ETV Bharat / state

ಎಐಸಿಸಿ ಅಧ್ಯಕ್ಷರ ಚುನಾವಣೆ: ಮಲ್ಲಿಕಾರ್ಜುನ ಖರ್ಗೆಗೆ ಮತ ನೀಡಲು ಮನವಿ ಮಾಡಿದ ಶಾಸಕರು

author img

By

Published : Oct 14, 2022, 5:16 PM IST

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಅಧ್ಯಕ್ಷರ ಚುನಾವಣೆ ಇದೇ ಅಕ್ಟೋಬರ್ 17 ರಂದು ಸೋಮವಾರ ನಡೆಯಲಿದೆ. ಇದರಲ್ಲಿ ಭಾಗವಹಿಸಿರುವ ಮುತ್ಸದ್ದಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆಯವರಿಗೆ ತಮ್ಮ ಮತವನ್ನು ಕೊಡಿ ಎಂದು ಮಾಜಿ ಸಭಾಪತಿ ವಿ ಆರ್​ ಸುದರ್ಶನ್ ಹಾಗೂ ಶಾಸಕರು ಮನವಿ ಮಾಡಿದರು.

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ ನೀಡಲು ಮನವಿ ಮಾಡಿದ ಶಾಸಕರು
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ ನೀಡಲು ಮನವಿ ಮಾಡಿದ ಶಾಸಕರು

ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸಿರುವ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ ನೀಡಬೇಕೆಂದು ಮಾಜಿ ಸಭಾಪತಿ ವಿ ಆರ್​ ಸುದರ್ಶನ್ ಹಾಗೂ ಶಾಸಕರು ಮನವಿ ಮಾಡಿದ್ದಾರೆ.

ಅ.17 ರಂದು ಮತದಾನ: ಪ್ರೆಸ್ ಕ್ಲಬ್ ನಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಾಜಿ ಸಭಾಪತಿ, ಹಿರಿಯ ಕಾಂಗ್ರೆಸ್ ಮುಖಂಡ ವಿ ಆರ್ ಸುದರ್ಶನ್ ಅವರು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಅಧ್ಯಕ್ಷರ ಚುನಾವಣೆ ಇದೇ ಅಕ್ಟೋಬರ್ 17 ರಂದು ಸೋಮವಾರ ನಡೆಯಲಿದೆ. ಈ ಚುನಾವಣೆಯಲ್ಲಿ ಕರ್ನಾಟಕದ ಪ್ರತಿನಿಧಿಗಳಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಮತಗಟ್ಟೆಯನ್ನು ಕ್ವೀನ್ಸ್ ರಸ್ತೆಯಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ತೆರೆಯಲಾಗುತ್ತಿದೆ. ಅ.17 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ ಎಂದು ಹೇಳಿದರು.

ಈ ಚುನಾವಣೆಯಲ್ಲಿ ನಮ್ಮ ರಾಜ್ಯದವರೇ ಆದ ಮುತ್ಸದ್ಧಿ ರಾಜಕಾರಣಿ ಎಂ ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ನಿಷ್ಠಾವಂತ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಮರ್ಥ ಆಡಳಿತಗಾರರಾಗಿದ್ದು, ತಮಗೆ ವಹಿಸಿದ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಅತ್ಯಂತ ಸಮರ್ಥವಾಗಿ ಹಾಗೂ ಪರಿಣಾಮಕಾರಿಯಾಗಿ ನಿಭಾಯಿಸಿದ್ದಾರೆ.

