ETV Bharat / state

ಬಿಬಿಎಂಪಿ ವತಿಯಿಂದ 'ನಮ್ಮ ಕಾಂಪೋಸ್ಟಿಂಗ್ ಸಂತೆ'

author img

By

Published : Mar 14, 2021, 11:01 PM IST

Namma composting sante programme at bengalore
ಬಿಬಿಎಂಪಿ ವತಿಯಿಂದ ನಮ್ಮ ಕಾಂಪೋಸ್ಟಿಂಗ್ ಸಂತೆ

ಮನೆಯಲ್ಲಿ ಉತ್ಪತ್ತಿ ಆಗುವ ತ್ಯಾಜ್ಯವನ್ನು ಮೂಲದಲ್ಲಿಯೇ ಗೊಬ್ಬರವಾಗಿ ತಯಾರಿಸುವುದನ್ನು ಎಲ್ಲಾ ನಾಗರಿಕರು ಅಳವಡಿಸಿಕೊಂಡರೆ ಪಾಲಿಕೆಗೆ ಕಸದ ಹೊರೆ ಕಡಿಮೆ ಆಗುತ್ತದೆ. ಆದ್ದರಿಂದ ಎಲ್ಲಾ ನಾಗರಿಕರು ಕಾಂಪೋಸ್ಟ್ ಮಾಡುವುದನ್ನು ಮನೆಯಲ್ಲೇ ಅಳವಡಿಸಿಕೊಳ್ಳಿ..

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಹೆಚ್ಚು ಕಾಂಪೋಸ್ಟಿಂಗ್ ಸಂತೆಗಳನ್ನು ಆಯೋಜಿಸುವುದರಿಂದ ನಾಗರಿಕರಿಗೆ ಜಾಗೃತಿ ಮೂಡಿಸಬಹುದು ಎಂದು ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ರಾಜರಾಜೇಶ್ವರಿ ವಲಯದ ಸರ್.ಎಂ.ವಿಶೇಶ್ವರಯ್ಯ ಬಡಾವಣೆಯ ಉಲ್ಲಾಳ ಕೆರೆಯ ಬಳಿ ಉಲ್ಲಾಳ ವಾರ್ಡ್‌ನಲ್ಲಿ ಇಂದು ಬೆಳಗ್ಗೆ 6.30 ರಿಂದ 12.00ರವರೆಗೆ "ನಮ್ಮ ಕಾಂಪೋಸ್ಟಿಂಗ್ ಸಂತೆ" ಎಂಬ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು.

ಈ ಸಂತೆಗೆ ಮಾನ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ವಿಶೇಷ ಆಯುಕ್ತ ಡಿ.ರಂದೀಪ್, ಮುಖ್ಯ ಇಂಜಿನಿಯರ್ ವಿಶ್ವನಾಥ್ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು. ಜೊತೆಗೆ ಸಂತೆಯಲ್ಲಿ 25ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನ ಇರಿಸಲಾಗಿತ್ತು.

