ETV Bharat / state

ಕೊರೊನಾ ಪರಿಣಾಮ : ಕುರಿ-ಮೇಕೆ ಸಾಕಾಣಿಕೆಯತ್ತ ಜನರ ಆಸಕ್ತಿ, ಸರ್ಕಾರದ ಯೋಜನೆಗಳೇನು?

author img

By

Published : Sep 2, 2021, 6:52 PM IST

people focusing on Sheep-goat rearing
ಕುರಿ-ಮೇಕೆ ಸಾಕಾಣಿಕೆಯತ್ತ ಆಸಕ್ತಿ

ಆರ್ಥಿಕ ಸಬಲೀಕರಣ ಉದ್ದೇಶದಿಂದ 2021-22ನೇ ಸಾಲಿನ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪ ಯೋಜನೆ ಅಡಿಯಲ್ಲಿ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಕುರಿ-ಮೇಕೆ ಸಾಕಾಣಿಕೆಗಾಗಿ ಸಹಾಯಧನ ಹಾಗೂ ಸಾಲ ಸೌಲಭ್ಯ ನೀಡಲಾಗುತ್ತಿದೆ.

ಬೆಂಗಳೂರು: ಹಲವೆಡೆ ಅನೇಕ ಪ್ರಗತಿಪರ ರೈತರು ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡಿ ವಾರ್ಷಿಕ ಅಂದಾಜು 20 ರಿಂದ 30 ಲಕ್ಷ ರೂ. ವರೆಗೂ ಆದಾಯ ಗಳಿಸುತ್ತಿದ್ದಾರೆ. ಕುರಿ ಸಾಕಾಣಿಕೆಯು ಲಾಭದಾಯಕ ವೃತ್ತಿಯಾಗಿರುವುದರಿಂದ ಎಲ್ಲರಿಗೂ ಅನುಕೂಲ. ಇಂದಿಗೂ ಸಾಕಷ್ಟು ಜನ ಹಳೆ ಪದ್ಧತಿಯಲ್ಲೇ ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಆದರೆ, ವೈಜ್ಞಾನಿಕವಾಗಿ ಕುರಿ ಸಾಕಾಣಿಕೆ ಮಾಡಿದಾಗ ಮಾತ್ರ ಈ ವೃತ್ತಿಯಲ್ಲಿ ಬೆಳೆಯಲು ಸಾಧ್ಯ.

ಹೌದು, ಕುರಿಗಳಿಗೆ ಬರುವ ರೋಗ, ಅದರ ನಿವಾರಣೆ, ಕುರಿ ತಳಿಗಳ ಭಿನ್ನತೆ, ಮೇವು ವಿತರಣೆ, ಕುರಿ ಶೆಡ್ ನಿರ್ಮಾಣ ಸೇರಿದಂತೆ ಪ್ರಮುಖ ಅಂಶಗಳ ಬಗ್ಗೆ ವೈಜ್ಞಾನಿಕವಾಗಿ ಮಾಹಿತಿ ಪಡೆದು ಕುರಿ ಸಾಕಾಣಿಕೆ ಮಾಡಿದರೆ ಉತ್ತಮ ಲಾಭ ಗಳಿಸಬಹುದು. ಕಳೆದ ಎರಡು ವರ್ಷದಿಂದ ಕೋವಿಡ್ ಸಂಕಷ್ಟ ಹಲವರ ಬದುಕನ್ನು ಬೀದಿಗೆ ತಂದಿದ್ದು, ಗೊತ್ತಿರುವ ಸಂಗತಿಯೇ. ಹಲವಾರು ಕಂಪನಿಗಳು ಬಾಗಿಲು ಮುಚ್ಚಿದ ಪರಿಣಾಮ ಸಂಬಳ ನಂಬಿ ಬದುಕುತ್ತಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದರೂ ಸಂಬಳದ ಖಾತರಿಯಿಲ್ಲದಂತಾಗಿದೆ. ಈ ಅಭದ್ರತೆಯ ಸ್ಥಿತಿಯಿರುವುದರಿಂದ ಹೆಚ್ಚಿನ ಜನರು ಕುರಿ-ಮೇಕೆ ಸಾಕಾಣಿಕೆಯತ್ತ ಆಸಕ್ತಿ ತೋರುತ್ತಿದ್ದಾರೆ.

