ETV Bharat / state

ಮಕ್ಕಳ ಸುರಕ್ಷತಾ ಸಾಧನಗಳ ಲಭ್ಯತೆಗೆ ತುರ್ತುಕ್ರಮ ಕೈಗೊಳ್ಳಲು ಸೂಚಿಸುವಂತೆ ಕೋರಿ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್​​ ನೋಟಿಸ್​

author img

By ETV Bharat Karnataka Team

Published : Dec 14, 2023, 10:42 PM IST

ಹೈಕೋರ್ಟ್
ಹೈಕೋರ್ಟ್

ಹೈಕೋರ್ಟ್​ನಲ್ಲಿ ಬೆಂಗಳೂರಿನ ಡಾ.ಕೆ ಅರ್ಚನಾ ಭಟ್‌ ಎಂಬುವವರು 9 ತಿಂಗಳ ಮೇಲ್ಪಟ್ಟ ಮಕ್ಕಳಿಗೆ ಸುರಕ್ಷತಾ ಹೆಲ್ಮೆಟ್​ ಧರಿಸಲು ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಬೆಂಗಳೂರು : ಒಂಬತ್ತು ತಿಂಗಳು ಮೇಲ್ಪಟ್ಟ ಎಲ್ಲ ಮಕ್ಕಳಿಗೆ ಸುರಕ್ಷತಾ ಹೆಲ್ಮೆಟ್‌ ಹಾಗೂ ಮಕ್ಕಳ ಸುರಕ್ಷತಾ ಸಾಧನಗಳು ಲಭ್ಯವಾಗುವಂತೆ ಮಾಡಲು ತುರ್ತು ಕ್ರಮ ಕೈಗೊಳ್ಳಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ಸಂಬಂಧ ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ.

ಬೆಂಗಳೂರಿನ ಡಾ.ಕೆ.ಅರ್ಚನಾಭಟ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯಪೀಠ, ಸರ್ಕಾರ ಹಾಗೂ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ ಆರು ವಾರಗಳಲ್ಲಿಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆ ಮುಂದಿನ ಜನವರಿ ತಿಂಗಳಿಗೆ ಮುಂದೂಡಿತು.

ಅರ್ಜಿದಾರರ ಪರ ವಕೀಲರು, 2022ರ ಕೇಂದ್ರ ಮೋಟಾರು ವಾಹನ (ಎರಡನೇ ತಿದ್ದುಪಡಿ) ನಿಯಮ 138(7) ಮತ್ತು ಮೋಟಾರು ವಾಹನ ಕಾಯಿದೆ ಸೆಕ್ಷನ್‌ 129, 137 ಮತ್ತು 194 ಅನ್ನು ಅಕ್ಷರಶಃ ಹಾಗೂ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದರು.
ರಾಜ್ಯದಲ್ಲಿ ಚಿಕ್ಕಮಕ್ಕಳಿಗೆ ಅಗತ್ಯ ಹೆಲ್ಮೆಟ್‌ಗಳು ದೊರಕುತ್ತಿಲ್ಲ, ಹಾಗಾಗಿ ಅವುಗಳು ಲಭ್ಯವಾಗುವಂತೆ ಮಾಡಬೇಕು. ಮೋಟಾರು ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವಾಗ ತಿದ್ದುಪಡಿ ನಿಯಮದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ, ಅದನ್ನು ಜಾರಿಗೊಳಿಸಲು ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ವಿಶ್ವವಿದ್ಯಾಲಯಗಳಲ್ಲಿ ಮರು ಮೌಲ್ಯಮಾಪನಕ್ಕೆ ಶುಲ್ಕ ನಿಗದಿ ಪಡಿಸಲು ಕೋರಿ ಅರ್ಜಿ; ಇತ್ಯರ್ಥ ಪಡಿಸಿದ ಹೈಕೋರ್ಟ್ : ವಿಶ್ವ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನಕ್ಕೆ ಶುಲ್ಕ ವಿಧಿಸುವುದಕ್ಕೆ ನಿಯಮಗಳನ್ನು ರೂಪಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪರಿಗಣಿಸಲು ಹೈಕೋರ್ಟ್ ನಿರಾಕರಿಸಿದೆ.

ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಒಕ್ಕೂಟದ ಅಧ್ಯಕ್ಷ ಭರತ್ ರೆಡ್ಡಿ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್​. ದೀಕ್ಷಿತ್​ ಅವರಿದ್ದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಶಿಕ್ಷಣ ತಜ್ಞರು ಸಲಹೆಗಳನ್ನು ಪಡೆದು ಮತ್ತೆ ಅರ್ಜಿ ಸಲ್ಲಿಸಬಹುದು ಎಂದು ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥ ಪಡಿಸಿತು.

ನನ್ನ ಮನೆಯಲ್ಲಿ ಚಂದ್ರನನ್ನು ನೋಡಬೇಕು ಎಂದು ನಾನು ಬಯಸುತ್ತೇನೆ. ಆದರೆ, ನನ್ನ ಆಸೆ ಈಡೇರುವುದಿಲ್ಲ. ಇವೆಲ್ಲವೂ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಿವೆ. ಮರು ಮೌಲ್ಯಮಾಪನಕ್ಕೆ ಎಷ್ಟು ಹಣ ನಿಗದಿ ಪಡಿಸಬೇಕು ಎಂಬುದನ್ನು ನಾವು ಹೇಳುವುದಕ್ಕೆ ಶಿಕ್ಷಣ ತಜ್ಞರಲ್ಲ.
ಅಲ್ಲದೇ, ಅರ್ಜಿದಾರರ ಉದ್ದೇಶ ಪ್ರಾಮಾಣಿಕವಾಗಿರಬಹುದು. ಆದರೆ, ಶಿಕ್ಷಣ ತಜ್ಞರ ವಿಚಾರದಲ್ಲಿ ನ್ಯಾಯಪೀಠ ಪ್ರವೇಶ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿದಾರರು ತಜ್ಞರಿಂದ ಮಾಹಿತಿ ಪಡೆದು ಮತ್ತೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿರಲಿದೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟು ಅರ್ಜಿ ಹಿಂಪಡೆಯಲು ಅವಕಾಶ ನೀಡಿತು.

ಇದನ್ನೂ ಓದಿ : ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿದ ಕೇಸ್​; ಇದು ದುಶ್ಯಾಸನ ರಾಜ್ಯ, ಮಹಿಳೆಯ ನೆರವಿಗೆ ಯಾರೂ ಬಂದಿಲ್ಲ ಎಂದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.