠಾಣಾ ಪೊಲೀಸರು ನಿನ್ನೆ ಬಂಧಿಸಿದ್ದರು. ಬಂಧಿತರನ್ನು ಭಾಸ್ಕರ್ ಹಾಗೂ ಆತನ ಪತ್ನಿ ಸಿಂಧುಜಾ ಎಂದು ಗುರುತಿಸಲಾಗಿತ್ತು. ರಾಕಿ, ಕುಮಾರ್, ಮಹೇಶ್ ಎಂಬ ಆರೋಪಿಗಳು ತಲೆಮರೆಸಿಕೊಂಡಿದ್ದು ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಜುಲೈ 8ರಂದು ಹಿರಿಯೂರಿನ ರೈತನೋರ್ವ ತನ್ನ ಜಮೀನಿನಲ್ಲಿ ಬೆಳೆದಿದ್ದ 250ಕ್ಕೂ ಹೆಚ್ಚು ಕೆಜಿಯಷ್ಟು ಟೊಮೆಟೊವನ್ನು ಕೋಲಾರಕ್ಕೆ ಕೊಂಡೊಯ್ಯುತ್ತಿದ್ದರು. ಈ ವೇಳೆ ಆರ್​ಎಂಸಿ ಯಾರ್ಡ್ ಬಳಿ ಕಾರಿನಲ್ಲಿ ಬಂದಿದ್ದ ಆರೋಪಿಗಳು ತಮ್ಮ ಕಾರಿಗೆ ನಿಮ್ಮ ವಾಹನ ಟಚ್ ಆಗಿದೆ ಎಂದು ಬಲವಂತದಿಂದ ಗೂಡ್ಸ್ ವಾಹನ ನಿಲ್ಲಿಸಿ ಚಾಲಕ ಹಾಗೂ ರೈತನ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಗಾಡಿಯಲ್ಲಿದ್ದ ಟೊಮೆಟೊ ನೋಡಿ ಕಳ್ಳತನದ ಸಂಚು ರೂಪಿಸಿದ್ದರು.

ಚಾಲಕ ಹಾಗೂ ರೈತನನ್ನು ಕೂರಿಸಿಕೊಂಡು ಹೋಗಿ ಚಿಕ್ಕಜಾಲ ಬಳಿ ಬಿಟ್ಟು ಟೊಮೆಟೊ ತುಂಬಿದ್ದ ವಾಹನ ಸಮೇತ ಪರಾರಿ ಆಗಿದ್ದರು. ನಂತರ ಚೆನ್ನೈ ಮಾರುಕಟ್ಟೆಯಲ್ಲಿ ಟೊಮೆಟೊ ಮಾರಾಟ ಮಾಡಿದ್ದರು. ಬಳಿಕ ಖಾಲಿ ವಾಹನ ತಂದು ಪೀಣ್ಯ ಬಳಿ ನಿಲ್ಲಿಸಿ, ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಪರಾರಿಯಾಗಿದ್ದರು. ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಆರ್​ಎಂಸಿ ಯಾರ್ಡ್ ಠಾಣಾ ಪೊಲೀಸರು ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿ, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಬಂಧನಕ್ಕೆ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.