ಹೆಚ್ಚಿದ ಬೇಡಿಕೆ:

ನಮ್ಮ ದೇಶದ ಜಿಡಿಪಿಗೆ ವ್ಯವಸಾಯದ ಕೊಡುಗೆ ಶೇ. 18 ರಷ್ಟು ಇದೆ. ಇದರ ಪೈಕಿ ಶೇ. 33ರಷ್ಟು ಅಂದರೆ, ಒಟ್ಟು ಜಿಡಿಪಿಯಲ್ಲಿ ಶೇ. 6ರಷ್ಟು ಕುರಿ, ಮೇಕೆ ಮತ್ತು ಹಸು ಸಾಕಾಣಿಕೆಯ ಕೊಡುಗೆಯಿದೆ.

ಕುರಿ-ಮೇಕೆ ಸಾಕಾಣಿಕೆಗೆ ಸರ್ಕಾರದ ಯೋಜನೆ :

ಕುರಿ-ಮೇಕೆ ಸಾಕಾಣಿಕೆಗೂ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಸಿಗುತ್ತದೆ. ಅಲ್ಲದೆ, ಕುರಿ ಮತ್ತು ಮೇಕೆ ಶೆಡ್ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ 68 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ಆಸಕ್ತರು ಗ್ರಾಮ ಪಂಚಾಯತ್​ ಅಧಿಕಾರಿಗಳನ್ನು ಸಂಪರ್ಕಿಸಿ ಸಹಾಯಧನ ಪಡೆಯಬಹುದಾಗಿದೆ.

2021-22ನೇ ಸಾಲಿನ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪ ಯೋಜನೆ ಅಡಿಯಲ್ಲಿ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಕುರಿ-ಮೇಕೆ ಸಾಕಾಣಿಕೆಗಾಗಿ ಸಹಾಯಧನ ಹಾಗೂ ಸಾಲ ಸೌಲಭ್ಯ ನೀಡಲಾಗುತ್ತಿದೆ.

ಅದೇ ರೀತಿ ವಲಸೆ ಕುರಿಗಾರ ಸದಸ್ಯರಿಗೆ ನೈಸರ್ಗಿಕ ವಿಕೋಪದಿಂದ ರಕ್ಷಣೆ ಪಡೆಯುವ ಸಲುವಾಗಿ ಪರಿಕರಗಳ ಕಿಟ್ (ಸಂಚಾರಿ ಟೆಂಟ್, ಸೋಲಾರ್ ಟಾರ್ಚ್​, ರೈನ್‌ಕೋಟ್ ಮತ್ತು ರಬ್ಬರ್ ಫ್ಲೋರ್ ಮ್ಯಾಟ್) ಗಳನ್ನು ಸಾಮಾನ್ಯ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಉಚಿತವಾಗಿ ಒದಗಿಸಲು ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಅರ್ಜಿಗಳನ್ನು ಸಹ ಆಹ್ವಾನಿಸಿತ್ತು.

ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಲಾಗಿದ್ದು, ಈ ‘ಸೊಸೈಟಿ’ಗಳ ಮೂಲಕ ಆಡಳಿತವನ್ನು ಹೆಚ್ಚು ಪಾರದರ್ಶಕಗೊಳಿಸಲು ಮತ್ತು ಎಲ್ಲರಿಗೂ ಕುರಿ-ಮೇಕೆ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ಸಾಧ್ಯತೆಗಳಿವೆ. ಈ ಸಹಕಾರ ಸಂಘಗಳು ಜನರಿಗೆ ನಿಗಮದ ಕಾರ್ಯಕ್ರಮಗಳನ್ನು ಮತ್ತು ಸೌಲಭ್ಯಗಳನ್ನು ತಲುಪಿಸುವ ಏಕೈಕ ಮಾರ್ಗಗಳಾಗಿವೆ. ಹೋಬಳಿ ಮಟ್ಟದಲ್ಲಿ ಪ್ರತಿ ಹದಿನೈದು ಸಾವಿರ ಕುರಿ-ಮೇಕೆಗಳಿಗೆ ಒಂದು ಸಹಕಾರ ಸಂಘದಂತೆ ಈಗಾಗಲೇ 625 ಸಹಕಾರ ಸಂಘಗಳು ಅಸ್ತಿತ್ವಕ್ಕೆ ಬಂದಿವೆ. ಈ ಸಹಕಾರ ಸಂಘಗಳೇ ನಿಗಮದ ಕೇಂದ್ರ ಬಿಂದು. ನಿಗಮದ ಪ್ರತಿ ಕಾರ್ಯಕ್ರಮಗಳನ್ನು ಇವುಗಳ ಮೂಲಕ ವಿತರಿಸುವ, ತಲುಪಿಸುವ ಬದ್ಧತೆಯನ್ನು ನಿಗಮ ತೋರಿಸುತ್ತಾ ಬಂದಿದೆ.

