ETV Bharat / state

ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಕ್ಷೇತ್ರದಲ್ಲಿ ಯಾವುದೇ ಅಡ್ಡಿ ಆತಂಕ ಇಲ್ಲ: ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ

author img

By ETV Bharat Karnataka Team

Published : Oct 20, 2023, 7:44 AM IST

Etv Bharat
Etv Bharat

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹೊರರಾಜ್ಯ ಪ್ರವಾಸದಲ್ಲಿದ್ದು, ಅವರು ರಾಜ್ಯಕ್ಕೆ ಬಂದ ತಕ್ಷಣ ಕಾಂಗ್ರೆಸ್ ಸೇರ್ಪಡೆ ದಿನಾಂಗ ನಿಗದಿಯಾಗಲಿದೆ ಎಂದು ಮೂಡಿಗೆರೆ ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರು: ನಾನು ಕಾಂಗ್ರೆಸ್ ಸೇರಲು ತೀರ್ಮಾನಿಸಿದ್ದೇನೆ. ಪಕ್ಷದ ಅಧ್ಯಕ್ಷರು ಮತ್ತು ಸಿಎಂ ಅವರು ಬ್ಯುಜಿಯಾಗಿದ್ದು, ಶೀಘ್ರದಲ್ಲೇ ದಿನಾಂಕ ನಿಗದಿ ಮಾಡಿ ಪಕ್ಷ ಸೇರ್ಪಡೆಯಾಗಲಿದ್ದೇನೆ ಎಂದು ಮೂಡಿಗೆರೆಯ ಬಿಜೆಪಿ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರವಾಗಿ ಮಾತನಾಡಿದ ಮಾಜಿ ಶಾಸಕರು, ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ನಮ್ಮ ಕ್ಷೇತ್ರದಲ್ಲಿ ಯಾವುದೇ ಅಡ್ಡಿ ಆತಂಕ ಇಲ್ಲ ಎಂದರು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹೊರರಾಜ್ಯ ಪ್ರವಾಸದಲ್ಲಿದ್ದಾರೆ. ಅವರು ಬಂದಾಕ್ಷಣ ಸೇರ್ಪಡೆ ದಿನಾಂಕ ನಿಗದಿಯಾಗಲಿದೆ. ಈ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಮ್ಮ ಕ್ಷೇತ್ರದಲ್ಲಿ ನನ್ನ ಪಕ್ಷ ಸೇರ್ಪಡೆ ಕಾರ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮೂಡಿಗೆರೆಯ ಕೈ ಶಾಸಕಿ ನಯನಾ ಮೋಟಮ್ಮ, ಸ್ಥಳೀಯ ಕೈ ಮುಖಂಡರು ಕುಮಾರಸ್ವಾಮಿ ಪಕ್ಷ ಸೇರ್ಪಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಹಿನ್ನೆಲೆ ಪಕ್ಷ ಸೇರ್ಪಡೆ ವಿಳಂಭವಾಗುತ್ತಿದೆ ಎನ್ನಲಾಗುತ್ತಿದೆ.

ಮಹಿಷ ದಸರಾ ಆಚರಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮೈಸೂರು ಸಂಸದ ಪ್ರತಾಪಸಿಂಹ ವಿಚಾರಧಾರೆಯನ್ನು ಖಂಡಿಸಿದರು. ಮಹಿಷ ನಮ್ಮ ಕುಲದ ನಾಯಕ, ದಲಿತ ಹಿಂದುಳಿದ ಸಮುದಾಯಗಳ ಸ್ವಾಭಿಮಾನದ ಪ್ರತೀಕ. ಇಲ್ಲಿಯವರೆಗೆ ಅವರು ಹೇಳಿದಂತೆ ಅಸ್ಪೃಷ್ಯರಾಗಿಯೇ ದೇವಸ್ಥಾನದ ಹೊರಗೆ ನಿಂತು ಅವರ ನೀತಿ ನಡವಳಿಕೆ ಪಾಲಿಸಿದ್ದೆವು ಎಂದರು.

ಈಗ ನಮ್ಮ ಭಾವನೆಗಳಿಗೂ ಅವರು ಬೆಲೆ ಕೊಡಲಿ, ಮಹಿಷ ದಸರಾ ವಿಚಾರದಲ್ಲಿ ಅವರ ನಿಲುವು ಅಭಿಪ್ರಾಯಕ್ಕೆ ನನ್ನ ವಿರೋಧ ಇದೆ.‌ ಮುಂದೆ ರಾಜ್ಯಾದ್ಯಂತ ನಾವು ಮಹಿಷ ದಸರಾ ಆಚರಣೆ ಮಾಡುತ್ತೇವೆ ಎಂದು ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ತಿಳಿಸಿದರು.

ಎಂ ಪಿ ಕುಮಾರಸ್ವಾಮಿ ಅವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದರು. ಆದ್ರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ ಜೆಡಿಎಸ್​ ಸೇರ್ಪಡೆಯಾಗಿ ಮೂಡಿಗೆರೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಆದ್ರೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ವಿರುದ್ಧ ಸೋಲನುಭವಿಸಿದ್ದರು.

ಇತ್ತೀಚೆಗಷ್ಟೇ ಎಂ ಪಿ ಕುಮಾರಸ್ವಾಮಿ ಮತ್ತು ಗದಗ ಜಿಲ್ಲೆಯ ಶಿರಹಟ್ಟಿಯ ರಾಮಪ್ಪ ಲಮಾಣಿ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆ ಬಳಿಕ ಕೈ ಹಿಡಿಯಲು ಇಬ್ಬರೂ ನಾಯಕರು ತೀರ್ಮಾನಿಸಿದ್ದರು.

ಇದನ್ನೂ ಓದಿ: ನಾನು ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಬಯಸಿದರೂ ಆ ಹುದ್ದೆ ನನ್ನನ್ನು ಬಿಡುತ್ತಿಲ್ಲ: ಅಶೋಕ್ ಗೆಹ್ಲೋಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.