ETV Bharat / state

ನಂದಿನಿ ಕನ್ನಡಿಗರ ಹೆಮ್ಮೆ, ಕೆಎಮ್ಎ​ಫ್ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ: ಡಾ. ಮಹೇಶ ಜೋಶಿ

author img

By

Published : Apr 8, 2023, 7:50 PM IST

nandini-is-the-pride-of-kannadigas-it-is-our-duty-to-save-kmf-dr-mahesh-joshi
ನಂದಿನಿ ಕನ್ನಡಿಗರ ಹೆಮ್ಮೆ, ಕೆಎಮ್ಎಫ್ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ: ಡಾ. ಮಹೇಶ ಜೋಶಿ

ನಮ್ಮ ದಿನದ ಆರಂಭ ನಂದಿನಿ ಹಾಲಿನಿಂದ, ತಾಯಿಯ ಹಾಲಿಗೆ ಸರಿ ಸಾಟಿಯಾಗಿದ್ದ ನಂದಿನಿ ಹಾಲು ಮತ್ತು ಅದರ ಉತ್ಪನ್ನಗಳನ್ನು ನಾವೆಲ್ಲಾ ಸೇರಿ ಉಳಿಸಿಕೊಳ್ಳುವ ಅನಿವಾರ್ಯ ಕಾಲ ಬಂದಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಕನ್ನಡ ನಾಡು ನುಡಿಯ ಮೇಲೆ ಪರ ಭಾಷೆಯವರು ಒಂದಿಲ್ಲೊಂದು ರೀತಿಯಲ್ಲಿ ದಬ್ಬಾಳಿಕೆ ನಡೆಸುತ್ತಲೇ ಬಂದಿದ್ದಾರೆ. ಕನ್ನಡಿಗ ರೈತರಿಂದಲೇ ಆರಂಭವಾದ ನಂದಿನಿ ಎನ್ನುವ ನಾಡಿನ ಹೆಮ್ಮೆಯ ಸಂಸ್ಥೆಯ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ. ಕೆಎಮ್ಎಫ್ ಉಳಿಸಿ ಬೆಳೆಸಲು ಎಲ್ಲ ಕನ್ನಡಿಗರು ಒಂದಾಗಬೇಕು ಎಂದು ಕನ್ನಡ‌ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದಲ್ಲಿ ಅಮುಲ್‌ ಉತ್ಪನ್ನಗಳ ಮಾರಾಟದ ವಿಚಾರ ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಅಮುಲ್‌ ಹಾಗೂ ನಂದಿನಿ ವಿಲೀನದ ಆತಂಕವನ್ನು ಹುಟ್ಟಿಕೊಂಡಿದೆ. ನಮ್ಮ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ನುಂಗಿಹಾಕುವ ಸಂಚು ನಡೆಯುತ್ತಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಇದರಿಂದ ಕನ್ನಡಿಗರ ಹೆಮ್ಮೆಯ ಕೆಎಮ್​​ಎಫ್ ತಲೆಯ ಮೇಲೆ ಅಪಾಯದ ತೂಗುಗತ್ತಿ ತೂಗುತ್ತಿದೆ ಎನ್ನುವ ಸಂಗತಿ ವ್ಯಕ್ತವಾಗುತ್ತಿದೆ. ಇದರಿಂದ ರೈತರನ್ನು, ನಂದಿನಿ ಬಳಕೆದಾರರನ್ನು ಗೊಂದಲಕ್ಕೆ ನೂಕಿದಂತಾಗುತ್ತದೆ ಎಂದು ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯ ಪಟ್ಟರು. ಕರ್ನಾಟಕದಲ್ಲಿ ನಮ್ಮ ಕನ್ನಡಿಗರೇ ಕಟ್ಟಿ ಬೆಳೆಸಿ, ನಾಡಿನಲ್ಲಿ ಶ್ವೇತ ಕ್ರಾಂತಿಗೆ ನಾಂದಿ ಹಾಡುವುದರ ಜೊತೆಗೆ ರಾಜ್ಯದ ಇಕ್ಕೆಲಗಳಲ್ಲಿಯು ಹೆಸರು ಮಾಡಿದ ನಂದಿನಿ ಉತ್ಪನ್ನಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಕನ್ನಡಿಗರದ್ದಾಗಿದೆ ಎಂದಿದ್ದಾರೆ.