ವಿವಿಧ ಖಾತೆಗಳನ್ನು ನಿಭಾಯಿಸಿರುವ ಖರ್ಗೆ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡರಲ್ಲಿಯೂ ಕ್ಯಾಬಿನೆಟ್ ಸಚಿವರಾಗಿ ವಿವಿಧ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ ಅನುಭವಿಗಳಾಗಿದ್ದಾರೆ. ಅಲ್ಲದೆ 9 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿ ಚುನಾಯಿತರಾಗಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಮತ್ತು ಕರ್ನಾಟಕ ವಿಧಾನಸಭೆಯಲ್ಲಿ ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿ, ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಒಮ್ಮೆ ಸಭಾ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಎಐಸಿಸಿಯ ಪ್ರಧಾನ ಕಾರ್ಯದರ್ಶಿಗಳಾಗಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಮತ ನೀಡುವಂತೆ ಮನವಿ: ಖರ್ಗೆ ಅವರು, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿದು ಮಹಾತ್ಮ ಗಾಂಧಿ, ಪಂಡಿತ್ ಜವಹರಲಾಲ್ ನೆಹರು, ಡಾ. ಬಾಬಾ ಸಾಹೆಬ್ ಅಂಬೇಡ್ಕರ್ ಮತ್ತು ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ತತ್ವ ಸಿದ್ಧಾಂತಗಳನ್ನು ಸಾರುತ್ತಿದ್ದಾರೆ. ಈ ಮೂಲಕ ನಮ್ಮ ಮಾಜಿ ಪ್ರಧಾನಮಂತ್ರಿಗಳಾದ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಆಶಯದಂತೆ ಕಾಂಗ್ರೆಸ್ ಸಂಘಟನೆಯನ್ನು, ಸದೃಢಗೊಳಿಸುವ ಉದ್ದೇಶದಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಇಂತಹ ಮುತ್ಸದ್ದಿ ರಾಜಕಾರಣಿ ಮತ್ತು ಅನುಭವಿ ಆಡಳಿತಗಾರರಾದ ನಮ್ಮವರೇ ಅದ ಮಲ್ಲಿಕಾರ್ಜುನ ಖರ್ಗೆಯವರಿಗೆ ತಮ್ಮ ಮತವನ್ನು ಕೊಡಿ ಎಂದು ಮನವಿ ಮಾಡಿದರು.

ಅವರಿಗೆ ಮತ ಕೇಳುವುದೇ ನಮಗೆ ಹೆಮ್ಮೆ: ಪಕ್ಷ ಅವರ ಸೇವೆ ಪರಿಗಣಿಸಿ ಚುನಾವಣೆಗೆ ನಿಲ್ಲಿಸಿದ್ದಾರೆ. ಪ್ರಜಾಪ್ರಭುತ್ವ ಬಲವರ್ಧನೆಗೊಳಿಸಬೇಕಿದೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ದೊಡ್ಡ ಪರಂಪರೆ ಇದೆ. ನಿತ್ಯ ಈ ಬಗ್ಗೆ ಚರ್ಚೆ ಆಗುತ್ತಿದೆ. ನಾವು ಐಡಿಯಾಲಜಿಕಲ್ ಆಗಿ ಬಲಿಷ್ಠವಾಗಬೇಕಿದೆ. ಸಾಮಾಜಿಕ, ರಾಜಕೀಯವಾಗಿ ಕಾಂಗ್ರೆಸ್ ಜವಾಬ್ದಾರಿ ದೊಡ್ಡದಿದೆ. 2023-24 ರ ಚುನಾವಣೆ ಹಿನ್ನೆಲೆಯಲ್ಲಿ ನಾವು ಸದೃಢವಾಗಬೇಕಿದೆ. ಹಾಗಾಗಿ ಖರ್ಗೆ ಅವರನ್ನು ಬೆಂಬಲಿಸಬೇಕಿದೆ. ಅವರಿಗೆ ಮತ ಕೇಳುವುದೇ ನಮಗೆ ಹೆಮ್ಮೆ. ಮತ ಕೊಡಬೇಕೆಂದು ಕೋರಿದರು.