ಪ್ರತಿ ವೃತ್ತಿಯು ಕಲಿಕೆಯನ್ನು ಅಪೇಕ್ಷಿಸುತ್ತದೆ. ಕಲಿಕೆಯಿಂದ ಜ್ಞಾನ ಗಳಿಸಿದರೆ ಯಾರು ಬೇಕಾದರೂ ಹಣ ಸಂಪಾದಿಸಬಹುದು. ನಿರಂತರ ಕಲಿಕೆಯೊಂದಿಗೆ ಪರಿಶ್ರಮ ಹಾಕುವವರು ಯಾವುದೇ ವೃತ್ತಿಯಲ್ಲಿ ಸಫಲರಾಗುತ್ತಾರೆ. ಜ್ಞಾನ ಪಡೆದುಕೊಳ್ಳುವ ಅವಕಾಶ ಸಿಕ್ಕಾಗ ಕೈಚೆಲ್ಲದೆ ಸದುಪಯೋಗಪಡಿಸಿಕೊಳ್ಳಬೇಕು ಎನ್ನುತ್ತಾರೆ ನುರಿತ ತಜ್ಞರು.

ಕುರಿ ಮತ್ತು ಮೇಕೆ ತಳಿಗಳೆಷ್ಟು? :

ದೇಶದಲ್ಲಿ ಒಟ್ಟಾರೆ 44 ರೀತಿಯ ಕುರಿ ಮತ್ತು 34 ಜಾತಿಯ ಮೇಕೆಗಳಿವೆ. ಕುರಿಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದ್ದು, ಡಾರ್ಸೆಟ್, ಸಫೊಲ್ಕ, ಚೆವಿಯಟ್ ಮತ್ತಿತರ ತಳಿಗಳು ಮಾಂಸ ಉತ್ಪಾದಕ ಕುರಿ ತಳಿಗಳು. ಮೆರಿನೊ, ರಾಂಬುಲೆಟ್ ಮತ್ತಿತರ ತಳಿಗಳು ಉಣ್ಣೆ ಉತ್ಪಾದಕ ಕುರಿ ತಳಿಗಳಾಗಿವೆ. ಅದೇ ರೀತಿ ಮೊಂಟಾಡೇಲ್, ಕೂಕಾ ಇತರ ತಳಿಗಳು ಉಣ್ಣೆ ಮತ್ತು ಮಾಂಸ ಉತ್ಪಾದನೆಗೆ ಪ್ರಸಿದ್ಧವಾಗಿವೆ.

