ETV Bharat / state

ಶೆಡ್ಯೂಲ್ 9ಗೆ ಮೀಸಲಾತಿ ಸೇರಿಸುವ ಸಂಬಂಧ ಕಾನೂನು ಆಯೋಗ, ತಜ್ಞರ ಜೊತೆ ಚರ್ಚಿಸಿ ಕೇಂದ್ರಕ್ಕೆ ಶಿಫಾರಸು: ಸಿಎಂ

author img

By

Published : Oct 8, 2022, 9:23 PM IST

ವಿಶೇಷ ಸಚಿವ ಸಪುಂಟ ಸಭೆಯಲ್ಲಿ ಅಲೆಮಾರಿ ಸಮುದಾಯಕ್ಕೆ ನಿಗಮ ರಚಿಸಲು ನಿರ್ಧರಿಸಲಾಗಿದೆ. ನಾಗಮೋಹನ್‌ ದಾಸ್ ಆಯೋಗದ ವರದಿಯಲ್ಲಿ ಅಲೆಮಾರಿ ಸಮುದಾಯಕ್ಕೆ ನಿಗಮ ರಚಿಸಲು ಶಿಫಾರಸು ಮಾಡಿದ್ದರು. ಅದರಂತೆ ನಿಗಮ ರಚಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಿಎಂ ತಿಳಿಸಿದರು.

Nagamohan Das Nagmohan Das Commission
ಬಸವರಾಜ ಬೊಮ್ಮಾಯಿ

ಬೆಂಗಳೂರು: ಕಾನೂನು ರಕ್ಷಣೆಗಾಗಿ ಶೆಡ್ಯೂಲ್ 9 ವ್ಯಾಪ್ತಿಗೆ ಮೀಸಲಾತಿ ಸೇರಿಸುವ ಸಂಬಂಧ ಕಾನೂನು ಸಚಿವರು, ಕಾನೂನು ಆಯೋಗ, ಎಜಿ, ಸಂವಿಧಾನ ತಜ್ಞರ ಜೊತೆ ಚರ್ಚಿಸಿ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಶೇಷ ಸಂಪುಟ ಸಭೆಯಲ್ಲಿ ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿ ವರದಿಯನ್ನು ಒಪ್ಪಿಕೊಳ್ಳಲಾಗಿದೆ. ಎಸ್​ಸಿಗೆ 17%, ಎಸ್​ಟಿಗೆ 7% ಮೀಸಲಾತಿ ಹೆಚ್ಚಿಸಲು ಅನುಮೋದನೆ ನೀಡಲಾಗಿದೆ. ಈ ಸಂಬಂಧ ಕೂಡಲೇ ಗೆಜೆಟ್ ನೋಟಿಫಿಕೇಷನ್ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಶೇ 50 ದಾಟಿ ಮೀಸಲಾತಿ : ಈ ನಿರ್ಣಯಕ್ಕೆ ಕಾನೂನಿನ ರಕ್ಷಣೆ ಕೊಡಲು ಶೆಡ್ಯೂಲ್ 9 ಅಡಿ ಸೇರಿಸಬೇಕು. ಅದಕ್ಕೆ ಕಾನೂನು ಸಚಿವರು, ಲಾ ಕಮಿಷನ್, ಅಡ್ವೊಕೇಟ್ ಜನರಲ್ ಜೊತೆ ಚರ್ಚೆ ಮಾಡಿ ತೀರ್ಮಾನ‌ ಮಾಡುತ್ತೇವೆ. ಮೀಸಲಾತಿ 50% ದಾಟಿದೆ, ಕಾನೂನಿನ ರಕ್ಷಣೆ ಸಿಗುತ್ತೋ, ಇಲ್ಲವೊ ಅನ್ನೋದು ಎಲ್ಲರ ಅನುಮಾನ. ಇಂದ್ರಾ ಸಹಾನಿ ಕೇಸ್‌ನಲ್ಲಿ ಸಾಮಾಜಿಕ, ಶೈಕ್ಷಣಿಕವಾಗಿ ಮುಖ್ಯವಾಹಿನಿಯಿಂದ ದೂರ ಉಳಿದವರಿಗೆ ಅತ್ಯಂತ ವಿಶೇಷ ಪ್ರಕರಣದಲ್ಲಿ ಮೀಸಲಾತಿ ನೀಡಬಹುದಾಗಿದೆ ಎಂದು ತಿಳಿಸಿದೆ. ಅದರಂತೆ ನ್ಯಾ.ನಾಗಮೋಹನ್ ದಾಸ್ ಆಯೋಗ ಹಾಗೂ ನ್ಯಾ.ಸುಭಾಷ್ ಆಡಿ ವರದಿಯಲ್ಲಿ ಇದೇ ಅಂಶವನ್ನು ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.