ಬಿಬಿಎಂಪಿ ವತಿಯಿಂದ ನಮ್ಮ ಕಾಂಪೋಸ್ಟಿಂಗ್ ಸಂತೆ
ಈ ಕುರಿತು ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್, ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಹೆಚ್ಚು ಕಾಂಪೋಸ್ಟಿಂಗ್ ಸಂತೆಗಳನ್ನು ಆಯೋಜಿಸುವುದರಿಂದ ನಾಗರಿಕರಿಗೆ ಜಾಗೃತಿ ಮೂಡಿಸುವ ಮೂಲಕ ಹೆಚ್ಚು ಅನುಕೂಲವಾಗಲಿದೆ. ಮನೆಯಲ್ಲಿ ಉತ್ಪತ್ತಿ ಆಗುವ ತ್ಯಾಜ್ಯವನ್ನು ಮೂಲದಲ್ಲಿಯೇ ಗೊಬ್ಬರವಾಗಿ ತಯಾರಿಸುವುದನ್ನು ಎಲ್ಲಾ ನಾಗರಿಕರು ಅಳವಡಿಸಿಕೊಂಡರೆ ಪಾಲಿಕೆಗೆ ಕಸದ ಹೊರೆ ಕಡಿಮೆ ಆಗುತ್ತದೆ.
ಆದ್ದರಿಂದ ಎಲ್ಲಾ ನಾಗರಿಕರು ಕಾಂಪೋಸ್ಟ್ ಮಾಡುವುದನ್ನು ಮನೆಯಲ್ಲೇ ಅಳವಡಿಸಿಕೊಳ್ಳಿ ಎಂದು ತಿಳಿಸಿದರು. ಬಿಬಿಎಂಪಿಯ ವಿಶೇಷ ಆಯುಕ್ತ ಡಿ.ರಂದೀಪ್ ರವರು‌ ಮಾತನಾಡಿ, ನಗರದಲ್ಲಿ ಮೂಲದಲ್ಲಿಯೇ ಕಾಂಪೋಸ್ಟ್ ಮಾಡಿಕೊಂಡಾಗ ಬಹುತೇಕ ಕಸದ ಸಮಸ್ಯೆ ನಿವಾರಣೆಯಾಗಲಿದೆ. ಎಲ್ಲಾ ನಾಗರಿಕರು ತಮ್ಮ ತಮ್ಮ ಮನೆಗಳಲ್ಲಿ ಉತ್ಪತ್ತಿ ಆಗುವ ಹಸಿ ತ್ಯಾಜ್ಯವನ್ನು ಮನೆಯಲ್ಲಿಯೇ ಕಾಂಪೋಸ್ಟ್ ಮಾಡಿ ಗೊಬ್ಬರ ತಯಾರಿಸಿಕೊಂಡು ಕಿರು ತೋಟ ಅಥವಾ ಉದ್ಯಾನವನಗಳಿಗೆ ಬಳಿಸಿಕೊಳ್ಳಬಹುದು.
ಇದನ್ನು ಎಲ್ಲರೂ‌‌ ಪಾಲಿಸಬೇಕು. ಇನ್ನು ಪಾಲಿಕೆ ವ್ಯಾಪ್ತಿಯ ವಾರ್ಡ್ ಮಟ್ಟದಲ್ಲಿ ಹಸಿ ತ್ಯಾಜ್ಯದಿಂದ ಕಾಂಪೋಸ್ಟ್ ಮಾಡಲು ಸ್ಥಳಾವಕಾಶ ಸಿಕ್ಕಿದರೆ ಅಲ್ಲಿಯೇ ಸಣ್ಣ ಪ್ರಮಾಣದಲ್ಲಿ ಹಸಿ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸಲು ಕ್ರಮವಹಿಸಲಾಗುವುದು.
ವಾರ್ಡ್ ಮಟ್ಟದಲ್ಲಿ ಕಾಂಪೋಸ್ಟ್ ಮಾಡಿದರೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ಸುಲಭವಾಗಿ ಗೊಬ್ಬರ ತಯಾರಿಸಬಹುದಾಗಿದೆ. ಇದಕ್ಕೆ ಎಲ್ಲಾ ನಾಗರಿಕರ ಸಹಕಾರ ಬಹಳ ಮುಖ್ಯವಾಗಿದ್ದು, ಎಲ್ಲರೂ ಪಾಲಿಕೆಯ ಜೊತೆ ಕೈಜೋಡಿಸಿದರೆ ಮೂಲದಲ್ಲಿಯೇ ಕಾಂಪೋಸ್ಟಿಂಗ್ ಮಾಡಬಹುದಾಗಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.

