ETV Bharat / state

ರಾಜ್ಯಾದ್ಯಂತ ಮಕ್ಕಳಲ್ಲಿ ವೈರಲ್ ಫೀವರ್; ಅಸಲಿ ಕಾರಣ ವಿವರಿಸಿದ ಆರೋಗ್ಯ ಸಚಿವರು

author img

By

Published : Sep 17, 2021, 2:13 PM IST

Updated : Sep 17, 2021, 2:29 PM IST

Minister Sudhakar reaction about viral fever
ಆರೋಗ್ಯ ಸಚಿವ ಸುಧಾಕರ್

ರಾಜ್ಯಾದ್ಯಂತ ಮಕ್ಕಳಲ್ಲಿ ವೈರಲ್ ಫೀವರ್ ಹೆಚ್ಚಾಗುತ್ತಿದ್ದು, ಬಹುತೇಕ ಮಕ್ಕಳ ಆಸ್ಪತ್ರೆಗಳಲ್ಲಿ ಬೆಡ್​ಗಳು ಫುಲ್ ಆಗಿವೆ.‌ ಈ ಕುರಿತು ಆರೋಗ್ಯ ಸಚಿವ ಸುಧಾಕರ್ ಕಾರಣ ಸಹಿತ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು: ಇದು ಸೀಸನಲ್ ಫ್ಲೂ ಆಗಿದ್ದು, ಪ್ರತಿ ವರ್ಷ ಈ ರೀತಿ ಆಗುತ್ತೆ‌. ಕಳೆದ ಬಾರಿ ಲಾಕ್​ಡೌನ್ ಇದ್ದಿದ್ದರಿಂದ ಮಕ್ಕಳು ಮನೆಯೊಳಗೆ ಇದ್ದರು. ಶಾಲಾ - ಕಾಲೇಜು ಇರಲಿಲ್ಲ. ಹಾಗಾಗಿ ಕ್ಷೇಮವಾಗಿಯೇ ಇದ್ದರು. ಈಗ ಎಲ್ಲ ಚಟುವಟಿಕೆಗಳು ಪುನರ್ ಆರಂಭವಾಗಿದ್ದರಿಂದ ಪ್ರಕರಣಗಳು ಗಮನಕ್ಕೆ ಬಂದಿದೆ. ಆದರೂ ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ, ಪರೀಕ್ಷೆಗಳನ್ನು ಮಾಡುತ್ತಿದ್ದೇವೆ ಎಂದು ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.

ಬೌರಿಂಗ್ ಆಸ್ಪತ್ರೆ ಆವರಣದಲ್ಲಿ ರಾಜ್ಯವ್ಯಾಪಿ ಬೃಹತ್ ಕೋವಿಡ್ ವ್ಯಾಕ್ಸಿನ್ ಅಭಿಯಾನ ಹಾಗೂ ರಕ್ತದಾನ‌ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿಗಳ ಹುಟ್ಟುಹಬ್ಬದಂದು ಬೃಹತ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕೋವಿಡ್ ನಿರ್ನಾಮ ಮಾಡಲು ಪ್ರಧಾನಿಗಳು ಪಣತೊಟ್ಟಿದ್ದು, ಅದಕ್ಕೆ ಪೂರಕವಾಗಿ ನಾವು ಕೃತಜ್ಞತೆ ಸಲ್ಲಿಸಲು ಈ ಲಸಿಕಾ ಅಭಿಯಾನ ಹಮ್ಮಿಕೊಂಡಿದ್ದೇವೆ. ಸುಮಾರು 30ಲಕ್ಷಕ್ಕೂ ಹೆಚ್ಚು ಲಸಿಕೆ ನೀಡುವ ಗುರಿ ಇದೆ ಎಂದರು.

ಇದರ ಜೊತೆಗೆ ಇಡೀ ರಾಜ್ಯದಲ್ಲಿ ರಕ್ತದಾನ ಶಿಬಿರಕ್ಕೂ ಆದ್ಯತೆ ನೀಡಲಾಗಿದ್ದು, 25,000 ಯೂನಿಟ್ ರಕ್ತ ಸಂಗ್ರಹಕ್ಕೆ ಮುಂದಾಗಿದ್ದೇವೆ. ಕೋವಿಡ್ ಸಮಯದಲ್ಲಿ ರಕ್ತದಾನಕ್ಕೆ ಜನರು ಹಿಂಜರಿಯುತ್ತಿದ್ದರು. ಹೀಗಾಗಿ ರಕ್ತದಾನ ಶಿಬಿರ ಕಾರ್ಯಕ್ರಮವೂ ನಡೆಯುತ್ತಿದೆ ಅಂತ ವಿವರಿಸಿದರು.

