ETV Bharat / state

ದೇವನಹಳ್ಳಿ ತಾಲೂಕಿನಲ್ಲಿ ಭೂಸ್ವಾಧೀನಕ್ಕೆ ವಿರೋಧ: ರೈತರೊಂದಿಗೆ ಅ. 25ರ ಬಳಿಕ ಮತ್ತೊಂದು ಸಭೆ- ಸಚಿವ ಎಂ.ಬಿ.ಪಾಟೀಲ್

author img

By ETV Bharat Karnataka Team

Published : Oct 18, 2023, 10:32 PM IST

ಸಚಿವ ಎಂ ಬಿ ಪಾಟೀಲ್
ಸಚಿವ ಎಂ ಬಿ ಪಾಟೀಲ್

ಭೂಸ್ವಾಧೀನಕ್ಕೆ ಸರ್ಕಾರ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆಯನ್ನು ರದ್ದು ಮಾಡಬೇಕು ಎಂದು ರೈತ ಮುಖಂಡ ಬೈಯಾರೆಡ್ಡಿ ಒತ್ತಾಯಿಸಿದರು.

ಸಚಿವ ಎಂ.ಬಿ.ಪಾಟೀಲ್ ಸಭೆ

ಬೆಂಗಳೂರು: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ವ್ಯಾಪ್ತಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು 1,777 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು, ಇದಕ್ಕೆ ರೈತರಿಂದ ಪ್ರತಿರೋಧ ಕಂಡುಬರುತ್ತಿದೆ. ಈ ಸಂಬಂಧ ಅನುಕೂಲಕರ ತೀರ್ಮಾನಕ್ಕೆ ಬರಲು ಅ.25ರ ನಂತರ ಮತ್ತೊಂದು ಸಭೆ ಕರೆಯಲಾಗುವುದು ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಈ ಸಂಬಂಧ ಚರ್ಚಿಸಲು ರೈತ ಮುಖಂಡರು ಮತ್ತು ಸರ್ಕಾರದ ನಡುವೆ ಬುಧವಾರ ಖನಿಜ ಭವನದಲ್ಲಿ ನಡೆದ ಸುದೀರ್ಘ ಸಭೆಯಲ್ಲಿ ಅಂತಿಮ ತೀರ್ಮಾನ ಸಾಧ್ಯವಾಗಲಿಲ್ಲ. ಈ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಕೂಡ ಭಾಗವಹಿಸಿ, ರೈತರನ್ನು‌ ಮನವೊಲಿಸುವ ಪ್ರಯತ್ನ‌ ಮಾಡಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರಾದ ಬೈಯಾರೆಡ್ಡಿ, ಚುಕ್ಕಿ ನಂಜುಂಡಸ್ವಾಮಿ ಮುಂತಾದವರು, ಭೂಸ್ವಾಧೀನವನ್ನು ವಿರೋಧಿಸಿ ಸುಮಾರು ಒಂದೂವರೆ ವರ್ಷದಿಂದಲೂ ಹೋರಾಟ ನಡೆಯುತ್ತಿದೆ. ಆದ್ದರಿಂದ, ಭೂಸ್ವಾಧೀನಕ್ಕೆ ಸರ್ಕಾರ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆಯನ್ನು ರದ್ದುಮಾಡಬೇಕು. ಇದರಲ್ಲಿ ಹದಿಮೂರು ಹಳ್ಳಿಗಳ ನೂರಾರು ರೈತ ಕುಟುಂಬಗಳ ಬದುಕಿನ ಪ್ರಶ್ನೆ ಅಡಗಿದೆ ಎಂದು ಹೇಳಿದರು.