ಕಾನೂನು ರಕ್ಷಣೆಗಾಗಿ ಶೆಡ್ಯೂಲ್ 9 ವ್ಯಾಪ್ತಿಗೆ ಮೀಸಲಾತಿ ಜಾರಿಗೆ ತರುವ ಚಿಂತನೆ

ಇತರ ರಾಜ್ಯಗಳಲ್ಲೂ ಶೇ 50 ದಾಟಿದ ಮೀಸಲಾತಿ : ಆಯೋಗ ವರದಿಯಲ್ಲಿ ರಾಜ್ಯದಲ್ಲಿ ಪರಿಶಿಷ್ಟ ಸಮುದಾಯದವರು ಯಾವ ರೀತಿ ಸಾಮಾಜಿಕ, ಶೈಕ್ಷಣಿಕವಾಗಿ ಮುಖ್ಯ ವಾಹಿನಿಯಿಂದ ದೂರ ಉಳಿದ ಬಗ್ಗೆ ಅಂಕಿ-ಅಂಶದೊಂದಿಗೆ ಉಲ್ಲೇಖಿಸಿದ್ದಾರೆ. ಸಮರ್ಪಕ ಪ್ರತಿನಿಧಿತ್ವ ಸಿಗದ ಕಾರಣ ಅತ್ಯಂತ ವಿಶೇಷ ಪ್ರಕರಣ ಎಂದು ಪರಿಗಣಿಸಬಹುದಾಗಿದೆ ಅಂತ ವರದಿ ನೀಡಿದ್ದಾರೆ. ಜೊತೆಗೆ ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸಗಢ, ಜಾರ್ಖಂಡ್ ಮತ್ತು ತ‌ಮಿಳುನಾಡಿನಲ್ಲಿ 50% ಮೀರಿ ಮೀಸಲಾತಿ ನೀಡಲಾಗಿದೆ.

ಈ ಸಂಬಂಧ ಸುಪ್ರೀಂ ಕೋರ್ಟ್ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಹಾಗಾಗಿ ರಾಜ್ಯದಲ್ಲೂ ಮೀಸಲಾತಿ ಹೆಚ್ಚಳ ಸಂಬಂಧ ಯಾವುದೇ ಅಡ್ಡಿ ಎದುರಾಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾವು ಮಾಡಿದ ಎಸ್​ಸಿ, ಎಸ್​ಟಿ ಮೀಸಲಾತಿ ಹೆಚ್ಚಳವನ್ನು ರಕ್ಷಿಸಬೇಕಾಗಿದೆ. ಅದಕ್ಕಾಗಿ ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇವೆ. ಶೆಡ್ಯೂಲ್ 9ನಲ್ಲಿ ಇದನ್ನು ಸೇರಿಸುವ ಸಂಬಂಧ ಕಾನೂನು ತಜ್ಞರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನು ತಜ್ಞರು, ಸಂವಿಧಾನ ತಜ್ಞರ ಜೊತೆ ಸಮಾಲೋಚನೆ ನಡೆಸಿ ಎಲ್ಲಾ ಅಂಶಗಳನ್ನು ಅಧಿಸೂಚನೆಯಲ್ಲಿ ಸೇರಿಸಲಿದ್ದೇವೆ ಎಂದರು.

ಅಲೆಮಾರಿ ಸಮುದಾಯದ ನಿಗಮ‌ ರಚನೆಗೆ ನಿರ್ಧಾರ: ವಿಶೇಷ ಸಚಿವ ಸಪುಂಟ ಸಭೆಯಲ್ಲಿ ಅಲೆಮಾರಿ ಸಮುದಾಯಕ್ಕೆ ನಿಗಮ ರಚಿಸಲು ನಿರ್ಧರಿಸಲಾಗಿದೆ. ನಾಗಮೋಹನ್‌ ದಾಸ್ ಆಯೋಗದ ವರದಿಯಲ್ಲಿ ಅಲೆಮಾರಿ ಸಮುದಾಯಕ್ಕೆ ನಿಗಮ ರಚಿಸಲು ಶಿಫಾರಸು ಮಾಡಿದ್ದರು. ಅದರಂತೆ ನಿಗಮ ರಚಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಿಎಂ ತಿಳಿಸಿದರು.

ಒಳ ಮೀಸಲಾತಿ ಅನುಷ್ಠಾನದ ಬಗ್ಗೆನೂ ಕ್ರಮ : ಒಳ ಮೀಸಲಾತಿ ನೀಡುವ ಬಗ್ಗೆ ಸದಾಶಿವ ಆಯೋಗದಲ್ಲಿ ತಿಳಿಸಲಾಗಿದೆ. ಸದಾಶಿವ ಆಯೋಗದ ವರದಿಯನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ಜಾರಿಗೊಳಿಸಬಹುದಾಗಿದೆ ಎಂದು ನಾಗಮೋಹನ್ ದಾಸ್ ವರದಿಯಲ್ಲಿ ಹೇಳಲಾಗಿದೆ. ಈ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸಿ ನಾಗಮೋಹನ್ ದಾಸ್ ವರದಿಯನ್ನು ಸಂಪುಟ ಸಭೆ ಮುಂದೆ ಮಂಡಿಸಿ ಕ್ರಮ ಕೈ ಗೊಳ್ಳಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.

ಇತರೆ ಸಮುದಾಯಕ್ಕೆ ಮೀಸಲಾತಿ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮ್ಮ ಮುಂದೆ ಈಗ ಇರೋದು ಇದು. ನಂತರ ಪಂಚಮಸಾಲಿ ಕೇಸ್ ನೋಡೋಣ ಎಂದು ಹೇಳಿದರು.

ಇದನ್ನೂ ಓದಿ : ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಬಿಜೆಪಿ ಬದ್ಧ: ಸಿಎಂ ಬಸವರಾಜ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.