ಬೆಡ್ ಸಮಸ್ಯೆ ಇರುವುದು ನಿಜ:

ಇನ್ನು ರಾಜ್ಯದ ವಿವಿಧ ಜಿಲ್ಲೆಯ ಆಸ್ಪತ್ರೆಗಳಲ್ಲಿ ಬೆಡ್​ಗಳ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲ ಮಕ್ಕಳಿಗೂ ಒಳ್ಳೆಯ ಚಿಕಿತ್ಸೆ ಸಿಗಬೇಕು. ಎಲ್ಲ ಕಡೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೆಲವು ಕಡೆ ಬೆಡ್ ಸಮಸ್ಯೆ ಆಗುವುದನ್ನ ಕಂಡಿದ್ದೇವೆ.‌ ಅದನ್ನ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಅಂದರು.

ಸಂಭವನೀಯ ಮೂರನೇ ಅಲೆ ಭೀತಿ:

ಇನ್ನು 3ನೇ ಅಲೆ ಬಗ್ಗೆ ಜನ ಎಚ್ಚರಿಕೆಯಿಂದ ಇರಬೇಕು. 2 ಡೋಸ್ ಲಸಿಕೆಯನ್ನ ಎಲ್ಲರೂ ಪಡೆಯಬೇಕು. ಕೊರೊನಾದಿಂದ ದೂರ ಉಳಿಯಲು ಇದೊಂದೇ ದಾರಿ. ಅದರೊಂದಿಗೆ ಮಾಸ್ಕ್, ಸಾಮಾಜಿಕ ಅಂತರ ಸ್ವಚ್ಛತೆ ಕಡೆ ಗಮನ‌ಕೊಡಬೇಕು. ಸಂಬಂಧ ಈಗಾಗಲೇ ನಿಯಮಿತವಾಗಿ ಸಭೆ ನಡೆಯುತ್ತಿದೆ‌ ಎಂದರು.

ಒಂದರಿಂದ - ಐದನೇ ತರಗತಿ ಆರಂಭ ವಿಚಾರ:

ಅಧಿವೇಶನ ಮುಗಿದ ಬಳಿಕ ಒಂದರಿಂದ-ಐದನೇ ತರಗತಿ ಆರಂಭ ಮಾಡಲಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಾಲಾರಂಭಕ್ಕೆ ತಾಂತ್ರಿಕ ಸಲಹಾ ಸಮಿತಿ ಜೊತೆಗೆ ಸಭೆ ನಡೆಸಬೇಕು. ಈಗಾಗಲೇ 6ನೇ ತರಗತಿಯಿಂದ ಉನ್ನತ ಶಿಕ್ಷಣದ ತರಗತಿಗಳು ಆರಂಭವಾಗಿದೆ.

ಆರೋಗ್ಯ ಸಚಿವ ಸುಧಾಕರ್

ಕೋವಿಡ್​ನಿಂದ 0.08 ಸೋಂಕು ಹೆಚ್ಚಾಗಿಲ್ಲ. ಹೀಗಾಗಿ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಸೂಕ್ಷ್ಮವಾಗಿ ಇದನ್ನೆಲ್ಲ ಗಮನಿಸಲಾಗುತ್ತಿದೆ. ಇನ್ನು ಒಂದರಿಂದ ಐದನೇ ತರಗತಿ ಆರಂಭಕ್ಕೆ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಬೇಕಿದೆ. ವೈದ್ಯಕೀಯವಾಗಿ ಮಾತಾನಾಡೋವುದಾದರೆ ಸಣ್ಣಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿರಲಿದೆ. ಈ ಮೂಲಕ ಪ್ರಾಥಮಿಕ ತರಗತಿ ಆರಂಭಕ್ಕೆ ಯಾವುದೇ ಅಡ್ಡಿಯಿಲ್ಲ ಎಂದರು.

ಸಂಚಾರಿ ರಕ್ತದಾನ ಘಟಕದಲ್ಲಿ ಇನ್ನು ಬಿಎಸ್​ವೈ ಅವರೇ ಸಿಎಂ:

ಸಚಿವ ಸುಧಾಕರ್ ಉದ್ಘಾಟನೆ ಮಾಡಿದ ಸಂಚಾರಿ ರಕ್ತದಾನ ಘಟಕದಲ್ಲಿ ಸಿಎಂ ಯಡಿಯೂರಪ್ಪ ಅಂತ ಇರುವ ಪೋಸ್ಟರ್ ಹಾಗೇ ಕಂಡು ಬಂದಿತು. ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಇಡೀ ನಗರದಲ್ಲಿ ರಕ್ತದಾನ ಸಂಗ್ರಹಿಸಲು ಓಡಾಡುವ ಸಂಚಾರಿ ಬಸ್ ಇದಾಗಿದ್ದು ಬಿಎಸ್​ವೈ ಅವರ ಹಳೇ ಫೋಟೋಗಳು ಇರುವ ಬಸ್​ಗೆ ಈಗ ಉದ್ಘಾಟನೆ ಭಾಗ್ಯ ಸಿಕ್ಕಿದಂತಿದೆ. ಕನಿಷ್ಠ ಪಕ್ಷ ಫೋಟೋ ಕೂಡ ಬದಲಾಯಿಸದಿರುವುದು ಕಂಡು ಬಂದಿತು.

Last Updated :Sep 17, 2021, 2:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.