ಬದಲಾವಣೆ ಕಾಂಗ್ರೆಸ್​ನಿಂದ ಮಾತ್ರ ಸಾಧ್ಯ: ಆಂತರಿಕ ಪ್ರಜಾಪ್ರಭುತ್ವ ಕೂಡ ಬಹಳ ಮುಖ್ಯ. ಆ ಮೂಲಕ ಪ್ರಜಾಪ್ರಭುತ್ವ ಗಟ್ಟಿಯಾಗಬೇಕು. ಈ ಚುನಾವಣೆ ದೇಶದ ಜನರ ಗಮನ ಸೆಳೆದಿದೆ. ದೇಶದಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ. ಅದು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಜನರ ವಿಶ್ವಾಸಗಳಿಸಲು ಖರ್ಗೆ ಸಮರ್ಥರಿದ್ದಾರೆ. ಮತದಾರರು ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಹೇಳಿದರು.

ಶಾಸಕ ಭೈರತಿ ಸುರೇಶ್ ಮಾತನಾಡಿ, ಮಲ್ಲಿಕಾರ್ಜುನ ಖಗ್ಗೆ ಅವರನ್ನು ನಾನು ಸಣ್ಣ ಹುಡುಗನಾಗಿದ್ದಾಗಿನಿಂದಲೂ ನೋಡಿಕೊಂಡು ಬಂದಿದ್ದೇನೆ. ಎಐಸಿಸಿಗೆ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ನೇಮಕವಾಗಬಹುದಿತ್ತು. ಆದರೆ, ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೇ ಎನ್ನುವುದಕ್ಕೆ ಈ ಚುನಾವಣೆ ಸಾಕ್ಷಿ. ಖರ್ಗೆ ಅವರನ್ನು ನಾವು ಹೊಗಳಬೇಕಿಲ್ಲ. ಅವರದ್ದು ದೊಡ್ಡ ವ್ಯಕ್ತಿತ್ವ. ನಿಷ್ಠಾವಂತ ನಾಯಕರು. ಖರ್ಗೆ ಅವರಿಗೆ ಮತ ಹಾಕುತ್ತೇವೆ ಎನ್ನುವುದೇ ಒಂದು ಹೆಮ್ಮೆಯ ವಿಷಯ ಎಂದು ಹೇಳಿದರು.

ಇದನ್ನೂ ಓದಿ: ಎಐಸಿಸಿ ಅಧ್ಯಕ್ಷಗಾದಿ ಅಲಂಕರಿಸುತ್ತಾರಾ ಎರಡನೇ ಕನ್ನಡಿಗ, ದಲಿತ ನಾಯಕ ಖರ್ಗೆ !

ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಮಾತನಾಡಿ, ಎಐಸಿಸಿಗೆ ಐದನೇ ಬಾರಿ ಚುನಾವಣೆ ನಡೆಯುತ್ತಿದೆ. ಕರ್ನಾಟಕಕ್ಕೆ ಇದೊಂದು ಅದೃಷ್ಟ. ಕೆಳಮಟ್ಟದಿಂದ ಬಂದು ರಾಷ್ಟ್ರ ಮಟ್ಟದ ನಾಯಕರಾಗಿ ಬೆಳೆದವರು ಮಲ್ಲಿಕಾರ್ಜುನ ಖರ್ಗೆ ಅವರು. ಅವರಿಗೆ ಮತ ನೀಡುವುದೇ ಸಂತಸದ ಕ್ಷಣ ಎಂದರು.

ಶಾಸಕರ ಎ.ಎನ್. ಹ್ಯಾರೀಸ್ ಮಾತನಾಡಿ, ಪ್ರಜಾಪ್ರಭುತ್ವ ಪಾಲಿಸುವ ಪಕ್ಷ ಕಾಂಗ್ರೆಸ್. ಜನರ ಒಳಿತಿಗೆ ಹೋರಾಡುವ ಪಕ್ಷ. ಖರ್ಗೆ ಜಾತ್ಯತೀತ, ಸಮರ್ಥ ನಾಯಕ. ಎಲ್ಲರನ್ನೂ ಜತೆಗೆ ತೆಗೆದುಕೊಂಡು ಹೋಗುವವರು. ಅವರಿಗೆ ಮತ ಹಾಕಲು ನಮಗೆ ಅವಕಾಶ ಸಿಕ್ಕಿರುವುದು ಸೌಭಾಗ್ಯ ಎಂದು ಬಣ್ಣಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.