ಬಂಡೂರು, ಡೆಕ್ಕನಿ, ಬಳ್ಳಾರಿ, ಕೆಂಗುರಿ, ಹಾಸನ ಕುರಿ ತಳಿಗಳು ಮೌಲ್ಯಯುತ ದೇಶೀಯ ತಳಿಗಳಾಗಿದ್ದು, ಆಯಾ ಪ್ರದೇಶದ ಹವಾಮಾನ ಪರಿಸರಕ್ಕೆ ಹೊಂದಿಕೊಂಡು ಸಾವಿರಾರು ವರ್ಷಗಳಿಂದ ವಿಕಾಸಗೊಂಡ ತಳಿಗಳಾಗಿವೆ. ವೈಜ್ಞಾನಿಕ ಕ್ರಮದಲ್ಲಿ ನಿರ್ವಹಣೆ ಮಾಡಿದರೆ ಅವುಗಳು ಒಳ್ಳೆಯ ಬೆಳವಣಿಗೆ ನೀಡುವ ತಳಿಗಳಾಗಿವೆ. ಇದನ್ನು ಪರಿಗಣಿಸಿದ ರಾಜ್ಯ ಸರ್ಕಾರ ಕುರಿ ಮತ್ತು ಮೇಕೆ ತಳಿ ಸಂವರ್ಧನಾ ನೀತಿಯನ್ನು ಅಂಗೀಕರಿಸಿದೆ.

ಅದರಂತೆ ಆಯಾಯ ಜಿಲ್ಲೆಗಳಲ್ಲಿ ಪ್ರಚಲಿತವಿರುವ ದೇಶೀಯ ತಳಿ ಕುರಿ ಮೇಕೆಗಳನ್ನು ಅದೇ ತಳಿಯ ಶುದ್ಧ ಟಗರು, ಹೋತಗಳಿಂದ ಸಂವರ್ಧನೆ ಮಾಡಲು ಶಿಫಾರಸು ಮಾಡಲಾಗಿದೆ. ಆದ್ದರಿಂದ ನಿಗಮ ಕೂಡ ಇದೇ ದಿಕ್ಕಿನಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಹಾಗಾಗಿ ಕುರಿ-ಮೇಕೆ ಪಾಲಕರು ಕನಿಷ್ಠ ಮೂರು ವರ್ಷಕೊಮ್ಮೆ ತಳಿ ಸಂವರ್ಧನೆಗೆ ಬಳಸುವ ಟಗರು, ಹೋತವನ್ನು ಬದಲಾಯಿಸಬೇಕು. ಅವರವರ ಹಿಂಡಿನಲ್ಲಿ ಹುಟ್ಟಿದ ಟಗರು, ಹೋತವನ್ನು ತಳಿ ಸಂವರ್ಧನೆಗೆ ಬಳಸಬಾರದು. ಟಗರು ಬದಲಾಯಿಸದೆ ಇದ್ದಲ್ಲಿ ಅಥವಾ ಹಿಂಡಿನಲ್ಲಿ ಹುಟ್ಟಿದ ಟಗರನ್ನೇ ತಳಿ ಸಂವರ್ಧನೆಗಾಗಿ ಬಳಸಿದ್ದಲ್ಲಿ, ಒಳಸಂಕರಣವಾಗಿ ಹುಟ್ಟಿದ ಮರಿಗಳು ಸಾಯುವುದು, ಕಡಿಮೆ ತೂಕದ ಮರಿಗಳು ಹುಟ್ಟುವುದು, ರೋಗ ತಡೆಗಟ್ಟುವ ಶಕ್ತಿ ಕಡಿಮೆಯಾಗುವುದು, ಮರಣ ಸಂಭವಿಸುವಿಕೆ ಹೆಚ್ಚಾಗುವುದು –ಕಂಡುಬರುತ್ತದೆ.

ಒಳಸಂಕರಣ ತಡೆಗಟ್ಟಿದರೆ ಭವಿಷ್ಯದಲ್ಲಿ ನಮ್ಮ ದೇಶಿ ತಳಿಗಳು ಉತ್ಕೃಷ್ಟ ತಳಿಗಳಾಗಿ ಮಾರ್ಪಡುತ್ತವೆ ಎಂಬ ನಿಲುವಿನೊಂದಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಒಳಸಂಕರಣದಿಂದ ಉಂಟಾಗುವ ದುಷ್ಟರಿಣಾಮಗಳ ಬಗ್ಗೆ ಮೂಲಕ ಕುರಿಗಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಹಿನ್ನೆಲೆ ಕೊಪ್ಪಳದಲ್ಲಿ ನಾರಿ ಸುವರ್ಣ ಕುರಿ ತಳಿ ಕೇಂದ್ರವನ್ನು ಸರ್ಕಾರ ಸ್ಥಾಪಿಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.