ಈಗ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ಯಾವುದೋ ಅನ್ಯ ಭಾಷಿಕ ಕಂಪನಿಯೊಂದು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಸಹಿಸಿಕೊಳ್ಳುವುದಿಲ್ಲ. ಕೆಎಂಎಫ್ ಮತ್ತು ಅಮುಲ್ ಸಂಸ್ಥೆಗಳ ವಿಲೀನವನ್ನು ಕನ್ನಡ ಸಾಹಿತ್ಯ ಪರಿಷತ್ತು ವಿರೋಧಿಸುತ್ತದೆ. ಈ ವಿಲೀನದ ಪ್ರಸ್ತಾವಕ್ಕೆ ಕನ್ನಡಿಗರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸಂಬಂಧ ಪಟ್ಟವರೊಂದಿಗೆ ಪರಿಷತ್ತು ಮಾತನಾಡಿ ನಂದಿನಿಯೊಂದಿಗೆ ಕನ್ನಡಿಗರು ಹೊಂದಿದ ಅವಿನಾಭಾವ ಸಂಬಂಧದ ಕುರಿತು ಎಚ್ಚರಿಸಲಿದೆ ಎಂದು ಅವರು ಹೇಳಿದರು.

ನಮ್ಮ ದಿನದ ಆರಂಭ ನಂದಿನಿ ಹಾಲಿನಿಂದ, ತಾಯಿಯ ಹಾಲಿಗೆ ಸರಿ ಸಾಟಿಯಾಗಿದ್ದ ನಂದಿನಿ ಹಾಲು ಮತ್ತು ಅದರ ಉತ್ಪನ್ನಗಳನ್ನು ನಾವೆಲ್ಲಾ ಸೇರಿ ಉಳಿಸಿಕೊಳ್ಳುವ ಅನಿವಾರ್ಯ ಕಾಲ ಬಂದಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ. ಗುಜರಾತ್ ಮೂಲದ ಅಮುಲ್ ಸಂಸ್ಥೆ ತನ್ನ ಉತ್ಪನ್ನಗಳಾದ ಹಾಲು ಮತ್ತು ಮೊಸರು, ತುಪ್ಪ ಇತ್ಯಾದಿ ಉತ್ಪನ್ನಗಳನ್ನು ಮಾರಾಟದ ಮೂಲಕ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಇದಕ್ಕೆ ಕನ್ನಡಿಗರು ನಮ್ಮ ಅಭಿಮಾನದ ನಂದಿನಿ ಉತ್ಪನ್ನಗಳನ್ನೇ ಖರೀದಿ ಮಾಡುವ ಮೂಲಕ ತಕ್ಕ ಉತ್ತರ ನೀಡಬೇಕಿದೆ. ಕೆಎಮ್ಎಫ್ ನವರು ರೈತರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಮೂಲಕ ನಾಡಿನ ರೈತರ ಜೀವನದಲ್ಲಿ ನಿರಂತರ ಸಂತಸ ತರುವ ಅವಶ್ಯಕತೆಯೂ ಸಾಕಷ್ಟಿದೆ ಎನ್ನುವ ಮಾತನ್ನು ನಾಡಿನ ರೈತರು ಆಡಿಕೊಳ್ಳುತ್ತಿದ್ದಾರೆ. ರೈತರ ಹಿತರಕ್ಷಣೆಗಾಗಿ ಕಟ್ಟಿರುವ ಕೆಎಂಎಫ್​ನ ರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವುದನ್ನು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರನ್ನು ಎಚ್ಚರಿಸಲಿದೆ ಎಂದು ಜೋಶಿ ಹೇಳಿದ್ದಾರೆ.

ಇದನ್ನೂ ಓದಿ: ಕನ್ನಡಿಗರ ಜೀವನಾಡಿ ನಂದಿನಿ ಮುಗಿಸಲು ಕೇಂದ್ರದಿಂದ ಮೂರನೇ ಸಂಚು: ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.