ಇವರ ಅಹವಾಲುಗಳನ್ನು ಆಲಿಸಿದ ಸಚಿವ ಪಾಟೀಲರು, ಇನ್ನು ಮೂರ್ನಾಲ್ಕು ದಿನಗಳಲ್ಲಿ ನೀವೆಲ್ಲರೂ ಮತ್ತೊಮ್ಮೆ ಸಭೆ ಸೇರಿ, ಒಮ್ಮತಕ್ಕೆ ಬನ್ನಿ. ಇದೇ 25ರ ನಂತರ ನಾವು ಇನ್ನೊಂದು ಸಭೆ ಏರ್ಪಡಿಸುತ್ತೇವೆ. ಅಲ್ಲಿ ನಿಮ್ಮ ಅಂತಿಮ ನಿರ್ಣಯ ತಿಳಿಸಿ. ಅಲ್ಲೂ ಬಗೆಹರಿಯದಿದ್ದರೆ ಮುಖ್ಯಮಂತ್ರಿಗಳ ಬಳಿಗೆ ಹೋಗೋಣ ಎಂದು ಹೇಳಿದರು.

ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ಕೂಡ ಅಗತ್ಯ. ಏಕೆಂದರೆ, ಇದರಲ್ಲಿ ಬಂಡವಾಳ ಹೂಡಿಕೆ ಮತ್ತು ಯುವಜನರಿಗೆ ಉದ್ಯೋಗಸೃಷ್ಟಿಯ ಪ್ರಶ್ನೆ ಇದೆ. ಹಾಗೆಂದ ಮಾತ್ರಕ್ಕೆ ಸರಕಾರವು ಕೃಷಿಕರಿಗೆ ವಿರುದ್ಧವಾಗಿಲ್ಲ. ಸ್ವಾಧೀನ ಪಡಿಸಿಕೊಳ್ಳುವ ಜಮೀನಿಗೆ ಒಳ್ಳೆಯ ಪರಿಹಾರ ಕೊಡಲಾಗುವುದು. ಇದು ಬೇಡದೆ ಹೋದರೆ, ಕೆಐಎಡಿಬಿ ವತಿಯಿಂದ ಅಭಿವೃದ್ಧಿಪಡಿಸಲಾಗುವ ಬಡಾವಣೆಯಲ್ಲಿ ಪ್ರತೀ ಒಂದು ಎಕರೆ ಸ್ವಾಧೀನಕ್ಕೆ 10,800 ಚದರ ಅಡಿ ಜಾಗವನ್ನು ಪರಿಹಾರದ ರೂಪದಲ್ಲಿ ನೀಡುವುದಕ್ಕೂ ಅವಕಾಶವಿದೆ. ಈ ಜಮೀನನ್ನು ರೈತರು ವಾಣಿಜ್ಯೋದ್ದೇಶಕ್ಕೆ ಉಪಯೋಗಿಸಿಕೊಳ್ಳಬಹುದು ಎಂದು ವಿವರಿಸಿದರು.

ಕೆಐಎಡಿಬಿ ಕೇವಲ ದೇವನಹಳ್ಳಿಯ ಸುತ್ತಮುತ್ತ ಮಾತ್ರ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುತ್ತಿಲ್ಲ. ಉದ್ಯಮಗಳಿಗಾಗಿ ರಾಜ್ಯದ ಎಲ್ಲ ಕಡೆಗಳಲ್ಲೂ ಈ ಪ್ರಕ್ರಿಯೆ ನಡೆಯುತ್ತಿದೆ. ಏಕೆಂದರೆ, ರಾಜ್ಯದ ಎಲ್ಲ ಕಡೆಗಳಲ್ಲೂ ಕೈಗಾರಿಕೆಗಳು ನೆಲೆಯೂರುವಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಅವರು ರೈತ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟರು.

ಸಭೆಯಲ್ಲಿ ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಶಿವಶಂಕರ, ಕೆಐಎಡಿಬಿ ಸಿಇಒ ಡಾ.ಮಹೇಶ್ ಉಪಸ್ಥಿತರಿದ್ದರು.

ಇದನ್ನೂ ಓದಿ: ಭೂಸ್ವಾಧೀನಕ್ಕೆ ರಟ್ಟಿಹಳ್ಳಿಯಲ್ಲಿ ರೈತರ ವಿರೋಧ: ಪ್ರತಿಭಟನೆಯಲ್ಲಿ ಇಂದು ಸಿದ್ದರಾಮಯ್ಯ ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.