ಕಾಂಪೋಸ್ಟಿಂಗ್ ಸಂತೆಯ ವಿಶೇಷತೆಗಳು:

1. ಮನೆಯಲ್ಲಿ ಉತ್ಪತ್ತಿ ಆಗುವ ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ವಿಧಾನ.
2. ಮನೆ-ಅಪಾರ್ಟ್ಮೆಂಟ್​ಗಳಲ್ಲಿ ಅನೇಕ ರೀತಿಯ ಗೊಬ್ಬರ ಮಾಡುವ ಹಾಗೂ ಜೈವಿಕ ಅನಿಲ ಮಾಡುವ ವಿಧಾನ.
3. ಮನೆಯ ಮುಂದೆ ಸುಂದರವಾದ ಕಿರು ಉದ್ಯಾನ ನಿರ್ಮಿಸುವ ಹಾಗೂ ಮಳಿಗೆ-ಕಿಚನ್-ಟೆರೇಸ್ ಗಾರ್ಡನ್‌ಗಳಲ್ಲಿ ಕಿರು ತೋಟ ಅಥವಾ ಉದ್ಯಾನ ನಿರ್ಮಿಸಲು ಬೇಕಾಗುವ ಸಲಕರಣೆಗಳು ಮತ್ತು ಉಪಯುಕ್ತ ಪರಿಕರಗಳು.
4. ಬಟ್ಟೆ ಅಥವಾ ನಾರಿನಿಂದ ತಯಾರಿಸಿದ ಬ್ಯಾಗ್‌ಗಳು.
5. ಮನೆಯ ಅಂಗಳದಲ್ಲಿರುವ ಮರಗಳಿಂದ ಉದುರುವ ಎಲೆಗಳನ್ನು ಮತ್ತು ರೆಂಬೆಗಳನ್ನು ಪುಡಿ ಮಾಡುವ ಶೆಡ್ಡರ್ ಯಂತ್ರ.
6. ಪರಿಸರ ಸ್ನೇಹಿ ಬಳಕೆಯ ವಸ್ತುಗಳು/ಉತ್ಪನ್ನಗಳು.
7.ಮಹಿಳೆಯರು ಮುಟ್ಟಿನ ವೇಳೆ ಬಳಸುವ ಪುನರ್ಬಳಕೆ ಮಾಡುವ ಸುಸ್ಥಿರ ಕಪ್ ಗಳ ಬಗ್ಗೆ ಮತ್ತು ಬಟ್ಟೆಯ ಪುನರ್ಬಳಸಬಹುದಾದ ಸ್ಯಾನಿಟರಿ ಪ್ಯಾಡ್​ಗಳ ಬಳಕೆಯ ಬಗ್ಗೆ ಜಾಗೃತಿ.

ಬೀದಿ ನಾಟಕದ ಮೂಲಕ ಜಾಗೃತಿ ಕಲಾ ಕದಂಬ ತಂಡ ಕಾಂಪೋಸ್ಟಿಂಗ್ ಸಂತೆಯಲ್ಲಿ ಕಲಾ ಕದಂಬ ತಂಡದ ವತಿಯಿಂದ ತ್ಯಾಜ್ಯ ವಿಂಗಡಿಸಿಕೊಡದಿದ್ದರೆ ಆಗುವ ಸಮಸ್ಯೆ, ರಸ್ತೆ ಬದಿ ಕಸ ಬಿಸಾಡುವುದು, ರಸ್ತೆ ಮಾರ್ಗಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಬೀದಿ ನಾಟಕದ ಮೂಲಕ ಸ್ಥಳೀಯ ನಾಗರಿಕರಲ್ಲಿ ಅರಿವು ಮೂಡಿಸಲಾಯಿತು.
ಸಂತೆಯಲ್ಲಿ ಉಲ್ಲಾಳ‌ ವಾರ್ಡ್‌ನ ನಿವಾಸಿಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಸ್ವಯಂ ಸೇವಕ ಸಂಘಗಳು, ಸಿಟಿಜನ್ ವಾಲಂಟಿಯರ್ಸ್​ ಮತ್ತು ಅಪಾರ್ಟ್​ಮೆಂಟ್​ ಅಸೋಸಿಯೇಷನ್ ಸೇರಿದಂತೆ ಸುಮಾರು 1,500ಕ್ಕೂ ಹೆಚ್ಚು ನಾಗರಿಕರು ಅತಿ ಉತ್ಸಾಹದಿಂದ ಪಾಲ್ಗೊಂಡು ಸಂತೆಯನ್ನು ಯಶಸ್ವಿಗೊಳಿಸಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.